ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ
ನೇರಳೆ/ ಮಂಗಳ/ ತಪ್ಪಸ್ಸು ಕಾಲದ ನಾಲ್ಕನೇ ವಾರ
1ನೇ ವಾಚನ - ಯೆಜೆ 47: 1-9, 12
ಕೀರ್ತನೆ - 46: 1-2, 4-5, 7-8
ಶುಭಸಂದೇಶ - ಯೊವಾನ್ನ 5: 1-3, 5-16
ಐಚ್ಛಿಕ ಸ್ಮರಣೆ - ಪಾವ್ಲದ ಸಂತ ಫ್ರಾನ್ಸಿಸ್ (ವಾ)
1ನೇ ವಾಚನ - ಯೆಜೆ 47: 1-9, 12
1ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. 2ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. 3ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವದಂಡೆಗೆ ಮುಂದುವರಿದು ಐನೂರು ವಿೂಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆ ಮುಳುಗುವಷ್ಟಿತ್ತು. 4ಅವನು ಪುನಃ ಐನೂರು ವಿೂಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ವಿೂಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊಂಟದವರೆಗೆ ಇತ್ತು.
5ಅವನು ಮತ್ತೆ ಅಳೆದು ಐನೂರು ವಿೂಟರ್ ಅಳೆದಾಗ ಅದು ನನ್ನಿಂದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು. 6ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು. 7ನಾನು ಹಿಂದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು.
8ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. 9ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು.
12ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”
12ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”
ಕೀರ್ತನೆ - 46: 1-2, 4-5, 7-8
ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು / ಯಕೋಬ ಕುಲದೇವರು ನಮಗಾಶ್ರಯ ದೇವರು //
2ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲಿಲ್ಲ / ಪೊಡವಿ ಕಂಪಿಸಿದರು ನಮಗೇನು ಭಯವಿಲ್ಲ //
3ಸಮುದ್ರ ಭೋರ್ಗರೆದರೇನು? ನೊರೆಕಾರಿದರೇನು?/ ಅದರೊಡನೆ ಪರ್ವತಗಳು ಅಲುಗಾಡಿದರೇನು?// ನಮ್ಮ ಕಡೆಗಿರುವನು ಸೇನಾಧೀಶ್ವರ ಪ್ರಭುವು / ಯಕೋಬ ಕುಲದೇವನು ನಮಗಾಶ್ರಯ ದುರ್ಗವು //
5ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ / ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ //
6ನಡುಗಿದವು ರಾಷ್ಟ್ರಗಳು, ಉಡುಗಿದವು ರಾಜ್ಯಗಳು / ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು //
8ಪ್ರಭುವಿನ ಕಾರ್ಯಗಳ ನೋಡಬನ್ನಿ / ಇಳೆಯೊಳಗೆಸಗಿದ ಪವಾಡಗಳನು ನೋಡಿ //
9ಜಗದೆಲ್ಲೆಡೆ ಕದನ ಕಾಳಗ ನಿಲ್ಲಿಸಿಹನು / ಬಿಲ್ಲು ಭಲ್ಲೆಗಳನು ಮುರಿದು ಹಾಕಿದನು / ರಥಗಳನು ಬೆಂಕಿಯಿಂದ ಸುಟ್ಟುಹಾಕಿದನು //
ಶುಭಸಂದೇಶ - ಯೊವಾನ್ನ 5: 1-3, 5-16
1ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. 2ಅಲ್ಲಿ, ‘ಕುರಿಬಾಗಿಲು’ ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ‘ಬೆತ್ಸಥ’ ಎಂದು ಕರೆಯುತ್ತಾರೆ. 3ಕುರುಡರು, ಕುಂಟರು, ಪಾಶ್ರ್ವವಾಯು ಪೀಡಿತರು 4ಮೊದಲಾದ ಅನೇಕ ರೋಗಿಗಳು ಆ ಮಂಟಪಗಳಲ್ಲಿ ಬಿದ್ದುಕೊಳ್ಳುತ್ತಾ ಇದ್ದರು. 5ಮೂವತ್ತೆಂಟು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು.
6ಯೇಸು ಅವನನ್ನು ನೋಡಿ, ದೀರ್ಘಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, “ನಿನಗೆ ಗುಣಹೊಂದಲು ಮನಸ್ಸಿದೆಯೇ?” ಎಂದು ಕೇಳಿದರು. 7“ಸ್ವಾವಿೂ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೇ ಬೇರೆ ಯಾರಾದರೂ ಇಳಿದು ಬಿಡುತ್ತಾರೆ,” ಎಂದು ಉತ್ತರಿಸಿದ ಆ ರೋಗಿ. 8ಯೇಸು ಅವನಿಗೆ, “ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆ,” ಎಂದರು. 9ಆ ಕ್ಷಣವೇ ಅವನು ಗುಣಹೊಂದಿ, ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು.
10ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, “ಇಂದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ಧ,” ಎಂದು ಹೇಳಿದರು. 11ಅದಕ್ಕೆ ಅವನು: “ನನ್ನನ್ನು ಗುಣಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದರು,” ಎಂದು ಉತ್ತರಕೊಟ್ಟನು. 12ಅಧಿಕಾರಿಗಳು, “ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?” ಎಂದು ಪ್ರಶ್ನಿಸಿದರು.
13ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿ ಬಿಟ್ಟಿದ್ದರು. 14ಅನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, “ನೋಡು, ನೀನು ಗುಣಹೊಂದಿರುವೆ; ಇನ್ನುಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು,” ಎಂದರು.
15ಆ ಮನುಷ್ಯ ಅಲ್ಲಿಂದ ಯೆಹೂದ್ಯರ ಬಳಿಗೆ ಹೋಗಿ, “ನನ್ನನ್ನು ಗುಣಪಡಿಸಿದವನು ಯೇಸುವೇ,” ಎಂದು ತಿಳಿಸಿದನು. 16ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳಕೊಡಲು ತೊಡಗಿದರು.
ಚಿಂತನೆ
ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದರೆ ಪಾಪ ಪರಿಹಾರವಾಗುತ್ತದೆ, ಗಂಗಾ ನಂದಿಯಲ್ಲಿ ಮಿಂದರೆ ಜನ್ಮ ಪಾವನವಾಗುತ್ತದೆ ಎಂಬ ನಂಬಿಕೆಯಿಂದ ಹಿಂದೂ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ತಮ್ಮ ಪವಿತ್ರ ನದಿಗಳಲ್ಲಿ ಮುಳುಗೇಳುತ್ತಾರೆ. ಯೆಹೂದ್ಯರಲ್ಲಿಯೂ ಇಂತಹ ನಂಬಿಕೆಯಿತ್ತು. ಬೆತ್ಸಥ ಎಂಬ ಕೊಳದ ಬಳಿ ಕುರುಡರು, ಕುಂಟರು, ಪಾರ್ಶ್ವವಾಯು ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಉಳಿದುಕೊಂಡಿದ್ದರು, ಕೊಳದಲ್ಲಿ ಒಂದು ವಿಶಿಷ್ಟ ಸಂದರ್ಭದಲ್ಲಿ ಜಲ ಉಕ್ಕಿಬಂದಾಗ ಅದರೊಳಗೆ ಇಳಿದು ಗುಣಮುಖರಾಗಬಹುದೆಂಬ ಬಯಕೆ ಅವರದು. ಸುಮಾರು 38 ವರ್ಷಗಳಷ್ಟು ಸುಧೀರ್ಘ ಅವಧಿಯವರೆಗೆ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೂ ಕೂಡ ಇದೇ ಬಯಕೆಯಿಂದ ಇದ್ದ. ಆದರೆ ಅವನ್ನನ್ನು ಕೊಳದೊಳಕ್ಕೆ ಇಳಿಸಲು ಯಾರೂ ಇರಲಿಲ್ಲ. ಅವನ ಅದೃಷ್ಟಕ್ಕೆ ಯೇಸುವೇ ಅವನ ಬಳಿ ಧಾವಿಸುತ್ತಾರೆ. ರೋಗಿ ವೈದ್ಯನನ್ನು ಹುಡುಕಿಕೊಂಡು ಹೋಗುವುದು ಸಾಮಾನ್ಯ, ವೈದ್ಯನೇ ರೋಗಿಯನ್ನು ಹುಡುಕಿಕೊಂಡು ಹೋಗುವುದು ಅಪೂರ್ವ. ಅಂತಹ ವಿಶಿಷ್ಟ ಗಳಿಗೆಯಿದು.
- ಫಾದರ್ ಪೀಟರ್ ಚಿನ್ನಪ್ಪ (ಬೆಂಗಳೂರು ಮಹಾಧರ್ಮಕ್ಷೇತ್ರ)
ಪವೋಲಾದ
ಸಂತ ಫ್ರಾನ್ಸಿಸ್
1416 ಮಾರ್ಚ್ 27ರಂದು ಇಟಲಿಯಲ್ಲಿ
ಜನಿಸಿದ ಫ್ರಾನ್ಸಿಸರು ಯಾಜಕರಾಗಿ ಅಭಿಷಿಕ್ತರಾಗದಿದ್ದರೂ ವಿರಕ್ತ ಜೀವನವನ್ನು ತಳೆದು ವಿರಕ್ತರ
ಸಭೆಯನ್ನು ಹುಟ್ಟುಹಾಕಿದ ಹೆಗ್ಗಳಿಕೆ ಹೊಂದಿದ್ದಾರೆ. ಪವೋಲಾ ಎಂಬಲ್ಲಿ ತಮ್ಮ ಹದಿನೈದನೇ
ವಯಸ್ಸಿನಲ್ಲಿಯೇ ವೈರಾಗ್ಯ ತಾಳಿದ ಇವರು 1436ರಲ್ಲಿ ಇಬ್ಬರು ಸಂಗಡಿಗರೊಂದಿಗೆ ಸೇರಿ ಒಂದು ಮಠ
ಸ್ಥಾಪಿಸಿದರು. ಹದಿನೈದು ವರ್ಷಗಳ ಮಠವಾಸದಲ್ಲಿ ಇವರು ದೇಹದಂಡನೆ, ದಾನಧರ್ಮ, ದೀನಾವಸ್ಥೆ ಜೊತೆಗೆ
ಉಪವಾಸ, ಶಾಕಾಹಾರಗಳನ್ನು ಪಾಲಿಸಿಕೊಂಡು ಬಂದರು. ತಮ್ಮ ಮಠಕ್ಕೆ ಸೇರಿದ ಇತರರಿಗೂ ಇದೇ
ಧ್ಯೇಯಗಳನ್ನು ಹಂಚಿದರು. ಸಂನ್ಯಾಸಿನಿಯರಿಗೂ, ಜನಸಾಮಾನ್ಯರಿಗೂ ವಿರಕ್ತತ್ವದ ನಿಯಮಾವಳಿಗಳನ್ನು
ರೂಪಿಸಿದರು. ತಮ್ಮ ಮಠವನ್ನು ಮೊದಲಿಗೆ ಅಸಿಸಿಯ ಫ್ರಾನ್ಸಿಸರ ಮಠ ಎಂದು ಕರೆದರಾದರೂ ಜಗದ್ಗುರು
ಪೀಠ ಆ ಹೆಸರನ್ನು ಅನುಮೋದಿಸಲಿಲ್ಲ. ಕೊನೆಗೆ ಮೊನಾಸ್ಟ್ರಿ ಆಫ್ ಮಿನಿಮ್ಸ್ ಎಂದರೆ ಅಂತ್ಯಜರ
ಆಶ್ರಮ ಎಂದು ಕರೆದುಕೊಂಡರು. ಈ ಮಠವಾಸಿಗಳನ್ನು ’ಫ್ರಯರ್ಸ್ ಆಫ್ ಮಿನಿಮ್ಸ್’ ಎನ್ನುತ್ತಾರೆ.
ಪವೋಲಾದ ಫ್ರಾನ್ಸಿಸರು ಜಪತಪ
ಅಧ್ಯಾತ್ಮದ ಜೀವನದಲ್ಲಿ ಸದಾ ನಿರತರಾಗಿ ಒಂದು ದಿವ್ಯಶಕ್ತಿಯನ್ನು ಪಡೆದುಕೊಂಡಿದ್ದರು. ಆ ಶಕ್ತಿಯ
ಪ್ರಭಾವದಿಂದ ಮುಂದಾಗುವುದನ್ನು ಮೊದಲೇ ಅರಿಯುತ್ತಿದ್ದರು. ಅಲ್ಲದೆ ಎದುರಿಗೆ ಕುಳಿತವನ
ಮನಸ್ಸಿನಲ್ಲಿ ಏನು ಆಲೋಚನೆ ಓಡುತ್ತಿದೆ ಎಂಬುದೂ ಅವರಿಗೆ ಅರಿವಾಗುತ್ತಿತ್ತು. ಫ್ರಾನ್ಸಿನ ರಾಜ
ಹನ್ನೊಂದನೇ ಲೂಯಿಯು ಕಾಯಿಲೆ ಬಿದ್ದಾಗ ಪೋಪ್ ಜಗದ್ಗುರುಗಳಾದ ಮೊದಲನೇ ಸಿಕ್ಸ್ಟಸ್ ನವರ ಅಣತಿಯ
ಮೇರೆಗೆ ಇವರು ಫ್ರಾನ್ಸಿಗೆ ತೆರಳಿ ರಾಜನ ಶುಶ್ರೂಷೆಗೆ ತೊಡಗಿದರು. ರಾಜ ಬದುಕುಳಿಯಲಿಲ್ಲವಾದರೂ
ಅವನ ಮಗ ಎಂಟನೇ ಚಾರ್ಲ್‌ಸ್ ಫ್ರಾನ್ಸಿಸರ ಸಾತ್ವಿಕ ಬದುಕಿಗೆ ಮಾರುಹೋಗಿ ಅವರನ್ನು ಬಹುವಾಗಿ
ನೆಚ್ಚಿಕೊಂಡನು. ಅಲ್ಲದೆ ಫ್ರಾನ್ಸ್ ದೇಶದಲ್ಲಿ ಅವರಿಗಾಗಿ ಹಲವಾರು ಮಠಗಳನ್ನು ಕಟ್ಟಿಸಿಕೊಟ್ಟನು.
ಹೀಗೆ ಫ್ರಾನ್ಸ್ ದೇಶದಲ್ಲೇ ನೆಲೆಗೊಂಡ ಫ್ರಾನ್ಸಿಸರು 1507ರ ಏಪ್ರಿಲ್ 2ರಂದು ನಿಧನರಾದರು. ಅವರ
ಪವಾಡ ಕ್ರಿಯೆಗಳನ್ನು ಗಮನಿಸಿ 1519ರಲ್ಲಿ ಅವರನ್ನು ಸಂತ ಪದವಿಗೆ ಏರಿಸಲಾಯಿತು.
- ಮರಿಜೋಸೆಫ್, ಬೆಂಗಳೂರು
No comments:
Post a Comment