08 ಮಾರ್ಚ್ 2019

08 ಮಾರ್ಚ್ 2019
ಶುಕ್ರವಾರ, ದೇವದಾಸ ಸಂತ ಜಾನ್

ಮೊದಲವಾಚನ: 
ಯೆಶಾಯ 58: 1-9
1ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಗಟ್ಟಿಯಾಗಿ ಕೂಗು, ನಿಲ್ಲಿಸಬೇಡ; ಕೊಂಬಿನಂತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು; ಯಕೋಬ ವಂಶದವರಿಗೆ ಅವರ ಪಾಪವನ್ನು ತಿಳಿಸು; 2ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾಂಗವೊ ಎಂಬಂತೆ, ಇವರು ದಿನ ದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ; ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಿಸುವಂತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವದರ್ಶನದಲ್ಲಿ ಆನಂದಿಸುವವರಂತೆ ತೋರಿಸಿಕೊಳ್ಳುತ್ತಾರೆ. ” 3ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ. 4ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ. 5ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣಿತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ? 6ನಾನು ಹೇಳುವುದನ್ನು ಕೇಳಿ: ಅನ್ಯಾಯದ ಬಂಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಗಳನ್ನು ಕಳಚುವುದು, ಜರ್ಜರಿತರಾದವರನ್ನು ಬಿಡುಗಡೆಮಾಡುವುದು, 7ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತ ಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸವ್ರತ? 8ಇದನ್ನು ಆಚರಿಸುವಾಗ ನೀವು ಉದಯ ಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು. 9ಆಗ ನೀವು ಪ್ರಾರ್ಥಿಸಿದರೆ, ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆಇಗೋ ಆಲಿಸುತ್ತಿದ್ದೇನೆಎನ್ನುವರು.

ಕೀರ್ತನೆ 51: 3-4, 5-6, 18-19
ನೊಂದು ಬೆಂದ ಮನವನಾತ ಒಲ್ಲೆಯೆನನು

3ಒಪ್ಪಿಕೊಂಡೆನಿದೋ, ನಾನೇ ಅಪರಾಧಿ ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ
4ಹೌದು ದೇವಾ, ನಿನಗೆ ದ್ರೋಹವೆಸಗಿದೆ ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ ನಿನ್ನ ನಿರ್ಣಯವು ನ್ಯಾಯಯುತ ನೀ ನೀಡುವ ತೀರ್ಪು ನಿರ್ಲಿಪ್ತ
5ನಾ ಜನಿಸಿದೆ ಪಾಪಪಂಕದಲೆ ದ್ರೋಹಿ ನಾ ಮಾತೃಗರ್ಭದಿಂದಲೆ
6ಅಂತರಂಗ ಶುದ್ಧಿಯನು ನೀ ಬಯಸುತಿ ಅಂತರ್ಯ ಜ್ಞಾನವನು ಉದಯಗೊಳಿಸುತಿ
18ಸಿಯೋನಿಗೆ ದೇವಾ, ಶುಭವನು ಕರುಣಿಸು ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು
19ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು


ಶುಭಸಂದೇಶ: 
ಮತ್ತಾಯ 9: 14-15
14ಬಳಿಕ ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. 15ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು.


ಚಿಂತನೆ: ನೈಜ ಉಪವಾಸದ ಪರಿಣಾಮಗಳು ವ್ಯಾಜ್ಯ, ಕಲಹ, ಗುದ್ದಾಟಗಳಲ್ಲ, ಬದಲಿಗೆ ನ್ಯಾಯ ನೀತಿ, ಹಸಿದವರಿಗೆ ಅನ್ನ ಹಾಕುವುದು, ಬಡವರನ್ನು ಸತ್ಕರಿಸುವುದು, ದುಃಖಿತರನ್ನು ಸಂತೈಸುವುದು ಎಂದು ಪ್ರವಾದಿ ಯೆಶಾಯ ಜನರನ್ನು ಎಚ್ಚರಿಸುತ್ತಿದ್ದಾನೆ. ಹಾಗೆಯೇ ಪ್ರಭು ಯೇಸು ಯಾರು ತಮ್ಮಲ್ಲಿ ನೆಲೆ ನಿಂತು ಸತ್ಕಾರ್ಯಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಳ್ಳುತ್ತಾರೋ ಅಂಥವರು ಉಪವಾಸ ಮಾಡುವ ಅವಶ್ಯಕತೆ ಇಲ್ಲವೆನ್ನುತ್ತಾರೆ. 


ದೇವರ ಸಂತ ಯೊವಾನ್ನರು /ಜಾನರು

S Statue of John of God in Rome | photo by Livioandronico2013          ಸಂತ ಜಾನರು (ಯೊವಾನ್ನರು) 1495ರಲ್ಲಿ ಪೋರ್ಚುಗಲ್ ದೇಶದಲ್ಲಿ ಬಡವರಾದ, ಭಕ್ತಿ-ಭಯವಿರುವ, ದಾನ-ಧರ್ಮ ಮಾಡುವ ತಂದೆ-ತಾಯಿಗಳಿಗೆ ಹುಟ್ಟಿದರು, ತನ್ನ ಎಂಟನೇ ವಯಸ್ಸಿನಲ್ಲೇ ಮನೆ, ತಂದೆ-ತಾಯಿಯನ್ನು ಬಿಟ್ಟು ತನ್ನ ಹೃದಯದ ಮಿಡಿತದಂತೆ ಬಾಳಲು ನಿರ್ಧರಿಸಿದರು. ಕೆಲಕಾಲ ಕುರಿಗಾಹಿಯಾಗಿ ಕೆಲಸಮಾಡಿದ. ನಂತರ ಸ್ಪೇನ್ ದೇಶದ ಸೈನ್ಯಕ್ಕೆ ಸೇರಿಕೊಂಡು, ಫ್ರಾನ್ಸ್ ದೇಶದೊಂದಿಗೆ ಯುದ್ಧ ಮಾಡಿದರು. ತದನಂತರ, ಪುನಃ ಕುರಿಗಾಹಿಯಾಗಿ ತನ್ನ ದತ್ತು ತೆಗೆದುಕೊಂಡಿದವರ ಮನೆಯಲ್ಲಿ ತಮ್ಮ ಕಾರ್ಯ ನಿರ್ವಹಿಸಿದ. ಸಂದರ್ಭದಲೇ ಅವರು ದೇವರು ತನ್ನ ಜೀವನದಲ್ಲಿ ಏನು ಮಾಡುತ್ತಿರುವರೆಂದು ಧ್ಯಾನಿಸಿದರು. ಪ್ರಸಿದ್ಧ ಅವಿಲದ ಯೋವಾನ್ನರ ಪ್ರಬೋಧನೆ ಕೇಳಿ ಪ್ರಭಾವಿತರಾಗಿ, ತನ್ನಲ್ಲಿದ್ದೆಲ್ಲವನ್ನು ಇತರರಿಗೆ ಹಂಚಿದರು. ಇವರ ಮನೋಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಹಲವರು ಕಟು ಮಾತುಗಳ ಮೂಲಕ ಮನನೋಯಿಸಿದರು.


            ಮುಂದೆ ಇವರು ಅಸ್ಪತ್ರೆಯನ್ನು ಕಟ್ಟಿ ಬಡಬಗ್ಗರ, ಕಾಯಿಲೆಯಿಂದ ನರಳುತ್ತಿರುವವರ ಶುಶ್ರೂಷೆಗೆ ಮುಂದಾದರು, ಯಾವಾಗಲೂ ಹೇಳುತ್ತಿದ್ದರು ಇತರರಿಗೆ ಒಳ್ಳೆಯದನ್ನೇ ಮಾಡಿ, ಅದನ್ನು ದೇವರ ಪ್ರೀತಿಗಾಗಿ ಮಾಡಿರಿ. ವಿಪರ್ಯಾಸವೆಂದರೆ ಹಲವಾರು ಜನರು ಇವರ ಜೀವನ ಪರ್ಯಂತ ಇವರನ್ನು ಟೀಕೆ ಮಾಡಿದರು. ಆದರೆ ಇವರ ಸಹಾಯಕ ಗುಣ ಅನೇಕ ಜನರ ಜೀವನ ಕಟ್ಟಲು ಸಹಾಯವಾಯಿತು. ಇವರು 1550 ಮಾರ್ಚ್ 8ರಲ್ಲಿ ಮರಣ ಹೊಂದಿದರು. ಇವರು ಇಂದಿಗೂ ಪುಸ್ತಕ ಮಾರಾಟಗಾರರ ಪಾಲಕರಾಗಿದ್ದಾರೆ.

ಚಿತ್ರಗೂಗಲ್‌ ಕೃಪೆ

© 'ದನಿಮಾಧ್ಯಮ ಮನೆ

No comments:

Post a Comment