10 ಮಾರ್ಚ್ 2019

10 ಮಾರ್ಚ್ 2019
ತಪಸ್ಸು ಕಾಲದ ಮೊದಲನೇ ಭಾನುವಾರ

ಮೊದಲವಾಚನ: 
ಧರ್ಮೋ 26: 4-10
4ಮೋಶೆಯು ಜನರಿಗೆ ಹೀಗೆಂದನುಯಾಜಕನು ಪುಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಸರ್ವೆಶ್ವರನ ಬಲಿಪೀಠದ ಮುಂದೆ ಇಡುವನು. 5ಆಗ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ, ‘ಅರಾಮ್ಯನಾದ ನಮ್ಮ ಮೂಲ ಪಿತೃವು ಗತಿಯಿಲ್ಲದವನಾಗಿ ಸ್ವಲ್ಪ ಮಂದಿಯೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು. ಅಲ್ಲಿ ಅವನ ಸಂತಾನದವರು ಹೆಚ್ಚಿ ಮಹಾಬಲಿಷ್ಠ ಜನಾಂಗವಾದರು. 6ಈಜಿಪ್ಟರು ನಮ್ಮನ್ನು ಉಪದ್ರವಪಡಿಸಿ, ಬಾಧಿಸಿ, ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು. 7ಆಗ ನಾವು ನಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ಮೊರೆಯಿಟ್ಟೆವು; ಅವರು ಆಲಿಸಿ ನಮ್ಮ ದುರವಸ್ಥೆಯನ್ನೂ ಕಷ್ಟ ಉಪದ್ರವ್ಯಗಳನ್ನೂ ನೋಡಿ, 8ಭುಜಬಲ, ಶಿಕ್ಷಾಹಸ್ತ, ಮಹಾಭೀತಿ, ಮಹತ್ಕಾರ್ಯ, ಸೂಚಕಕಾರ್ಯ, ಇವುಗಳನ್ನು ಪ್ರಯೋಗಿಸಿ ನಮ್ಮನ್ನು ಬಿಡಿಸಿದರು. 9ಈಜಿಪ್ಟ್ ದೇಶದಿಂದ ಕರೆದುತಂದು ಹಾಲೂಜೇನೂ ಹರಿಯುವ ನಾಡನ್ನು ನಮಗೆ ಕೊಟ್ಟಿದ್ದಾರೆ. 10ಆದುದರಿಂದ ಸರ್ವೇಶ್ವರಾ, ನೀವು ಅನುಗ್ರಹಿಸಿರುವ ಭೂಮಿಯ ಬೆಳೆಯಲ್ಲಿ ಪ್ರಥಮಫಲಗಳನ್ನು ನಾವು ಕಾಣಿಕೆಯಾಗಿ ತಂದಿದ್ದೇವೆ; ಸ್ವೀಕರಿಸಬೇಕುಎಂದು ಹೇಳಿ ಪ್ರಥಮಫಲಗಳನ್ನು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿಟ್ಟು ಅವರನ್ನು ಆರಾಧಿಸಬೇಕು.

ಕೀರ್ತನೆ 91: 1-2, 10-11, 12-13, 14-15
ನನ್ನ ಸಂಕಟದೊಳು ನನ್ನೊಡನಿರುವೆ ಪ್ರಭು

1ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು
2ನಾನಾತನಿಗೆ, ‘ನೀನೇ ನನ್ನ ರಕ್ಷಕನೂ ದುರ್ಗವೂ ನಾ ನಂಬಿದ ದೇವನುಎನ್ನುವೆನು
10ಹಾನಿಯೊಂದೂ ನಿನಗೆ ಸಂಭವಿಸದು ಕೆಡಕು ನಿನ್ನ ಗುಡಾರದ ಬಳಿ ಸುಳಿಯದು
11ನೀನು ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ
12ನಿನ್ನ ಕಾಲು ಕಲ್ಲಿಗೆ ತಾಗದಂತೆ ನಿನ್ನನೆತ್ತಿಕೊಳ್ವರವರು ಕೈಗಳಲೆ
13ಸಿಂಹಗಳ ಮೇಲೂ, ಸರ್ಪಗಳ ಮೇಲೂ ನಡೆಯುವೆ ಪ್ರಾಯದ ಸಿಂಹವನು, ಘಟಸರ್ಪವನು ತುಳಿದುಬಿಡುವೆ
14ಭು: “ನನ್ನ ಭಕ್ತನಾದ್ದರಿಂದ ವಿಮೋಚಿಸುವೆನು ಅವನನು ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು
15ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು ಸಂಕಟದೊಳು ಅವನ ಸಂಗಡವಿರುವೆನು ಅವನನು ಉದ್ಧರಿಸಿ ಘನಪಡಿಸುವೆನು

ಎರಡನೇ ವಾಚನ: 
ರೋಮ 10: 8-13
8ಧರ್ಮಗ್ರಂಥವು ಹೇಳುವುದಿಷ್ಟೆ: ದೇವರ ವಾಕ್ಯ ನಿನ್ನ ಸವಿೂಪದಲ್ಲೇ ಇದೆ. ಅದು ನಿನ್ನ ಬಾಯಲ್ಲೂ ಹೃದಯದಲ್ಲೂ ಇದೆ. ಅದೇ ನಾವು ನಿಮಗೆ ಬೋಧಿಸುವ ವಿಶ್ವಾಸದ ವಾಕ್ಯ.

9ಯೇಸುಸ್ವಾಮಿಯೇ ಪ್ರಭುಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ. 10ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ. 11ಏಕೆಂದರೆ, “ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ,” ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ. 12 ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ, ಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ. 13ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ,” ಎಂದು ಲಿಖಿತವಾಗಿದೆ.

ಶುಭಸಂದೇಶ: 
ಲೂಕ 4: 1-13
1ಯೇಸುಸ್ವಾಮಿ ಪವಿತ್ರಾತ್ಮಭರಿತರಾಗಿ ಜೋರ್ಡನ್ ನದಿತೀರದಿಂದ ಹಿಂದಿರುಗಿದ ಮೇಲೆ ಅದೇ ಆತ್ಮರಿಂದ ಪ್ರೇರಿತರಾಗಿ ಬೆಂಗಾಡು ಪ್ರದೇಶಕ್ಕೆ ಬಂದರು. 2ನಾಲ್ವತ್ತು ದಿನ ಅಲ್ಲಿದ್ದಾಗ ಅವರನ್ನು ಪರೀಕ್ಷಿಸಲು ಪಿಶಾಚಿ ಪ್ರಯತ್ನಿಸಿತು. ಅಷ್ಟು ದಿನಗಳೂ ಏನನ್ನೂ ತಿನ್ನದೆ ಉಪವಾಸವಿದ್ದ ಯೇಸುವಿಗೆ ಆಗ ಹಸಿವಾಯಿತು.

3ಆಗ ಪಿಶಾಚಿ, ನೀನು ದೇವರ ಪುತ್ರ ಎಂಬುದು ಸತ್ಯವಾದರೆ ಈ ಕಲ್ಲಿಗೆ ರೊಟ್ಟಿ ಆಗೆಂದು ಆಜ್ಞೆಮಾಡು, ಎಂದಿತು. 4ಅದಕ್ಕೆ ಯೇಸು, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ, 'ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ', ಎಂದು ಉತ್ತರಿಸಿದರು.

5ಬಳಿಕ ಪಿಶಾಚಿ ಯೇಸುವನ್ನು ಎತ್ತರಕ್ಕೆ ಕರೆದೊಯ್ದು ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕ್ಷಣಮಾತ್ರದಲ್ಲಿ ತೋರಿಸಿ, 6ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುವೆನು. ಇವೆಲ್ಲಾ ನನ್ನ ಅಧೀನದಲ್ಲಿವೆ. ನನ್ನ ಇಷ್ಟ ಬಂದವರಿಗೆ ಇವನ್ನು ಕೊಡಬಲ್ಲೆ. 7ನೀನು ನನಗೆ ಅಡ್ಡ ಬಿದ್ದೆಯಾದರೆ ಇದೆಲ್ಲಾ ನಿನ್ನದಾಗುವುದು, ಎಂದಿತು. 8ಅದಕ್ಕೆ ಯೇಸು ಪ್ರತ್ಯುತ್ತರವಾಗಿ, 'ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು; ಅವರೊಬ್ಬರಿಗೇ ಸೇವೆ ಸಲ್ಲಿಸು,' ಎಂದು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ, ಎಂದರು.

9ಅನಂತರ ಪಿಶಾಚಿ ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುತ್ತತುದಿಯ ಮೇಲೆ ನಿಲ್ಲಿಸಿ, ನೀನು ದೇವರ ಪುತ್ರನೆಂಬುದು ಸತ್ಯವಾದರೆ ಇಲ್ಲಿಂದ ಕೆಳಕ್ಕೆ ಧುಮುಕು. 10ಏಕೆಂದರೆ, ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನಿನ್ನನ್ನು ಕಾಪಾಡುವಂತೆ ದೇವರೇ ತಮ್ಮ ದೂತರಿಗೆ ಆಜ್ಞಾಪಿಸುವರು, ಮತ್ತು 11'ಇವರು, ನಿನ್ನ ಕಾಲುಗಳು ಕಲ್ಲುಗಳಿಗೆ ತಾಗದಂತೆ ನಿನ್ನನ್ನು ತಮ್ಮ ಕೈಗಳಲ್ಲಿ ಆತುಕೊಳ್ಳುವರು', ಎಂದಿತು. 12ಅದಕ್ಕೆ ಯೇಸು, 'ನಿನ್ನ ದೇವರು ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು,' ಎಂದು ಸಹ ಪವಿತ್ರಗ್ರಂಥ ಹೇಳುತ್ತದೆ, ಎಂದು ಉತ್ತರಕೊಟ್ಟರು. 13ಹೀಗೆ ಪಿಶಾಚಿ ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ ತಕ್ಕ ಕಾಲ ಬರುವ ತನಕ ಅವರನ್ನು ಬಿಟ್ಟು ಹೋಯಿತು.


ಚಿಂತನೆ: ಸರ್ವೇಶ್ವರ ಸ್ವಾಮಿ ನಮ್ಮಿಂದ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಬಯಸುತ್ತಾರೆ. ಅವರೇ ನಮ್ಮ ಪಾಲಕರು ಪೋಷಕರು ಎಂದು ಅವರಿಂದ ಪಡೆದ ಸಕಲ ಉಪಕಾರಗಳಿಗೂ ನಿರಂತರ ಕೃತಜ್ಞತೆಯನ್ನು ಸಲ್ಲಿಸಬೇಕು. ಈ ಕಾರಣ ಮೋಶೆ ಪ್ರಥಮ ಫಲವನ್ನು ದೇವರಿಗೆ ಸಮರ್ಪಿಸಿ ಉಪಕಾರ ಸ್ಮರಣೆಮಾಡಿರಿ ಎನ್ನುತ್ತಾನೆ. ಹಾಗೆಯೇ ಪೌಲನು ದೇವರಲ್ಲಿ ವಿಶ್ವಾಸವಿಡುವವನಿಗೆ ಆಶಾಭಂಗವಾಗುವುದಿಲ್ಲ ಎನ್ನುತ್ತಾನೆ. ಶುಭಸಂದೇಶದಲ್ಲಿ ಪ್ರಭು ಸೈತಾನನ ಆಮಿಷಕ್ಕೆ ಬಲಿಯಾಗದೆ ತಂದೆ ದೇವರಲ್ಲಿ ವಿಶ್ವಾಸವಿಟ್ಟು ಸೈತಾನನಿಗೆ ನಿರಾಶೆಯುಂಟು ಮಾಡುತ್ತಾರೆ. ದೇವರಲ್ಲಿ ಸ್ಥಿರ ವಿಶ್ವಾಸ ಉಳ್ಳವರು ಸೈತಾನನ ಕುಟಿಲ ತಂತ್ರೋಪಾಯಗಳನ್ನು ಮೆಟ್ಟಿ ನಿಲ್ಲಲು ಸಶಕ್ತರಾಗುತ್ತಾರೆ. 

ಚಿತ್ರಗೂಗಲ್‌ ಕೃಪೆ

© 'ದನಿಮಾಧ್ಯಮ ಮನೆ

No comments:

Post a Comment