09 ಮಾರ್ಚ್ 2019

09 ಮಾರ್ಚ್ 2019
ಶನಿವಾರ, ರೋಮ್ ನಗರದ ಸಂತ ಫ್ರಾನ್ಸೆ

ಮೊದಲವಾಚನ: 
ಯೆಶಾಯ 58: 9-14
ಸರ್ವೇಶ್ವರ ಇಂತೆನ್ನುತ್ತಾರೆ: “ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ 10ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು. 11ಸರ್ವೇಶ್ವರಸ್ವಾಮಿ ನಿಮ್ಮನ್ನು ನಿರಂತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು; ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದಂತೆಯೂ ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ. 12ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾಂತರಗಳಿಂದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ‘ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ, ಹಳೆಯ ದಾರಿಗಳನ್ನು ಸರಾಗಮಾಡಿದ ರಾಷ್ಟ್ರಎಂಬ ಬಿರುದು ನಿಮಗೆ ಬರುವುದು. ” ಸಬ್ಬತ್ ದಿನದ ಸದಾಚರಣೆ 13ನೀವು ಸಬ್ಬತ್ ದಿನವನ್ನು ತಾತ್ಸಾರ ಮಾಡದೆ, ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ದೈನಂದಿನ ವ್ಯವಹಾರವನ್ನು ನಡೆಸದೆ, ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರಸ್ವಾಮಿಯ ಸಬ್ಬತ್ ದಿನ ಪರಿಶುದ್ಧವಾದುದು, ಸಂತೋಷಕರವಾದುದು, ಮಾನ್ಯತೆಗೆ ಅರ್ಹವಾದುದು ಎಂದು ಸನ್ಮಾನಿಸಿದ್ದೇ ಆದರೆ 14ನೀವು ಸರ್ವೇಶ್ವರಸ್ವಾಮಿಯಾದ ನನ್ನ ಆನಂದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಅನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರಂತಕವಾಗಿ ಅನುಭವಿಸುವಂತೆ ಮಾಡುವೆನು,” ಇದು ಸರ್ವೇಶ್ವರಸ್ವಾಮಿಯ ನುಡಿ.

ಕೀರ್ತನೆ 86: 1-2, 3-4, 5-6
ನಿನ್ನ ಸತ್ಯಪಥದಲಿ ನಾ ನಡೆವಂತೆ ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು

1ಹೇ ಪ್ರಭು, ನೀಡೆನಗೆ ಸದುತ್ತರವನು ಕಿವಿಗೊಡು, ದೀನನು, ದಲಿತನು ನಾನು
2ಕಾಪಾಡು ಪ್ರಭು, ನಾ ನಿನ್ನ ಭಕ್ತನು ಉದ್ಧರಿಸು ನಿನ್ನ ನಂಬಿದ ದಾಸನನು
3ನೀನೆನಗೆ ದೇವನು, ಕರುಣಿಸೆನ್ನನು ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು
4ನಿನ್ನ ದಾಸನಿಗೆ ನೀಡು ಮನದಾನಂದವನು ನಿನಗೆ ಅಭಿಮುಖವಾಗಿಸಿರುವೆ ಎನ್ನಾತ್ಮವನು
5ಪ್ರಭು, ನೀನು ದಯಾವಂತನು, ಕ್ಷಮಿಸುವವನು ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು
6ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ ನನ್ನ ವಿಜ್ಞಾಪನೆಗಳ ಕೋರಿಕೆಗೆ

ಶುಭಸಂದೇಶ: 
ಲೂಕ 5: 27-32
27ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿದ್ದಾಗ ಲೇವಿ ಎಂಬ ಸುಂಕದವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. ನನ್ನನ್ನು ಹಿಂಬಾಲಿಸು, ಎಂದು ಹೇಳಿ ಯೇಸು ಅವನನ್ನು ಕರೆದರು. 28ಲೇವಿಯು ಎದ್ದು ಎಲ್ಲವನ್ನೂ ಪರಿತ್ಯಜಿಸಿ, ಯೇಸುವನ್ನು ಹಿಂಬಾಲಿಸಿದನು.

29ತರುವಾಯ ಆ ಲೇವಿ ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಬಹುಜನ ಸುಂಕದವರೂ ಇತರರೂ ಯೇಸುವಿನ ಪಂಕ್ತಿಯಲ್ಲೇ ಊಟಕ್ಕೆ ಕುಳಿತಿದ್ದರು. 30ಇದನ್ನು ಕಂಡ ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಧರ್ಮಶಾಸ್ತ್ರಜ್ಞರು ಗೊಣಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬಂದು, ನೀವು ಸುಂಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ? ಎಂದು ಪ್ರಶ್ನಿಸಿದರು. 31ಅದಕ್ಕೆ ಯೇಸು ಪ್ರತ್ಯುತ್ತರವಾಗಿ, ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; 32ನಾನು ಬಂದಿರುವುದು ಧರ್ಮಿಷ್ಠರನ್ನು ಕರೆಯುವುದಕ್ಕಲ್ಲ, 'ಪಶ್ಚತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖಿಗಳಾಗಿರಿ' ಎಂದು ಪಾಪಿಷ್ಠರನ್ನು ಕರೆಯುವುದಕ್ಕೆ, ಎಂದರು.

ಚಿಂತನೆ: ದಬ್ಬಾಳಿಕೆ ಮತ್ತು ಪಂಕ್ತಿಭೇದ ಇನ್ನೂ ಸಹ ನಮ್ಮ ಸಮಾಜದಲ್ಲಿ ರೂಢಿಯಲ್ಲಿದೆ ಇದನ್ನು ಅಳಿಸಿಹಾಕಿದಾಗ ಮಾತ್ರ ಕ್ರಿಸ್ತನ ಜೀವನಶೈಲಿ ಮತ್ತು ಬೋಧನೆಗಳು ಸಿದ್ಧಿಗೆ ಬರುತ್ತವೆ. ಈ ಕಾರಣದಿಂದಲೇ ಪ್ರಭು ಯೇಸು ಸುಂಕದರೊಡನೆ ಹಾಗೂ ಸಮಾಜದಿಂದ ಬಹಿಷ್ಕೃತರೊಡನೆ ಬೆರೆತು ಬಾಳುತ್ತಾರೆ. ಕ್ರೈಸ್ತರಾದ ನಾವೂ ಸಹ ಪ್ರಭುವನ್ನು ಅನುಕರಿಸಿ ಬದಲಾವಣೆಗೆ ನಾಂದಿ ಹಾಡುವಂತೆ ಪ್ರೇರೇಪಿಸುತ್ತಾರೆ. 


ರೋಮಿನ ಸಂತ ಫ್ರಾನ್ಸೆ

<em srcset=

            ಸಂತ ಫ್ರಾನ್ಸೆ ಅವರು ಇಟಾಲಿ ದೇಶದ ರೋಮ್ ನಗರದಲ್ಲಿ 1383ರಲ್ಲಿ ಶ್ರೀಮಂತ ತಂದೆ-ತಾಯಿಗಳಿಗೆ ಹುಟ್ಟಿದರು. ತಮ್ಮ ಚಿಕ್ಕವಯಸ್ಸಿನಿಂದಲೂ ದೇವರಲ್ಲಿ ಭಯ-ಭಕ್ತಿಯನ್ನು ಬೆಳೆಸಿಕೊಂಡು, ದೃಢಚಿತ್ತದಿಂದ ಮುಂದೆ ಕನ್ಯಾಸ್ತ್ರೀಯಾಗುವೆ ಎಂಬ ಆಸೆಯಿಂದ ಬೆಳೆದರು. ಆದರೆ ಆಕೆಯ ತಂದೆಗೆ ಇವರ ನಿರ್ಧಾರ ಇಷ್ಟವಿರಲಿಲ್ಲ, ಬದಲಾಗಿ ಮದುವೆ ಮಾಡಲು ಮುಂದಾದರು. ತಂದೆಯ ಮಾತು ಅಂದು ಮಕ್ಕಳಿಗೆ ನಿಯಮದಂತೆ, ವೇದವಾಕ್ಯವಿದ್ದಂತೆ. ಆಕೆ ತಂದೆಯ ನಿರ್ಧಾರ ನೆರವೇರದಂತೆ ಪ್ರಾರ್ಥಿಸಿದಳು. ಆಕೆಯ ಮದುವೆಯಾಯಿತು. ಆದರೆ ಇತರರಂತೆ ಲೋಕದ ಆಡಂಬರದ ಜೀವನ ನಡೆಸಲು ಇಷ್ಟವಿರಲಿಲ್ಲ. ಮದುವೆಯಾದ ಕೂಡಲೇ ಆಯಾಸದಿಂದ ಬಿದ್ದು ಹಾಗೆಯೇ ಸಾಯುವ ಸ್ಥಿತಿಗೆ ತಲುಪಿದಳು. ಸಂತ ಅಲೆಕ್ಸಿಸ್ ಅವರ ದರ್ಶನದಿಂದ ತಮ್ಮ ರೋಗದಿಂದ ಸಂಪೂರ್ಣ ಗುಣಮುಖಳಾಗಿ ಅಂದಿನಿಂದ ಭಕ್ತಿ ಕಾರ್ಯಗಳನ್ನು, ಸೇವೆಗಳನ್ನು ಮಾಡಲು ಮುಂದಾದಳು. ಸಂತ ಫ್ರಾನ್ಸೆ ಅವರು ಆಕೆಯ ವಾರಾಗಿತ್ತಿ ವ್ಯಾನ್ನೋಜಳೊಂದಿಗೆ ಸೇರಿ, ಪೂಜೆಯಲ್ಲಿ ಭಾಗವಹಿಸುವುದು, ಕಾರಾಗೃಹಗಳ ಭೇಟಿ, ಆಸ್ಪತ್ರೆಗಳಲ್ಲಿ ಸೇವೆ ಮತ್ತು ಮನೆಯಲ್ಲಿ ರಹಸ್ಯ ಪುಟ್ಟ ಪ್ರಾರ್ಥನಾ ಮಂದಿರ ನಿರ್ಮಿಸಿ ಪ್ರಾರ್ಥಿಸಿದರು. ಆದರೆ ಇವರ ಮಾವನಿಗೆ ಫ್ರಾನ್ಸ್ರು ಮಾಡುತ್ತಿದ್ದ ಸೇವಾಕಾರ್ಯ, ದಾನಕಾರ್ಯಗಳು, ಇಷ್ಟವಿರಲಿಲ್ಲ. ಆದರೂ, ತನ್ನ ಕೈಲಾದಷ್ಟು ಸಹಾಯಹಸ್ತ ನೀಡುತ್ತ, ತಪಸ್ಸು, ಪ್ರಾರ್ಥನೆ ಮಾಡುತ್ತ, ದೇವರಿಗೆ ಮೆಚ್ಚುಗೆಯ ಜೀವನ ನಡೆಸಿದರು.

ಚಿತ್ರಗೂಗಲ್‌ ಕೃಪೆ

© 'ದನಿಮಾಧ್ಯಮ ಮನೆ

No comments:

Post a Comment