Showing posts with label ದಿನನಿತ್ಯದ ಹಾದಿ ಶಿಲುಬೆ ಹಾದಿ. Show all posts
Showing posts with label ದಿನನಿತ್ಯದ ಹಾದಿ ಶಿಲುಬೆ ಹಾದಿ. Show all posts

Saturday, 2 March 2019

ಶಿಲುಬೆ ಹಾದಿ






(ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
ಶಿಲುಬೆ ಹಾದಿ - ಇತಿಹಾಸ

ಶಿಲುಬೆ ಹಾದಿ - 1
ಪ್ರಾರಂಭ ಪ್ರಾರ್ಥನೆ
ಮೊದಲನೇ ಸ್ಥಳ
ಎರಡನೇ ಸ್ಥಳ
ಮೂರನೇ ಸ್ಥಳ
ನಾಲ್ಕನೇ ಸ್ಥಳ
ಐದನೇ ಸ್ಥಳ
ಆರನೇ ಸ್ಥಳ
ಏಳನೇ ಸ್ಥಳ
ಎಂಟನೇ ಸ್ಥಳ
ಒಂಬತ್ತನೇ ಸ್ಥಳ
ಹತ್ತನೇ ಸ್ಥಳ
ಹನ್ನೊಂದನೇ ಸ್ಥಳ
ಹನ್ನೆರೆಡನೇ ಸ್ಥಳ
ಹದಿಮೂರನೇ ಸ್ಥಳ
ಹದಿನಾಲ್ಕನೇ ಸ್ಥಳ
ಅಂತಿಮ ಪ್ರಾರ್ಥನೆ



ಶಿಲುಬೆಹಾದಿ-2 (ಸಂಕ್ಷಿಪ್ತ)
ಶಿಲುಬೆ ಹಾದಿ - 3(ಸಚಿತ್ರ)
ಪ್ರಾರಂಭದ ಪ್ರಾರ್ಥನೆ
ಮೊದಲನೆಯ ಸ್ಥಳ
ಎರಡನೆಯ ಸ್ಥಳ
ಮೂರನೆಯ ಸ್ಥಳ
ನಾಲ್ಕನೆಯ ಸ್ಥಳ
ಐದನೆಯ ಸ್ಥಳ
ಆರನೆಯ ಸ್ಥಳ
ಏಳನೆಯ ಸ್ಥಳ
ಎಂಟನೆಯ ಸ್ಥಳ
ಒಂಬತ್ತನೆಯ ಸ್ಥಳ
ಹತ್ತನೆಯ ಸ್ಥಳ
ಹನ್ನೊಂದನೆಯ ಸ್ಥಳ
ಹನ್ನೆರಡನೆಯ ಸ್ಥಳ
ಹದಿಮೂರನೆಯ ಸ್ಥಳ
ಹದಿನಾಲ್ಕನೆಯ ಸ್ಥಳ
ಮುಕ್ತಾಯ ಪ್ರಾರ್ಥನೆ












Sunday, 10 February 2019

ಶಿಲುಬೆ ಹಾದಿಯ ಇತಿಹಾಸ


ಪುರೋಹಿತಶಾಹಿ ವರ್ಗದವರ ಪುಸಲಾವಣೆಗೊಳಗಾಗಿ ಉದ್ರಿಕ್ತರಾಗಿದ್ದ ಯಹೂದಿ ಜನರ ಆಗ್ರಹಕ್ಕೆ ಮಣಿದು, ರೋಮನ್ ಪ್ರಾಂತಾಧಿಕಾರಿ ಪೊನ್ಸಿಯಸ್ ಪಿಲಾತ ಕೈಗೊಂಡ ನಿರ್ಧಾರದಂತೆ ಶಿಲುಬೆ ಮರಣದ ಶಿಕ್ಷೆಗೆ ಗುರಿಯಾದ ಯೇಸುಸ್ವಾಮಿ, ಪಿಲಾತನ ಅರಮನೆಯ ಅಂಗಳದ ನ್ಯಾಯಾಲಯದಿಂದ ಜೆರುಸಲೇಮ್ ಪಟ್ಟಣದ ಬೀದಿಗಳಲ್ಲಿ ಹಾಯ್ದು ಕಪಾಲ ಬೆಟ್ಟದವರೆಗೆ ಶಿಲುಬೆ ಹೊತ್ತು ಸಾಗಿದ ಹಾದಿ, ಶಿಲುಬೆ ಮರಣ ಮತ್ತು ನಂತರದ ಭೂಸ್ಥಾಪನೆ (ಸಮಾಧಿ) ವರೆಗಿನ ಘಟನಾವಳಿಗಳನ್ನು ‘ಶಿಲುಬೆ ಹಾದಿ’ ಎಂದು ಗುರುತಿಸಲಾಗುತ್ತದೆ.
ಆ ಹಾದಿಯಲ್ಲಿನ ಹದಿನಾಲ್ಕು ಸ್ಥಳಗಳನ್ನು ಗುರುತಿಸಿ ಆಯಾ ಘಟನಾವಳಿಗಳನ್ನು ಸ್ಮರಿಸುತ್ತಾ, ಧ್ಯಾನಿಸುವ, ಪ್ರಾರ್ಥಿಸುವ ಪ್ರಕ್ರಿಯೆಯನ್ನು ‘ಶಿಲುಬೆ ಹಾದಿ’ ಎಂದು ಕಥೋಲಿಕ ಧರ್ಮಸಭೆ ಮಾನ್ಯ ಮಾಡಿದೆ.
ಈ ‘ಶಿಲುಬೆ ಹಾದಿ’ಯನ್ನು ‘ವೀಯಾ ದೋಲೊರೊಸಾ’, ‘ವೀಯಾ ಕ್ರೂಚಿಸ್’ ಮತ್ತು ‘ಶಿಲುಬೆಯ ಹದಿನಾಲ್ಕು ಸ್ಥಳಗಳು’ ಎಂದೂ ಕರೆಯಲಾಗುತ್ತದೆ. ಲ್ಯಾಟಿನ್ ನಲ್ಲಿ ‘ವಿಯಾ ದೋಲೊರೊಸಾ’ ಎಂದರೆ ‘ನೋವಿನ ಹಾದಿ’. ಅದರಂತೆ ‘ವಿಯಾ ಕ್ರೂಸಿಸ್’ ಎಂದರೆ ‘ಶಿಲುಬೆಯ ಹಾದಿ’.
ಈ ಸ್ಥಳಗಳನ್ನು- ಚಿತ್ರಗಳು, ಭಿತ್ತಿಚಿತ್ರಗಳು, ಉಬ್ಬುಚಿತ್ರಗಳು (ಕಟ್ಟಿಗೆಯ, ಪ್ಲಾಸ್ಟರ್ ಆಫ್ ಪ್ಯಾರಿಸ್, ಲೋಹದ, ಕಲ್ಲಿನ) ಕೆಲವೊಮ್ಮೆ ನೈಜ ಗಾತ್ರದ ಮಾನವಾಕಾರದ ಪ್ರತಿಕೃತಿಗಳ ಮೂಲಕವೂ ಪ್ರತಿನಿಧಿಸಲಾಗುತ್ತದೆ. ಒಂದರಿಂದ ಹದಿನಾಲ್ಕರವರೆಗಿನ ಸಂಖ್ಯೆಗಳನ್ನು ಗುರುತಿಸುವ ಕಲ್ಲಿನ ಶಿಲುಬೆಗಳ ‘ಶಿಲುಬೆ ಹಾದಿ’ ಕೆಲವು ಕ್ರೈಸ್ತ ಗ್ರಾಮಗಳಲ್ಲಿ ಮತ್ತು ಕ್ರೈಸ್ತರು ಹೆಚ್ಚಾಗಿರುವ ಬಡಾವಣೆಗಳಲ್ಲಿ ಕಾಣಬಹುದು.

ಶಿಲುಬೆ ಹಾದಿಯ ಹದಿನಾಲ್ಕು ಸ್ಥಳಗಳು:
೧) ಪ್ರಭು ಯೇಸುಸ್ವಾಮಿಯನ್ನು ಶಿಲುಬೆ ಮರಣದ ಶಿಕ್ಷೆಗೆ ಗುರಿಪಡಿಸಲಾಗುವುದು.
೨) ಪ್ರಭು ಯೇಸುಸ್ವಾಮಿಯು ಶಿಲುಬೆಯನ್ನು ಹೊತ್ತುಕೊಳ್ಳುವರು.
೩) ಶಿಲುಬೆಯ ಭಾರ ಹೊರಲಾರದೆ ಪ್ರಭು ಯೇಸುಸ್ವಾಮಿಯು ಮೊದಲನೆಯ ಬಾರಿ ಮೊಕ್ಕಡೆಯಾಗಿ ಬೀಳುವರು.
೪) ಪ್ರಭು ಯೇಸುಸ್ವಾಮಿ ಪೂಜ್ಯ ಮಾತೆಮರಿಯಳನ್ನು ಎದುರುಗೊಳ್ಳುವರು.
೫) ಭಾರವಾದ ಶಿಲುಬೆಯನ್ನು ಹೊತ್ತು ಸಾಗಿಸಲು ಪ್ರಭು ಯೇಸುಸ್ವಾಮಿ ಸಿರೇನ್ಯದ ಸಿಮೋನನ ಸಹಾಯ ಪಡೆಯುವರು.
೬) ಜೆರುಸಲೇಮಿನ ಮಹಿಳೆಯರಲ್ಲೊಬ್ಬಳಾದ ವೆರೋನಿಕ ಎಂಬುವವಳು ಬಿಳಿಯ ಬಟ್ಟೆಯಿಂದ ಪ್ರಭು ಯೇಸುಸ್ವಾಮಿಯ ಮುಖವನ್ನು ಒರೆಸುವಳು.
೭) ಪ್ರಭು ಯೇಸುಸ್ವಾಮಿಯು ಎರಡನೇ ಸಾರಿ ಮೊಕ್ಕಡೆಯಾಗಿ ಬೀಳುವರು.
೮) ಪ್ರಭು ಯೇಸುಸ್ವಾಮಿಯು ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ಜೆರುಸಲೇಮಿನ ಮಹಿಳೆಯರಿಗೆ ಸಮಾಧಾನ ಮಾಡುವರು.
೯) ಪ್ರಭು ಯೇಸುಸ್ವಾಮಿಯು ಮೂರನೇ ಬಾರಿ ಮೊಕ್ಕಡೆಯಾಗಿ ಬೀಳುವರು.
೧೦) ಈ ಮೊದಲೇ ಸೂಚನೆಯಾದಂತೆ ಸೈನಿಕರು ಪ್ರಭು ಯೇಸುಸ್ವಾಮಿಯ ಬಟ್ಟೆಗಳನ್ನು ಸುಲಿದು ಹಂಚಿಕೊಳ್ಳುವರು.
೧೧) ಸೈನಿಕರು ಪ್ರಭು ಯೇಸುಸ್ವಾಮಿಯನ್ನು ಶಿಲುಬೆಮರಕ್ಕೆ ಕಟ್ಟಿ ಮೊಳೆ ಜಡಿಯುವರು.
೧೨) ಪ್ರಭು ಯೇಸುಸ್ವಾಮಿಯು ಶಿಲುಬೆಯ ಮೇಲೆ ಮರಣಿಸುವರು.
೧೩) ಪ್ರಭು ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು ಶಿಲುಬೆಯಿಂದ ಇಳಿಸಿ ತಾಯಿ ಮಾತೆ ಮರಿಯಳ ಮಡಿಲಲ್ಲಿರಿಸುವುದು.
೧೪) ಪ್ರಭು ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು ಗುಹೆಯೊಂದರಲ್ಲಿ ಭೂಸ್ಥಾಪನೆ ಮಾಡುವುದು.
ಶಿಲುಬೆ ಹಾದಿ - ಪವಿತ್ರ ಯಾತ್ರೆಯ ಪ್ರತೀಕ.....
ಪ್ರಭು ಯೇಸುಕ್ರಿಸ್ತರು ಬಾಳಿ ಬದುಕಿದ, ಪ್ರಬೋಧನೆ ಮಾಡಿದ, ಪವಾಡಗಳನ್ನು ಗೈದ ಸ್ಥಳಗಳಿರುವ ಪವಿತ್ರ ಭೂಮಿ ಜೆರುಸಲೇಮಿಗೆ ಪ್ರತಿಯೊಬ್ಬ ಕ್ರೈಸ್ತನೂ ಭೇಟಿಕೊಡುವುದು ಅಸಾಧ್ಯವಾದ ಮಾತು. ಈ ನಿಟ್ಟಿನಲ್ಲಿ ‘ಶಿಲುಬೆ ಹಾದಿ’ ಆಚರಣೆಯು, ಕ್ರೈಸ್ತರ ಪವಿತ್ರ ಭೂಮಿ ‘ಜೆರುಸಲೇಮಿನ ತೀರ್ಥಯಾತ್ರೆ’ಯ ಪುಟ್ಟ ಪ್ರತೀಕ ಎಂದು ಹೇಳಲಾಗುತ್ತದೆ. ಈ ಆಚರಣೆಯಲ್ಲಿ ಭಾಗವಹಿಸುವವರಿಗೆ ‘ಪವಿತ್ರ ಭೂಮಿ ಜೆರುಸಲೇಮಿ’ಗೆ ಭೇಟಿಕೊಟ್ಟ ಧನ್ಯತೆಯ ಭಾವ ಮೂಡುತ್ತದೆ ಎಂಬ ಕಾರಣವೇ ಈ ಆಚರಣೆಯ ಆರಂಭಕ್ಕೆ ನಾಂದಿಯಾಯಿತು ಎನ್ನಲಾಗುತ್ತಿದೆ.
ಪವಿತ್ರ ಭೂಮಿ ‘ಜೆರುಸಲೇಮ್ ಯಾತ್ರೆ’ಯ ಸಂದರ್ಭದಲ್ಲಿ ಶಿಲುಬೆ ಹೊತ್ತು ಸಾಗಿದ ದಾರಿಯಲ್ಲಿ ಭಕ್ತರು ಸಾಗಿ ಧನ್ಯತೆಯನ್ನು ಅನುಭವಿಸುತ್ತಿದ್ದರು. ಮೂರು ನಾಲ್ಕನೇ ಶತಮಾನಗಳಲ್ಲಿ ದೂರದ ಪವಿತ್ರ ಭೂಮಿಗೆ ಹೋಗಲಾಗದ ಭಕ್ತರಿಗೆ ಅನುಕೂಲವಾಗಲಿ ಎಂದು ಕೆಲವು ದೇಶಗಳಲ್ಲಿನ ಸನ್ಯಾಸಿ ಮಠಗಳಲ್ಲಿ ಜೆರುಸಲೇಮಿನ ಪವಿತ್ರ ಕ್ಷೇತ್ರಗಳ ಪ್ರತಿಕೃತಿಗಳ ನಿರ್ಮಾಣ ಕಾರ್ಯ ನಡೆದವು. ಪ್ರಯಾಣದ ಪ್ರಯಾಸವನ್ನು ಅನುಭವಿಸಿ ಪವಿತ್ರ ಭೂಮಿಗೆ ಭೇಟಿ ಕೊಟ್ಟವರು ಮಾಡುತ್ತಿದ್ದ ಪ್ರಭು ಯೇಸುಸ್ವಾಮಿ ಶಿಲುಬೆ ಹೊತ್ತು ಸಾಗಿದ ಹಾದಿಯ ಬಣ್ಣನೆ, ಅವರ ವರ ಧನ್ಯತೆಯ ಭಾವ ಆಯಾ ಊರುಗಳಲ್ಲಿ ಅನುರಣಿಸಿದಾಗ, ಆಯಾ ಊರಲ್ಲಿನ ಭಕ್ತರಲ್ಲಿ ಪವಿತ್ರ ಭೂಮಿಯ ಭೇಟಿಯ ತವಕ ಹೆಚ್ಚುತ್ತಿತ್ತು. ಈ ಬೆಳವಣಿಗೆಗಳೇ ಕ್ರಮೇಣ ಶಿಲುಬೆ ಹಾದಿಯ ಸ್ಥಳಗಳ ಚಿತ್ರಣಗಳು ಹದಿನೇಳನೇ ಶತಮಾನದ ಉತ್ತರಾರ್ಧದ ಹೊತ್ತಿಗೆ ಚರ್ಚ್ ಅಂಗಳಕ್ಕೆ ಬರುವಂತೆ ಪ್ರೆರೇಪಿಸಿರಬೇಕು ಎಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ.
ಪವಿತ್ರ ಕ್ಷೇತ್ರದ ಯಾತ್ರೆಯ ಪ್ರತೀಕ:
ಪ್ರಭು ಯೇಸುಕ್ರಿಸ್ತರು ಬಾಳಿ ಬದುಕಿದ, ಪ್ರಬೋಧನೆ ಮಾಡಿದ, ಪವಾಡಗಳನ್ನು ಗೈದ ಸ್ಥಳಗಳಿರುವ ಪವಿತ್ರ ಭೂಮಿ ಜೆರುಸಲೇಮಿಗೆ ಪ್ರತಿಯೊಬ್ಬ ಕ್ರೈಸ್ತನಿಗೆ ಭೇಟಿಕೊಡುವುದು ಅಸಾಧ್ಯವಾದ ಮಾತು. ಈ ನಿಟ್ಟಿನಲ್ಲಿ ‘ಶಿಲುಬೆ ಹಾದಿ’ ಆಚರಣೆಯು, ಕ್ರೈಸ್ತರ ಪವಿತ್ರ ಭೂಮಿ ‘ಜೆರುಸಲೇಮಿನ ತೀರ್ಥಯಾತ್ರೆ’ಯ ಪುಟ್ಟ ಪ್ರತೀಕ ಎಂದು ಹೇಳಲಾಗುತ್ತದೆ. ಈ ಆಚರಣೆಯಲ್ಲಿ ಭಾಗವಹಿಸುವವರಿಗೆ ‘ಪವಿತ್ರ ಭೂಮಿ ಜೆರುಸಲೇಮಿ’ಗೆ ಭೇಟಿಕೊಟ್ಟ ಧನ್ಯತೆಯ ಭಾವ ಮೂಡುತ್ತದೆ ಎಂಬ ಕಾರಣವೇ ಈ ಆಚರಣೆಯ ಆರಂಭಕ್ಕೆ ನಾಂದಿಯಾಯಿತು ಎನ್ನಲಾಗುತ್ತಿದೆ. ಪವಿತ್ರ ಭೂಮಿ ‘ಜೆರುಸಲೇಮ್ ಯಾತ್ರೆ’ಯ ಸಂದರ್ಭದಲ್ಲಿ ಶಿಲುಬೆ ಹೊತ್ತು ಸಾಗಿದ ದಾರಿಯಲ್ಲಿ ಭಕ್ತರು ಸಾಗಿ ಧನ್ಯತೆಯನ್ನು ಅನುಭವಿಸುತ್ತಿದ್ದರು.
ಮೂರು, ನಾಲ್ಕನೇ ಶತಮಾನಗಳಲ್ಲಿ ದೂರದ ಪವಿತ್ರ ಭೂಮಿಗೆ ಹೋಗಲಾಗದ ಭಕ್ತರಿಗೆ ಅನುಕೂಲವಾಗಲಿ ಎಂದು ಕೆಲವು ದೇಶಗಳಲ್ಲಿನ ಸನ್ಯಾಸಿ ಮಠಗಳಲ್ಲಿ ಜೆರುಸಲೇಮಿನ ಪವಿತ್ರ ಕ್ಷೇತ್ರಗಳ ಪ್ರತಿಕೃತಿಗಳ ನಿರ್ಮಾಣ ಕಾರ್ಯ ನಡೆದವು. ಪ್ರಯಾಣದ ಪ್ರಯಾಸವನ್ನು ಅನುಭವಿಸಿ ಪವಿತ್ರ ಭೂಮಿಗೆ ಭೇಟಿ ಕೊಟ್ಟವರು ಮಾಡುತ್ತಿದ್ದ ಪ್ರಭುಯೇಸುಸ್ವಾಮಿ ಶಿಲುಬೆ ಹೊತ್ತು ಸಾಗಿದ ಹಾದಿಯ ಬಣ್ಣನೆ, ಅವರ ವರ ಧನ್ಯತೆಯ ಭಾವ ಆಯಾ ಊರುಗಳಲ್ಲಿ ಅನುರಣಿಸಿದಾಗ, ಆಯಾ ಊರಲ್ಲಿನ ಭಕ್ತರಲ್ಲಿ ಪವಿತ್ರ ಭೂಮಿ ಭೇಟಿಯ ತವಕ ಬೆಚ್ಚುತ್ತಿತ್ತು. ಈ ಬೆಳವಣಿಗೆಗಳೇ ಕ್ರಮೇಣ ಶಿಲುಬೆ ಹಾದಿಯ ಸ್ಥಳಗಳ ಚಿತ್ರಣಗಳು ಹದಿನೇಳನೇ ಶತಮಾನದ ಉತ್ತರಾರ್ಧದ ಹೊತ್ತಿಗೆ ಚರ್ಚ್ ಅಂಗಳಕ್ಕೆ ಬರುವಂತೆ ಪ್ರೆರೇಪಿಸಿರಬೇಕು ಎಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ.
ಮಾತೆ ಮರಿಯಳ ‘ನೋವಿನ ಹಾದಿ’:
ಹದಿನೈದನೇ ಶತಮಾನದಲ್ಲಿ ಪೂರ್ಣ ಪ್ರಮಾಣದ ‘ಶಿಲುಬೆ ಹಾದಿ’ಯ ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ. ಮಾತೆ ಮರಿಯಳು ಕೆಲವು ಸಮಯ ಅದೇ ಹಾದಿಯಲ್ಲಿ ಸಾಗಿದ್ದಳು ಎಂಬ ಕಾರಣಕ್ಕೆ ‘ವಿಯಾ ದೋಲೊರೊಸಾ’ (ನೋವಿನ ಹಾದಿ) ಎಂಬ ಹೆಸರು ಪ್ರಾಪ್ತಿಯಾಯಿತಂತೆ. ಈ ಪದಪುಂಜ ೧೬ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದಿತಂತೆ.
ಶಿಲುಬೆ ಹಾದಿ’ಯಲ್ಲಿ ಇಂದು ‘ಹದಿನಾಲ್ಕು ಸ್ಥಳ’ಗಳಿವೆ. ಮೊದಮೊದಲು ‘ಶಿಲುಬೆ ಹಾದಿ’ಗೆ ಇಷ್ಟೇ ಸ್ಥಳಗಳು ಎಂಬುದು ಇರಲಿಲ್ಲ. ಪವಿತ್ರ ಭೂಮಿಗೆ ಭೇಟಿ ಕೊಟ್ಟ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ೬, ೧೯, ೨೫, ೩೧, ೩೭ ಎಂದು ಶಿಲುಬೆ ಹಾದಿಯ ಸ್ಥಳಗಳನ್ನು ಗುರುತಿಸುತ್ತಿದ್ದರು. ಹದಿನಾರನೇ ಶತಮಾನದ ಕೊನೆಯಲ್ಲಿ ಪ್ರಕಟಗೊಂಡ ಪುಸ್ತಕವೊಂದರಲ್ಲಿ ಇಂದು ಬಳಕೆಯಲ್ಲಿರುವ ಮೊದಲ ೧೨ ಸ್ಥಳಗಳನ್ನು ಗುರುತಿಸಲಾಗಿದೆ. ನಂತರ ಧರ್ಮಸಭೆಯು ‘ಶಿಲುಬೆ ಹಾದಿ’ಯ ಸ್ಥಳಗಳನ್ನು ೧೪ಕ್ಕೆ ನಿಗದಿ ಪಡಿಸಿದೆ.

ದೇಹ ದಂಡನೆಯ ತಪಸ್ಸು ಕಾಲ:
ಸಾಮಾನ್ಯವಾಗಿ ಫೆಬ್ರುವರಿ ಮಾರ್ಚ ತಿಂಗಳಲ್ಲಿ ಬರುವ ಈ ಸ್ಟರ್ ಹಬ್ಬಕ್ಕೆ ಮೊದಲು ೪೦ ದಿನಗಳ ಕಾಲದ ಅವಧಿಯನ್ನು (ಭಾನವಾರ ಲೆಕ್ಕಕ್ಕೆ ಸೇರುವುದಿಲ್ಲ) ಕಥೋಲಿಕ ಕ್ರೈಸ್ತರು ‘ತಪಸ್ಸುಕಾಲ’ವೆಂದು ಕರೆಯುತ್ತಾರೆ. ‘ತಪಸ್ಸು ಕಾಲಕ್ಕೆ’ ಆಂಗ್ಲ ಪದ ಲೆಂಟನ್ ಸೀಸನ್. ಲೆಂಟ್ ಎಂದರೆ ವಸಂತ ಎಂಬ ಅರ್ಥವಿದೆ. ಪ್ರಭುಯೇಸು ಕ್ರಿಸ್ತರು ತಮ್ಮ ಬಹಿರಂಗ ಜೀವನವನ್ನು ಆರಂಭಿಸುವ ಮುನ್ನ ೪೦ ದಿನಗಳ ಕಾಲ ಜಪ, ಧ್ಯಾನ ಮತ್ತು ದೇಹದಂಡನೆಯ ಉಪವಾಸದಲ್ಲಿ ಕಾಲ ಕಳೆದರೆಂದು ಹೊಸ ಒಡಂಬಡಿಕೆಯ, ಜೇಸುನಾಥರ ಜೀವನ ಕಥನ ಸಾರುವ ‘ಸುವಾರ್ತೆ’ಗಳಲ್ಲಿ ಪ್ರಸ್ತಾಪಿಸಲಾಗಿದೆ. ಇದು ತಪಸ್ಸು ಕಾಲದ ಆಚರಣೆಯ ಹಿನ್ನೆಲೆ.
ಈ ಅವಧಿಯಲ್ಲಿ, ಸಂಪ್ರದಾಯ ಶರಣರು ಈ ಹಿಂದೆ, ಉಪವಾಸವಿರುವುದರ ಜೊತೆಗೆ ಕಪ್ಪುಬಟ್ಟೆ ಧರಿಸುತ್ತಿದ್ದರು, ಕೆಲವರು ಕೂದಲನ್ನು ಹಾಗೇ ಬಿಟ್ಟುಕೊಂಡಿರುತ್ತಿದ್ದರು. ಮತ್ತೆ ಕೆಲವರು ಮಾಂಸಾಹಾರಕ್ಕೆ ತಾತ್ಕಾಲಿಕ ವಿರಾಮ ಹೇಳುತ್ತಿದ್ದರು.
ಬೂದಿ (ವಿಭೂತಿ-ಹಿಂದಿನ ವರ್ಷ ‘ಗರಿಗಳ ಹಬ್ಬ’ದಂದು ಪಾದ್ರಿಗಳು ಆಶಿರ್ವದಿಸಿ ಕೊಟ್ಟಿದ್ದ ಗರಿಗಳನ್ನು ಭಕ್ತರು ಹಿಂದಿರುಗಿಸಿದ ನಂತರ ಅವುಗಳನ್ನು ಸುಟ್ಟು ಸಿದ್ಧಪಡಿಸಿದ ಬೂದಿಯನ್ನು ಅಂದು ‘ಮಣ್ಣಿಂದ ಕಾಯ, ಮಣ್ಣಿಗೆ ಸೇರುವೆ’ ಎನ್ನತ್ತಾ ಅದನ್ನು ಹಣೆಗೆ ಹಚ್ಚಲಾಗುತ್ತದೆ) ಬುಧವಾರದಂದು (ಆಶ್ ವೆನ್ಸಡೆ) ಆರಂಭವಾಗುವ ‘ತಪಸ್ಸು ಕಾಲ’ದಲ್ಲಿ ಬರುವ ಶುಕ್ರವಾರಗಳಲ್ಲಿ ವೈಯಕ್ತಿಕವಾಗಿ, ಕೌಟುಂಬಿಕ ನೆಲೆಗಳಲ್ಲಿ ಹಾಗು ಚರ್ಚುಗಳಲ್ಲಿ ಸಾಮೂಹಿಕವಾಗಿ ‘ಶಿಲುಬೆ ಹಾದಿ’ಯನ್ನು ನಡೆಸಲಾಗುತ್ತದೆ.
 ಶುಭಶುಕ್ರವಾರ’ದ ಹಿಂದಿನ ಭಾನುವಾರ ‘ಗರಿಗಳ ಹಬ್ಬ’, ಅದು ಪ್ರಭು ಯೇಸುಸ್ವಾಮಿ ಜೆರುಸಲೇಮಿಗೆ ಪ್ರವೇಶಿಸಿದ ಸಂಭ್ರಮವನ್ನು ಕೊಂಡಾಡುವ ಹಬ್ಬ. ಅಂದು ಜೆರುಸಲೇಮಿನ ಜನರು ಗರಿಗಳನ್ನು ಹಿಡಿದು ಪ್ರಭು ಯೇಸುಸ್ವಾಮಿಗೆ ಸ್ವಾಗತ ಕೋರಿದ್ದರು.

ಕೊನೆಯ ಭೋಜನ’ದ ‘ಪವಿತ್ರ ವಾರ :
ಶುಭ ಶುಕ್ರವಾರ’ವಿರುವ ವಾರವನ್ನು ‘ಪವಿತ್ರವಾರ’ವೆಂದು ಗುರುತಿಸಲಾಗುತ್ತದೆ.
ಆ ವಾರದ ‘ಪವಿತ್ರ ಗುರುವಾರ’ದಂದು ವಿಶೇಷ ಆರಾಧನೆಗಳ ಜೊತೆಗೆ ‘ಕೊನೆಯ ಭೋಜನ’ದ ಮೊದಲು ಪ್ರಭು ಯೇಸುಕ್ರಿಸ್ತರು ತಮ್ಮ ಶಿಷ್ಯರ ಪಾದ ತೊಳೆದು ದೈನ್ಯತೆಯ ಪಾಠ ಹೇಳಿದ ಘಟನೆಯ ಪುನರಾವರ್ತನೆ ಎಂಬಂತೆ, ಚರ್ಚಿನಲ್ಲಿ ಪಾದ್ರಿಗಳು ಸಾಂಕೇತಿಕವಾಗಿ ೧೨ ಜನ ಭಕ್ತರ ಪಾದ ತೊಳೆಯುವ ಸಾಂಗ್ಯ ನಡೆಸಿಕೊಡುತ್ತಾರೆ.
‘ಶುಭಶುಕ್ರವಾರ’ದಂದು ಸಂಪ್ರದಾಯಸ್ತರ ಮನೆಗಳಲ್ಲಿ ಸಾವಿನ ಸೂತಕದ ಲಕ್ಷಣಗಳನ್ನು ಕಾಣಬಹುದು. ಅಂದು ಚರ್ಚಿನಲ್ಲಿ ವಿಶೇಷ ಪ್ರಾರ್ಥನೆಗಳು ನಡೆದರೆ, ಮನೆಗಳಲ್ಲೂ ಅದು ಪ್ರತಿಫಲಿಸುತ್ತಿರುತ್ತದೆ. ಮಾರನೆಯ ದಿನ ಶನಿವಾರ ಜಾಗರಣೆ, ಅದೇ ದಿನ ಸರಿ ರಾತ್ರಿ ಈ ಸ್ಟರ್ ಹಬ್ಬದ ದೊಡ್ಡ ಪಾಡುಪೂಜೆ ನಡೆಯುತ್ತದೆ. ಅಗ್ನಿ, ಧೂಪ, ತೀರ್ಥಗಳನ್ನು ಪವಿತ್ರೀಕರಿಸಲಾಗುತ್ತದೆ. ದೊಡ್ಡ ಮೇಣದ ಬತ್ತಿಯನ್ನು ಹಚ್ಚಿ, ಅದರ ಮೇಲೆ ಶಿಲುಬೆ ಆಕಾರವನ್ನು ಹೋಲುವಂತೆ ಧೂಪದ ಉಂಡೆಗಳನ್ನು ನೆಟ್ಟು ಆದಿ ಅಂತ್ಯದ ಸ್ಮರಣೆ ಮಾಡಲಾಗುತ್ತದೆ. ಆ ದೊಡ್ಡ ‘ಪವಿತ್ರ ಮೇಣದ ಬತ್ತಿ’ ಪ್ರಭು ಯೇಸುಕ್ರಿಸ್ತರ ಪುನರುತ್ಥಾನದ ಸಂಕೇತವಾಗಿರುತ್ತದೆ. ಪ್ರಭು ಯೇಸುಸ್ವಾಮಿ ಪುನರುತ್ಥಾನರಾದಾಗ ‘ಈ ಸ್ಟರ್’ ಹಬ್ಬ ಸಂಪನ್ನವಾಗುತ್ತದೆ.

ಶಿಲುಬೆ ಹಾದಿ’ಯ ಆಚರಣೆಯು ಫ್ರಾನ್ಸಿಸ್ಕನ್ ಸಭೆಯ ಕೊಡುಗೆ. . .
ಕೆಲವು ಸಮಯ ಜೆರುಸಲೇಮ್ ಪಟ್ಟಣ ಮಹಮ್ಮದೀಯರ ವಶದಲ್ಲಿದ್ದ ಕಾರಣ ‘ಶಿಲುಬೆ ಹಾದಿ’ಯು ಯುರೋಪಿನ ವಿವಿಧ ದೇಶಗಳಲ್ಲಿ ಹುಟ್ಟಿಕೊಂಡು ಇಂದಿನ ಸ್ವರೂಪ ಪಡೆದಿರಬೇಕು, ಇದಕ್ಕೆ ಫ್ರಾನ್ಸಿಸ್ಕನ್ ಸಭೆಯ ಪಾದ್ರಿಗಳ ಕೊಡುಗೆ ಅಪಾರ ಎಂದು ಕಥೋಲಿಕ ವಿಶ್ವಕೋಶವು ದಾಖಲಿಸಿದೆ,
ಹದಿನೇಳನೇ ಶತಮಾನದಲ್ಲಿದ್ದ ಆಳಿದವರಾದ ಹನ್ನೊಂದನೇ ನಿಷ್ಕಳಂಕಪ್ಪ (ಇನೊಸೆಂಟ್) (೧೬೮೬) ಮತ್ತು ಹನ್ನೆರಡನೇ ನಿಷ್ಕಳಂಕಪ್ಪ (೧೬೯೪) ಮತ್ತು ಹದಿನೆಂಟನೇ ಶತಮಾನದಲ್ಲಿದ್ದ ಆಳಿದವರಾದ ಹದಿಮೂರನೇ ಆಶಿರ್ವಾದಪ್ಪ (೧೭೨೬) ಪಾಪುಸ್ವಾಮಿಗಳು ಅದಕ್ಕೊಂದು ಅಧಿಕೃತ ಮುದ್ರೆಯೊತ್ತಿದರು.
‘ಮುಂದೆ ೧೭೩೧ರಲ್ಲಿ ಆಳಿದವರಾದ ಹನ್ನೆರಡನೇ ಶಾಂತಪ್ಪ ಪಾಪುಸ್ವಾಮಿಗಳು ಚರ್ಚುಗಳಲ್ಲಿ ‘ಶಿಲುಬೆ ಹಾದಿ’ ಪಟಗಳನ್ನು ಅಭಿಷೇಕಿಸಲು ಅನುಮತಿ ನೀಡಿದ್ದರು’ ಎಂದು ಕಥೋಲಿಕ ವಿಶ್ವಕೋಶದಲ್ಲಿ ಪ್ರಸ್ತಾಪಿಸಲಾಗಿದೆ.

-       
  ಫ್ರಾನ್ಸಿಸ್.ಎಂ.ನಂದಗಾವ

ಶಿಲುಬೆಹಾದಿ-2 (ಸಂಕ್ಷಿಪ್ತ)


ಪ್ರಾರಂಭ ಪ್ರಾರ್ಥನೆ

ನಾವು ಈಗ ಕೈಗೊಳ್ಳುತ್ತಿರುವ ಪ್ರಯಾಣ ಆಧ್ಯಾತ್ಮಿಕ ಪ್ರಯಾಣ. ಜಗತ್ತನ್ನು ಸಮಷ್ಟಿಯಾಗಿ ಗ್ರಹಿಸಲು ಕ್ರಿಸ್ತನ ದೃಷ್ಟಿಕೋನ, ಮಾಪನ ಮತ್ತು ಮನೋಭಾವವನ್ನು ಕಲಿಸಿಕೊಡುವ ಪ್ರಯಾಣವಿದು. ಈ ಪ್ರಯಾಣದ ಕೇಂದ್ರಬಿಂದು ಕ್ರಿಸ್ತ. ಅದರಲ್ಲೂ ಕ್ರಿಸ್ತ ಅನುಭವಿಸಿದ ಯಾತನೆ ಮತ್ತು ಶಿಲುಬೆ ಮರಣವೇ ಈ ಪ್ರಯಾಣದ ಹೆಜ್ಜೆಗಳಲ್ಲಿ ಧ್ಯಾನಿಸುವ ಕಥಾವಸ್ತು. ಸತ್ಯದ ರೂಪಕವೇ ಆಗಿದ್ದ ಕ್ರಿಸ್ತನನ್ನು ಸಾವು ಕೂಡ ಸೋಲಿಸಲಾಗದೆ, ಕ್ರಿಸ್ತನಲ್ಲಿ ಸತ್ಯವು ಅಸತ್ಯವನ್ನು ಗೆದ್ದು ಸಂಭ್ರಮಿಸುವ ಚಲನಚಿತ್ರವಿದು.  ಈ ಪ್ರಯಾಣದ ಕೇಂದ್ರಬಿಂದು ಕ್ರಿಸ್ತನಾದರೂ, ಕ್ರಿಸ್ತನ ಸುತ್ತ ಕಟ್ಟಿಕೊಳ್ಳುವ ಅನೇಕ ಪಾತ್ರಗಳಿವೆ. ಇವೆಲ್ಲವೂ ಕ್ರಿಸ್ತನ ನಿಲುವುಗಳನ್ನು ಬೆಂಬಲಿಸುವ ಅಥವಾ ನಿರಾಕರಿಸುವ ಪಾತ್ರಗಳೇ. ಆದರೆ ಈ ಎಲ್ಲಾ ಪಾತ್ರಗಳೂ ಕ್ರಿಸ್ತನ ನಿಲುವುಗಳನ್ನು, ದೃಷ್ಟಿಕೋನವನ್ನು ಸ್ಪಷ್ಟ ಪಡಿಸುವ ಸ್ಫಟಿಕಗಳೇ.
ಕಿಸ್ತನನ್ನು ದಿಟ್ಟಿಸುತ್ತಾ ಬೇರೆ ಪಾತ್ರಗಳನ್ನು ಸಹ ಗಮನಿಸೋಣ. ಆ ಪಾತ್ರಗಳು ಸಹ ನಮ್ಮ ಒಳ್ಳೆತನ ಅಥವಾ ಕೆಟ್ಟತನಗಳನ್ನು ಬಿಂಬಿಸಬಹುದು; ಅಧಿಕಾರದ ಆಸೆಗೆ ಸತ್ಯವನ್ನು ಕೊಲೆ ಮಾಡಿದ ಪಿಲಾತನಿರಬಹುದು, ಅವಮಾನದ ಸಂಕೇತವಾಗಿದ್ದ ಶಿಲುಬೆಯೇ ಇರಬಹುದು, ಮಗನ ಯಾತನೆಯನ್ನು ಕಂಡು ಮಮ್ಮಲ ಮರುಗುವ ಪೂಜ್ಯ ತಾಯಿರಬಹುದು, ಸೈನಿಕರಿಗೆ ಹೆದರಿ ಕ್ರಿಸ್ತನಿಗೆ ಸಹಾಯ ಮಾಡಿದ ಸಿರೇನ್ಯದ ಸಿಮೋನನಿರಬಹುದು, ಸೈನಿಕರ ಕ್ರೂರತನಕ್ಕೆ ಹೆದರದೆ, ಗಾಯಗೊಂಡಿದ್ದ ಕ್ರಿಸ್ತನ ಮುಖವನ್ನು ಒರೆಸುವ ವೆರೋನಿಕಳೇ ಇರಬಹುದು, ಕ್ರಿಸ್ತನಿಗಾದ ಅನ್ಯಾಯವನ್ನು ಕಂಡು ಅಳುವ ಜೆರುಸಲೇಮಿನ ತಾಯಂದಿರಬಹುದು. ಕೊನೆಗೆ ಕ್ರಿಸ್ತನ ಕೊಲೆಸಂಚಿನ ರೂವಾರಿ ಕೈಪಾಸ್, ಅನ್ನಾಸ್ ಮತ್ತು ಫರಿಸಾಯರೇ ಇರಬಹುದು, ಇವರೆಲ್ಲರೂ ನಮ್ಮನ್ನು ಪ್ರತಿಬಿಂಬಿಸುವ ಪಾತ್ರಧಾರಿಗಳೇ.
ನ್ನು ಕ್ರಿಸ್ತನ ಯಾತನೆಯ ಪ್ರಯಾಣದಲ್ಲಿ ಕಟ್ಟಿಕೊಳ್ಳುವ ಘಟನೆಗಳು ಸಹ ನಮ್ಮ ಬದುಕುಗಳಲ್ಲಿ ಘಟಿಸುವ ಘಟನೆಗಳೇ. ಅಪಮಾನ, ಶಿಕ್ಷೆ, ಅನ್ಯಾಯ, ಬೀಳುವಿಕೆ, ವಿವಸ್ತ್ರಗೊಳಿಸುವುದು, ಜಡಿಯುವುದು, ಸಾವು,  ತಾಯಿಯ ಕಂಬನಿ, ಸಮಾಧಿ, ಚುಚ್ಚುಮಾತುಗಳು, ಅಂತಃಕರಣ ಹೀಗೆ ಎಲ್ಲವೂ ನಮ್ಮ ಬದುಕ ಭಾಗವೇ.

ಹೌದು, ಈ ಎಲ್ಲಾ ಪಾತ್ರಗಳು, ಘಟನೆಗಳು ತೋರುವ ಲೋಕವಿವರಣೆಯನ್ನು ಆಲಿಸೋಣ; ಕಿವಿಯಿಂದ  ಮಾತ್ರವಲ್ಲ ಹೃದಯದಿಂದಲ್ಲೂ ಸಹ. ಕೊನೆಗೆ ಈ ಪ್ರಯಾಣವು ನಮ್ಮ ಅರಿವನ್ನು ಜಾಗೃತಗೊಳಿಸಿ ಕ್ರಿಸ್ತನು ಗ್ರಹಿಸಿದ ರೀತಿಯಲ್ಲಿ ಲೋಕವನ್ನು ನಮ್ಮ ಬದುಕನ್ನು ಗ್ರಹಿಸಲು ಅನುವು ಮಾಡಿ ಕೊಡಲೆಂದು ಪ್ರಾರ್ಥಿಸೋಣ. ಆಮೆನ್

1. ಸತ್ಯಕ್ಕೆ ಮರಣ ದಂಡನೆ
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಇಲ್ಲಿಗೆ ಮನುಕುಲ ತನ್ನ ಪಾಪದ ಪರಮಾವಧಿಯನ್ನು ತಲುಪಿದೆ. ಲೋಕೋದ್ಧಾರಕೆ ನಿಂತ ಕೈಗಳು ಬಂಧಿಸಲ್ಪಟ್ಟಿವೆ. ಕ್ರಿಸ್ತ ನಿನ್ನನ್ನು ಮರಣ ದಂಡನೆಗೆ ಗುರಿಪಡಿಸುವಲ್ಲಿ ನಮ್ಮ ಪಾಪಗಳು ಸಫಲವಾಗಿವೆ.
ಪ್ರಾರ್ಥನೆ:
ಮನವ ನೀಡು ಪ್ರಭುವೇ
ನಮ್ಮಪಾಪಗಳ ದಂಡಿಸಲು
ನಿನಗೆ ನಮ್ಮನ್ನೇ ಸಮರ್ಪಿಸಲು!



ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್


2. ಹೊತ್ತನು ಪರಮನು ಪಾಪದ ಶಿಲುಬೆಯನು!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.
ಬಳಲಿ ಬೆಂಡಾಗಿರುವ ಸರ್ವಜನರೇ ನನ್ನಬಳಿಗೆ ಬನ್ನಿರಿ, ವಿಶ್ರಾಂತಿಯನ್ನಿಯುವೆ ಎಂದ ಶಾಂತಿದಾತ ಅವಮಾನದ ಶಿಲುಬೆ ಹೊತ್ತಿದ್ದಾನೆ. ಅರ್ಹನಲ್ಲದ ಶಿಕ್ಷೆಗೆ ಮುಗ್ಧ ಕುರಿಮರಿಯಂತೆ ತಲೆಕೊಟ್ಟು ನಿಂತಿದ್ದಾನೆ. ಒಂದು ಕ್ಷಣ ಕಣ್ಮುಚ್ಚಿ ಧ್ಯಾನಿಸೋಣ! ಉತ್ತರ ನಮ್ಮೊಳಗೇ ಇದೆ.
ಪ್ರಾರ್ಥನೆ
ಪಾಮರ ಬಿರುದನು ಪ್ರೀತಿಯೊಳ್
ಹೊತ್ತ ಪಾವನ ಕ್ರಿಸ್ತ
ಮುನ್ನಡೆಸೆಮ್ಮ ಬದುಕ ಹಾದಿಯಲಿ
ನಿನ್ನ ಸಾಮ್ರಾಜ್ಯದತ್ತ


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್


3. ಮುಕ್ಕಡೆಯಾಗಿ ಬೀಳುತ್ತಾರೆ.


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ನಾವು ಬದುಕಲ್ಲಿ ಬಿದ್ದಿದ್ದೇವೆ. ಆದರೆ ನಮಗೆ ಮೇಲೇಳಲು ಮನಸ್ಸಿಲ್ಲ. ಕಾರಣ, ನಾವು ಪಾಪದ ಗುಂಡಿಯೊಳಗೆ ಆರಾಮಾಗಿದ್ದೇವೆ. ಆದರೆ ಕ್ರಿಸ್ತ ನೀನು ಬಿದ್ದದ್ದು ನಿನಗೋಸ್ಕರವಲ್ಲ, ನೀ ಬಿದ್ದದ್ದು ನಮಗೋಸ್ಕರ, ನಮ್ಮ ಪಾಪಗಳಿಗೋಸ್ಕರ. ಆದರೆ ವ್ಯತ್ಯಾಸವೊಂದೇ, ನೀನು ಎದ್ದು ಮುನ್ನಡದೆ ... ನಾವು ಇನ್ನೂ ಬಿದ್ದಿದ್ದೇವೆ.
ಪ್ರಾರ್ಥನೆ
ನಮ್ಮವನೇ ಆದ, ನಮ್ಮೊಳಗಿರುವ ಸಂಯಮ ಕ್ರಿಸ್ತ, ನೀನೊಮ್ಮೆ ಕರವ ನೀಡುವಿಯಾದರೆ ಇಗೋ ನಾ ಸಿದ್ಧನಿದ್ದೇನೆ ಮೇಲೇಳಲು.


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

4. ಕಂಡಳು ಮಾತೆ ಕಂದನ
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ತಾಯಿ! ತಾನು ಉಪವಾಸವಿದ್ದರೂ ತನ್ನ ಮಕ್ಕಳಿಗೆ ರಕ್ತವನ್ನೇ ಬಸಿದು ಕೊಡುವಂಥ ಸಂಯಮಮೂರ್ತಿ. ಇಂದು ಮರಿಯ ಕ್ರಿಸ್ತನನ್ನು ಆ ವಿಷಮ ಸ್ಥಿತಿಯಲ್ಲಿ ಎದುರುಗೊಂಡಾಗ ಆ ತಾಯಿ ಎದುರಿಸಿದ ವೇದನೆ ಹೇಗಿದ್ದಿರಬೇಕು? ಎಲ್ಲವನ್ನೂ ಸಂಯಮದಿಂದ ಎದುರಿಸಿದರು ಕ್ರಿಸ್ತ.
ಪ್ರಾರ್ಥನೆ:
ನಾವ್ನಡೆವ ಹಾದಿಯಲಿ ತಾಯಂತೆ
ಬಾರಾ
ನಮಗಿರದು ನೋವನರಿವ ಶಿಲುಬೆ
ಭಾರ !


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

5. ಬಂದನಿದೋ ಸಿಮೋನ!
ಗುನುಗುತಿರಲು ಶೋಕಗಾನ ಬಂದನಿದೋ ಸಿಮೋನ!


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಸಿಮೋನನೆಂಬ ಯಾವನೋ ಅಪರಿಚಿತನು ಬಂದು ಕ್ರಿಸ್ತನ ಹೆಗಲಿಗೆ ಹೆಗಲಾಗುತ್ತಾನೆ. ಸ್ವಇಚ್ಛೆಯಿಂದಲೋ ಅಥವಾ ಸೈನಿಕರ ಬಲವಂತದಿಂದಲೋ ಆತ ಕ್ರಿಸ್ತನ ಶಿಲುಬೆಯನ್ನು ತುಸುದೂರ ಹೊರುತ್ತಾನೆ. ನಮ್ಮನ್ನೊಮ್ಮೆ ಕೇಳಿಕೊಳ್ಳೋಣ! ಅಪರಿಚಿತ ಸಿಮೋನನೇ ಕ್ರಿಸ್ತನಿಗೆ ಹೆಗಲಾಗಬೇಕಾದರೆ ಇನ್ನು ಕ್ರೈಸ್ತರಾದ ನಾವು ಕ್ರಿಸ್ತನ ನೋವಿಗೆ ಹೇಗೆ ಸ್ಪಂದಿಸಬೇಕು! ಇದು ಆತ್ಮವಿಮರ್ಶೆಯ ಸಮಯ.
ಪ್ರಾರ್ಥನೆ:
ಮಿತ್ರರೆಂದು ಕರೆದೆ ಎಮ್ಮ ಬಾಳ ಗುರುವೇ
ಸ್ಪಂದಿಸಲೆಮ್ಮ ಮನವ ನೀಡು
ಮರೆತು ಗೊಡವೆ


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

6. ಕ್ರಿಸ್ತನ ವದನವಿದೋ ವೆರೋನಿಕಾಳ ಕರವಸ್ತ್ರದಲ್ಲಿ!


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಹೆಂಗರುಳು ಎನ್ನುವುದು ಇದನ್ನೇ! ಕ್ರೂರ ಸಿಪಾಯಿಗಳನ್ನು ಲೆಕ್ಕಿಸದೆ ತಾಯಿ ವೆರೋನಿಕ ಬೆವರು ಮತ್ತು ರಕ್ತಸಿಕ್ತವಾಗಿದ್ದ ಕ್ರಿಸ್ತನ ಮುಖವನ್ನು ಒರೆಸಲು ದಿಟ್ಟತನದಿಂದ ಮುಂದೆ ಬರುತ್ತಾಳೆ. ಕ್ರಿಸ್ತನ ಮುಖ ಕರವಸ್ತರದಲ್ಲಿ ಅಚ್ಚಾಗುತ್ತದೆ. ವೆರೋನಿಕಾಳಿಂದ ಕಲಿಯಬೇಕು ಪರರ ಕಣ್ಣೀರನ್ನು ಒರೆಸುವುದನ್ನು.
ಪ್ರಾರ್ಥನೆ:
ಬದುಕ ನಶ್ವರ ಓಟದಲಿ
ಮಿಡಿತ ಕಲಿಸು;
ಅನ್ಯ ಕಷ್ಟಕೆ ಹೃದಯ ಮಿಡಿಯುವ
ಕೃಪೆಯ ಸುರಿಸು!


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

7. ಎರಡನೇ ಬಾರಿ ಬೀಳುತ್ತಾರೆ ಕ್ರಿಸ್ತ!


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಇಲ್ಲ... ನಮ್ಮ ಪಾಪಗಳಿಗೆ ಇನ್ನೂ ತೃಪ್ತಿಯಾಗಿಲ್ಲ. ಎರಡನೇ ಬಾರಿಗೆ ಭಾರವಾದ ಶಿಲುಬೆಯ ಕೆಳಗೆ ಜರ್ಜರಿತರಾಗಿ ಬೀಳುತ್ತಾರೆ ಕ್ರಿಸ್ತ. ಏದುಸಿರ ಆ ಸುಪ್ತ ಕಂಪನದಲ್ಲಿ ಮಾರ್ದನಿಸುತ್ತಿದೆ ಆತನಿಗೆ ನಿನ್ನ ಮೇಲಿರುವ ಪ್ರೀತಿ. ಈ ಪ್ರೀತಿಗೆ ಪ್ರತಿಫಲವಾಗಿ ನೀನೇನ ನೀಡಬಲ್ಲೆ?
ಪ್ರಾರ್ಥನೆ
ಶಿಲುಬೆಯಡಿಯಲೆಮ್ಮ ಪಾಪಗಳು
ನಿನ್ನ ಜರೆದಾಗ ಹೇಗಿದ್ದೆಯೋ ಕ್ರಿಸ್ತ?
ಸಾಕಿನ್ನು ನೋವು, ನನಗಿರಲಿ ಹಸಿವು
ಮೇಲೆತ್ತ ಬಂದಿರುವೆ ನೀ, ನೀಡು ಹಸ್ತ!


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

8. ಅವ್ವಂದಿರ ಮಮತೆಯ ತೊಟ್ಟಿಲಲ್ಲಿ ಕ್ರಿಸ್ತ!
ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಜೆರುಸಲೇಮಿನ ಸ್ತ್ರೀಯರು ಯೇಸುವನ್ನು ಕಂಡು ರೋದಿಸುತ್ತಿದ್ದಾರೆ. ಅವರು ಕ್ರಿಸ್ತನಲ್ಲಿ ಗುರುವನ್ನು ಕಂಡಿರಬಹುದು, ಸಹೋದರನ ಕಂಡಿರಬಹುದು, ಮಿಗಿಲಾಗಿ ತಂದೆಯನ್ನೇ ಕಂಡಿರಬಹುದು! ಇಂದು ನನಗಾಗಿ ಶಿಲುಬೆ ಹೊತ್ತಿರುವ ಕ್ರಿಸ್ತನಿಗೆ ನಾನ್ಯಾರಾಗಿದ್ದೇನೆ?
ಪ್ರಾರ್ಥನೆ                            
ಮಾನವತೆಯ ದಿವ್ಯಶಿಲ್ಪಿ ಯೆಹೂದ್ಯ ಬಡಗಿಯೇ;
ಕಲಿಸು ನೀತಿ, ಹರಿಸ ಪ್ರೀತಿ ನಿತ್ಯ
ನಿನ್ನ ರೀತಿಯೇ!


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

9. ಮಗದೊಮ್ಮೆ ಬಿದ್ದರು ದೇವಕುವರ!


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಕ್ರಿಸ್ತ ಬೀಳುತ್ತಿರುವುದು ಮೂರನೇ ಬಾರಿ! ಆತ ಬಯಸುವುದಾದರೂ ಏನು? ಆತ ಬಯಸುವುದು ಶುದ್ಧ ಹೃದಯವೊಂದೇ. ಕ್ರಿಸ್ತನಿಗೆ ಈ ಕಾಣಿಕೆ ನೀಡಲು ಸಿದ್ಧರಿದ್ದೇವೆಯೇ?
ಪ್ರಾರ್ಥನೆ                             
ನನ್ನದೊಂದೇ ಪ್ರಾರ್ಥನೆ ಪ್ರಭುವೇ
ಬೇರೇನೂ ಬೇಕಿಲ್ಲ, ಬಾ ರಕ್ಷಿಸು
ಶುದ್ಧ ಮನಸ್ಸ ರೂಪಿಸು
!

ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.

ಎಲ್ಲರೂ: ಆಮೆನ್

10. ಕ್ರಿಸ್ತನನ್ನು ವಿವಸ್ತ್ರಗೊಳಿಸುತ್ತಾರೆ!


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ನಮ್ಮ ಅಹಂಕಾರದ ಬಣ್ಣದ ಬದುಕಿನ ಮುಖವಾಡವನ್ನು ಕಳಚಿಡಬೇಕಾದ ನಾವು, ಪರಮೋನ್ನತ ಕ್ರಿಸ್ತನ ವಸ್ತ್ರಗಳನ್ನು ಕಳಚುತ್ತಿದ್ದೇವೆ. ಒಮ್ಮೆ ಅವಲೋಕಿಸಿ ನೋಡೋಣ ಆ ಯಾತನೆಯ ತೀವ್ರತೆ! ಕಲಿಯೋಣ ಬದುಕ ಪಾಠ.
ಪ್ರಾರ್ಥನೆ
ಕಲಿಸು ಹೇ ಪ್ರಭು ಕಳಚಲು
ನಮ್ಮೆಲ್ಲ ಪಾಪದ ವಸ್ತ್ರಗಳ..
ಧೈರ್ಯ ನೀಡು ಬದುಕಲು
ಬಿಟ್ಟು ನಮ್ಮೆಲ್ಲ ಪಾಪಗಳ!


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

11. ಹೊಕ್ಕವು ಕ್ರೂರ ಮೊಳೆಗಳು, ಸೀಳಿತು ಕ್ರಿಸ್ತನ ಕರಗಳ!


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ನಮ್ಮ ಅಸಂಖ್ಯಾತ ತಪ್ಪುಗಳಿಗೆ ಆತ ಬೆಲೆ ತೆರಬೇಕಾಯಿತು. ಆ ಒಂದೊಂದು ಮೊಳೆಯೂ ಕ್ರಿಸ್ತನ ಕರಗಳೊಳಗೆ ನುಗ್ಗಿ ಹೋಗಬೇಕಾದರೆ ಆತ ಅದೆಷ್ಟು ಪರಿತಪಿಸಿರಬಹುದು? ಆದರೂ ನಮ್ಮೊಳಗೆ ಪಾಪಪ್ರಜ್ಞೆ ಮೂಡುತ್ತಿಲ್ಲವೇಕೆ?
ಪ್ರಾರ್ಥನೆ
ತಮ್ಮ ನುಡಿಗಳಿಂದ ನೋಯಿಸಿದವರ
ಕ್ಷಮಿಸಲು ಅರ್ಹರಾಗಿಸು
ನಮ್ಮ ತಪ್ಪುಗಳನ್ನೂ ಮನ್ನಿಸು!


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

12. ಪಾವನ ಕ್ರಿಸ್ತರೆ ವಂದಿಸುವೆ ಘಾಸಿತ ಚರಣವ ಚುಂಬಿಸುವೆ


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಈ ಹೊತ್ತಿಗೆ ಆತ ಭುವಿಗೆ ಬಂದ ಪರಮೋದ್ದೇಶ ನೆರವೇರಿತು. ನಮಗಾಗಿ ಪ್ರಾಣತ್ಯಾಗ ಮಾಡಿದ ಆತನ ದೇಹದಿಂದ ರಕ್ತದ ಕೊನೆಯ ಹನಿ ತೊಟ್ಟಿಕ್ಕಿತು. ನಮಗೆಲ್ಲರಿಗೂ ಸ್ವರ್ಗದ ಹಾದಿ ತೆರೆಯಿತು.
ಪ್ರಾರ್ಥನೆ
ಮಾಡು ಎನ್ನ ಪ್ರಭುವೇ ಶಾಂತಿಯ
ಚಿಲುಮೆ; ಮುದುಡಿದ ಮನಗಳಲ್ಲಿ
ಅರಳಿಸಲು ನಿನ್ನೊಲುಮೆ!


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

13. ತಾಯಿಯ ಮಡಿಲಲ್ಲಿ!


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಸತ್ತವರನ್ನು ಜೀವಕ್ಕೆ ಮರಳಿ ತಂದ ಕ್ರಿಸ್ತ ಇಂದು ಅಮ್ಮನ ಮಡಿಲಲ್ಲಿ ಮಾಂಸದ ಮುದ್ದೆಯಾಗಿ ಬಿದ್ದಿದ್ದಾನೆ. ನಿಶ್ಚಲವಾದ ದೇಹ ತಾಯಿಯ ಮಡಿಲಲ್ಲಿ ಕೊನೆಯ ಕ್ಷಣಗಳನ್ನು ಕಳೆಯುತ್ತಿದೆ. ಇದೆಲ್ಲಾ ಯಾರಿಗಾಗಿ ಆತ ಮಾಡಿದ್ದು? ಧ್ಯಾನಿಸೋಣ!
ಪ್ರಾರ್ಥನೆ                                                                                                                   
ಸಾವಿರಾರು ಜೀವಂತ ಶವಗಳು ನಮ್ಮೊಡನಿವೆ ಕ್ರಿಸ್ತ; ಅಭ್ಯಂಗಿಸು..
ಉಸಿರೂದಿ ಜೀವಕ್ಕೆಬ್ಬಿಸು!


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್

14. ಇಲ್ಲಿ ಸತ್ಯವು ಮಲಗಿದೆ; ಎಬ್ಬಿಸುವವರು ಯಾರು?


ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.

ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ಇಲ್ಲಿ ಸತ್ಯವು ಮಲಗಿದೆ ಎಬ್ಬಿಸುವವರು ಯಾರು?
ಇಲ್ಲಿ ನ್ಯಾಯವು ನಲುಗಿದೆ ಸಂತೈಸುವವರಾರು?
ಪ್ರಾರ್ಥನೆ             
ನಿತ್ಯಜೀವ ಕ್ರಿಸ್ತ ನಿಮ್ಮಲ್ಲಿಹುದು
ದುರ್ಬಲರು ನಾವು ಪಾಮರರು
ನಿಮ್ಮಲ್ಲಿಯೇ ಮೋಕ್ಷ ಕಾಣುವೆವು!


ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್


ಅಂತಿಮ ಪ್ರಾರ್ಥನೆ

ಕ್ರಿಸ್ತನ ಸಮಷ್ಟಿ ದೃಷ್ಟಿಯನ್ನು ಅನಾವರಣ ಮಾಡಿದ ಈ ಆಧ್ಯಾತ್ಮಿಕ ಪ್ರಾರ್ಥನೆ / ಪ್ರಯಾಣ ಇಲ್ಲಿಗೆ ಕೊನೆಕೊಳ್ಳುವುದಿಲ್ಲ.  ಇಲ್ಲಿ ನಡೆದುದ್ದು ಪ್ರಯಾಣ ವೇಳೆ ಕ್ರಿಸ್ತನಲ್ಲಿದ್ದ ಆತ್ಮದೃಷ್ಟಿಯ ಸಾಕ್ಷಾತ್ಕಾ ಮಾತ್ರ. ಕ್ರಿಸ್ತನ ಮನೋದೃಷ್ಟಿಯನ್ನು ನಾವು ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಬದುಕಿನ ಪ್ರತಿಯೊಂದು ನೀರ್ಣಾಯಕ ಹಾಗೂ ಇಕ್ಕಟ್ಟುಗಳ ಸಂದರ್ಭದಲ್ಲಿ ಕ್ರಿಸ್ತ ತೋರಿದ ಪ್ರತಿಕ್ರಿಯೆಗಳನ್ನು ನಮ್ಮದಾಗಿಸಿಕೊಳ್ಳುತ್ತಾ ಮತ್ತೊಬ್ಬ ಕ್ರಿಸ್ತನಂತೆ ಈ ಜಗತ್ತಿನಲ್ಲಿ ಬಾಳಬೇಕು. ಹೌದು, ಇದು ಹೇಳಿದಷ್ಟು ಸುಲಭವಲ್ಲ. ಈ ಒಂದು ಕಾರ್ಯಸಾಧನೆಗೆ ಅಚಲ ವಿಶ್ವಾಸಬೇಕು, ದೇವರ ಕೃಪೆ ಬೇಕು. ಆದ್ದರಿಂದ ದೇವರ ಕೃಪೆಗಳಿಗಾಗಿ  ಪ್ರಾರ್ಥಿಸೋ. ಆಮೆನ್.

ಶಿಲುಬೆ ಹಾದಿ-3(ದಿನನಿತ್ಯದ ಹಾದಿ)


ಮೊದಲನೆಯ ಸ್ಥಳ .. ಇಗೋ ನಿಮ್ಮ ಅರಸ
ಬಹಳ ದಿನಗಳ ನಂತರ ನನ್ನ ನೆನಪು ನಿಮ್ಮ ಸ್ಮೃತಿಪಟಲದ ಮೇಲೆ ಮೂಡುತ್ತಿದೆ. ನಾನು ಪಿಲಾತ. ಗುರುತು ಸಿಗಲಿಲ್ಲವೇ? ಅದೇ.. ಕ್ರಿಸ್ತಯೇಸುವನ್ನು ಶಿಲುಬೆಗೇರಿಸಲು ಅನುಮತಿ ಕೊಟ್ಟ ಪೋಂತ್ಸಿಯಸ್ ಪಿಲಾತ ನಾನೇ. ನಾನು ಆ ಕಾಲದ ಇತರ ರಾಜ್ಯಪಾಲರಂತೆ ಮಡದಿ ಮಕ್ಕಳ ಜೊತೆ ಹಾಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದೆ. ತಿಂದದ್ದನ್ನು ಅರಗಿಸಿಕೊಳ್ಳವುದಕ್ಕೆ ಜನಗಳ ಮೇಲೆ ಅಧಿಕಾರ ಚಲಾಯಿಸುವುದು, ನ್ಯಾಯ ವಿಚಾರಣೆಗಳಲ್ಲಿ ತೀರ್ಪು ಕೊಡುವುದು, ಸುಂಕದವರು ಸಂಗ್ರಹಿಸಿದ ಸುಂಕವನ್ನು ರೋಮ್ ಚಕ್ರವರ್ತಿಗೆ ಕಳುಹಿಸುವುದಷ್ಟೆ ನನ್ನ ದೈನಂದಿನ ಕಾಯಕವಾಗಿತ್ತು. ನಾನೂ ಸಹ ಹೀಗೇ ಜೀವನ ಸಾಗಿಸಿಬಿಟ್ಟಿದ್ದರೆ ಬಹುಶಃ ನಾನು ಇಂದು ನಿಮ್ಮೊಡನೆ ಮಾತಾನಾಡುತ್ತಿರಲಿಲ್ಲ. ಮಾತಾನಾಡುವುದು ಬಿಡಿ, ಇತಿಹಾಸದಲ್ಲಿ ನನ್ನ ಅಸ್ತಿತ್ವವೇ ಇರುತ್ತಿರಲಿಲ್ಲ. ಆದರೆ ದೇವರಿಚ್ಛೆಯೇ ಬೇರೆ ಇತ್ತು. ಆ ಒಂದು ದಿನ, ಕರಾಳ ದಿನ, ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತ್ತು. ನನ್ನ ಜೀವನವನ್ನು ಬದಲಾಯಿಸಿದ ಆ ದಿನದ ಬಗ್ಗೆ ಶತಮಾನಗಳಿಂದ ನನ್ನೊಳಗೆ ಹುದುಗಿದ್ದ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ .
ಅದು ನಾನು ಜುದೇಯ ಪ್ರಾಂತ್ಯದ ರಾಜ್ಯಪಾಲನಾಗಿದ್ದ ಕಾಲ. ಇತರ ರಾಜ್ಯಪಾಲರುಗಳಿಗೆ ಹೋಲಿಸಿದರೆ, ನಾನು ರೋಮ್ ಚಕ್ರವರ್ತಿಗೆ ಕೊಂಚ ಸಮೀಪವರ್ತಿ. ಆದ್ದರಿಂದಲೋ ಏನೋ ನಾನು ಇತರ ರಾಜ್ಯಪಾಲರಿಗಿಂತ ಹೆಚ್ಚು ಸಿರಿವಂತನೂ ಘನವೆತ್ತನೂ ಆಗಿದ್ದೆ.
ಹೀಗೆ, ದಿನಗಳು ಉರುಳುವಾಗ, ಅದೊಂದು ವರ್ಷ, ನನಗೆ ಇನ್ನೂ ನೆನಪಿದೆ, ಯೆಹೂದ್ಯರ ಪಾಸ್ಖ ಹಬ್ಬ ಸಮೀಪಿಸುತ್ತಿತ್ತು. ಆದರೆ ಈ ಹಬ್ಬದ ತಯಾರಿಯ ಕೊನೆಯ ದಿನಗಳಲ್ಲಿ ರಾಜ್ಯದಲ್ಲಿ ಏನೋ ವಿಚಿತ್ರ ಕೋಲಾಹಲವಾದಂತೆ ಕಾಣುತ್ತಿತ್ತು. ಇದು ಯಾವುದೋ ಯೆಹೂದ್ಯರಿಗೆ ಸಂಬಂಧಪಟ್ಟ ವಿಚಾರವೆಂದು ಅದರ ಬಗ್ಗೆ ನಾನು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ ನಾನು ಯೆಹೂದ್ಯನಲ್ಲವಲ್ಲ. ಇಲ್ಲದ ಉಸಾಬರಿ ನನಗೇಕೆ?
ಆ ದಿನ ಯೆಹೂದ್ಯರ ಗುಂಪೊಂದು ಯಾರನ್ನೋ ಬಂಧಿಸಿ ಗದ್ದಲ ಕಿರುಚಾಟಗಳಿಂದ ರಾಜಭವನದೊಳಗೆ ಪ್ರವೇಶಿಸಿತು. ದಿಗ್ಭ್ರಮೆಗೊಂಡ ನಾನು ನನ್ನ ಅಂಗರಕ್ಷಕನನ್ನು ಕೇಳಿದಾಗ "ಯೆಹೂದ್ಯರು ನಜರೇತಿನ ಯೇಸುವನ್ನು ಬಂಧಿಸಿ, ನ್ಯಾಯತೀರ್ಪಿಗೆ ಕರೆತರುತ್ತಿದ್ದಾರೆ" ಎಂದು ಉತ್ತರವಿತ್ತ. "ನಜರೇತಿನ ಯೇಸು!!!" ಹೌದು, ಈ ತ ಅದೇನೋ ಪವಾಡಗಳನ್ನು ಮಾಡುತ್ತಾನೆಂದು ಈ ಹಿಂದೆ ಕೇಳಿದ್ದೆ. ಆತನನ್ನೇ ಇವರು ಬಂಧಿಸಿರುವುದು ಪರಮಾಶ್ಚರ್ಯ.
ಎಂದಿನಂತೆ ನ್ಯಾಯತೀರ್ಪಿಗೆ ಸಿದ್ಧನಾದೆ. ಯೇಸುವನ್ನು ಕರೆತಂದರು. ಜನರೆಲ್ಲರೂ ಹೊರಗಿದ್ದಾಗ , ಕೋಣೆಯೊಳಗಿದ್ದದ್ದು ಯೇಸು, ನಾನು ಮತ್ತು ನನ್ನಿಬ್ಬರು ಅಂಗರಕ್ಷಕರು. ಸಾವಿರಾರು ಅಪರಾಧಿಗಳನ್ನು ನೋಡಿದ್ದೇನೆ. ಅವರ ಘನಘೋರ ಕೃತ್ಯಗಳ ಬಗ್ಗೆ ಕೇಳಿದ್ದೇನೆ . ಎಷ್ಟೋ ಜನರಿಗೆ ಮರಣದಂಡನೆ ವಿಧಿಸಿದ್ದೇನೆ. ಆದರೆ ಯಾರ ಬಗ್ಗೆಯೂ ಕರುಣೆ, ಅನುಕಂಪ, ಕೊನೆಗೆ ಪಾಪಪ್ರಜ್ಞೆಯೂ ಇರಲಿಲ್ಲ. ಆದರೆ ಯೇಸುವನ್ನು ನೋಡಿದ್ದು ಅದೇ ಮೊದಲು. ಆತನ ಆಳವಾದ ಕಂಗಳು, ತೇಜಸ್ಸು ತುಂಬಿದ ಮುಖಚರ್ಯೆ, ಕಲ್ಲನ್ನೂ ಕರಗಿಸಬಹುದಾದಂತ ನೋಟ, ಮರಣದಂಡನೆಗೆ ಒಳಗಾಗುತ್ತೇನೆ ಎಂಬ ಯಾವ ದುಃಖ ದುಗುಡಗಳಿಲ್ಲದ ಆತ ಸಾಕ್ಷಾತ್ ಸಂಯಮಮೂರ್ತಿ.
"ನೀನು ಯೆಹೊದ್ಯರ ಅರಸನೋ?" ಎಂದು ಕೇಳಿದೆ. ಯೇಸುವಿನ ಉತ್ತರದಿಂದ ನನಗೆ ಮಾತೇ ಹೊರಡಲಿಲ್ಲ. ಆಗಲೇ ನಿರ್ಧರಿಸಿಬಿಟ್ಟೆ. "ಯೇಸು ಅಪರಾಧಿಯಲ್ಲ. ಯೇಸುವನ್ನು ಬಿಡುಗಡೆ ಮಾಡುತ್ತೇನೆ" ಎಂದು. ಆದರೆ ಅಂತರಾಳದಲ್ಲಿ ಯಾರೋ ನುಡಿದಂತೆ "ಪಿಲಾತ, ನೀನು ಯೇಸುವನ್ನು ಬಿಡುಗಡೆ ಮಾಡುತ್ತೀಯೋ? ಮೊದಲು ನೀನು, ನಿನ್ನನ್ನು ಬಿಡುಗಡೆ ಮಾಡಿಕೊ!" ಎಂದು ಯಾರೋ ಈ ಟಿಯಿಂದ ತಿವಿದ ಅನುಭವ. ಎದ್ದು ಮಹಡಿಯ ಮುಂಭಾಗಕ್ಕೆ ಹೋದೆ. ಜನರನ್ನುದ್ದೇಶಿಸಿ ಯೇಸುವನ್ನು ಬಿಡುಗಡೆ ಮಾಡುತ್ತೇನೆಂದಾಗ ಅವರು "ಆತನನ್ನು ಶಿಲುಬೆಗೇರಿಸಿ" ಎಂದು ಬೊಬ್ಬೆಯಿಟ್ಟರು.
ಈ ಗೇನು ಮಾಡಲಿ? ನಿರಪರಾಧಿ ಕ್ರಿಸ್ತನನ್ನು ಶಿಲುಬೆಗೇರಿಸಲೊ? ಅಥವಾ ಜನರ ಇಚ್ಛೆಗೆ ವಿರುದ್ಧವಾಗಿ ಬಿಡುಗಡೆ ಮಾಡಲೊ? ನನ್ನ ಜೀವನದ ಮಹಾಗೊಂದಲಕ್ಕೆ ಸಿಲುಕಿದ್ದೇನೆ . ಈ ಗೊಂದಲದಲ್ಲಿ ಗೆದ್ದಿದ್ದು ನನ್ನ ಅಧಿಕಾರದಾಹ. ಎಲ್ಲಿ ನನ್ನನ್ನು ರಾಜ್ಯಪಾಲನ ಹುದ್ದೆಯಿಂದ ತೆಗೆಯುತ್ತಾರೊ ಎಂಬ ಭಯದಲ್ಲಿ ಸತ್ಯಕ್ಕೆ ದ್ರೋಹ ಎಸಗಿದೆ. ನಿರಪರಾಧಿಯನ್ನು ದುರ್ಜನರ ಕೈಗೊಪ್ಪಿಸಿದೆ. ಲೋಕಾಭಿಲಾಷೆಗಳಿಗೆ ದಾಸನಾದೆ. ನೀವು ನನ್ನಂತಾಗದಿರಿ. ಕ್ರಿಸ್ತನ ನೈಜ ಶಿಷ್ಯರಾಗಿ.
ಪ್ರಾರ್ಥನೆ
ಪ್ರಭುವೇ ಸದಾ ನನ್ನ ಪಾಪಗಳಿಂದ ನಿಮ್ಮನ್ನು ನೋಯಿಸುತ್ತಿದ್ದೇನೆ . ಪದೇ ಪದೇ ನಿಮ್ಮನ್ನು ದಂಡನೆಗೆ ಗುರಿಮಾಡಿದ್ದೇನೆ. ಕ್ಷಮಿಸು ಕ್ರಿಸ್ತ. ನನ್ನ ನಾ ಅರಿತುಕೊಂಡು ಬಾಳಲು ಕೃಪೆ ನೀಡು. ಆಮೆನ್

ಎರಡನೇ ಸ್ಥಳ.. ನಾ ಶಿಲುಬೆ ಹೊತ್ತಾಗ....
ಅಂದು ಯೇಸು ಶಿಲುಬೆ ಹೊತ್ತುಕೊಂಡಾಗ ನಾಡಿನಲ್ಲೆಲ್ಲಾ ಸ್ಮಶಾನಮೌನ. ಯೇಸುವನ್ನು ಶಿಲುಬೆಗೇರಿಸುತ್ತಾರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅದಾಗಲೇ ಜನ ಯೇಸುವಿನ ಸುತ್ತ ನೆರೆಯಲಾರಂಭಿಸಿದರು. ಆ ಸಮಯದಲ್ಲಿ ನಾನು ಸುಂಕ ವಸೂಲಿ ಮಾಡುತ್ತಿದ್ದೆ. ಅದಾಗಲೇ ಜನ ಗೊಂದಲದಲ್ಲಿರುವಂತೆ ಮಾತಾಡಿಕೊಳ್ಳುತ್ತಾ ರಾಜಭವನದ ಕಡೆಗೆ ಓಡುತ್ತಿದ್ದರು. ನನಗೋ ಏನೂ ಅರ್ಥವಾಗಲಿಲ್ಲ. ಅದೇ ಸಮಯದಲ್ಲಿ ನನ್ನ ಜೊತೆಗಾರ ಸುಂಕವಸೂಲಿಯವ ಬಂದು"ಜಕ್ಕಾಯ...ನೀನು ರಾಜಭವನಕ್ಕೆ ಬರುವುದಿಲ್ಲವೇ"ಎಂದು ಕೇಳಿದಾಗ ನಾನು ‘ಏಕೆ?’ ಎಂದು ಮರುಪ್ರಶ್ನೆ ಹಾಕಿದೆ. ಆಗ ಅವನು ಕೊಟ್ಟ ಉತ್ತರ ನನಗೆ ದಿಗ್ಭ್ರಮೆಯುಂಟುಮಾಡಿತ್ತು. ಅವನು ಯೇಸುವನ್ನು ಶಿಲುಬೆಗೇರಿಸುತ್ತಾರೆ ಎಂದಾಗ ನನ್ನ ಶರೀರ ಕ್ಷಣಕಾಲ ನಿಶ್ಚಲವಾಗಿ ಬಿಟ್ಟಿತು. ಅವನ ಮಾತನ್ನು ನಂಬಲಾರದೆ ಚೇತರಿಸಿಕೊಂಡು ರಾಜಭವನದತ್ತ ದೌಡಾಯಿಸಿದೆ. ನಾನಲ್ಲಿಗೆ ಹೋದಾಗ ಕಂಡ ಆ ದೃಶ್ಯ ನನ್ನ ಮನಸ್ಸನ್ನು ಮಂಕುಗೊಳಿಸಿತ್ತು. ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ. "ಅಯ್ಯೋ ದೇವರೇ...ಇದೆಂಥಹ ಅನ್ಯಾಯ? ದೇವಪುತ್ರನನ್ನೇ ಈ ಮತಿಹೀನ ಜನ ಶಿಲುಬೆ ಹೊರುವಂತೆ ಮಾಡಿದ್ದಾರಲ್ಲ...?" ಆ ಜನಜಂಗುಳಿಯಲ್ಲಿ ಕ್ರಿಸ್ತನನ್ನು ಮಾತಾಡಿಸಬೇಕೆಂದು ಹೊರಟೆ ಆದರೆ ಆ ಕ್ರೂರ ಸಿಪಾಯಿಗಳು ನನ್ನನ್ನು ಪಕ್ಕಕ್ಕೆ ದೂಡಿಬಿಟ್ಟರು. ಕೆಳಗೆಬಿದ್ದೆ. ಆಗ ನೆನಪಾದದ್ದು ಅಂದು ಆಲದಮರದ ಮೇಲೆ ಹತ್ತಿ ಕ್ರಿಸ್ತನನ್ನು ಕಾಣಲು ಕಾತುರನಾಗಿದ್ದ ನನ್ನನ್ನು ಆತನೇ ಬಂದು ಕರೆದಿದ್ದು. ಅಂದು ನನ್ನ ಮನೆಗೆ ಬಂದು ಅಲ್ಲೇ ತಂಗಿದ್ದು. ಬಹು ಕಾಲದ ನನ್ನ ಮನದ ಯಾತನೆಗಳನ್ನು ದೂರ ಮಾಡಿ ನನ್ನ ಪಾಪಗಳನ್ನೆಲ್ಲಾ ಕ್ಷಮಿಸಿದ್ದು. ಆದರೆ ಈಗ ಆ ಲೋಕೋದ್ಧಾರಕ ಶಿಲುಬೆ ಹೊತ್ತಿದ್ದಾರೆ. ಅವರು ಮುಂದೆ ನಡೆದಂತೆ ಅವರ ಹಿಂದೆ ಕ್ರೂರ ಸಿಪಾಯಿಗಳು ಚಾಟಿಗಳಿಂದ ಹೊಡೆಯುತ್ತಿದ್ದಾರೆ. ಆ ರಕ್ಕಸ ಚಾಟಿಗಳೋ ಕ್ರಿಸ್ತನ ಕೋಮಲ ದೇಹದ ಮಾಂಸವನ್ನು ಕಿತ್ತು ತೆಗೆಯುತ್ತಿವೆ. ನೋಡುಗರಿಗೇ ಆ ದೃಶ್ಯ ಭಯಾನಕವಾಗಿ ತೋರಬೇಕಾದರೆ ಇನ್ನು ಕ್ರಿಸ್ತ ಅದನ್ನು ಹೇಗೆ ಸಹಿಸಿಕೊಳ್ಳುತ್ತಿದ್ದಾರೆ? ಅವರ ಅಮೂಲ್ಯ ರಕ್ತ ಎಲ್ಲೆ ಇಲ್ಲದ ನದಿಯಂತೆ ಧಾರಾಕಾರವಾಗಿ ಹರಿಯುತ್ತಿದೆ. ಇದರ ಜೊತೆಗೆ ಆತನ ವಿರುದ್ಧವಾಗಿದ್ದ ಯೆಹೂದ್ಯರು, ಪ್ರಧಾನ ಯಾಜಕರ ಹಿಂಬಾಲಕರು ಯೇಸುವಿನ ಯಾತನೆಯನ್ನು ನೋಡಿ ಕೇಕೆ ಹಾಕುತ್ತಿದ್ದಾರೆ. ಆದರೂ ದೇವಪುತ್ರ ಮರುಮಾತನಾಡುತ್ತಿಲ್ಲ. ಯಮಭಾರದ ಶಿಲುಬೆ ಹೊತ್ತು ಮುಂದೆ ನಡೆಯುತ್ತಾರೆ. ಆ ನೋವಲ್ಲೂ ಅವರು ಯಾರನ್ನೂ ಶಪಿಸಲಿಲ್ಲ, ದೂರಲಿಲ್ಲ. ಸಂಯಮಮೂರ್ತಿ ಹಿಂದೆ ನೋಡದೆ ಮುಂದೆ ನಡೆಯುತ್ತಾರೆ. ಕರುಣಾಜನಕ ದೃಶ್ಯ ನನ್ನನ್ನು ಮೂಕನನ್ನಾಗಿಸಿತ್ತು. ನನಗೆ ಅರಿವಿಲ್ಲದೆಯೇ ನನ್ನನ್ನು ಕುಗ್ಗಿಸಿತ್ತು. ಕಾಣದ ಒಂದು ಅತೀತ ಶಕ್ತಿ ನನ್ನೊಳಗೆ ಸಂಚರಿಸಿ ಕಣ್ಣೀರಧಾರೆ ಹರಿಸಿ, ನನ್ನ ಶಿಲುಬೆಯನ್ನು ಹಿಂಬಾಲಿಸುವಂತೆ ಮಾಡಿತ್ತು.
ಪ್ರಾರ್ಥನೆ
ಕರುಣೆಯ ಕ್ರಿಸ್ತ... ನನಗಾಗಿ ಶಿಲುಬೆ ಹೊತ್ತ ನಿನಗೆ, ನಾ ಮಾಡಿದ್ದಾದರೂ ಏನು? ಪಾಪ ಕೂಪದಿ ಮುಳುಗಿದ್ದ ನನ್ನ ಕೈ ಹಿಡಿದು ಮೇಲೆತ್ತಿ ಋಣಿಯಾಗಿಸಿದ ನಿನಗೆ ನಾ ಕೊಟ್ಟ ಪ್ರತಿಫಲ ಕ್ರೂರಶಿಲುಬೆ. ಪ್ರಭುವೆ ನನಗೆ ಗೊತ್ತು.ಈ ಜೀವನ ಒಂದು ನಿರಂತರ ಶಿಲುಬೆಹಾದಿ. ಈ  ಕ್ರೂರ ಹಾದಿಯಲಿ ಅದೆಷ್ಟೋ ಕಲ್ಲುಮುಳ್ಳುಗಳಿವೆ, ಹಳ್ಳ ಕೊರಕಲುಗಳಿವೆ. ಈ  ಕತ್ತಲ ಹಾದಿಯಲಿ ನನ್ನ ಬೆಳಕಾಗು. ಸೋತು ದಣಿದಾಗ ಹೆಗಲಾಗು. ಹತಾಶ ಸಾಗರದಿ ಸಿಲುಕಿಹ ಒಂಟಿ ನೌಕೆ ನಾನು,  ನೀ ಎನ್ನ ಸ್ಪೂರ್ತಿ ನಾವಿಕನಾಗು.
"ಮುಂದೆ ಹೋಗುವೆನು ನನ್ನ ಯೇಸುವಿನೊಂದಿಗೆ
ಹಿಂದೆ ನೋಡದೆ ಹೋಗುವೆನು
ಆ ಗುರಿ ಮುಟ್ಟುವ ತನಕ "


ಮೂರನೇ ಸ್ಥಳ....ನಾನಂದು ಬಿದ್ದಾಗ .....
"ನನ್ನ ಬಾಲ್ಯದಲ್ಲಿ ನಾನೆಷ್ಟು ಸುಖವಾಗಿ ಬೆಳೆದೆ. ಬಡವರಾಗಿದ್ದರೂ ನನ್ನ ಅಜ್ಜಿ ಹನ್ನ ಹಾಗು ಅಮ್ಮ ಮರಿಯ ಅದೆಷ್ಟು ಮುದ್ದಾಗಿ, ನನ್ನ ಕಾಲು ಮಣ್ಣಿಗೆ ತಾಗದಂತೆ ಬೆಳೆಸಿದರು..!! ಅಬ್ಬಾ ಅದೊಂದು ಸುಮಧುರ ನೆನಪುಗಳ ಧಾರೆ"
ಇದು ನಾನಂದು ಬಿದ್ದಾಗ ಮರುಕಳಿಸಿದ ಬಾಲ್ಯದ ಮಧುರ ನೆನಪುಗಳು. ಮನಸ್ಸಿಗೆ ಈ ಕಾಠಿಣ್ಯವನ್ನು ಎದುರಿಸಲು ಸ್ಥೈರ್ಯವಿದೆ ಆದರೆ ದೇಹವೇಕೋ ಒಪ್ಪುತ್ತಿಲ್ಲ. ಕ್ಷಣ ಕ್ಷಣಕ್ಕೂ ಶಿಲುಬೆ ಭಾರವಾಗುತ್ತಿದೆ. ಸೈನಿಕರ ಚಾಟಿಯೇಟುಗಳಿಗೆ ನನ್ನ ದೇಹ ಹಬ್ಬದ ಬಾಡೂಟವಾಗಿದೆ. ತಾಳಲಾರದೆ ಕುಸಿದು ಬಿದ್ದೆ.
ಅದೆಷ್ಟು ಜನರಿಗೆ ನಾ ಹಾಸಿಗೆಯಿಂದೇಳುವಂತೆ ಮಾಡಿದೆ. ಹತ್ತಾರು ವರ್ಷಗಳಿಂದ ಮಲಗಿದ್ದವರನ್ನು ಕೈಹಿಡಿದು ಮೇಲೆತ್ತಿದ ನನ್ನನ್ನು ಈ ಕ್ಷಣದಲ್ಲಿ ಮೇಲೆತ್ತಲು ಯಾರೂ ಇಲ್ಲವೇ? ಸತ್ತು ನಾರುತ್ತಿದ್ದ ಲಾಜರನಿಗೆ ಜೀವ ಕೊಟ್ಟೆ. ಅವನಾದರೂ ಎಲ್ಲಿ ಹೋದ?
ಇಗೋ ನನ್ನ ಎತ್ತಿ ಆಡಿಸಿದ ನನ್ನಮ್ಮ ಅಲ್ಲಿದ್ದಾಳೆ. ಒಂದೇ ಸಮನೆ ಕಣ್ಣೀರಿಡುತ್ತಿದ್ದಾಳೆ. ಬಹುಶಃ ಈ ನೀಚ ಸೈನಿಕರಿಲ್ಲದಿದ್ದರೆ ಓಡೋಡಿ ಬಂದು ನನ್ನನ್ನು ಎಬ್ಬಿಸುತ್ತಿದ್ದಳೇನೊ...
ಸದಾ ನನ್ನೊಡನೆ ಉಂಡ ನನ್ನ ಮಿತ್ರರೆಲ್ಲಿ? "ನಿಮ್ಮೊಡನೆ ಸೆರೆಮನೆಗಾದರೂ ಸರಿಯೇ..ಸಾಯಬೇಕಾದರೂ ಸರಿಯೇ ನಾ ಬರುವೆ ಪ್ರಭು" ಎಂದ ಸಿಮೋನನೆಲ್ಲಿ?
ಯಾರೂ ನನ್ನನ್ನು ಮೇಲೆತ್ತಲಿಲ್ಲ. ಇದು ನನ್ನ ಶಿಲುಬೆ. ನಾನು ಬಂದದ್ದಾದರೊ ಇದಕ್ಕೋಸ್ಕರವೇ... ಅದೆಷ್ಟೇ ಭಾರವಾದರೂ ಇದನ್ನು ಹೊರತ್ತೇನೆ . ಹೊತ್ತು ಮುನ್ನಡೆಯುವ ಮುನ್ನ ಮಗನೇ, ಮಗಳೇ ನಿಮಗೊಂದು ಕಿವಿಮಾತೇಳುತ್ತೇನೆ ಕೇಳಿ. "ಈ ಪ್ರಪಂಚ ನಶ್ವರ. ಇಲ್ಲಿ ಬಿದ್ದು ಮೇಲೇಳುವುದೇ ಒಂದು ಸಾಧನೆಯಲ್ಲ. ನೀವು ನೋಡಬೇಕಾದ ಇನ್ನೊಂದು ಲೋಕವಿದೆ. ಆ ಲೋಕದಲ್ಲಿ ಎಡವಿ ಬೀಳದಂತೆ ಎಚ್ಚರ ವಹಿಸಿರಿ".
ನಾ ಮತ್ತೆ ಎದ್ದೆ. ಆ ಭಾರವಾದ ಶಿಲುಬೆ ಹೊರಲು ಕಾಲ್ಗಳು ಕಂಪಿಸುತ್ತಿದ್ದವು. ತಡಮಾಡಿದಷ್ಟೂ ಚಾಟಿಯೇಟುಗಳ ಆರ್ಭಟ. ಈಗಾಗಲೇ ನನ್ನ ದೇಹದಿಂದ ರಕ್ತ ಹರಿದು, ಈ ದೇಹ ರಸ ಹಿಂಡಿದ ಕಬ್ಬಿನ ಜಲ್ಲೆಯಂತಾಗಿತ್ತು. ಆದರೂ ಮುನ್ನಡೆದೆ, ನನಗಾಗಿ ಅಲ್ಲ ನಿನಗಾಗಿ. ನಿನ್ನ ಆತ್ಮದ ರಕ್ಷಣೆಗಾಗಿ.
ಪ್ರಾರ್ಥನೆ
ನನಗಾಗಿ ಕ್ರೂರ ಶಿಕ್ಷೆಯ ಸಹಿಸಿದ ಸಹನಾ ಮೂರ್ತಿ ಕ್ರಿಸ್ತ, ಇಗೋ ನಾನು ಕಡು ಪಾಪಿ. ತಿಳಿದೂ ತಿಳಿದೂ ಮತ್ತದೇ ಪಾಪದ ಕೆಸರಲ್ಲಿ ಬೀಳುತ್ತಿರುವೆ. ಕ್ಷಮೆ ಯಾಚಿಸಲೂ ನಾ ಯೋಗ್ಯನಲ್ಲ ಆದರೂ ಬೇಡುತ್ತಿರುವೆ ನನ್ನೊಡೆಯ... ಬಾ ಕೈ ಹಿಡಿದು ಮೇಲೆತ್ತು. ನಾ ಮತ್ತೆ ಆ ಕೂಪದಲ್ಲಿ ಮುಳುಗಲಾರೆ. ಆಮೆನ್

ನಾಲ್ಕನೇ ಸ್ಥಳ ..  ನನ್ನವ್ವನ ಕಂಡಾಗ...
ಮತ್ತೋರ್ವನಿಗಾಗಿ ನಿರಪರಾಧಿ ತಾನಾದರೂ ಶಿಕ್ಷೆಯೊಪ್ಪಿಕೊಂಡು, ನಿರಂತರ ಕೊರಡೆಯ ಹೊಡೆತಗಳಿಗೆ ಹೈರಾಣಾಗಿ, ದೇಹದಿಂದ ಮಾಂಸ ಕಿತ್ತು ಬಂದರೂ, ಅದೇ ಮತ್ತೋರ್ವನ ನಿತ್ಯ ರಕ್ಷೆಗೆ ಸಾತ್ವಿಕ ಎದೆಗಾರಿಕೆಯೊಳು ಸೆಣಸುತ್ತಿರುವ ಒಂದು ಜೀವ ಇಲ್ಲಿಯಾದರೆ... ತಾನೇ ಹೆತ್ತು ಸಾಕಿ ಸಲಹಿದ ಕಂದಮ್ಮನ ಹೃದಯ ವಿದ್ರಾವಕ ಪರಿಸ್ಥಿತಿಯ ಕಂಡು, ಮಾತು ಹೊರಳದೆ, ಮಡುಗಟ್ಟಿದ ಶೋಕಸಾಗರದಲ್ಲಿ ತಾನೊಬ್ಬಳೇ ಒಂಟಿಯಾಗಿ ಮನದ ನೂರು ದ್ವಂದ್ವಗಳ ಹಿಮ್ಮೆಟ್ಟಿಸುವ ನಿರಂತರ ಪ್ರಯತ್ನದ ಇನ್ನೊಂದು ಜೀವ...!
ಈ ಎರಡು ಜೀವಗಳ ಬಿಗಿಯಾಗಿ ಬೆಸೆದಿರುವ ಕೊಂಡಿ ಕರುಳಬಳ್ಳಿ. ಅತ್ತ ರಕ್ತಸಿಕ್ತ ಕ್ರಿಸ್ತ, ಇತ್ತ ಒಡೆದ ಹೃದಯದ ಮರಿಯ. ಕಲ್ವಾರಿಯೊಳು ಎದುರುಗೊಂಡ ಅಮ್ಮ- ಕಂದನ ಹೃದಯಾಳದ ಭಾವನೆಗಳ ಮನ ಕಲಕುವ ಸಂಭಾಷಣೆ!!!
ಕ್ರಿಸ್ತಕಂದ: [ಅಮ್ಮನ ಕಂಗಳನೇ ದಿಟ್ಟಿಸಿ] ಯಾಕಮ್ಮಾ ರೋದಿಸುತ್ತಿರುವೆ? ಒಂದಲ್ಲಾ ಒಂದು ದಿನ ಈ ಘಳಿಗೆ ಬಂದೀತು ಎಂದು ನಿನಗೆ ತಿಳಿದಿರಲಿಲ್ಲವೆ? ಇದು ನನ್ನದೇ ಕೈಂಕರ್ಯ. ನನ್ನ ಹೊರತು ಇದನ್ನಾರೂ ಮಾಡಲಾರರು...!
ತಾಯಿ ಮರಿಯ: ಅರ್ಹನಲ್ಲದ ಶಿಕ್ಷೆಗೆ ನೀನೇಕೆ ಕಂದ? ನೀ ಮಾಡಿದ ತಪ್ಪಾದರೂ ಏನು? ಅಂಧರಿಗೆ ದೃಷ್ಟಿ ನೀಡಿದ್ದು, ಹೆಳವನಿಗೆ ಕಾಲ್ಗಳ ಕರುಣಿಸಿದ್ದು,  ಸತ್ತವರನ್ನು ಮತ್ತೆ ಜೀವಕ್ಕೆ ಎಬ್ಬಿಸಿದ್ದೇ ಮಹಾಪರಾಧವಾಯಿತೆ?
ಕ್ರಿಸ್ತಕಂದ: ತಪ್ಪು ಮಾಡಿ ಅನುಭವಿಸುವ ಶಿಕ್ಷೆಯನ್ನು ತ್ಯಾಗವೆನ್ನುವುದಿಲ್ಲ ತಾಯಿ. ನನ್ನದು ಸರ್ವೇಶ್ವರ ತಂದೆಯ ಆಜ್ಞೆಯ ಪಾಲಿಸುವ ಕೆಲಸ. ಜಗದಲಿ ನೆಲೆಸುವ ಪಾಪಿಗಳಿಗೋಸ್ಕರ, ಈ ಘೋರ ಶಿಕ್ಷೆಯ ತಿಳಿದೂ, ಇವರ ರಕ್ಷಣೆಗಾಗಿ ಬಂದಿದ್ದೇನೆ. ಅಮ್ಮಾ... ಧೈರ್ಯವಂತಳಾಗು. ಸೃಷ್ಟಿಕರ್ತನಿಗಿಂತ ಮಿಗಿಲಾದುದು ಯಾವುದೂ ಇಲ್ಲ.. ಅಲ್ಲವೇ?
ತಾಯಿ ಮರಿಯ: ಕಂದ ಯೇಸು... ಅಂದು ದೇವಾಲಯದಲ್ಲಿ ನೀನು ಕಾಣೆಯಾದಾಗ, ನಾನೆಷ್ಟು ದಿಗಿಲಾಗಿದ್ದೆ. ಆ ಮೂರು ದಿನಗಳು ಅತಿ ದೊಡ್ಡ ಕಳವಳವನ್ನುಂಟು ಮಾಡಿದ್ದವು. ಇನ್ನೆಂದಿಗೂ ನಾನು ಹೀಗಾಗುವುದಿಲ್ಲವೆಂದು ತಿಳಿದಿದ್ದೆ. ಆದರೆ ಇಗೋ ನಾ ಹೆತ್ತ ಕಂದ ರಕ್ತದ ಮಡುವಿನಲ್ಲಿದ್ದಾನೆ. ಅವನ ದೇಹ ಹರಿದು ಹೋಗಿ ನೆತ್ತರ ಧಾರೆ ಹರಿಯುತ್ತಿದೆ.
ಅಯ್ಯೋ   ನಾನೆಂಥ ತಾಯಿ! ರಣಭಾರದ ಶಿಲುಬೆಯ  ಹೊತ್ತು ರಕ್ತ   ಬೆವರಿನಿಂದ ತೊಯ್ದು ಹೋಗಿರುವ ನನ್ನ ಕಂದನ ಕೋಮಲ ಮುಖವನ್ನು ಒರೆಸಿ, ಕೊನೆಗೊಂದಿಷ್ಟು ಸಾಂತ್ವನದ ನುಡಿಗಳನ್ನಾಡಲು ಕೂಡ ಸಾಧ್ಯವಾಗುತ್ತಿಲ್ಲವಲ್ಲ... ನಾನೆಷ್ಟು ನತದೃಷ್ಟೆ!
ಕ್ರಿಸ್ತಕಂದ: ಅಮ್ಮಾ... ನೀನೇಕೆ ಮರುಗುವೆ? ನಾನಿದನ್ನು ತಿರಸ್ಕರಿಸಿದರೆ ನೀನು ನನಗೆ ಮಾತ್ರ ತಾಯಾಗುವೆ. ನಾನಿದನ್ನು ಪುರಸ್ಕರಿಸಿದ್ದೇ ಆದಲ್ಲಿ ಮುಂದೆ ಯುಗಯುಗಾಂತರಕ್ಕೂ ನೀನು ಇಡೀ ವಿಶ್ವಕ್ಕೆ ತಾಯಾಗುವೆ. ಧೈರ್ಯದಿಂದಿದ್ದು ಇತರರಿಗೂ ಧೈರ್ಯ ತುಂಬು.
ಪ್ರಾರ್ಥನೆ
ತಂದೆಯೇ, ವಿಶ್ವದ ಎಲ್ಲಾ ತಂದೆ ತಾಯಂದಿರು ಮತ್ತು ಮಕ್ಕಳು, ತಮ್ಮ ಜವಾಬ್ದಾರಿಗಳನ್ನರಿತು, ಪರಸ್ಪರ ಅನ್ಯೋನ್ಯತೆಯಿಂದ ಜೀವಿಸಲಿ. ಆಮೆನ್.

ಐದನೇ ಸ್ಥಳ .. ಸಿಮೋನ ಹೊತ್ತಾಗ...
ನಾನು ಸಿಮೋನ. ಜ್ಞಾಪಕವಿಲ್ಲವೇ? ಅದೇ ಯೇಸುವಿನ ಕಲ್ವಾರಿ ಯಾತ್ರೆಯಲ್ಲಿ, ಶಿಲುಬೆ ಹೊರಲು, ಯೇಸುವಿಗೆ ಒತ್ತಾಸೆಯಾಗಿ ಬಂದ ಸಿರೇನ್ಯದ ಸಿಮೋನ ನಾನೇ. ಅಂದು ನಾನು ಸಿರೇನ್ಯದಿಂದ ಜೆರುಸಲೇಮಿನತ್ತ ಕೆಲಸದ ವಿಷಯವಾಗಿ ಬರುತ್ತಿದ್ದೆ.
ಜೆರುಸಲೇಮಿನ ಅಂದಿನ ಬಿಗುವಾದ ವಾತಾವರಣ ಕಂಡು ವಿಚಾರಿಸಿದಾಗ, ಯೇಸು ಎಂಬ ವ್ಯಕ್ತಿಗೆ ಮರಣದಂಡನೆ ವಿಧಿಸಿದ್ದಾರೆಂದು ತಿಳಿದು, ಅದನ್ನು ನೋಡಲು ಕಲ್ವಾರಿಯತ್ತ ತೆರಳಿದೆ.
ಇನ್ನೇನು ಹತ್ತಿರದಲ್ಲಿರುವಾಗ ಸೈನಿಕರ ದಂಡು ನನ್ನನ್ನು ಬಲವಂತದಿಂದ ಎಳೆದು ಯೇಸುವಿಗೆ ಸಹಾಯ ಮಾಡೆಂದು ತಳ್ಳಿದರು. ಆಗ ಒಲ್ಲದ ಮನಸ್ಸಿನಿಂದ ಮಾಡಿದ ಸಹಾಯಕ್ಕೆ ಇಂದು ನಾನು ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಂಡಿದ್ದೇನೆ .
ಆ ಎಲ್ಲಾ ಆಗು ಹೋಗುಗಳಲ್ಲಿ, ಆ ಯಾತನೆಯಲ್ಲಿ ಅವರನ್ನು ದಿಟ್ಟಿಸಿ ನೋಡಿದಾಗ, ನನಗೆ ಕಂಡದ್ದು ಅವರ ನಿಷ್ಕಲ್ಮಶ ದಿವ್ಯದೃಷ್ಟಿ. ಆ ಒಂದೇ ನೋಟದಲ್ಲಿ ಪರಮಾಪ್ತತೆಯನ್ನು ಕಂಡೆ. ಮಂಜುಗಡ್ಡೆಯಾಗಿದ್ದ ನನ್ನ ಶೀತಲ ಹೃದಯಕ್ಕೆ ಅವರ ಶಾಖದ ಅಮೃತ ಸಿಂಚನವಾಯಿತು.
ಆಗ ನನಗನಿಸಿದ್ದು "ಕ್ಷಣ ಕಾಲ ಶಿಲುಬೆ ಹೊತ್ತ ಪಾಪಿಯಾದ ನನಗೇ ಇಷ್ಟು ನೋವು, ಅಪಮಾನವಾದರೆ ಇನ್ನು ಪರಿಶುದ್ಧ, ಪರಮೋನ್ನತ, ಪ್ರಭು ಕ್ರಿಸ್ತನಿಗೆಷ್ಟು ನೋವಾಗಿರಬಹುದು???
ಪ್ರಾರ್ಥನೆ
ಪ್ರತಿದಿನ ಪ್ರತಿಕ್ಷಣ ನನ್ನ ಪಾಪಗಳಿಂದ ತಿಳಿದೂ ತಿಳಿಯದೆ ನಿಮ್ಮ ಶಿಲುಬೆಗೆ ಮತ್ತಷ್ಟು ಭಾರವನ್ನು ಹೊರಿಸುತ್ತಿದ್ದೇನೆ ಕ್ರಿಸ್ತ. ದಯವಿಟ್ಟು ಕ್ಷಮಿಸಿ. ನಿಮ್ಮಂತೆ ಬಾಳಲು ದಯೆಯ ಕರುಣಿಸಿ.
ಆಮೆನ್.

ಆರನೇ ಸ್ಥಳ ..  ವೆರೋನಿಕ ಕ್ರಿಸ್ತನೆಡೆಗೆ ...
ವೆರೋನಿಕ ಕ್ರಿಸ್ತನೆಡೆಗೆ ಸಾಗುತ್ತಾಳೆ. ಅಲ್ಲಿ ಕ್ರಿಸ್ತ ಸಂಯಮದಿಂದ ಸಾಗುತ್ತಿದ್ದಾನೆ. ಸಿಪಾಯಿಗಳ ಚಾಟಿಯೇಟುಗಳು, ನಿಂದನೆ, ನೋವು ಇದ್ಯಾವುದೂ ಅವರನ್ನು ಬಾಧಿಸುತ್ತಿಲ್ಲ. ಅವರು ಬಯಸುವುದು ನಮ್ಮ ಮನಪರಿವರ್ತನೆ. ಅಲ್ಲಿ ಕ್ರಿಸ್ತ ದೈಹಿಕವಾಗಿ ಜರ್ಜರಿತವಾಗುತ್ತಿದ್ದಾಗ ಬೆವರು ಮತ್ತು ರಕ್ತ ಅವರ ವದನವನ್ನು ತೋಯಿಸುತ್ತಿತ್ತು. ಮುಂದಿನ ದಾರಿ ಕಾಣದೆ ಕ್ರಿಸ್ತನ ಕಣ್ಣು ಮಂಜಾಗಿದೆ. ಅದೆಷ್ಟೋ ಜನರು ಬದಿಯಲ್ಲಿದ್ದರೂ ಯಾರೂ ಮುಂದೆ ಬರುತ್ತಿಲ್ಲ.
ಆಗ ಅಲ್ಲಿಗೆ ಬಂದವಳೇ ವೆರೋನಿಕ. ಅವಳೂ ಒಬ್ಬ ತಾಯಿಯಲ್ಲವೇ? ಅವಳಿಗೆ ಕ್ರಿಸ್ತ ಮಗನಂತೆ ಕಂಡಿರಬಹುದು. ಯಾವ ತಾಯಿ ತಾನೆ ತನ್ನ ಮಗನ ಘೋರ ಯಾತನೆಯನ್ನು ಸಹಿಸುತ್ತಾಳೆ? ಓಡೋಡಿ ಬಂದಳು ಆ ಮಾತೆ. ಕ್ರಿಸ್ತನ ರಕ್ತಸಿಕ್ತವಾದ ಮುಖವನ್ನು ಅತೀವ ಪ್ರೀತಿಯಿಂದ ಮತ್ತು ಅದೇ ದುಃಖದಿಂದ ಒರೆಸುತ್ತಾಳೆ. ಆ ಕರವಸ್ತ್ರದಲ್ಲಿ ಕ್ರಿಸ್ತನ ಕೋಮಲ ಮುಖ ಅಚ್ಚಾಗುತ್ತದೆ. ಯಾವ ಬದುಕಿನ ಮಧುರಸ್ಮೃತಿಯ ಸೆಳೆತವೋ ಅವಳನ್ನು ಪ್ರೇರೇಪಿಸಿದ್ದು ,ಆಕೆಯ ಮನಸ್ಸು ಕ್ರಿಸ್ತನ ಯಾತನೆಯನ್ನು ಸಹಿಸಲಿಲ್ಲ. ಈ ಮಧ್ಯೆ ಅವಳು ಆ ಕ್ರೂರ ಸೈನಿಕರನ್ನೂ ಲೆಕ್ಕಿಸಲಿಲ್ಲ. ಯಾವ ಗಂಡಸಿಗೂ ಇಲ್ಲದ ಎದೆಗಾರಿಕೆ ವೆರೋನಿಕಾಳಲ್ಲಿತ್ತು!
ಆದರೆ ಇಂದು ನಮ್ಮ ಬದುಕಿನಲ್ಲಿ ಅದೆಷ್ಟೋ ಬಾರಿ ನಮ್ಮ ಗೆಳೆಯರು, ನೆರೆಹೊರೆಯವರು ಬದುಕಿನ ಹೊರೆ ಹೊತ್ತು, ಬೆಂಡಾಗಿರುವುದನ್ನು ಕಾಣುತ್ತೇವೆ. ನಮ್ಮಲ್ಲಿ ಎಷ್ಟು ಜನ ವೆರೋನಿಕಳಾಗುತ್ತೇವೆ? ನಮ್ಮಲ್ಲಿ ಸಮಾಜದ ಅಸ್ಪ್ರಶ್ಯತೆಯನ್ನು ಎದುರಿಸುವ ದಿಟ್ಟತನ ಯಾರಿಗಿದೆ? ನಮ್ಮ ಸ್ನೇಹಿತ ನರಳುವಾಗ ಅವನು ಕ್ರಿಸ್ತನಾಗಿರಬಹುದಲ್ಲವೇ? ಅಂತಹ ಸಂರ್ಭಗಳಲ್ಲಿ ನಾವು ವೆರೋನಿಕಳಾಗಿ ಅವರ ನೋವು ನರಳುವಿಕೆಗಳಿಗೆ ಸ್ಪಂದಿಸಿ ಉಪಶಮನ ನೀಡುವುದಾದರೇ ಅದು ಶಿಲುಬೆಯಡಿ ಘಾಸಿಗೊಂಡ ಆ ಕ್ರಿಸ್ತನಿಗೆ ಶುಶ್ರೂಷೆ ಮಾಡಿದಂತೆ.
ವೆರೋನಿಕ, ಮಮತೆ ವಾತ್ಸಲ್ಯಭರಿತ ತಾಯಿಯ ಹೃದಯಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾಳೆ. ಕೊರಡೆಯ ಹೊಡೆತಗಳಿಗೆ ಕ್ರಿಸ್ತನ ರಕ್ತ ಹೊನಲಂತೆ ಚಿಮ್ಮುವಾಗ ಅವಳ ಹೃದಯ ನುಚ್ಚು ನೂರಾಗಿರಬೇಕು. ಅದೆಷ್ಟು ನೋವು ಹೃದಯದಲ್ಲಿ ಕನಲಿತೊ, ಒಮ್ಮೆಲೆ ಕ್ರಿಸ್ತನತ್ತ ಧಾವಿಸಿಬಿಟ್ಟಳು! ಇಂದು ರಸ್ತೆಗಳಲ್ಲಿ ಅಪಘಾತಗಳಾದಾಗ ಅನೇಕರು ನಿಂತು ನೋಡುತ್ತೇವೆಯೇ ವಿನಃ ಯಾರೂ ಅವರ ನೆರವಿಗಾಗಿ ಧಾವಿಸುವುದಿಲ್ಲ. ಮುಂದಿನ ಸಮಸ್ಯೆಗಳೆಂಥದೊ ಎಂದು ಚಿಂತಿಸಿ ಹಿಂದೆ ಸರಿಯುತ್ತೇವೆ. ಅದೇ ಸ್ಥಳದಲ್ಲಿ ನಮ್ಮ ಕುಟುಂಬಸ್ಥರು, ಬಂಧು ಮಿತ್ರರಿದ್ದರೇ ಹೀಗೆ ಯೋಚಿಸುತ್ತೇವೆಯೇ? ಆದರೆ ವೆರೋನಿಕಾ ಹಾಗೆ ಮಾಡಲಿಲ್ಲ. ಆಕೆ ಕ್ರಿಸ್ತನ ಸಂಬಂಧಿಕಳಲ್ಲ, ತಾಯಿಯಂತೂ ಅಲ್ಲವೇ ಅಲ್ಲ! ಆದರೂ ಆಕೆ ಕ್ರಿಸ್ತನಿಗಾಗಿ ಮರುಗುತ್ತಾಳೆ. ಮಾನವ ಪ್ರೇಮದ ಉಜ್ವಲ ಸಂಕೇತ ಅವಳು!
ಪ್ರಾರ್ಥನೆ
ದಯಾಮಯ ಕ್ರಿಸ್ತ, ನನ್ನಕೈಯಲಾಗದ ಕೆಲಸವಲ್ಲದಿದ್ದರೂ, ಇತರರಿಗಾಗಿ ಮರುಗುವ ಹೃದಯನೀಡು. ಅವರಿಗಾಗಿ ಸದಾ ಪ್ರಾರ್ಥಿಸುವ ಮನಸ್ಸು ನೀಡು. ಆಮೆನ್.


ಏಳನೆಯ ಸ್ಥಳ.. ಕ್ರಿಸ್ತ ಮತ್ತೊಮ್ಮೆ ಮುಗ್ಗರಿಸಿ ಬಿದ್ದಾಗ ...

ಇಗೋ ಕ್ರಿಸ್ತ ಮತ್ತೊಮ್ಮೆ ಬಿದ್ದಿದ್ದಾನೆ. ರಕ್ತದ ಮಡುವಲಿ, ತೊಯ್ದ ಬೆವರಲಿ. ಕಣ್ಣರೆಪ್ಪೆಗಳು ಭಾರವಾಗಿ ಮುಂದಿನ ದಾರಿ ಮಸುಕಾಗಿದೆ. ದೇಹ ನಿಶ್ಚಲವಾಗಿ ಸಂಚಲನವಿಲ್ಲದಾಗಿದೆ. ಆ ಎಲ್ಲಾ ನೆನಪುಗಳೂ ಮರುಕಳಿಸುತ್ತಿವೆ. ನಡೆಯಲಾಗದ ಹೆಳವನಿಗೆ ಕಾಲ್ಗಳ ನೀಡಿ ನಡೆಸಿದೆ. ಪಾರ್ಶ್ವವಾಯು ರೋಗಿಯ ಕೈಹಿಡಿದು ಎಬ್ಬಿಸಿದೆ. ಆದರೀಗ ನಾನು ಅಶಕ್ತನಾಗಿದ್ದೇನೆ . ಮತ್ತೆ ಮುಗ್ಗರಿಸಿ ಬಿದ್ದಿದ್ದೇನೆ. ಇದೆಂಥಹ ಕ್ರೌರ್ಯ??
"ಲೋಕೋದ್ಧಾರಕನಂತೆ ನೀನು . . ಎದ್ದೇಳು . . ಎದ್ದುನಡೆ. ನಿನ್ನನ್ನು ನೀನು ರಕ್ಷಿಸಿಕೊ .."! ಎಂಬ ಸೈನಿಕರ ಅಪಹಾಸ್ಯದ ಮಾತುಗಳು ಒಂದೆಡೆಯಾದರೆ, ಸದಾ ನನ್ನೊಡನಿದ್ದು, ನನ್ನೊಡನೆ ಸುಮಧುರ ಕ್ಷಣಗಳ ಕಳೆದ ನನ್ನ ಸ್ನೇಹಿತರೆಲ್ಲಿ? ಇದೇ ನಿರಾಸೆಯ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ.
ಇಲ್ಲಿ ಕ್ರಿಸ್ತರು ಎರಡನೇ ಬಾರಿಗೆ ಬೀಳುತ್ತಾರೆ. ದೈಹಿಕ ನಿಶ್ಶಕ್ತಿಯಿಂದಲ್ಲ ಬದಲಿಗೆ ನಮ್ಮ ಆಧ್ಯಾತ್ಮಿಕ ನಿಶ್ಶಕ್ತಿ ಅವರನ್ನು ಮತ್ತೆ ಮತ್ತೆ ಕೆಳಗೆ ತಳ್ಳುತ್ತಿದೆ. ಕಲ್ಲು ಬಂಡೆಯಂತಹ ನೆಲದ ಮೇಲೆ ಕ್ರಿಸ್ತ ಸಾಗುವಾಗ ಮುಳ್ಳುಗಳ ಲೆಕ್ಕಿಸಲಿಲ್ಲ, ಹರಿಯುತ್ತಿದ್ದ ನೆತ್ತರ ಲೆಕ್ಕಿಸಲಿಲ್ಲ. ಅವರು ಎದೆಗುಂದದೆ ಮುನ್ನಡೆಯುತ್ತಾರೆ. ಆದರೆ ಈ ಘೋರ ಪಯಣದುದ್ದಕ್ಕೂ ಅವರನ್ನು ಕಾಡುವುದು ನಮ್ಮ ಚಿಂತೆ. ಕಪಟಿಗಳು ನಾವಾಗದೆ, ಸರ್ವೇಶ್ವರನ ಪ್ರೀತಿಯ ಮಕ್ಕಳು ನಾವಾಗಬೇಕೆಂಬುದು ಅವರ ಹೆಬ್ಬಯಕೆ.
ಮುಂದೆ ಮುಂದೆ ನಡೆಯುವಾಗ ದೇಹದಿಂದ ರಕ್ತಹರಿದು, ದೇಹ ಜರ್ಜರಿತವಾಗಿದೆ. ಆದರೂ ಯೇಸು ಎದೆಗುಂದಲಿಲ್ಲ. ನಮ್ಮೆಲ್ಲರ ಶಿಲುಬೆ ಅದೆಷ್ಟೇ ಭಾರವಾಗಿದ್ದರೂ, ಅವರು ಮುಕ್ತ ಮನಸ್ಸಿನಿಂದ ಹೊರುತ್ತಾರೆ. ನಮ್ಮದೇ ಪಾಪಗಳು ಆ ಶಿಲುಬೆಯ ಭಾರವನ್ನು ದುಪ್ಪಟ್ಟುಗೊಳಿಸುತ್ತಿವೆ. ಕ್ರಿಸ್ತ ಎದೆಗುಂದದೆ ನಮ್ಮನ್ನೇ ದಿಟ್ಟಿಸಿ ನೋಡುತ್ತಿದ್ದಾರೆ. ಇದೊಂದು ಬಾರಿಯಾದರೂ ಅವರನ್ನು ಕೈ ಹಿಡಿದು ಮೇಲೆತ್ತಲು ಅಣಿಯಾಗಬೇಕೆಂಬ ಹಂಬಲ ಅವರದು.
ನಾ ಮತ್ತೆ ಎದ್ದೆ. ಆ ಭಾರವಾದ ಶಿಲುಬೆ ಹೊರಲು ಕಾಲ್ಗಳು ಕಂಪಿಸುತ್ತಿದ್ದವು. ತಡ ಮಾಡಿದಷ್ಟೂ ಚಾಟಿಯೇಟುಗಳ ಆರ್ಭಟ. ಈಗಾಗಲೇ ನನ್ನ ದೇಹದಿಂದ ರಕ್ತ ಹರಿದು, ಈ ದೇಹ ರಸ ಹಿಂಡಿದ ಕಬ್ಬಿನ ಜಲ್ಲೆಯಂತಾಗಿತ್ತು. ಆದರೂ ಮುನ್ನಡೆದೆ, ನನಗಾಗಿ ಅಲ್ಲ ನಿನಗಾಗಿ. ನಿನ್ನ ಆತ್ಮದ ರಕ್ಷಣೆಗಾಗಿ.
ಪ್ರಾರ್ಥನೆ
ನನಗಾಗಿ ಕ್ರೂರ ಶಿಕ್ಷೆಯ ಸಹಿಸಿದ ಸಹನಾ ಮೂರ್ತಿ ಕ್ರಿಸ್ತ, ಇಗೋ ನಾನು ಕಡುಪಾಪಿ. ತಿಳಿದೂ ತಿಳಿದೂ ಮತ್ತದೇ ಪಾಪದ ಕೆಸರಲ್ಲಿ ಬೀಳುತ್ತಿರುವೆ. ಕ್ಷಮೆ ಯಾಚಿಸಲೂ ನಾ ಯೋಗ್ಯನಲ್ಲ ಆದರೂ ಬೇಡುತ್ತಿರುವೆ ನನ್ನೊಡೆಯ. . . ಬಾ ಕೈಹಿಡಿದು ಮೇಲೆತ್ತು. ನಾ ಮತ್ತೆ ಆ ಕೂಪದಲ್ಲಿ ಮುಳುಗಲಾರೆ. ಆಮೆನ್

ಎಂಟನೇ ಸ್ಥಳ .. ತಾಯಂದಿರ ಮಮತೆ ...
ಹೆಂಗರುಳ ಪ್ರೀತಿ ವಾತ್ಸಲ್ಯ ಮತ್ತೊಮ್ಮೆ ಸಾಬೀತಾಯಿತು. ಜೆರುಸಲೇಮಿನ ಆ ತಾಯಂದಿರ ಮಡುಗಟ್ಟಿದ ಶೋಕದ ಅನುಕಂಪದಲ್ಲಿ ಹೆಣ್ತನದ ಪರಾಮರ್ಶೆಯಾಯಿತು. ಅವರು ಕ್ರಿಸ್ತನ ಅನುಯಾಯಿಗಳಲ್ಲ, ಸಂಬಂಧಿಕರಾಗಿರಬಹುದು ಆದರೆ ಅದಕ್ಕೆ ಪುರಾವೆಗಳಿಲ್ಲ, ಆದರೂ ಕ್ರಿಸ್ತನ ಕಲ್ವಾರಿ ಯಾತನೆಯ ಪಯಣದ ಒಂದು ಭಾಗವಾಗುತ್ತಾರೆ ಆ ಮಹಿಳೆಯರು.
ಶಿಲುಬೆ ಹೊತ್ತು ನಡೆದು ಬರುವ ಕ್ರಿಸ್ತನನ್ನು ನೋಡಿ ಅತ್ತು ಪ್ರಲಾಪಿಸುತ್ತಾರೆ ಆ ಸ್ತ್ರೀಯರು. ತಮ್ಮ ಸ್ವಂತ ಮಗನೇನೋ ಎಂಬ ಆತ್ಮೀಯ ಮಮತೆಯಿಂದ ಆತನಿಗಾಗಿ ಕಣ್ಣೀರಿಡುತ್ತಾರೆ. ಇವರ ಈ ವಿದ್ರಾವಕ ರೋನೆಯನ್ನು ಕುರಿತು ಕ್ರಿಸ್ತ ಯೇಸು "ನನಗೋಸ್ಕರ ಅಳಬೇಡಿ, ನಿಮಗಾಗಿ ನಿಮ್ಮ ಮಕ್ಕಳಿಗಾಗಿ ಪ್ರಲಾಪಿಸಿರಿ" ಎಂದು ಹೇಳುತ್ತಾನೆ.
ಈ ನೋವಿನ ಸಮಯದಲ್ಲೂ ಕ್ರಿಸ್ತನಿಗೆ ನಮ್ಮದೇ ಚಿಂತೆ - ನಮ್ಮ ಹೃದಯಗಳ ಚಿಂತೆ. "ನಿಮ್ಮ ಮಕ್ಕಳಿಗಾಗಿ ಅಳಿರಿ" ಎಂಬ ಆತನ ಮಾತುಗಳಲ್ಲಿ ಹಿರಿಯರಾಗಿ, ತಂದೆ - ತಾಯಿಗಳಾಗಿ, ಮಾರ್ಗದರ್ಶಕರಾಗಿ ನಾವು ಹೇಗೆ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂಬ ಪಿಸುಮಾತಿದೆ.
ಅತಿ ಬೇಗನೆ ಬದಲಾಗುತ್ತಿರುವ ಈ ಬಣ್ಣದ ಪ್ರಪಂಚದಲ್ಲಿ ಹೇಗೆ ನಾವು ಮತ್ತು ನಮ್ಮ ಮಕ್ಕಳು ಕಳೆದು ಹೋಗಬಹುದಾದ ಸಂಭವ, ಸಾಧ್ಯತೆಗಳಿವೆ ಎಂಬುದನ್ನು ಪರಿಶೀಲಿಸಬೇಕು. ಆಧ್ಯಾತ್ಮಿಕತೆ ಎಂಬುದು ಬರೀ ಪುಸ್ತಕದ ಉಲ್ಲೇಖಗಳಿಗೆ ಸೀಮಿತವಾಗದಂತೆ ನಿಗಾ ವಹಿಸುವ ಅವಶ್ಯಕತೆ ಹಾಗು ಸವಾಲು ನಮ್ಮ ಮುಂದಿದೆ.
ನಮ್ಮ ಎಷ್ಟೋ ಮಕ್ಕಳು ಇಂದು ಪ್ರಾಪಂಚಿಕ ಆಮಿಷಗಳಿಗೆ ಬಲಿಯಾಗಿದ್ದಾರೆ. ನಮ್ಮದೇ ಆಗುಹೋಗುಗಳ ನಡುವೆ ಅವರಬೇಕು ಬೇಡಗಳನ್ನೇ ನಾವು ಮರೆತಿದ್ದೇವೆ. ಅಂತಹ ಕಳೆದು ಹೋದ ಕುರಿಗಳನ್ನು ಮಂದೆಗೆ ತರುವ ನಿಟ್ಟಿನಲ್ಲಿ ಅತ್ತು ಪ್ರಲಾಪಿಸಿರಿ ಎಂಬ ಕ್ರಿಸ್ತನ ಮಾತುಗಳು ಅಮೂಲ್ಯವಾಗಿವೆ.
ನಮಗೆ ನಿಜವಾಗಿಯೂ ಕಲ್ವಾರಿ ಕ್ರಿಸ್ತನಿಗೆ ಸಾಂತ್ವನ ಹೇಳುವ ಬಯಕೆಯಿದ್ದರೆ ಅದು ನಮ್ಮ ಮಕ್ಕಳನ್ನೂ, ನಮ್ಮನ್ನೂ ಆತನ ಪ್ರೀತಿಗೆ ಸೇವೆಗೆ ಯೋಗ್ಯರನ್ನಾಗಿ ರೂಪಿಸುವುದೇ ಆತನಿಗೆ ನಾವೀಯುವ ಅತಿ ದೊಡ್ಡ ಸಾಂತ್ವನ. ಕ್ರಿಸ್ತನ ಪ್ರತಿ ಹೆಜ್ಜೆಯೂ ನಮ್ಮದೇ ಆಲೋಚನೆಗಳಿಂದ ಕೂಡಿದೆ. ಅತೀವ ನೋವಿನಲ್ಲೂ, ಶಿಲುಬೆಯ ಭಾರ ಲೆಕ್ಕಿಸದೆ ನಮ್ಮದೇ ಚಿಂತೆಯಲ್ಲಿ ಹೆಜ್ಜೆ ಸವೆಸುತ್ತಿದ್ದಾರೆ ಕ್ರಿಸ್ತ. ಈಗ ನಮ್ಮದೇನಿದ್ದರೂ ಆತನೊಂದಿಗೆ ಹೆಜ್ಜೆ ಹಾಕುವುದು, ಕಲ್ವಾರಿ ಪಯಣದ ಜೊತೆಯಾಗುವುದು.
ಪ್ರಾರ್ಥನೆ
ದಯಾಮಯ ಕ್ರಿಸ್ತರೇ, ಬದುಕಿನ ಸತ್ವವೆಲ್ಲ ಇಂಗಿ ಹೋಗಿದೆ. ನಿಮ್ಮ ಪ್ರೇಮಧಾರೆಯ ಸ್ಪರ್ಶ ನಮಗೀಗ ಅತ್ಯವಶ್ಯಕವಾಗಿದೆ. ಬನ್ನಿ ನಮ್ಮ ಹೃದಯಗಳಲ್ಲಿ ನೆಲೆಗೊಂಡು ಬದುಕ ಹಾದಿ ರೂಪಿಸಿ, ಸದಾ ಕೈ ಹಿಡಿದು ಮುನ್ನಡೆಸಿ. ಆಮೆನ್.

ಒಂಬತ್ತನೇ ಸ್ಥಳ .. ಮತ್ತೆ ಬಿದ್ದರೇಸು ...
"ಕೆಳಗಡೆ ಬೀಳುವುದು ಅಪಘಾತವೇ ಸರಿ, ಆದರೆ ಕೆಳಗಡೆಯೇ ಉಳಿಯುವುದು ನಮ್ಮ ನಿರ್ಧಾರ". ಜೀವನದ ಹಾದಿಯಲ್ಲಿ ಒಮ್ಮೆ ಸೋತರೆ ಸಾಕು, ಸೋಲಿಗೆ ಶರಣಾಗುವ ಜನರು ಒಂದೆಡೆಯಾದರೆ, ಪ್ರಯತ್ನದ ಮೊದಲೇ ಸೋಲಿಗೆ ಅಪ್ಪುಗೆ ನೀಡುವ ಜನರು ಇನ್ನೊಂದೆಡೆ ಇರುವ ಈ ಜಗಕ್ಕೆ, ಕಲ್ವಾರಿ ಬೆಟ್ಟದ ಹಾದಿಯಲ್ಲಿ ಕ್ರಿಸ್ತನಿಟ್ಟ ಪ್ರತಿ ಹೆಜ್ಜೆ ಸ್ಫೂರ್ತಿದಾಯಕ, ಸೋತ ಹೃದಯಗಳಿಗೆ ಸಾಂತ್ವನ ಚಿಲುಮೆ.
ಆ ದೀರ್ಘ ನೋವಿನಲ್ಲೂ ಸೈನಿಕರ ಕ್ರೂರ ಚಾಟಿ ಏಟುಗಳ ನಡುವೆಯೂ ಭಾರ ಶಿಲುಬೆಯನ್ನು ಹೊತ್ತುಕೊಂಡು, ಒಂದು ಬಾರಿ ಅಲ್ಲ, ಮೂರು ಬಾರಿ ಕೆಳಗೆ ಬಿದ್ದರೂ ಲೆಕ್ಕಿಸದೆ, ಕ್ರಿಸ್ತ ಎದೆಗುಂದದೆ ಎದ್ದು ನಿಲ್ಲುತ್ತಾರೆ. ತನ್ನ ಶಿಲುಬೆಯನ್ನು ಎತ್ತಿಕೊಂಡು ಕಲ್ವಾರಿ ಬೆಟ್ಟದೆಡೆಗೆ ಹೆಜ್ಜೆಯನ್ನು ಇಡುತ್ತಾರೆ. ಈ ಜಗತ್ತಿನಲ್ಲಿ ಸೋಲದ ಜೀವವ ಎಲ್ಲಾದರೂ ಕಂಡಿರಾ? ಗೆದ್ದ ಪ್ರತಿಯೊಬ್ಬನೂ ಸೋತು ಎದ್ದವನಲ್ಲವೇ? ನಮ್ಮ ಕಚೇರಿಗಳಲ್ಲಿ ಕೆಲಸದ ಪ್ರಮಾಣವನ್ನು ತಡೆಯಲಾರದೆ ಅತಿಯಾದ ಒತ್ತಡವೆಂದು ನೆಪವೊಡ್ಡಿ ಕೆಲಸದಿಂದ ಹಿಂದೇಟು ಹಾಕುವುದು ಸರಿಯೇ? ಶಾಲೆಗಳಲ್ಲಿ ಯಾವುದಾದರೂ ಕಠೀಣ ಕಲಿಕೆಗೆ ಹೆದರಿ ಪರೀಕ್ಷೆಗೆ ಹೋಗದೆ ಇರುತ್ತೀವಲ್ಲ ಅದು ಸರಿಯೇ? ದಾಂಪತ್ಯ ಜೀವನದಲ್ಲಿ ಆಗುವ ಸಣ್ಣಸಣ್ಣ ಜಗಳಕ್ಕೆ ಬೆಟ್ಟದಷ್ಟು ಕೋಪ ಮಾಡಿಕೊಂಡು ವಿಚ್ಛೇದನಕ್ಕೆ ಮುಂದಾಗುತ್ತೇವಲ್ಲ ಅದು ಸರಿಯೇ? ಇವೆಲ್ಲವ ನಾವು ಮನದೊಳಗೆ ಪ್ರಶ್ನಿಸಿಕೊಳ್ಳಬೇಕಾಗಿದೆ. ಕ್ರಿಸ್ತ ಕಲ್ವಾರಿ ಬೆಟ್ಟದಿಂದ ಕೂಗುತ್ತಿರುವುದು ಇದೇ. ನನ್ನಲ್ಲಿ ವಿಶ್ವಾಸವಿಡಿ, ನನ್ನ ಮಕ್ಕಳೇ, ಸೋಲಿಗೆ ಶರಣಾಗದಿರಿ. ನಿಮ್ಮ ಶಿಲುಬೆಯನ್ನು ನಿಮ್ಮ ಜೀವನದಲ್ಲಿ ಹೊತ್ತುಕೊಂಡು ನನ್ನೊಡನೆ ಹೆಜ್ಜೆಹಾಕಿರಿ, ಸನ್ಮಾರ್ಗದೆಡೆಗೆ.
ಪ್ರತಿಯೊಬ್ಬ ಕ್ರೈಸ್ತನು, ದೀಕ್ಷಾಸ್ಥಾನ ಪಡೆದ ಕ್ಷಣದಿಂದಲೇ ಕ್ರಿಸ್ತನ ಅನುಯಾಯಿಯೇ ಸರಿ. ಆತನ ಸುವಾರ್ತೆಯನ್ನು ಈ ಭೂಮಿಯಲ್ಲಿ ಸಾರುವುದೇ ಪ್ರತಿಯೊಬ್ಬನ ಕರ್ತವ್ಯವಾಗಿದೆ. ಸುವಾರ್ತೆ ಸಾರುವುದು ಎಂದಾಕ್ಷಣ, ನಾವುಗಳು ಅದು ಕೇವಲ ಯಾಜಕರು, ಕನ್ಯಾಸ್ರೀಯರು ಹಾಗೂ ಭೋದಕರಿಗೆ ಸೀಮಿತ ಎಂಬ ಒಂದು ತಪ್ಪಾದ ಕಲ್ಪನೆ ಹೊಂದಿದ್ದೇವೆ. ಈ ಸೌಭಾಗ್ಯ ಕೇವಲ ಯಾಜಕರಿಗಾಗಲಿ ಅಥವಾ ಭೋಧಕರಿಗಾಗಲಿ ಸೀಮಿತವಾಗಿಲ್ಲ. ಈ ಸೌಭಾಗ್ಯ ದೀಕ್ಷಾಸ್ಥಾನ ಪಡೆದ ಪ್ರತಿಯೊಬ್ಬ ಕ್ರೈಸ್ತನಿಗೂ ಪ್ರಭುಯೇಸು ನೀಡಿರುವರು. ಹೇಗೆ ನಾವು ಪ್ರಭುಕ್ರಿಸ್ತರ ಬೋಧನೆಗಳನ್ನು ಮತ್ತು ಅವರ ಸಿದ್ದಾಂತಗಳನ್ನು ನಮ್ಮ ಜೀವನಗಳಲ್ಲಿ ರೂಢಿಸಿಕೊಂಡು, ಬೇರೆಯವರಿಗೆ ಹೇಗೆ ಉದಾಹರಣೆಯಾಗಿ ಬದುಕುತ್ತೀವಿ ಎಂಬುದರಲ್ಲಿದೆ ಸುವಾರ್ತೆ ಸಾರುವುದು. ನಮಗೆ ಆತ ನೀಡಿರುವ ಶಿಲುಬೆಗಳನ್ನು ಅಂಜದೆ ಹೇಗೆ ಹೊತ್ತುಕೊಂಡು ನಡೆದು ಉದಾಹರಣೆಯಾಗುತ್ತೇವೋ, ಅದರಲ್ಲಿದೆ ಸುವಾರ್ತೆ ಸಾರುವುದು. ಕ್ರಿಸ್ತನ ಶಿಲುಬೆಹಾದಿ ಕೇವಲ ಒಂದು ಪಯಣವಲ್ಲ ಅದು ಪ್ರತಿಯೊಬ್ಬನ ಜೀವನದಲ್ಲಿ ನಡೆಯುವ ಘಟನೆಗಳ ಬಿಂಬವಾಗಿದೆ. ಕ್ರಿಸ್ತರು ಹೇಗೆ ಶಿಲುಬೆಯನ್ನು ಹೊತ್ತುಕೊಂಡು ಜನಾಂಗಗಳಿಗೆ ಮಾದರಿಯಾದರೋ, ಅಂತೆಯೇ ನಾವುಗಳು ಅನ್ಯರಿಗೆ ಮಾದರಿ ಆಗಬೇಕೆಂಬುವುದೇ ಕ್ರಿಸ್ತನ ಆಶಯ. ಕೇವಲ ಸಣ್ಣಪುಟ್ಟ ತೊಂದರೆಗಳಿಗೆ ಶರಣಾಗುವ ನಾವುಗಳು, ಜೀವನವನ್ನು ಎದುರಿಸಿ ನಿಲ್ಲಲು ಧೈರ್ಯವಿಲ್ಲದ ನಾವುಗಳು, ನಿಜವಾಗಿಯೂ ಕ್ರಿಸ್ತನ ಅನುಯಾಯಿಗಳೇ ಎಂಬುದು ಪ್ರಶ್ನಾರ್ಹ?
ಪ್ರಾರ್ಥನೆ
ಕರುಣಾಳು ದೇವರೆ, ಧೈರ್ಯಹೀನ ಮನಗಳಿಗೆ ಧೈರ್ಯವಾಗಿ ನೀ ಬಾ. ಸೋತ ಜನಗಳಲ್ಲಿ ಸ್ಪೂರ್ತಿಯ ತುಂಬಲು ನೀ ಬಾ, ಕ್ರಿಸ್ತನ ಹಾದಿಯಲ್ಲಿ ನಡೆಯಲು ಬೆಳಕಾಗಿ ನೀ ಬಾ.


ಹತ್ತನೇ ಸ್ಥಳ ..  ಯೇಸುವಿನ ವಸ್ತ್ರವನ್ನು ಕಳಚುತ್ತಾರೆ ..                                 
"ಆತ ಮಾಡಿದ ತ್ಯಾಗಕ್ಕೆ ಬೆಲೆ ಉಂಟೆ?"
ತುಂಬಿದ ಸಭೆಯಲ್ಲಿ ಆದ ಅವಮಾನ, ಹೆಗಲ ಮೇಲೆ ತಾನು ಮಾಡಿದ ಸತ್ಕಾರ್ಯಕ್ಕೆ ಪ್ರತಿಫಲವಾಗಿ ದೊರೆತ ಶಿಲುಬೆಯ ಭಾರ, ಕನಿಕರವಿಲ್ಲದ ಸೈನಿಕರ ಕ್ರೂರ ಚಾಟಿ ಏಟುಗಳು, ಜಗದ ಒಡೆಯನಾದವನಿಗೆ ಮುಳ್ಳಿನ ಕಿರೀಟ, ಫರಿಸಾಯರ ವ್ಯಂಗ್ಯ ಮಾತುಗಳು, ತನ್ನ ಮೈಮೇಲೆ ಇದ್ದ ಬಟ್ಟೆಯನ್ನು ಕಿತ್ತು, ಚೀಟು ಹಾಕಿ ತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರೂ ಶಾಂತಿಯುತ ಮನದವ, ತನ್ನ ಮನದಲ್ಲಿ ನಮ್ಮೆಲ್ಲರ ಬಗ್ಗೆ ಚಿಂತಿಸುತ್ತಾ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು, ನಮ್ರತೆಯಿಂದ ನಿಂತಿರುವನಲ್ಲಾ, "ಆತ ಮಾಡಿದ ತ್ಯಾಗಕ್ಕೆ ಬೆಲೆ ಉಂಟೆ?"
ಸಕಲ ಸೃಷ್ಠಿಯ ಒಡೆಯ, ಅನಾದಿಪುರುಷ, ರಾಜರ ರಾಜ, ಕರುಣೆಯ ದೈವ, ಸರ್ವಶಕ್ತ ದೇವರ ಏಕೈಕ ಪುತ್ರ, ಇಂದು ನಮ್ಮ ಮೇಲಿನ ಪ್ರೀತಿಗೆ ಬೆತ್ತಲಾಗಿ ನಿಂತಿರುವ, ತಾನೇ ಪೋಷಿಸಿದ ಜನರು, ತನಗೆ ಜೈಕಾರ ಹಾಕಿದ ಜನರು ಇಂದು ಕೇಕೆ ಹಾಕಿ ನಗುತ್ತಿದ್ದಾರೆ. ಇವರೆಲ್ಲರ ಮಧ್ಯೆ ನಾಚಿಕೆಯಾದರೂ, ಅವಮಾನವಾದರೂ ಸುಮ್ಮನೆ ಎಲ್ಲವನ್ನು ಸಹಿಸಿಕೊಂಡು ನಿಂತಿರುವ ಕ್ರಿಸ್ತ ಇವೆಲ್ಲ ಏಕೆ ಸಹಿಸಿಕೊಂಡರು ಎಂದು ಒಮ್ಮೆ ಯೋಚಿಸಿದರೆ ಸಾಕು, ಬಹುಶಃ ಕ್ರಿಸ್ತ ಮಾಡಿದ ಪ್ರತಿಯೊಂದು ತ್ಯಾಗಕ್ಕೂ, ನಾವು ಕೊಂಚವಾದರೂ ಬೆಲೆ ತೆರಬಹುದೇನೊ! ಇನ್ನು ಕ್ರಿಸ್ತನ ಶಿಲುಬೆ ಹಾದಿಯ ಹತ್ತನೇ ಸ್ಥಳದಿಂದ ನಾವೇನು ಕಲಿಯಬಹುದು? ಶಿಲುಬೆ ಹಾದಿಯಲ್ಲಿ, ಕರುಣೆಯೇ ಇಲ್ಲದೆ ಹಿಂಸೆ ಕೊಟ್ಟ ಸೈನಿಕರು ಅವರ ಬಟ್ಟೆಯನ್ನು ಕಿತ್ತುಕೊಂಡು, ತಮ್ಮಲ್ಲೇ ಹಂಚಿಕೊಂಡರೂ ಕ್ರಿಸ್ತ ಸೌಮ್ಯ ಮನೋಭಾವದಿಂದ ತಂದೆಯೇ, ಇವರನ್ನು ಕ್ಷಮಿಸು ಎಂದರಲ್ಲ, ಆ ಕ್ಷಮೆಯ ಮನೋಭಾವ ಈ ದ್ವೇಷ ತುಂಬಿರುವ ಜಗಕ್ಕೆ ಅತಿ ಮುಖ್ಯವಾಗಿದೆ. ಕ್ರಿಸ್ತನು ಹೇಗೆ ಪವಿತ್ರ ರಕ್ತ ತುಂಬಿರುವ ದೇಹದಲ್ಲಿ, ಬಟ್ಟೆ ಇಲ್ಲದೆ ಪರಿಶುದ್ದನಾಗಿ ನಿಂತನೋ, ಹಾಗೆಯೇ ನಾವು ಈ ಸ್ವಾರ್ಥ, ಮದ, ಮತ್ಸರ, ಕಾಮುಕತನ, ದ್ವೇಷ ಎಂಬ ಬಟ್ಟೆಯನ್ನು ಕಿತ್ತು ಹಾಕಿ, ಪರಿಶುದ್ಧ ಆತ್ಮದಿಂದ ಅವನೆಡೆಗೆ ನಡೆಯಬೇಕೆಂಬುವುದೇ ಕ್ರಿಸ್ತನ ಆಶಯವಾಗಿದೆ .
ಅಂದು ಕ್ರಿಸ್ತ ನಮ್ಮ ಪಾಪಗಳನ್ನು ಕ್ಷಮಿಸಲು, ತನ್ನ ಬಟ್ಟೆಯನ್ನು ಕಿತ್ತುಕೊಂಡರೂ, ನಮಗಾಗಿ ಆದ ಅವಮಾನವೆಲ್ಲ ಸಹಿಸಿಕೊಂಡರು. ಆದರೆ ಇಂದು ಯಾವುದೇ ಅವಮಾನವಿಲ್ಲದೆ, ಕಿಂಚಿತ್ತೂ ನಾಚಿಕೆಯಿಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಬೆತ್ತಲೆಯಾಗಿ ಬೆತ್ತಲೆಯಾಗಿಸಿ ಬೇರೆಯವರ ಮನಸ್ಸು ಕೆಡಿಸುತ್ತಾರಲ್ಲ, ಅವರಿಗೆ ಅರಿವು ಮೂಡಲು ಇಂದು ನಾವೆಲ್ಲರೂ ಪ್ರಾರ್ಥಿಸಬೇಕಾಗಿದೆ. ಯಾವುದೇ ನಾಚಿಕೆಯಿಲ್ಲದೆ ಅದನ್ನು ನೋಡುವ ನಮ್ಮ ಮನಗಳಿಗೂ ಪ್ರಾರ್ಥಿಸಬೇಕಾಗಿದೆ. ದೇವ ನೀಡಿದ ದೇಹ, ದೇವರ ದೇಗುಲ ಎಂಬುವ ಅರಿವು ನಮಗಾಗಲಿ ಎಂದು ಪ್ರಾರ್ಥಿಸೋಣ.

ಹನ್ನೊಂದನೇ ಸ್ಥಳ 
ಸ್ವಾಮಿ ಯೇಸುವನ್ನು ಶಿಲುಬೆಗೆ ಜಡಿಯುತ್ತಾರೆ"
ಯಾರಿಗೆ ಬೇಕಯ್ಯ ನೋವು? ಯಾರಿಗಾಗಿ ಸಹಿಸಿಕೊಂಡೆ ದೇವ ನೋವು? ಒಂದು ಸಣ್ಣ ಗಾಯಕ್ಕೆ ನರಳುವ ಮನುಜನ ದೇಹವಿದು, ಹೇಗಯ್ಯ ಸಹಿಸಿಕೊಂಡೆ ಮೂಳೆ ಪುಡಿಯಾಗುವ ನೋವು? ದೇವಾಲಯಕ್ಕೆ ಬಂದು ಭಕ್ತಿಯಿಂದ ದೇವರಿಗೆ ಕೈ ಮುಗಿಯಲು ಪ್ರತಿಷ್ಠೆಯೆಂಬ ಭಾವದಿಂದ ಸುಮ್ಮನೆ ನಿಲ್ಲುತ್ತಾರಲ್ಲ ಅವರಿಗಾಗಿ ನೀ ದೊಡ್ಡ ಮೊಳೆಗಳಿಂದ ಹಸ್ತಗಳ ಮೂಳೆ ಪುಡಿ ಪುಡಿಯಾಗುವಂತಹ ನೋವನ್ನು ಸಹಿಸಿಕೊಂಡೆಯಾ? ಪರಮ ಪ್ರಸಾದದ ಮುಂದೆ ಭಕ್ತಿಯಿಂದ ಮೊಣಕಾಲೂರದೆ ಅಹಂಕಾರದಿಂದ ನಿಂತಿರುತ್ತಾರಲ್ಲ, ಅವರಿಗಾಗಿಯೇ ನೀ ಮೊಣಕಾಲು ಕಿತ್ತು ಹೋದರೂ ನೋವು ಸಹಿಸಿಕೊಂಡೆಯಾ? ಬಲಿಪೂಜೆಯ ಸಮಯದಲ್ಲಿ ದೇವಾಲಯದೊಳಗೆ ಬರದೆ ಶೋಕಿಯೆಂಬ ಹುಚ್ಚಾಟದಿಂದ ಹೊರಗಡೆಯೇ ನಿಲ್ಲುತ್ತ, ದೇವರ ಬಳಿಗೆ ಬಾರದ ಕಲ್ಲುಗಳಿಗಾಗಿಯೇ ನೀ ನಿನ್ನ ಪಾದಗಳ ಮೂಳೆ ಪುಡಿಯಾದರೂ ನೋವ ಸಹಿಸಿಕೊಂಡದ್ದು? ನಮ್ಮಂತಹ ಕೃತಜ್ಞತಾ ಭಾವವಿಲ್ಲದವರಿಗೇನಾ ನೀ ನೋವು ಸಹಿಸಿಕೊಂಡಿದ್ದು? ದುಷ್ಟ ಮಾನವರಿಗಾಗಿಯೇ ನಿನ್ನನ್ನು ಶಿಲುಬೆಗೆ ಜಡಿದಿದ್ದು?
ಎಲೈ ಮನುಜ! ಅಗೋ ನೋಡು ಕೈ-ಕಾಲಿಗೆ ಮೊಳೆಗಳನ್ನು ಜಡಿಸಿಕೊಂಡು, ತಲೆ ಮೇಲೆ ಮುಳ್ಳಿನ ಕಿರೀಟವನ್ನು ಧರಿಸಿಕೊಂಡು, ಅರೆಬೆತ್ತಲೆಯಾಗಿ, ರಕ್ತದ ಕಣ್ಣೀರು ಸುರಿಯುತ್ತಿರುವ, ಮೈತುಂಬಾ ಗಾಯಗಳಿರುವ ನನ್ನ ದೇವನ ಒಮ್ಮೆ ನೋಡು. ನಿನಗಾಗಿ ಅಷ್ಟು ಪಾಡು ಪಡುತ್ತಿರುವ ನನ್ನ ಕ್ರಿಸ್ತನ ಒಮ್ಮೆ ನೋಡು. ನೀನೇ ಕುಸಿದು ಬೀಳುವೆ ಪ್ರೀತಿಗೆ. ನೀನೇ ಭಾವುಕನಾಗುವೆ ತ್ಯಾಗಕ್ಕೆ. ಮೊದಲೇ ಕೈ ಕಾಲಿಗೆ ಮೊಳೆಗಳನ್ನು ಜಡಿಸಿಕೊಂಡಿರುವ ಆತನ ಮನಸ್ಸಿಗೆ, ದಯಮಾಡಿ ನಿನ್ನ ಪಾಪಗಳಿಂದ ನೋಯಿಸಬೇಡ. ಏಳು, ನಿನ್ನ ಶಿಲುಬೆಯನ್ನೆತ್ತಿಕೊಂಡು ನಡೆ, ಆತನನ್ನು ಹಿಂಬಾಲಿಸು, ಆತನ ಪ್ರೀತಿಗೆ ಕಿಂಚಿತ್ತಾದರೂ ಪುನಃ ಪ್ರೀತಿ ನೀಡುವುದಾದರೆ ನಡೆ, ಆತನ ಹೆಜ್ಜೆಯಲ್ಲೇ ನಡೆ.
ನಮಗೆ ತಿಳಿದ ಪ್ರಕಾರ ಜಗತ್ತಿನಲ್ಲಿ ಅಪರಾಧಿಗಳ ಕೈಗಳಿಗೆ ಬೇಡಿಗಳನ್ನು ಹಾಕಿ ಬಂಧಿಸುತ್ತಾರೆ. ಆದರೆ ನಮ್ಮ ಮೇಲಿನ ಪ್ರೀತಿಗೆ ಯಾವ ತಪ್ಪುಗಳನ್ನು ಮಾಡದ ದೇವಕುಮಾರನಿಗೆ ಬೇಡಿಗಳಿಂದಲ್ಲ, ಕಠೋರ ಮೊಳೆಗಳ ಬಂಧನ. ಅನಂತವಾಗಿ ನಮ್ಮನ್ನು ಪ್ರೀತಿಸುವ ಕ್ರಿಸ್ತನಿಗೇ ಪರಿಯ ನೋವು ನೀಡಿದ್ದೇವೆಂದರೆ, ಇನ್ನು ನಮ್ಮ ಕುಟುಂಬಗಳ್ಯಾವ ಲೆಕ್ಕ? ಊಹಿಸಿಕೊಳ್ಳಲು ಅಸಾಧ್ಯವಾದ ನಮ್ಮವರ ಮನ ನೋಯಿಸಿದ್ದೇವೆ, ಅತಿ ಚಿಕ್ಕ ಕಾರಣಗಳಿಗೆ ಜರೆದಿದ್ದೇವೆ. ಹೌದು! ಯೋಚಿಸಬೇಕು. ನಮ್ಮ ಕುಟುಂಬದಲ್ಲಿ ಮಾತ್ರವಲ್ಲ, ನಮ್ಮ ಸ್ನೇಹಿತರಿಗೆ, ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಎಷ್ಟೊ ಬಾರಿ ನಮ್ಮ ಕೆಟ್ಟ ನಡವಳಿಕೆಯಿಂದ ಅವರ ಮನಸ್ಸುಗಳನ್ನು ನೋಯಿಸಿರುತ್ತೇವೆ. ಕೊಂಚ ಸೌಜನ್ಯ ಮತ್ತು ವಿವೇಕದಿಂದ ವರ್ತಿಸಲು ನಾವು ಕಡ್ಡಾಯವಾಗಿ ಕಲಿಯಬೇಕಿದೆ. ಯೇಸು ಪಟ್ಟ ಅಗಾಧ ನೋವಿಗಾಗಿ ನಾವು ಬೇರೆಯವರನ್ನು ನೋಯಿಸದೆ ನಡೆಯಬೇಕಾಗಿದೆ.

ಪ್ರಾರ್ಥನೆ
ಚಂಚಲ ಮನಸ್ಸು, ಅಜ್ಞಾನಿ ಮನಸ್ಸು, ಸೌಜನ್ಯವಿಲ್ಲದ ನಡವಳಿಕೆಯಿಂದ, ನಮ್ಮ ಪಾಪಗಳೆಂಬ ಮೊಳೆಗಳಿಂದ ಯಾರನ್ನೂ ನೋಯಿಸದೆ, ನಿಮ್ಮ ಪ್ರೀತಿಯ ಪರಿಮಳವನ್ನು ಎಲ್ಲೆಡೆಯೂ ಹರಡುವ ಮನೋಭಾವವನ್ನು ನೀಡಿರೆಂದು ಪ್ರಭು ಕ್ರಿಸ್ತರೇ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಹನ್ನೆರೆಡನೇ ಸ್ಥಳ
ಯೇಸು ಶಿಲುಬೆ ಮೇಲೆ ಪ್ರಾಣತ್ಯಾಗ ಮಾಡುತ್ತಾರೆ
ನನ್ನ ದೇವರೇ ನನ್ನ ದೇವರೇ ನನ್ನನ್ನೇಕೆ ಮರೆತೆ" ಎಂದು ನುಡಿದು ಪ್ರಾಣ ಬಿಟ್ಟರು ನನ್ನ ಯೇಸು. ಬಂಡೆಗಳು ಸಿಡಿದವು, ಸೂರ್ಯನು ಕಾಂತಿ ಮುಕ್ತನಾದನು, ಭೂಮಿ ಕಂಪಿಸಿತು ಆದರೆ ನನ್ನ ಮನವು ಕಿಂಚಿತ್ತೂ ಅಳುಕಲಿಲ್ಲ ಏಕೆ?
ಇದಕ್ಕಿಂತ ಮಿಗಿಲಾದ ಪ್ರೀತಿ ಬೇರೆಯಾರಾದರು ನೀಡ್ಯಾರು? ಮನುಜನ ಪಾಪವ ತೊಳೆಯಲು, ತನ್ನದೆಲ್ಲಾ ನೀಡ್ಯಾನ, ತನ್ನ ಪ್ರಾಣವ ನೀಡ್ಯಾನ, ತನ್ನ ಪ್ರೀತಿಯ ಮಕ್ಕಳಿಗೆ ನಿತ್ಯ ಜೀವ ನೀಡಲು, ಶಿಲುಬೆಯ ಮೇಲೆ ಯಾತನೆ ಪಟ್ಟು, ಪ್ರಾಣ ನೀಡ್ಯಾನ. ಆದರೆ ನಾವೇನು ನೀಡಿದ್ದೇವೆ?
ಏನ ಬರೆಯಲಿ ನಾನು? ಏನ ಹೇಳಲಿ ನಾನು? ಏನೇ ಬರೆದರೂ ವ್ಯರ್ಥ!!! ಏನೇ ಹೇಳಿದರೂ ವ್ಯರ್ಥ!!! ನನ್ನ ಪ್ರಭು ಯಾತನೆ ಪಟ್ಟು, ಪ್ರಾಣಕೊಟ್ಟರು, ಕಿಂಚಿತ್ತು ಚಿಂತಿಸದೆ, ಕಿಂಚಿತ್ತೂ ಮಾನವೀಯತೆ ಇಲ್ಲದೆ. ಕಿಂಚಿತ್ತು ಕನಿಕರವಿಲ್ಲದೆ, ಪದೇ ಪದೇ ಪಾಪವ ಮಾಡುತ್ತಿರುವ ಮನುಜರು ನಾವು, ಇನ್ನು ನಾ ಬರೆದರೆ ಯಾರು ತಾನೆ ಕೇಳ್ಯಾರು? ನೀನೇ ಒಮ್ಮೆ ಕಣ್ಣುಗಳ ಮುಚ್ಚಿ, ಶಿಲುಬೆಯ ಮೇಲೆ ನಿಂತಿರುವ ನನ್ನ ಕ್ರಿಸ್ತನ ನೋಡು, ಯಾತನೆ ನೋಡು. ನಿಜವಾದ ಮನಸ್ಸು ನಿನಗಿದ್ದರೆ, ತಲೆ ಬಾಗುವೆ, ಬೇರೆಯವರ ಮಾತುಗಳು ಬೇಡವೇ ಬೇಡ.
ಕ್ರಿಸ್ತ ನಮಗಾಗಿ ಶಿಲುಬೆಯ ಮೇಲೆ ಪ್ರಾಣ ಬಿಟ್ಟಿದ್ದು ನಮ್ಮ ಪಾಪಗಳನ್ನು ಕ್ಷಮಿಸಲು ಅಲ್ಲವೇ? ಕ್ರಿಸ್ತನ ಅನುಯಾಯಿಗಳಾದ ನಾವು ಮಾಡಬೇಕಾದದ್ದು, ಪರರ ಪಾಪಗಳನ್ನು ಕ್ಷಮಿಸುವುದೇ ಅಲ್ಲವೆ? ಆದರೆ ನಾವು ಅದನ್ನು  ಮಾಡುತ್ತಿದ್ದೇವೆಯೇ? ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳ ಬೇಕಾಗಿದೆ. ನಮ್ಮ ಮನೆಗಳಲ್ಲಿ ಆಗುವ ಸಣ್ಣ ಪುಟ್ಟ ತಪ್ಪುಗಳನ್ನೆ ಕ್ಷಮಿಸದೆ, ಪರಸ್ಪರ ಮಾತನಾಡದೆ ನಡೆಯುವ ಮನುಜರು ನಾವು, ಇನ್ನು ಆತನ ಅನುಯಾಯಿಗಳಾಗಲು ಸಾಧ್ಯವೇ?? ಕ್ಷಮಿಸೋಣ ಒಂದು ಬಾರಿಯಲ್ಲ ಏಳುನೂರು ಏಪ್ಪತ್ತೇಳು ಬಾರಿ ಕ್ಷಮಿಸಿ ಬಾಳೋಣ.
ಪ್ರಭು ಯೇಸುವಿನ ಪ್ರಾಣಾರ್ಪಣೆ ನೆನೆಯುವ ಸಮಯದಲ್ಲಿ ನಮಗಾಗಿ ಗಡಿಯಲ್ಲಿ, ಕೊರೆಯುವ ಚಳಿಯಲ್ಲಿ, ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿರುವ, ನಮ್ಮ ದೇಶ ಕಂಡ ಆನೇಕ ವೀರಯೋಧರ ಆತ್ಮ ಶಾಂತಿಗಾಗಿ ನಾವು ಇಂದು ಪ್ರಾರ್ಥಿಸಬೇಕಾಗಿದೆ, ತಮ್ಮ ಕುಟುಂಬಗಳ ಆರ್ಥಿಕ ಸ್ಥಿತಿಗಾಗಿ ಮತ್ತು ಕುಟುಂಬದ ಶಾಂತಿಗಾಗಿ ನಾವು ಇಂದು ಪ್ರಾರ್ಥಿಸಬೇಕಿದೆ.

ಪ್ರಾರ್ಥನೆ
ನಾನೇ ಸರ್ವವೂ ಎಂಬ ಮನೋಭಾವ ನೀಗಿ, ನಾವು ಕ್ರಿಸ್ತನಲ್ಲಿ ಒಂದೇ ಕುಟುಂಬವೆಂಬ ಭಾವ ಮೂಡಿ ಒಬ್ಬರನೊಬ್ಬರು ಕ್ಷಮಿಸಿ ಬಾಳುವ ಮನಸ್ಸು ನೀಡು ದೇವ.

ಹದಿಮೂರನೇ ಸ್ಥಳ
"ಮಾತೆಯ ಮಡಿಲಲ್ಲಿ"
ಇಂದು ಆಕೆ ಭೂಸ್ವರ್ಗಗಳ ರಾಣಿ, ಸಕಲ ದೂತರ ಮತ್ತು ಸಂತರ ರಾಣಿ. ಆದರೆ ಅಂದು ಆಕೆ ಪಟ್ಟ ನೋವು, ಮನಸ್ಸಿಗೆ ಆದ ಹಿಂಸೆ ಬಹುಶಃ ಪ್ರಪಂಚದಲ್ಲಿ ಯಾವ ತಾಯಿಗೂಆಗಿರದ ನೋವು. ಅಂದು ಆಕೆಯ ಮುದ್ದು ಕಂದ ಸತ್ತು ಹೆಣವಾಗಿ ತನ್ನ ಮಡಿಲಲ್ಲಿ ಮಲಗಿದಾಗ ಆದ ನೋವು ಹೇಳಲಸಾಧ್ಯ. ಪವಿತ್ರಾತ್ಮರಿಂದ ವರವಾಗಿ ಬಂದ ಮುದ್ದುಕಂದನನ್ನು ತನ್ನ ಕರಗಳಲ್ಲಿ ಎತ್ತಿ ಆಡಿಸಿ ಪಳಪಳನೆ ಹೊಳೆಯುತ್ತಿದ್ದ ಪುಟ್ಟ ಕಣ್ಣುಗಳ ನೋಡಿದ ತಾಯಿಗೆ, ರಕ್ತಸಿಕ್ತ ಕಣ್ಣುಗಳ ನೋಡಿ ಎಷ್ಟು ಕಣ್ಣೀರು ಬಂದಿರಬಹುದು ಅಲ್ಲವೆ?ತನ್ನ ಪುತ್ರನ ಮೃದುವಾದ ಕೈ ಕಾಲುಗಳನ್ನು ಮುಟ್ಟಿದ್ದ ಆಕೆಗೆ, ಬರೀ ಗಾಯಗಳಿಂದ ಸೀಳಿಹೋದ ಕೈ ಕಾಲುಗಳನ್ನು ಮುಟ್ಟಲು ಎಷ್ಟು ವೇದನೆಯಾಗಿರಬಹುದು? ತನ್ನ ಪುತ್ರನುಮೊದಲು ಉಸಿರಾಡಿದ ಕ್ಷಣದಿಂದಲೂ ಪ್ರೀತಿಯಿಂದ ನೋಡಿದ ತಾಯಿ, ತನ್ನ ಪುತ್ರ ಉಸಿರಿಲ್ಲದೆ ಮಡಿಲಲ್ಲಿ ಮಲಗಿದ ಕ್ಷಣದಲ್ಲಿ ಆಕೆಗೆ ಆಗಿರುವ ನೋವು ನಾವುಊಹಿಸಬಲ್ಲೆವೇನು? ಆದರೂ ತಾಯಿ ಎದೆಗುಂದಲಿಲ್ಲ, ತಾನೇ ಮುಂದೆ ನಿಂತು ಶಿಷ್ಯರಿಗೆ ಶಕ್ತಿಯಾಗಿ ನಿಲ್ಲುತ್ತಾಳೆ.
ನಮ್ಮೆಲ್ಲರ ಒಳಿತಿಗಾಗಿ ಕ್ರಿಸ್ತ ಎಷ್ಟು ತ್ಯಾಗ ಮಾಡಿದರೋ ಮಾತೆ ಮರಿಯಳು ಕೂಡ ಅಷ್ಟೇ ತ್ಯಾಗ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. "ಇಗೋ ನಾನು ದೇವರ ದಾಸಿ,ನಿಮ್ಮ ವಚನದಂತೆ ನನಗಾಗಲಿ" ಎಂದು ನುಡಿದ ಕ್ಷಣದಿಂದ ತಮ್ಮ ಜೀವನವನ್ನೇ ದೇವರಿಗೋಸ್ಕರ ಮುಡಿಪಾಗಿಟ್ಟರು. ಕಲ್ವಾರಿ ಬೆಟ್ಟದಲ್ಲಿ ಯೇಸುವಿಗೆ ಬೆಂಬಲವಾಗಿ ನಿಂತರು, ಶಿಷ್ಯರಿಗೆ ಶಕ್ತಿಯಾಗಿ ಜೊತೆಯಲ್ಲಿದ್ದರು. ಇದೆಲ್ಲ ಮುಗಿದು ಎರಡು ಸಾವಿರ ವರ್ಷಗಳಾದರೂ ಮಾತೆ ಯೇಸುವಿನೆಡೆಗೆ ಮನುಜರ ಮನಗಳನ್ನು ಒಯ್ಯುವುದನ್ನು ನಿಲ್ಲಿಸಿಲ್ಲ. ಅನೇಕ ಬಾರಿ ಪ್ರಪಂಚದ ವಿವಿಧ ಭಾಗಗಳಲ್ಲಿ ಭಕ್ತರಿಗೆ ದರ್ಶನ ನೀಡಿ ಭಕ್ತರಿಗೆ ಸಹಾಯವಾಗುತ್ತಲೇ ಇದ್ದಾರೆ, ಮಾತೆ ಪಟ್ಟ ಕಷ್ಟಕ್ಕೆ, ಮಾಡಿದ ಎಲ್ಲಾ ತ್ಯಾಗಕ್ಕೆ, ತೋರಿದಅತಿಯಾದ ಪ್ರೀತಿಗಾಗಿ, ನಾವು ಸಹ ಕ್ರಿಸ್ತನಿಗೆ ನಮ್ಮ ಜೀವನವನ್ನು ಅರ್ಪಿಸುವುದೇ ನಾವು ಆಕೆಗೆ ನೀಡುವ ಅತ್ಯುನ್ನತ ಗೌರವ.
ಮಾತೆ ಮಡಿಲಲ್ಲಿ ಕ್ರಿಸ್ತರು ಉಸಿರಿಲ್ಲದೆ ಮಲಗಿದ ಕ್ಷಣವನ್ನು ನೆನೆಯುವ ಸಮಯದಲ್ಲಿ, ನಮ್ಮ ಸಮಾಜದಲ್ಲಿ ತಾವು ಬದುಕಿರುವಾಗಲೇ ತಮ್ಮ ಮಕ್ಕಳ ಮರಣವನ್ನು ನೋಡಿನೋವಲ್ಲಿ ಬಳಲಿ, ಇಂದು ತಮಗಾಗಿ ಯಾರೂ ಇಲ್ಲದೆ ಅನಾಥರಾಗಿ ಬದುಕಿರುವ ತಾಯಂದಿರಿಗಾಗಿ ಇಂದು ಮೌನದಿಂದ ಪ್ರಾರ್ಥಿಸೋಣ. ಅವರು ತಮಗೆ ಬೇಕಾದಆಸರೆಯನ್ನು ಕ್ರಿಸ್ತನಲ್ಲಿ ಕಂಡು, ಇರುವಷ್ಟು ದಿನ ನೆಮ್ಮದಿಯಾಗಿ ಬಾಳಲೆಂದು ಪ್ರಾರ್ಥಿಸೋಣ. ಇನ್ನೂ ದೌರ್ಭಾಗ್ಯವೆಂದರೆ ಪುತ್ರರಿದ್ದರೂ, ಯಾರೂ ಇಲ್ಲದಂತೆ ಬದುಕುವುದು.ಯಾರು ತಮ್ಮನ್ನು ಪ್ರೀತಿಯಿಂದ ಬೆಳೆಸಿ, ಪೋಷಿಸಿ, ಇಂದು ಉತ್ತಮ ಸ್ಥಿತಿಗೆ ತಂದಿರುತ್ತಾರೋ ಅವರನ್ನೇ ತಾಯಿಯೆಂಬ ಕನಿಕರವಿಲ್ಲದೆ ಮನೆಗಳಿಂದ ಆಚೆ ಹಾಕುವಂತಹ ಕಲ್ಲುಮನಸ್ಸಿನ ಮಕ್ಕಳಿಗಾಗಿ ಇಂದು ಪ್ರಾರ್ಥಿಸಬೇಕಿದೆ. ಯಾವ ಮಕ್ಕಳು ತಮ್ಮ ಕೆಟ್ಟ ಚಟಗಳಿಂದ, ಕೆಟ್ಟ ನಡವಳಿಕೆಗಳಿಂದ ತಮ್ಮ ತಾಯಂದಿರನ್ನು ನೋಯಿಸುತ್ತಿರುವರೋ ಅಂಥವರಿಗಾಗಿ ನಾವು ಪ್ರಾರ್ಥಿಸಬೇಕಿದೆ.
ಪ್ರಾರ್ಥನೆ:-
ಮರುಕುವುಳ್ಳ ಮಹಾ ಕನ್ನಿಕೆಯೆ, ಕ್ರಿಸ್ತನ ಹಾದಿಯಲ್ಲಿ ನಮ್ಮನ್ನು ಬೆಳಕಾಗಿ ಮುನ್ನಡೆಸ ಬನ್ನಿರಿ. ನಮ್ಮ ಚಂಚಲ ಮನಸ್ಸಿಗೆ ಧೈರ್ಯವಾಗಿರಲುಎಂದಿಗೂ ಜೊತೆಯಲಿ ಬನ್ನಿರಿ. ನಿಮ್ಮ ಮಡಿಲಲ್ಲಿ ಮಗುವಾಗಿ ಬದುಕುವ ಭಾಗ್ಯವ ನೀಡಿರಿ.

ಹದಿನಾಲ್ಕನೇ ಸ್ಥಳ
 "ಸಮಾಧಿಯಲ್ಲಿ ಯೇಸು"
ಸತ್ಯಕ್ಕೆ ಎಂದಾದರೂ ಸಾವೇ? ಪ್ರಭು ಯೇಸುವನ್ನು ಸಮಾಧಿಯಲ್ಲಿ ಇರಿಸಿದಾಗ ಸತ್ತದ್ದು ಸತ್ಯವಲ್ಲ. ಮೃತ ಹೊಂದಿದ್ದು ನಮ್ಮೆಲ್ಲರ ಪಾಪ, ಶಿಲುಬೆಯ ರೂಪದಲ್ಲಿ ತನ್ನ ಮೇಲೆ ಹೊತ್ತುಕೊಂಡ ನಮ್ಮ ಪಾಪ. ಸತ್ಯವು ಕೆಟ್ಟತನವನ್ನೆಲ್ಲ ಸಮಾಧಿಯಲ್ಲೆ ಬಂಧಿಸಿ ವಿಜಯೋತ್ಸವದಿಂದ, ಸತ್ಯಕ್ಕೆಂದೂ ಸಾವಿಲ್ಲ ಎಂಬುದನ್ನು ಸಾಬೀತು ಪಡಿಸಿತು.
ಒಬ್ಬ ವ್ಯಕ್ತಿ ಎಷ್ಟೇ ಶ್ರೇಷ್ಠನಾದರೂ ಒಂದು ದಿನ ಮರಣ ಹೊಂದಲೇಬೇಕೆಂಬುದು ನಾವು ಅರಿತಿದ್ದೇವೆ. ಮರಣ ಹೊಂದಿದ ಪ್ರತಿಯೊಬ್ಬನೂ ಕ್ರಿಸ್ತನ ಶಿಲುಬೆ ಯಾತನೆ ಫಲವಾಗಿ ದೊರೆತ ನಿತ್ಯ ಜೀವದ ಭಾಗ್ಯದಿಂದಾಗಿ, ಸತ್ತರೂ ಕ್ರಿಸ್ತನಲ್ಲಿ ಜೀವಿಸುತ್ತಾನೆ ಎಂಬುದ ಅರಿತಿರುವ ನಾವು, ಅದಕ್ಕೆ ಸಿದ್ಧರಾಗಿ ಜೀವನ ನಡೆಸುತ್ತಿಲ್ಲವೇಕೆ? ಪಾಪದ ಹಾದಿಯಲ್ಲೇ ಮಗ್ನರಾಗಿದ್ದೇವಲ್ಲ ಏಕೆ? ಆತ ಮಾಡಿರುವ ತ್ಯಾಗ ಕಣ್ಣೆದುರೆ ಇದ್ದರೆ ನಮ್ಮ ಮನಸ್ಸುಗಳು ಏಕೆ ಆತನೆಡೆಗೆ ಹೋಗುತ್ತಿಲ್ಲ? ಪ್ರತಿ ವರುಷ ಶಿಲುಬೆ ಹಾದಿಯಲ್ಲಿ ಮೊಣಕಾಲೂರಿ ಪ್ರಾರ್ಥಿಸುತ್ತೇವೆ. ಆದರೆ ದೇವಾಲಯದಿಂದ ಹೊರಗೆ ಬಂದ ಮೇಲೆ ಅದೇ ಪಾಮರ ಬದುಕು ಜೀವಿಸುತ್ತಿದ್ದೇವೆ ಏಕೆ? ಆತ ಹೊತ್ತಿರುವ ಶಿಲುಬೆಯ ಭಾರ ಕಡಿಮೆ ಮಾಡುವ ಮನಸ್ಸಿಲ್ಲವೇ? ಆತನ ತಲೆ ಮೇಲಿರುವ ಪಾಪದ ಮುಳ್ಳಿನ ಕಿರೀಟದಿಂದ, ಆತನನ್ನು ವಿಮುಕ್ತಿಗೊಳಿಸಲು ಆಸೆಯಿಲ್ಲವೆ? ನಮ್ಮ ಅಂತರಂಗದಲ್ಲಿರುವ ಕೆಟ್ಟ ಯೋಚನೆಗಳಿಂದ ಆತನನ್ನು ಬೆತ್ತಲಾಗಿಸಿರುವ ನಾವು ಇನ್ನು ಎಷ್ಟು ಕಾಲ ನಮ್ಮಈ ದುರ್ನಡತೆಯಿಂದ ಆತನನ್ನು ಬೆತ್ತಲಾಗಿಸುತ್ತಿರುತ್ತೇವೆ? ಪ್ರಭು ಯೇಸು ಹೇಗೆ ಸಮಾಧಿಯಲ್ಲಿ ನಮ್ಮೆಲ್ಲರ ಪಾಪವನ್ನು ಸುಟ್ಟರೋ, ಸಮಯವನ್ನು ನೆನೆಯುವಾಗ ನಾವು ಸಹ ನಮ್ಮ ಕೆಟ್ಟತನವನ್ನೆಲ್ಲ ಸುಡೋಣ.
ಪ್ರಭು ಯೇಸು ಶಿಲುಬೆಯನ್ನು ಹೊರಬೇಕಾಗಿ ಬಂದರೂ ಅವರು ಯಾರನ್ನೂ ಪ್ರಶ್ನಿಸಲಿಲ್ಲಶಿಲುಬೆಯ ಮೇಲೆ ಪ್ರಾಣ ತ್ಯಾಗ ಮಾಡಬೇಕಾದಾಗಲೂ ಒಂದು ಕ್ಷಣಕ್ಕೂ ಅಂಜಿಕೆಯ ಭಾವ ಮೂಡಲಿಲ್ಲ. ಜಗದ ಒಡೆಯನಾದರೂ, ಸಮಾಧಿಯಲ್ಲಿ ಇರಿಸುವರು ಎಂಬುದನ್ನು ತಿಳಿದಿದ್ದರೂ ಏನನ್ನು ಪ್ರಶ್ನಿಸಲಿಲ್ಲ. ಏಕೆಂದರೆ ಪ್ರಭು ಯೇಸುವಿಗೆ ತನ್ನ ಪಿತನಲ್ಲಿ ಸಂಪೂರ್ಣ ವಿಶ್ವಾಸವಿತ್ತು. ತನಗೆ ಇಂದು ಏನೇ ಯಾತನೆ ನೀಡುತ್ತಿದ್ದರೂ ಅದು ತನ್ನ ತಂದೆಯ ಮಹಿಮೆಗೆ ಎಂಬುದು ಆತನಿಗೆ ತಿಳಿದಿತ್ತು. ಅಂತೆಯೇ ಯೇಸು ಪುನರುತ್ಥಾನರಾದರು. ನಾವು ಸಹ ಅಂತಹ ನಂಬಿಕೆಯನ್ನು ಪಿತನಲ್ಲಿರಿಸ ಬೇಕಾಗಿದೆ. ಇಂದು ನಮಗೆ ಎಂತಹುದೇ ಕಷ್ಟವಿದ್ದರೂ ಅದು ನಮ್ಮ ಒಳಿತಿಗೆ ಎಂಬುದನ್ನು ನಾವು ಅರಿತುಕೊಳ್ಳ ಬೇಕಿದೆ.
ಪ್ರಭು ಯೇಸು ಇಂದು ಕಳೆದುಹೋದ ಕುರಿಮರಿಗಾಗಿ ಕಾಯುತ್ತಿದ್ದಾರೆ. ಕಳೆದುಹೋದ ಕುರಿಮರಿ ಬೇರಾರೂ ಅಲ್ಲ ಅದು ನೀನೆ!
 ಪ್ರಾರ್ಥನೆ:-

ನಮ್ಮ ಮನದೊಳಗೆ ನಿನ್ನ ಬೆಳಕ ಬಿಂಬಿಸು ದೇವ, ಅಂತರಂಗದಲ್ಲಿ ಅಡಗಿರುವ ನನ್ನ ಸ್ವಾರ್ಥ, ದ್ವೇಷ, ಮದ, ಮತ್ಸರವೆಲ್ಲ ಸುಟ್ಟು ಹೋಗಲಿ. ನಿನ್ನಂತಹ ಪ್ರಶಾಂತ ಮನಸ್ಸು ನಮ್ಮದಾಗಲಿ.

  • ಅಜಯ್ ರಾಜ್ ಮತ್ತು ಸುಜಯ್ ಕಾಣಿಕ ರಾಜ್

ಶಿಲುಬೆಹಾದಿ-4(ಸಚಿತ್ರ )