Showing posts with label ಬೈಬಲಿನ ವ್ಯಕ್ತಿಗಳು. Show all posts
Showing posts with label ಬೈಬಲಿನ ವ್ಯಕ್ತಿಗಳು. Show all posts
Sunday, 31 May 2020
Sunday, 3 March 2019
ಬೈಬಲಿನ ವ್ಯಕ್ತಿಗಳು
ಬೈಬಲ್ - ವ್ಯಕ್ತಿ ಚಿತ್ರಣ
(ದಯವಿಟ್ಟು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ)
01. ಶುಭಸಂದೇಶದ ಕರ್ತೃ- ಸಂತಲೂಕ
02. ಅಬ್ರಹಾಮ
03.ಯೆಫ್ತಾಹನ ಮಗಳು
04.ಸಂಸೋನನ ತಾಯಿ
05.ಸೇವಾ ಸ್ಫೂರ್ತಿ ಸಂತ ಮಾರ್ಥಾ
06.ಯೇಸುವನ್ನು ಹಿಂಬಾಲಿಸಿದ ಸ್ತ್ರೀಯರು
(ದಯವಿಟ್ಟು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ)
01. ಶುಭಸಂದೇಶದ ಕರ್ತೃ- ಸಂತಲೂಕ
02. ಅಬ್ರಹಾಮ
03.ಯೆಫ್ತಾಹನ ಮಗಳು
04.ಸಂಸೋನನ ತಾಯಿ
05.ಸೇವಾ ಸ್ಫೂರ್ತಿ ಸಂತ ಮಾರ್ಥಾ
06.ಯೇಸುವನ್ನು ಹಿಂಬಾಲಿಸಿದ ಸ್ತ್ರೀಯರು
Thursday, 14 February 2019
ಅಬ್ರಹಾಮ
ನೋಹನ ಮಕ್ಕಳ ವಂಶಾವಳಿಯ ಪಟ್ಟಿಯು ಅಬ್ರಾಮನೊಂದಿಗೆ ಕೊನೆಗೊಳ್ಳುತ್ತದೆ. ನಂತರ ಅವನು ಅಬ್ರಹಾಮನಾದನು. ದೇವರು ಅಬ್ರಾಮನಿಗೆ ಅವನ ಸ್ವಂತ ಊರಾದ ಕಲ್ದೀಯರ (ದಕ್ಷಿಣ ಮೆಸಪೊತಾಮ್ಯದಲ್ಲಿರುವ) ಊರ್ ಎಂಬ ಪಟ್ಟಣದಿಂದ ಹೊರಟು ಕಾನಾನ್ ದೇಶಕ್ಕೆ ಹೋಗುವಂತೆ ಹೇಳಿದರು. ದೇವರೊಂದಿಗೆ ವಿಶೇಷ ಸಂಬಂಧ ಹೊಂದಿದ ಮಹಾಜನಾಂಗ ಅವನಿಂದ ಉಂಟಾಗುವುದೆಂದೂ, ಅಬ್ರಹಾಮ ಮತ್ತು ಅವನ ಹೆಂಡತಿ ಸಾರಳಿಗೂ ಹಾಗೂ ಅವರ ಸಂತತಿಯ ನಿಮಿತ್ತವಾಗಿ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದ ಉಂಟಾಗುವುದೆಂದೂ ದೇವರು ವಾಗ್ದಾನ ಮಾಡಿದರು. ಆದಿ. 12:1-3; 15:1-21). ಹೀಗಾಗಿ ಅಬ್ರಹಾಮನು ಸಾರಳು ಮತ್ತು ತನ್ನ ತಮ್ಮನ ಮಗನಾದ ಲೋಟನೊಂದಿಗೆ ಹೊರಟನು. ಮುಂದೆ ಇಸ್ರಾಯೇಲರ ಚರಿತ್ರೆಯಲ್ಲಿ ಪ್ರಮುಖವಾಗುವ ಸ್ಥಳಗಳನ್ನು (ಶೆಕಮ್ ಮತ್ತು ಬೇತಲ್ ಆದಿ: 12:4-9) ದಾಟಿ, ಐಗುಪ್ತದಲ್ಲಿ ಬಹಳ ದಿನಗಳವರೆಗೆ ತಂಗಿದ್ದು, ಕೊನೆಗೆ ಕಾನಾನ್ ದೇಶದಲ್ಲಿ ನೆಲೆಸಿದನು. ಲೋಟನು ಜೋರ್ಡನ್ ಹೊಳೆಗೆ ಮೂಡಣಕ್ಕಿರುವ ಪ್ರದೇಶದಲ್ಲಿ ನೆಲೆಸಿದನು, ಅಬ್ರಹಾಮನು ಪಶ್ಚಿಮದಲ್ಲಿದ್ದ ಹೆಬ್ರೋನಿನ ಸಮೀಪದಲ್ಲಿರುವ ಮಮ್ರೆ ತೋಪಿನಲ್ಲಿ ವಾಸ ಮಾಡಿದನು.(ಆದಿ 13)
ಅಬ್ರಹಾಮನಿಗೆ ಮಕ್ಕಳಿಲ್ಲದಿದ್ದಾಗ್ಯೂ, ಅವನಿಂದ ಬಹು ಸಂತತಿ ಉಂಟಾಗುವುದೆಂದು ದೇವರು ಅವನಿಗೆ ವಾಗ್ದಾನ ಮಾಡಿದರು (ಆದಿ.15). ಕೊನೆಯಲ್ಲಿ ಅಬ್ರಹಾಮನು ತೊಂಭತ್ತೊಂಭತ್ತು ವರ್ಷದವನಾದಾಗ, ಸಾರಳು ಅವನಿಗೆ ಮಗನನ್ನು ಹೆತ್ತಳು. ಆ ಮಗುವಿಗೆ ಇಸಾಕನೆಂದು ಹೆಸರಿಟ್ಟರು. ಈ ಹೆಸರಿನ ಅರ್ಥ “ನಗುವಂತೆ ಮಾಡುವುದು” ಅಥವಾ ನಗುವುದು. ಯಾಕೆಂದರೆ ವೃದ್ಧಾಪ್ಯದಲ್ಲಿ ತನಗೆ ಮಗುವಾಗುವುದೆಂಬ ವಿಷಯ ತಿಳಿದಾಗ ಸಾರಳು ನಕ್ಕಿದ್ದಳು. (ಆದಿ.18:9-15). ಅಬ್ರಹಾಮನು ದೇವರ ವಾಗ್ದಾನದಲ್ಲಿ ಭರವಸೆ ಇಟ್ಟನು (ಆದಿ.17: 1-27) ಮತ್ತು ಅವನು ಒಬ್ಬ ಮಗನನ್ನು ಪಡೆದನು. ದೇವರೊಂದಿಗೆ ಅಬ್ರಹಾಮನಿಗಿದ್ದ ವಿಶೇಷವಾದ ಸಂಬಂಧದ ಗುರುತಾಗಿ ಇಸಾಕನಿಗೆ ಸುನ್ನತಿಯಾಯಿತು (ಆದಿ 21:1-7). ಇಸಾಕನನ್ನು ಬಲಿಯಾಗಿ ಸಮರ್ಪಿಸಬೇಕೆಂದು ದೇವರು ಹೇಳಿದಾಗಲೂ, ದೇವರಲ್ಲಿ ಅವನಿಗಿದ್ದ ಭರವಸೆಯು ಮುಂದುವರಿಯಿತು. ಆದರೆ ದೇವರು ಇಸಾಕನನ್ನು ಉಳಿಸಿದರು. ಭೂಮಿಯ ಮೇಲಿನ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವಂತೆ ಅವನಿಂದ ಅಸಂಖ್ಯವಾದ ಸಂತತಿಯನ್ನುಂಟು ಮಾಡುವೆನೆಂದು ದೇವರು ತಿರುಗಿ ಅಬ್ರಹಾಮನಿಗೆ ವಾಗ್ದಾನ ಮಾಡಿದರು. (ಆದಿ. 22:1-19). ಹೊಸ ಒಡಂಬಡಿಕೆಯಲ್ಲಿ ದೇವರ ವಾಗ್ದಾನಗಳಲ್ಲಿ ಮಾನವನಿಗಿರುವ ನಂಬಿಕೆಗೆ ಅನೇಕ ಸಾರಿ ಅಬ್ರಹಾಮನನ್ನು ಉದಾಹರಿಸಲಾಗಿದೆ. (ಅ.ಕೃ.7:2-50); ರೋಮಾ 4:1-25; ಗಲಾ 3:1-29, ಇಬ್ರಿ 6.13, 14; 7:1-10; 11:8)
ಸಂಸೋನನ ತಾಯಿ
ಸಂಸೋನನ
ತಾಯಿಯನ್ನು ಬೈಬಲ್ಲಿನಲ್ಲಿ "ಆ ಸ್ತ್ರೀ" ಎಂದು ಸಂಬೋಧಿಸಿದೆಯೇ ಹೊರತು ಆಕೆಯ ಹೆಸರು ಎಲ್ಲಿಯೂ
ಕಾಣಬರುವುದಿಲ್ಲ. 1 ಪೂರ್ವಕಾಲವೃತ್ತಾಂತ 4:3 ರಲ್ಲಿ ಬರುವ ಲೆಲ್ಪೋನಿಯಳೇ ಸಂಸೋನನ ತಾಯಿಯೆಂದು ಕೆಲವರು
ಊಹಿಸಿದ್ದಾರೆ ಆದರೂ ಅದು
ಸಾಬೀತಾಗಿಲ್ಲ. ಹಾಗಾಗಿ, ಸಂಸೋನನ ತಾಯಿ ಅನಾಮಿಕಳಾಗಿಯೇ ಉಳಿಯುತ್ತಾಳೆ.
ಮಾನೋಹನ ಪತ್ನಿಯಾದ ಈ ಸ್ತ್ರೀಗೆ ಎಷ್ಟೋ ವರ್ಷಗಳು
ಮಕ್ಕಳಾಗಿರಲಿಲ್ಲ. ಹನ್ನಳಂತೆ ಇವಳೂ ಸತತ ಪ್ರಾರ್ಥನೆ ಮಾಡುತ್ತಿದ್ದು, ಅದರ ಫಲಶ್ರುತಿಯಾಗಿ,
ಕರ್ತನ ದೂತನು ಅವಳಿಗೆ ಪ್ರತ್ಯಕ್ಷವಾಗಿ, ”ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ” ಎಂದು
ಆಶ್ವಾಸನೆ ನೀಡುತ್ತಾನೆ. ಅಷ್ಟೇ ಅಲ್ಲ, ಜೊತೆಗೆ, ಆ ಮಗುವನ್ನು ಹೇಗೆ ಸಾಕಬೇಕು ಎಂತಲೂ
ಆದೇಶಿಸುತ್ತಾನೆ. ”ನೀನು ಮದ್ಯಪಾನ ಮಾಡಬಾರದು. ನಿಷಿದ್ಧ ಪದಾರ್ಥಗಳನ್ನು ತಿನ್ನಬಾರದು. ಆ
ಮಗುವಿಗೆ ಕ್ಷೌರ ಮಾಡಿಸಬಾರದು, ಅವನು ದೇವರಿಗೆ ಪ್ರತಿಷ್ಠಿತವಾದವನು, ಇಸ್ರಾಯೆಲರ ನಾಯಕನಾಗಿರುವವನು. ”ಎಂದೂ ಆ ದೂತನು ಹೇಳಿದನು.
ಆ
ಸ್ತ್ರೀ, ಸಂತೋಷದಿಂದ ಮನೆಗೆ ಓಡಿಬಂದು, ಗಂಡನಿಗೆ ವಿಷಯವನ್ನೆಲ್ಲಾ ತಿಳಿಸಿದಳು. ಅದಕ್ಕೆ ಅವನು,
”ಆತನು ಎಲ್ಲಿಂದ ಬಂದ, ಆತನ ಹೆಸರೇನು ಎಂದೆಲ್ಲಾ ನೀನು ಕೇಳಲಿಲ್ಲವೇ? ಇರಲಿ, ಆ ದೇವದೂತನು
ಹೇಳಿದಂತೆಯೇ ಮಾಡೋಣ” ಎಂದನು. ಮತ್ತು, ತನ್ನ ಪ್ರಾರ್ಥನೆಯಲ್ಲಿ “ಕರ್ತನೆ, ಆ ದೇವಪುರುಷನನ್ನು
ಇನ್ನೊಮ್ಮೆ ಕಳುಹಿಸಿಕೊಡು“ ಎಂದು ಬೇಡಿಕೊಂಡನು.
ಅದರಂತೆಯೇ,
ಆ ಸ್ತ್ರೀಯೂ ತಮ್ಮ ಹೊಲದಲ್ಲಿರುವಾಗ, ದೇವದೂತನು ಮತ್ತೊಮ್ಮೆ ದರ್ಶನವಿತ್ತನು. ಅವಳು ತುಂಬಾ
ಸಂತೋಷದಿಂದ ಗಂಡನ ಬಳಿಗೆ ಓಡಿಬಂದು, ಅವನನ್ನೂ ಹೊಲಕ್ಕೆ ಕರೆತಂದಳು. ದೂತನು, ಮಾನೋಹನಿಗೂ ಆ
ಮಗುವಿನ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸುತ್ತಾನೆ. ದೂತನಿಗೆ, ಹೋತಮರಿಯ
ಅಡುಗೆ ಮಾಡಿ ಬಡಿಸಬೇಕೆಂಬ ತನ್ನ ಆಸೆಯನ್ನು ವ್ಯಕ್ತಪಡಿಸಿದಾಗ, ಆತನು, ”ಅದನ್ನು ಕರ್ತನಿಗೆ
ಅರ್ಪಿಸು“, ಎನ್ನುತ್ತಾನೆ. ಆತನ ಹೆಸರನ್ನು
ಕೇಳಿದಾಗ, ”ಅದು ಆಶ್ಚರ್ಯಕರವಾದದ್ದು” ಎಂದು ಹೇಳಿ, ಹೋಮದ ನಂತರ ಆ ಅಗ್ನಿಜ್ವಾಲೆಯೊಳಗೆ
ಆಕಾಶಕ್ಕೇರಿ ಹೋದನು.
ಅವಳು
ಗರ್ಭಿಣಿಯಾಗಿ ಮಗನನ್ನು ಹೆತ್ತು, ಅವನಿಗೆ “ಸಂಸೋನ” ಎಂದು ಹೆಸರಿಡುತ್ತಾರೆ. ದೇವದೂತನು
ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಪಾಲಿಸುತ್ತಾರೆ. ದೇವರ ಆಶೀರ್ವಾದ ಆ ಹುಡುಗನ ಮೇಲಿತ್ತು. ಅವನು
ಸ್ನಾನಿಕ ಯೋಹಾನನಂತೆ ನಜರೇಯನಾದನು.
ಸಂಸೋನನ
ವಿಕ್ಷಿಪ್ತ ವ್ಯಕ್ತಿತ್ವವು ತಾಯಿಯ ಮನಸ್ಸನ್ನು ಬಹಳ ನೋಯಿಸುತ್ತಿತ್ತು. ಆದರೆ, ಅವನು
ಇಸ್ರಾಯೇಲ್ಯರಿಗೆ ಇಪ್ಪತ್ತು ವರ್ಷ
ನ್ಯಾಯಸ್ಥಾಪಕನಾಗಿದ್ದದ್ದು ಅವಳಲ್ಲಿ ಧನ್ಯತಾಭಾವ ತರುತ್ತಿತ್ತು. ಅವನ ಅಗಾಧ ದೈಹಿಕ
ಶಕ್ತಿ ಅವಳನ್ನು ಬೆರಗುಗೊಳಿಸುತ್ತಿತ್ತು. ಆದರೆ, ಅವನು ಫಿಲಿಷ್ಟಿಯರನ್ನು ಪದೇಪದೇ
ಸೋಲಿಸುತ್ತಿದ್ದುದರಿಂದ ಅವರು ಅವನನ್ನು ಕೊಲ್ಲಲು ಕಾಯುತ್ತಿದ್ದರು
ಸಂಸೋನನ
ದ್ರೋಹಿ ಹೆಂಡತಿಯು, ಅವನ ಶಕ್ತಿಯು ಅವನ ಕೂದಲಿನಲ್ಲಿದೆ ಎಂದು ಅವನಿಂದ ತಿಳಿದುಕೊಂಡು, ಅದನ್ನು
ಶತ್ರುಗಳಿಗೆ ಹೇಳಿದಳು, ಜೊತೆಗೆ, ಅವನು ನಿದ್ರಿಸುವಾಗ, ಸೊಂಪಾಗಿ ಬೆಳೆದಿದ್ದ ಅವನ ಕೂದಲನ್ನು
ಬೋಳಿಸಿದಳು. ಕೂಡಲೇ, ಅವನ ಶಕ್ತಿ ಉಡುಗಿತು, ಅವನು ಸೆರೆಯಾದ. ಶತ್ರುಗಳು ಅವನ ಕಣ್ಣುಗಳನ್ನು
ಕಿತ್ತರು.
ಕೆಲವು
ದಿನಗಳ ನಂತರ, ವಿನೋದಕ್ಕಾಗಿ ಅಂಧ ಸಂಸೋನನನ್ನು ಶತ್ರುಗಳು ತಮ್ಮ ದೊಡ್ಡ ಸಮಾರಂಭಕ್ಕೆ ಎಳೆತಂದರು.
ಅಷ್ಟರಲ್ಲಿ, ಅವನ ಕೂದಲು ಸ್ವಲ್ಪ ಬೆಳೆದಿತ್ತು. ಶಕ್ತಿಗೂಡಿಸಿಕೊಂಡು, ದೇವರನ್ನು ಪ್ರಾರ್ಥಿಸಿ,
ಅಲ್ಲಿನ ಎರಡು ಮುಖ್ಯ ಸ್ತಂಭಗಳನ್ನು ಬಲವಾಗಿ ಹಿಡಿದು ಅಲುಗಾಡಿಸಿದಾಗ, ಆ ಭವ್ಯಭವನ ಕುಸಿದು ಮೂರುಸಾವಿರ
ಮಂದಿಯೂ ಸಂಸೋನನ ಜೊತೆಯಲ್ಲಿ ಸತ್ತರು. ಪಾಪ, ಇದೆಲ್ಲವನ್ನೂ ಆ ತಾಯಿ ಹೇಗೆ ಸಹಿಸಿಕೊಂಡಳೋ? ಅವಳ
ಹೆಸರು ನಮ್ಮ ಬೈಬಲ್ಲಿನಲ್ಲಿ ಯಾಕಿಲ್ಲ?
ಯೆಫ್ತಾಹನ ಮಗಳು
ಇಸ್ರಾಯೇಲರ ಹದಿಮೂರು ನ್ಯಾಯಸ್ಥಾಪಕರಲ್ಲಿ
ಯೆಫ್ತಾಹನೂ ಒಬ್ಬಾತ. ಮಹಾ ಪರಾಕ್ರಮಿ. ಒಬ್ಬಳೇ ಪ್ರೀತಿಯ ಮಗಳು. ಒಮ್ಮೆ ಅವನು, ಶತ್ರುಗಳಾದ
ಅಮ್ಮೋನಿಯರನ್ನು ಎದುರಿಸಲು ಹೊರಟಾಗ, ದುಡುಕುತನದಿಂದ ದೇವರಿಗೆ ಹೀಗೆಂದು ಹರಕೆ
ಹೊತ್ತನು-"ಸರ್ವೇಶ್ವರಾ, ನೀನು ಶತ್ರುಗಳನ್ನು ನನ್ನ ಕೈಗೆ ಒಪ್ಪಿಸಿ, ನಾನು ಸುರಕ್ಷಿತವಾಗಿ
ಮನೆಗೆ ಹಿಂತಿರುಗಿದರೆ, ನನ್ನನ್ನು ಎದುರುಗೊಳ್ಳಲು ಮನೆಯ ಬಾಗಿಲಿನಿಂದ ಬರುವ ಮೊದಲ ಪ್ರಾಣಿಯನ್ನು
ನಿಮಗೆ ಹೋಮಮಾಡುವೆನು (ನ್ಯಾಯ 11:31) ಬಹುಶಃ ಅವನ ಮನಸ್ಸಿನಲ್ಲಿ ತನ್ನ ಪ್ರೀತಿಯ ಆಡೋ, ಕುರಿಯೋ
ಬರಬಹುದು ಎಂದಿದ್ದಿರಬಹುದು!
ಆದರೆ, ಆದದ್ದೇ ಬೇರೆ. ಯೆಫ್ತಾಹನು ಜಯಪ್ರದನಾಗಿ ಮನೆಗೆ
ಹಿಂತಿರುಗಿದಾಗ, ಅವನನ್ನು ಎದುರುಗೊಂಡದ್ದು ತನ್ನ ಕಣ್ಮಣಿಯಾಗಿದ್ದ ಪ್ರಿಯಪುತ್ರಿ! ಅವಳು ಅತ್ಯಂತ
ಆನಂದದಿಂದ, ದಮ್ಮಡಿ ಬಡಿಯುತ್ತಾ, ನಾಟ್ಯವಾಡುತ್ತಾ ತಂದೆಯನ್ನು ಎದುರುಗೊಳ್ಳಲು ಸಂಭ್ರಮದಿಂದ
ಹೊರಗೆ ಬಂದಳು. ಅವಳನ್ನು ಕಂಡ ಯೆಫ್ತಾಹನಿಗೆ ಎದೆಯೊಡೆಯಿತು. ಉಕ್ಕಿಬಂದ ದುಃಖದಿಂದ ತನ್ನ
ಬಟ್ಟೆಗಳನ್ನು ಹರಿದುಕೊಂಡು, "ಅಯ್ಯೋ ನನ್ನ ಮಗಳೇ, ನೀನು ನನ್ನನ್ನು
ಕುಗ್ಗಿಸಿಬಿಟ್ಟೆಯಲ್ಲಾ! ನನಗೆ ಮಹಾ ಸಂಕಟವನ್ನು ಉಂಟುಮಾಡಿದಿ. ನನ್ನ ಹರಕೆಯನ್ನು ತೀರಿಸಲೇ
ಬೇಕಾಯಿತಲ್ಲಾ. ಅದರಿಂದ ನಾನು ಹಿಂದೆಗೆಯಲಾರೆನು" ಎಂದು ಕೂಗಿಕೊಂಡನು.
ಆ ಹುಡುಗಿಯಾದರೋ ಹೆದರಲಿಲ್ಲ, ಬೆದರಲಿಲ್ಲ.
"ದೇವರು,ಇಸ್ರಾಯೆಲ್ಯರನ್ನು ಅಮ್ಮೋನಿಯರಿಂದ ಬಿಡಿಸಲು ನನ್ನ ತಂದೆಯನ್ನು ಸಾಧನವನ್ನಾಗಿ ಮಾಡಿದ್ದಾನೆ.
ಆತನು ಈಗ ವಚನಭ್ರಷ್ಟನಾಗಬಾರದು," ಎಂದು ಮನಸ್ಸಿನಲ್ಲಿ ಅಂದುಕೊಂಡು, ಧೈರ್ಯದಿಂದ,
"ಅಪ್ಪಾ, ನೀನು ಬಾಯ್ದೆರೆದು ಸರ್ವೇಶ್ವರರಿಗೆ ಹರಕೆಮಾಡಿದ್ದೀ. ಅವರು, ಶತ್ರುಗಳನ್ನು
ಸೋಲಿಸಿ, ನಮಗೆ ಜಯವನ್ನು ದಯಪಾಲಿಸಿದ್ದಾರೆ. ಹಾಗಾಗಿ, ನಿನ್ನ ಬಾಯಿಂದ ಹೊರಟಿದ್ದನ್ನೇ
ನೆರವೇರಿಸು” ಎಂದು ಹೇಳಿ, ಮುಂದೆ, "ಅಪ್ಪಾ, ನನ್ನ ಬಿನ್ನಹವನ್ನು ಆಲಿಸು. ಎರಡು
ತಿಂಗಳವರೆಗೂ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಬೆಟ್ಟದ ಪ್ರದೇಶಗಳಿಗೆ ಹೋಗಿ ನನ್ನ
ಕನ್ಯಾವಸ್ಥೆಗಾಗಿ ಗೋಳಾಡುವೆನು" ಎಂದು ಕೇಳಿಕೊಂಡಳು. ಈ ಅವಧಿ ಮುಗಿದನಂತರ, ಯೆಫ್ತಾಹನು
ತನ್ನ ಆತುರದಲ್ಲಿ ಹೇಳಿಕೊಂಡ ಹರಕೆಯನ್ನು ತೀರಿಸಿದನು.
ಶುಭಸಂದೇಶದ ಕರ್ತೃ- ಸಂತಲೂಕ
ಲೂಕನ ಶುಭಸಂದೇಶ ಹೊಸಒಡಂಬಡಿಕೆಯಲ್ಲಿರುವ ತೃತೀಯ ಸುದೀರ್ಘ ಶುಭಸಂದೇಶ. ಯೇಸುವಿನ ಜೀವನಚರಿತ್ರೆಯನ್ನೊಳಗೊಂಡ ಈ ಶುಭಸಂದೇಶದಲ್ಲಿ, ಯೇಸು ಇಸ್ರಯೇಲ್ ಜನತೆಗೆ ವಾಗ್ದತ್ತ ರಕ್ಷಕ ಮಾತ್ರವಲ್ಲ, ಇಡೀ ಮಾನವಕುಲದ ಉದ್ಧಾರಕ ಎಂಬ ಸತ್ಯವನ್ನು ಲೂಕ ಮನದಟ್ಟಾಗಿಸುತ್ತಾನೆ. ಲೂಕನ ಶುಭಸಂದೇಶದ ಮೂಲಪ್ರತಿಯು ಶುಭಸಂದೇಶದ ಕರ್ತೃವೆಂಬುದರ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಅದಾಗ್ಯೂ, ಸಂತ ಲೂಕನೇ ತೃತೀಯ ಶುಭಸಂದೇಶದ ಕರ್ತೃವೆಂದು ವಿಶ್ವಾಸಾರ್ಹ ಪ್ರಾಚೀನ ಪರಂಪರೆಯು ನಮಗೆ ತಿಳಿಸುತ್ತದೆ. ಸಂತ ಪೌಲನ ಸಹವರ್ತಿಯಾಗಿದ್ದ ಲೂಕನು ಪೌಲನು ಬೋಧಿಸಿದ ಶುಭಸಂದೇಶವನ್ನು ಗ್ರಂಥರೂಪದಲ್ಲಿ ಬರೆದನು ಎಂದು ಸಂತ ಇರನೇಯುಸರು (ಕ್ರಿ.ಶ.180) ದೃಢಪಡಿಸುತ್ತಾರೆ. ಲೂಕನ ಬಗ್ಗೆ ಹೆಚ್ಚಿನ ಮಾಹಿತಿಯು ಮಾರ್ಸಿಯೋನನ ಖಂಡನೆ ಎಂಬ ಪ್ರಾಚೀನ ಗ್ರಂಥದಲ್ಲಿ ನಮಗೆ ಲಭ್ಯವಾಗುತ್ತದೆ. ಈ ಗ್ರಂಥದಲ್ಲಿ ಕೆಳಕಂಡ ಅಂಶಗಳನ್ನು ಗಮನಿಸಬಹುದು;
· ಲೂಕನು ಯೆಹೂದ್ಯನಾಗಿರದೆ, ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ಅಂತಿಯೋಕದ ಅನ್ಯಮತೀಯನು.
· ಅವನು ವೈದ್ಯನೂ ಆಗಿದ್ದುದರಿಂದ ಗ್ರೀಕ್ ವಿಜ್ಞಾನದ ಪಾಂಡಿತ್ಯವನ್ನು ಹೊಂದಿದ್ದನು.
· ಅವನು ತನ್ನ ಶುಭಸಂದೇಶವನ್ನು ಗ್ರೀಕ್ ಸಂಸ್ಕೃತಿಯ ಪರಿಸರದಲ್ಲಿ ಬರೆದನು.
· ಪೌಲನ ಪಾಲನಾನುಭವಗಳಲ್ಲಿ ಸಹಭಾಗಿಯಾಗಿದ್ದ ಲೂಕ ಪ್ರೇಷಿತರಿಂದ (ಪೇತ್ರ ಹಾಗೂ ಇತರರಿಂದ) ಶುಭಸಂದೇಶವನ್ನು ಕೇಳಿ ತಿಳಿದುಕೊಂಡನು.
· ಆತನು ಅವಿವಾಹಿತನಾಗಿದ್ದನು
ಲೂಕನ ಬಗ್ಗೆ ಇಂತಹ ಮಾಹಿತಿಗಳನ್ನು ಮುರಟೋರಿಯನ್ ಪ್ರಮಾಣಪಟ್ಟಿ(ಕ್ರಿ.ಶ 120?), ಅಲೆಕ್ಸಾಂಡ್ರಿಯಾದ ಕ್ಲೆಮೆಂಟ್ (ಕ್ರಿ.ಶ.150-215), ಟೆರ್ಟಲಿಯನ್ (ಕ್ರಿ.ಶ.16ಂ-240), ಒರಿಜೆನ್ (ಕ್ರಿ.ಶ 186-254) ಮತ್ತಿತರರಿಂದ ಸಂಗ್ರಹಿಸಬಹುದು. ಲೂಕನು ಯೇಸುಸ್ವಾಮಿಯ ಸೇವಾವೃತ್ತಿಯ ಪ್ರತ್ಯಕ್ಷದರ್ಶಿಯಾಗಿರದೆ, ಪ್ರೇಷಿತರಿಂದಲೂ, ಪ್ರಭುಯೇಸುವನ್ನು ನೋಡಿದ ಇತರರಿಂದಲೂ ಅತ್ಯಂತ ಶ್ರದ್ಧೆಯಿಂದ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿ ಶುಭಸಂದೇಶವನ್ನು ಬರೆದನೆಂದು ಈ ಮೇಲಿನ ಗ್ರಂಥಗಳು ನಮಗೆ ತಿಳಿಸುತ್ತವೆ (ಶುಭಸಂದೇಶಗಳ ಹಿನ್ನೆಲೆ, 53).
Subscribe to:
Posts (Atom)