04
ಮಾರ್ಚ್ 2019
ಸೋಮವಾರ, ಸಂತ ಕಾಸಿಮಿರ್
ಸಾಧಾರಣ ಕಾಲದ ಎಂಟನೇ ವಾರ
ಮೊದಲವಾಚನ:
ಸಿರಾಖ 17: 24-29
ಸಿರಾಖ 17: 24-29
24ತನ್ನಲ್ಲಿಗೆ ಬರಗೊಡಿಸುವನು ಪಶ್ಚಾತ್ತಾಪ ಪಡುವವನನ್ನು ಸಂತೈಸುವನು ತಾಳ್ಮೆಗೆಡುತ್ತಿರುವವರನ್ನು. 25ಸರ್ವೇಶ್ವರನ ಕಡೆ ತಿರುಗಿಕೊಂಡು, ಪಾಪವನ್ನು ತೊರೆದುಬಿಡು; ಆತನನ್ನು ಪ್ರಾರ್ಥಿಸಿ, ಅಪರಾಧಗಳ ಅಡ್ಡಿಯನ್ನು ಕಡಿಮೆಮಾಡು. 26ಮಹೋನ್ನತನ ಕಡೆ ಹಿಂದಿರುಗಿ, ಅಧರ್ಮವನ್ನು ಬಿಡು ಅಸಹ್ಯ ಕೃತ್ಯಗಳನ್ನು ಸಂಪೂರ್ಣವಾಗಿ ಹಗೆಮಾಡು. 27ಜೀವಿಸುತ್ತಾ ಮಹೋನ್ನತನಿಗೆ ಉಪಕಾರ ಸ್ತುತಿಮಾಡುವವರನ್ನು ಬಿಟ್ಟರೆ ಪಾತಾಳದಲ್ಲಿ ಆತನಿಗೆ ಸ್ತುತಿಹಾಡುವವರಾರಿದ್ದಾರೆ? 28ಕೃತಜ್ಞತಾಸ್ತುತಿ ಇರುವುದಿಲ್ಲ ಜೀವಿಸದೆ ಇದ್ದವನಲ್ಲಿ ಅಂತೆಯೇ ಅದು ಲಯವಾಗುತ್ತದೆ ಮೃತರಾದವರಲ್ಲಿ ಸರ್ವೇಶ್ವರನ ಸ್ತುತಿಗೈವನು ಜೀವಂತನು ಹಾಗು ಆರೋಗ್ಯಶಾಲಿ. 29ನಮ್ಮ ದೇವರಾದ ಸರ್ವೇಶ್ವರನ ಕೃಪೆ ಎಷ್ಟು ಘನವಾದುದು ಶುದ್ಧರಾಗಿ ಆತನ ಕಡೆ ತಿರುಗುವವರ ಮೇಲೆ ಆತನ ಕನಿಕರ ಎಷ್ಟು ವಿಶೇಷವಾದುದು !
ಕೀರ್ತನೆ 32: 1-2, 5, 6, 7
ಯಾರ ದ್ರೋಹ ವಿಮೋಚನೆಯಾಗಿದೆಯೋ, ಅವರೇ ಧನ್ಯರು
ಯಾರ ಪಾಪ ಪರಿಹಾರವಾಗಿದೆಯೋ ಯಾರ ದ್ರೋಹ ವಿಮೋಚನೆಯಾಗಿದೆಯೋ - ಅವರೇ ಧನ್ಯರು
ಯಾರಪರಾಧವನು ಪ್ರಭು ಎಣಿಸಿಲ್ಲವೋ ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು
ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು “ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ” ಎಂದೆನು ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು
ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ ಹುಚ್ಚುಹೊಳೆ ಉಕ್ಕಿಬಂದಾಗ ನೀ ಸಿಕ್ಕಲಿಲ್ಲವೆನ್ನದಿರಲಿ
ನೀನೆ ನನಗೆ ಮರೆಯು, ಆಪತ್ತಿನಲಾಸರೆಯು ನನ್ನನು ಆವರಿಸುವ ಉದ್ದಾರಕನಾದವು
ಶುಭಸಂದೇಶ:
ಮಾರ್ಕ 10: 17-27
ಮಾರ್ಕ 10: 17-27
17ಅಲ್ಲಿಂದ ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ಒಬ್ಬನು ಅವರ ಬಳಿಗೆ ಓಡಿಬಂದು ಮೊಣಕಾಲೂರಿ, ಒಳ್ಳೆಯ ಗುರುವೇ, ಅಮರಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು? ಎಂದು ಕೇಳಿದನು. 18ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ: 19ನರಹತ್ಯೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ,
ಸುಳ್ಳುಸಾಕ್ಷಿ ಹೇಳಬೇಡ, ಮೋಸ ಮಾಡಬೇಡ, ನಿನ್ನ
ತಂದೆತಾಯಿಗಳನ್ನು ಗೌರವಿಸು, ಎಂದು ಯೇಸು
ಉತ್ತರವಿತ್ತರು.
20ಅದಕ್ಕೆ ಅವನು, ಗುರುದೇವಾ, ನಾನು
ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ, ಎಂದು ಹೇಳಿದನು. 21ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, ನೀನು ಮಾಡಬೇಕಾದ ಕಾರ್ಯವೊಂದು ಬಾಕಿಯಿದೆ. ಹೋಗು, ನಿನ್ನ
ಆಸ್ತಿಪಾಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ
ದಾನಮಾಡು;
ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು, ಎಂದರು. 22ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ
ಮುಖ ಪೆಚ್ಚಾಯಿತು.
ಅವನು ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟು ಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು.
23ಆಗ ಯೇಸುಸ್ವಾಮಿ ಸುತ್ತಲೂ ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು
ಎಷ್ಟೊಂದು ಕಷ್ಟ!
ಎಂದರು. 24ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, ಮಕ್ಕಳೇ,
ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ! 25ಐಶ್ವರ್ಯವಂತನು ದೇವರ
ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯ ಸೂಜಿಗಣ್ಣಲ್ಲಿ ನುಸುಳುವುದು ಸುಲಭ, ಎಂದರು. 26ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಿಮಿತ ಆಶ್ಚರ್ಯವಾಯಿತು. ಹಾಗಾದರೆ ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ? ಎಂದು ತಮ್ಮ ತಮ್ಮೊಳಗೇ ಮಾತನಾಡಿಕೊಂಡರು. 27ಯೇಸು ಅವರನ್ನು ನಿಟ್ಟಿಸಿ ನೋಡಿ, ಮನುಷ್ಯರಿಗೆ ಇದು ಅಸಾಧ್ಯ, ದೇವರಿಗಲ್ಲ. ದೇವರಿಗೆ
ಎಲ್ಲವೂ ಸಾಧ್ಯ,
ಎಂದರು.
ಚಿಂತನೆ: ನಮ್ಮ ಸ್ಥಿರವಾದ ಆಸ್ತಿ ಪ್ರಭು ಯೇಸುವೇ. ಮಿಕ್ಕೆಲ್ಲವೂ ಗೌಣವೇ. ಆ ಯುವಕನಿಗೆ ಸ್ಥಿರವಾದ ಆಸ್ತಿ ಪಡೆಯುವ ಆಸೆ ಇತ್ತು ಆದರೆ ಅದಕ್ಕಾಗಿ ತನ್ನ ಅಸ್ಥಿರವಾದ ಲೌಕಿಕ ಆಸ್ತಿಯನ್ನು ಬಿಟ್ಟುಕೊಡಲು ಇಷ್ಟವಿರಲಿಲ್ಲ. ಪ್ರಭು ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ ಅತ್ಯುತ್ತಮ ಸಲಹೆ ನೀಡಿ ಆ ಯುವಕ ಲೌಕಿಕ ಆಸ್ತಿಯನ್ನು ಬಿಟ್ಟು ತಮ್ಮನ್ನು ಹಿಂಬಾಲಿಸುವಂತೆ ಕರೆ ನೀಡಿದರು. ಆದರೆ ಅವನಿಗೆ ಅದು ಇಷ್ಟವಾಗಲಿಲ್ಲ. ಅವನು ಧಾರ್ಮಿಕ ನೀತಿ ನಿಯಮಗಳನ್ನು ಅನುಸರಿಸುತ್ತಿದ್ದನೇ ಹೊರತು ಅದನ್ನು ಸಿದ್ಧಿಗೆ ತರಲು ತಯಾರಿರಲಿಲ್ಲ! ಅಂಥಹ ಆಚರಣೆ ನಿಶ್ಪ್ರಯೋಜಕ. ನಮ್ಮ ಧಾರ್ಮಿಕ ಆಚರಣೆಗಳು ನಮ್ಮ ಆಧ್ಯಾತ್ಮಿಕ ಪ್ರಗತಿಗೆ ನಾಂದಿಯಾಗಬೇಕು ಹಾಗೂ ಕ್ರಿಸ್ತನೆಡೆಗೆ ಸಾಗಲು ಸ್ಫೂರ್ತಿಯಾಗಬೇಕು.
ಸಂತ ಕಸಿಮೀರ್

ಇವರು ಪೋಲ್ಯಾಂಡ್ ದೇಶದ ರಾಜ ಮೂರನೇ ಕಸಿಮೀರ್ ಮತ್ತು ತಾಯಿ ಆಸ್ಟ್ರಿಯಾದ ಎಲಿಜಬೇತ್ ನವರ 14 ಮಕ್ಕಳಲ್ಲಿ ಮೂರನೇ ಮಗ. ಇವರು 1458ರಲ್ಲಿ ಪೋಲ್ಯಾಂಡ್ ದೇಶದ ಕ್ರಕೊಮಿಯಲ್ಲಿ ಜನಿಸಿದರು. ಇವರು ತಮ್ಮ ಚಿಕ್ಕವಯಸ್ಸಿನಿಂದಲೇ ದೈವ ಭಕ್ತಿಯ, ಮುಗ್ದತೆಯನ್ನು ರೂಡಿಸಿಕೊಂಡು ಬಂದರು. ಪೋಲ್ಯಾಂಡ್ ದೇಶದ ರಾಜನಾಗಿ ಅವರ ತಂದೆ ಕಟ್ಟಿದ ಸಾಮ್ರಾಜ್ಯವನ್ನು ವಿಸ್ತರಿಸಿ ಆಳುವ ಶಕ್ತಿಯುತ ರಾಜನಾಗಲು ಆಸೆ ಪಟ್ಟರು.
ಆದರೆ ಅತಿ ಚಿಕ್ಕವಯಸ್ಸಿನಲ್ಲೇ ಇವರ ಜೀವನ ದೇವರಿಗೆ ಮೀಸಲಾಗಿದ್ದು, ಇಹಲೋಕದ ಆಸೆ-ಆಕಾಂಕ್ಷೆಗಳಲ್ಲ, ಎಂಬ ನಿರ್ಧಾರ ಮನವರಿಕೆಯಾಗಿತ್ತು. ಇವರನ್ನು ಸುತ್ತುವರಿದ ಆಸ್ತಿ-ಅಂತಸ್ತು, ಸುಖ-ಸಂಪತ್ತಿನ ಜೀವನ, ಇವರಲ್ಲಿದ್ದ ನಿಷ್ಠಾವಂತಿಕೆಯನ್ನು ಮರೆಯುವಂತೆ ಶೋಧಿಸುತ್ತಿತ್ತು. ಸರಳ ಬಟ್ಟೆಗಳನ್ನು ಧರಿಸಿ, ರಾಜತನದ ಬಟ್ಟೆಬರೆಗಳನ್ನೆಲ್ಲ ತ್ಯಜಿಸಿದರು. ದೇವರ ಕೆಲಸ-ಕಾರ್ಯಗಳಲ್ಲಿ ಆಸಕ್ತಿವುಳ್ಳವನ್ನಾಗಿ, ಹಲವು ರಾತ್ರಿ-ಹಗಲುಗಳನ್ನು ಪ್ರಾರ್ಥನೆಯಲ್ಲೇ ಕಳೆಯುತ್ತಿದ್ದರು. ಸುಖದ ಸುಪ್ಪತ್ತಿಗೆಯ ಮೇಲೆ ಮಲಗದೆ, ನೆಲದ ಮೇಲೆ ಮಲಗುವ ಸರಳತೆಯಿಂದ ತಮ್ಮನ್ನೇ ದಂಡಿಸಿಕೊಳ್ಳುತ್ತಿದ್ದರು.
ತಂದೆ ಬಯಸಿದಂತೆ ಇವರು ಯುದ್ಧ ಮಾಡುವ ರಾಜನಂತೆ ಅಥವಾ ಉತ್ತಾರಾಧಿಕಾರಿಯಾಗುವ ಯಾವ ಲಕ್ಷಣಗಳನ್ನೂ ತೋರಲಿಲ್ಲ. ಇವರು ಮನಸ್ಸು ಸದಾ ದೇವರ, ವಿಶ್ವಾಸದ ಕಡೆಗಿತ್ತು. ಮುಖ್ಯವಾಗಿ ಅತಿ ಭಕ್ತಿಯಿಂದ ಬಲಿಪೂಜೆಯಲ್ಲಿ ಭಾಗವಹಿಸುವ, ಬಡ-ಬಗ್ಗರಿಗೆ ದಾನಮಾಡುವ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದರು.
ತನ್ನ 23ನೇ ವಯಸ್ಸಿನಲ್ಲೇ 1484ರಲ್ಲಿ ಶ್ವಾಸಕೋಶದ ಕಾಯಿಲೆಯಿಂದ ಮರಣ ಹೊಂದಿದರು. ಇವರ ಸಮಾಧಿಯನ್ನು ಸ್ಪರ್ಶಿಸಿ ಪ್ರಾರ್ಥಿಸಿದ ಎಲ್ಲರ ಜೀವನದಲ್ಲಿ ಅದ್ಭುತಗಳು ನಡೆಯಲಾರಂಭಿಸಿತ್ತು. ಅಂತೆಯೇ 1522ರಲ್ಲಿ ಜಗದ್ಗುರು 10ನೇ ಲಿಯೋ, ಇವರನ್ನು ಸಂತ ಪಟ್ಟಕ್ಕೇರಿಸಿದರು. 120 ವರ್ಷಗಳ ನಂತರ, ಇವರ ಸಮಾಧಿ ತೆಗೆದು ನೋಡಿದಾಗ ಅವರ ಪ್ರಾರ್ಥಿವ ಶರೀರ ಹಾಳಾಗದೆ ಅದೇ ರೀತಿ ಇತ್ತು, ಇಂದಿಗೂ ಇವರನ್ನು ಪೋಲ್ಯಾಂಡ್ ದೇಶದ ಪಾಲಕ ಸಂತರೆಂದು ಗೌರವಿಸುತ್ತಾರೆ.
ಚಿತ್ರ: ಗೂಗಲ್ ಕೃಪೆ
© 'ದನಿ' ಮಾಧ್ಯಮ ಮನೆ
No comments:
Post a Comment