ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ
ಸೋಮ/ ನೇರಳೆ/ ತಪಸ್ಸು ಕಾಲದ ನಾಲ್ಕನೇ ವಾರ
1ನೇ ವಾಚನ - ಯೆಶಾಯ 65: 17-21
ಕೀರ್ತನೆ - 3೦: 1, 3-5, 1೦-12
ಶುಭಸಂದೇಶ - ಯೊವಾನ್ನ 4: 43-54
1ನೇ ವಾಚನ - ಯೆಶಾಯ 65: 17-21
17ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ನಾನು ಹೊಸ ಆಕಾಶವನ್ನೂ ಹೊಸಭೂಮಿಯನ್ನೂ ಸೃಷ್ಟಿಸುವೆನು; ಆಗ, ಮೊದಲಿದ್ದದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು. 18ನಾನು ಮಾಡುವ ಸೃಷ್ಟಿಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ ಆನಂದಿಸಿರಿ: ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು. 19ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿ ಬರದು.
20ಕೆಲವೇ ದಿನ ಬದುಕುವ ಮಗುವಾಗಲಿ, ಆಯುಸ್ಸು ಮುಗಿಸದ ಮುದುಕನಾಗಲಿ ಇನ್ನು ಇಲ್ಲಿರನು. ನೂರು ವರ್ಷ ಬಾಳುವವನು ‘ಯುವಕ’ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು ‘ಶಾಪಗ್ರಸ್ತ’ ಎನಿಸಿಕೊಳ್ಳುವನು. 21ಜನರು ಅಲ್ಲೇ ಮನೆಮಾಡಿ ನಿವಾಸ ಮಾಡುವರು; ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.
ಕೀರ್ತನೆ - 3೦: 1, 3-5, 1೦-12
ನಿನಗೆನ್ನ ವಂದನೆ ಪ್ರಭೂ ನನ್ನನ್ನುದ್ಧರಿಸಿದೆ
2‘ಹೇ ಪ್ರಭು, ಎನ್ನ ದೇವಾ’ ಎಂದೆ / ನಾ ಮೊರೆಯಿಡೆ, ನೀ ಗುಣಪಡಿಸಿದೆ //
4ಭಕ್ತರೇ, ಸಂಕೀರ್ತಿಸಿರಿ ಪ್ರಭುವನು / ಮಾಡಿರಿ ಆತನ ನಾಮಸ್ಮರಣೆಯನು //
5ಆತನ ಕೋಪ ಕ್ಷಣಮಾತ್ರ / ಆತನ ಕೃಪೆ ಜೀವನ ಪರಿಯಂತ // ಇರುಳು ಬರಲು ಇರಬಹುದು ಅಳಲು / ನಲಿವು ಉಲಿವುದು ಹಗಲು ಹರಿಯಲು //
6ನಾನಾದರೋ ಉಲ್ಲಾಸದಿಂದಿರುವಾಗಲೂ / ನನ್ನನು ಅಲ್ಲಾಡಿಸಲಾಗದೆಂದೆ ಯಾರಿಂದಲೂ //
11ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ / ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ //
12ಎಂದೇ ಮೌನವಿರದೆ ಎನ್ನ ಮನವು ನಿನಗೆ ಹಾಡಲಿ ಕೀರ್ತನೆ / ಹೇ ಪ್ರಭು, ಎನ್ನ ದೇವ, ನಿನಗೆನ್ನ ಅನಂತ ಧನ್ಯ ವಂದನೆ //
ಶುಭಸಂದೇಶ - ಯೊವಾನ್ನ 4: 43-54
43ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಅಲ್ಲಿಂದ ಗಲಿಲೇಯಕ್ಕೆ ಹೊರಟರು. 44ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು. 45ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ದನ್ನೆಲ್ಲಾ ನೋಡಿದ್ದರು. 46ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು.
47ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು.
48ಯೇಸು ಅವನಿಗೆ “ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ,” ಎಂದರು. 49ಆದರೂ ಆ ಅಧಿಕಾರಿ, “ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾವಿೂ,” ಎಂದು ಅಂಗಲಾಚಿದನು. 50ಆಗ ಯೇಸು, “ಹೋಗು, ನಿನ್ನ ಮಗನು ಬದುಕುತ್ತಾನೆ,” ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು. 51ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, “ನಿಮ್ಮ ಮಗ ಬದುಕಿಕೊಂಡ,” ಎಂದು ತಿಳಿಸಿದರು. 52ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, “ನಿನ್ನೆ ಮಧ್ಯಾಹ್ನ: ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು,” ಎಂದು ಆಳುಗಳು ಉತ್ತರಕೊಟ್ಟರು. 53ನಿನ್ನ ಮಗ ಬದುಕುತ್ತಾನೆ’ ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು. 54ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕಕಾರ್ಯ ಇದು.
ಚಿಂತನೆ
ಯೇಸುವನ್ನು ನಂಬಿ ವಿಶ್ವಾಸಿಸಿ, ಅವರನ್ನು ಬರಮಾಡಿಕೊಂಡವರಲ್ಲಿ ಯೆಹೂದ್ಯರಿಗಿಂತಲೂ ಅನ್ಯಧರ್ಮೀಯರೇ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ರೋಮನ್ ಶತಾಧಿಪತಿ, ಸಿರೋಫಿನಿಷಿಯದ ಮಹಿಳೆ, ಸಮಾರಿತ ಮಹಿಳೆ ಮತ್ತು ಇಂದಿನ ಶುಭಸಂದೇಶದಲ್ಲಿ ಕಾಣಬರುವ ರಾಜಸೇವೆಯ ಅಧಿಕಾರಿ. ಇವರೆಲ್ಲರೂ ತಮ್ಮ ವಿಶ್ವಾಸದಿಂದಷ್ಟೇ ಯೇಸುವಿನ ಮನಗೆದ್ದರು. ಇವರ ವಿಶ್ವಾಸ ಇಸ್ರಯೇಲ್ ಜನರ ವಿಶ್ವಾಸಕ್ಕಿಂತಲೂ ದೊಡ್ಡದೆಂದು ಯೇಸು ಸಾರಿ ಹೇಳಿದ್ದರು. ಯೆಹೂದ್ಯರಲ್ಲಿ ಪ್ರವಾದಿಯೊಬ್ಬನ ಘನತೆಯನ್ನು ಆತ ಮಾಡಬಹುದಾದ ಪವಾಡಗಳನ್ನಾಧರಿಸಿ ಅಳೆಯುವ ರೂಢಿಯಿತ್ತು. ಕಳೆದ ಬಾರಿಯಂತೆ ಈ ಸಲವೂ ಗಲಿಲೇಯದ ಜನರು ಯೇಸುವನ್ನು ಅವಮಾನಿಸುತ್ತಾರೆ. ಯೇಸುವನ್ನು ಒಬ್ಬ ಪವಾಡ ಪುರುಷನೆಂದು ಪರಿಗಣಿಸಿ ಆತ ಮಾಡಬಹುದಾದ ಕಾರ್ಯಗಳನ್ನು ಕಾಣಲು ಅವರ ಸುತ್ತಲೂ ನೆರೆಯುತ್ತಾರೆ. ಆದರೆ ಸೂಚಕ ಕಾರ್ಯಗಳನ್ನು, ಅದ್ಭುತಗಳನ್ನು ಕಂಡ ಹೊರತು ನೀವು ನಂಬುವುದಿಲ್ಲವಲ್ಲ ಎಂದು ಅವರನ್ನು ಟೀಕಿಸಿದರು. ದೀನಮನಸ್ಕನೂ, ವಿಶ್ವಾಸಪೂರಿತನೂ ಆದ ಅಧಿಕಾರಿಯ ಬೇಡಿಕೆಯನ್ನು ಪುರಸ್ಕರಿಸಿ ಆತನ ಮಗನನ್ನು ಗುಣಪಡಿಸಿದರು. ವಿಶ್ವಾಸವೊಂದಿದ್ದರೆ ಎಲ್ಲವನ್ನೂ ಗೆಲ್ಲಬಹುದು, ದೇವರನ್ನೂ ಕೂಡ!
- ಫಾದರ್ ಪೀಟರ್ ಚಿನ್ನಪ್ಪ (ಬೆಂಗಳೂರು ಮಹಾಧರ್ಮಕ್ಷೇತ್ರ)
No comments:
Post a Comment