ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ
ನೇರಳೆ /ಗುರು/ತಪಸ್ಸುಕಾಲದ
ಐದನೇ ವಾರ
1ನೇ ವಾಚನ - ಆದಿ 17: 3-9
ಕೀರ್ತನೆ - 1೦5: 4-9
ಶುಭಸಂದೇಶ - ಯೋವನ್ನ 8: 51-59
ಐಚ್ಛಿಕ ಸ್ಮರಣೆ - ಸಂತ ಸ್ಟ್ಯಾನಿಸ್ಲಾಸ್ (ಧರ್ಮಾ ಮತ್ತು ರ.ಸಾ)
1ನೇ ವಾಚನ - ಆದಿ 17: 3-9
3ಅಬ್ರಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. 4ದೇವರು ಅವನಿಗೆ, “ನಾನು ನಿನಗೆ ವಾಗ್ದಾನ ಮಾಡಿ ಹೇಳುತ್ತೇನೆ: ನೀನು ಅನೇಕ ರಾಷ್ಟ್ರಗಳಿಗೆ ಮೂಲ ಪುರುಷನಾಗುವೆ. 5ಇನ್ನು ಮುಂದೆ ನಿನಗೆ ‘ಅಬ್ರಾಮ’ ಎಂಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಟ್ರಗಳಿಗೆ ಮೂಲಪುರುಷನನ್ನಾಗಿ ನೇಮಿಸುವುದರಿಂದ ನಿನಗೆ ‘ಅಬ್ರಹಾಮ’ ಎಂಬ ಹೆಸರಿರುವುದು. 6ನಿನ್ನನ್ನು ಅತ್ಯಂತ ಫಲದಾಯಕ ಪುರುಷನನ್ನಾಗಿ ಮಾಡುತ್ತೇನೆ. ನಿನ್ನಿಂದ ರಾಷ್ಟ್ರಗಳೂ ರಾಜರುಗಳೂ ಉತ್ಪತ್ತಿಯಾಗುವರು. 7ನಿನಗೂ ನಿನ್ನ ಸಂತತಿಗೂ ನಾನು ದೇವರಾಗಿರುತ್ತೇನೆ. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ಚಿರಒಡಂಬಡಿಕೆಯಾಗಿ ಸ್ಥಿರಪಡಿಸುತ್ತೇನೆ. ನೀನು ಪ್ರವಾಸವಾಗಿರುವ ಈ ಕಾನಾನ್ ನಾಡೆಲ್ಲವನ್ನು ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ.” 8“ಇಷ್ಮಾಯೇಲನು ಇದ್ದಾನಲ್ಲವೆ? ನಿಮ್ಮ ಸಮ್ಮುಖದಲ್ಲಿ ಅವನು ಬಾಳಿದರೆ ಸಾಕಲ್ಲವೆ?” ಎಂದನು. 9ಇದಲ್ಲದೆ ದೇವರು ಅಬ್ರಹಾಮನಿಗೆ ಹೀಗೆಂದು ಹೇಳಿದರು: “ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು. ನೀನು ಮಾತ್ರವಲ್ಲ, ನಿನ್ನ ಸಂತತಿಯವರು ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು.
ಕೀರ್ತನೆ - 1೦5: 4-9
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು
4ಅರಸಿರಿ ಪ್ರಭುವನೂ ಆತನ ಶಕ್ತಿಯನೂ / ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು //
5ಆತನ ದಾಸ ಅಬ್ರಹಾಮನ ಸಂತತಿಯವರೇ / ಆತನಾರಿಸಿಕೊಂಡ ಯಕೋಬನ ವಂಶದವರೇ /
6ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು / ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು //
7ಪ್ರಭು ನಮ್ಮ ದೇವನೆಂಬುದು ಶ್ರುತ / ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
8ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು / ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು //
9ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು / ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು //
ಶುಭಸಂದೇಶ - ಯೋವನ್ನ 8: 51-59
51ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯಮರಣಕ್ಕೆ ತುತ್ತಾಗನು, ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ,” ಎಂದರು. 52“ನೀನು ದೆವ್ವಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, ‘ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು,’ ಎಂದು ಹೇಳುತ್ತಿರುವೆ; 53ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ಶ್ರೇಷ್ಟನೋ? ಆತನೂ ಸಾವಿಗೀಡಾದನು, ಪ್ರವಾದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆಂದು ನಿನ್ನ ಎಣಿಕೆ?” ಎಂದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು. 54ಯೇಸು ಪ್ರತ್ಯುತ್ತರವಾಗಿ, “ನನ್ನ ಘನತೆಗೌರವವನ್ನು ನಾನೇ ಸಾರಹೊರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆಗೌರವವನ್ನು ಸಾರುವವರಾದರೋ ನನ್ನ ಪಿತನು. ಆ ಪಿತನನ್ನು ಕುರಿತೇ ‘ಅವರು ನಮ್ಮ ದೇವರು’ ಎಂದು ನೀವು ಹೇಳಿಕೊಳ್ಳುತ್ತೀರಿ. 55ಆದರೆ ಅವರ ಅರಿವು ನಿಮಗಿಲ್ಲ; ನನಗಿದೆ. ಅವರ ಅರಿವು ನನಗಿಲ್ಲವೆಂದು ನಾನು ಹೇಳಿದೆಯಾದರೆ ನಿಮ್ಮಂತೆ ನಾನೂ ಸುಳ್ಳುಗಾರನಾಗುತ್ತೇನೆ.
ಅವರ ಅರಿವು ನನಗಿದೆ. ಅವರ ಮಾತನ್ನು ನಾನು ಪಾಲಿಸುತ್ತೇನೆ. 56ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವನೆಂದು ಹಿಗ್ಗಿದನು. ಆತನು ಅದನ್ನು ಕಂಡೂ ಆಯಿತು; ಹಿಗ್ಗಿಯೂ ಆಯಿತು,” ಎಂದು ಉತ್ತರಕೊಟ್ಟರು. 57ಯೆಹೂದ್ಯರು, “ನಿನಗಿನ್ನೂ ಐವತ್ತು ವರ್ಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯಾ?” ಎಂದರು. 58ಯೇಸು ಅವರಿಗೆ, “ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ,” ಎಂದು ಮರುನುಡಿದರು. 59ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟು ಹೋದರು.
ಚಿಂತನೆ
ದೇವರು ಜೀವಸ್ವರೂಪಿ, ಜೀವದ ಮೂಲ. ಜೀವಸ್ವರೂಪಿಯಾದ ದೇವರಿಂದ ಉದಯಿಸಿದ ಯಾವ ಜೀವಿಯೂ ಅಳಿದು ಹೋಗದಂತೆ ದೇವರು ನಮ್ಮನ್ನು ಶಾಶ್ವತ ಜೀವನಕ್ಕಾಗಿ ಉಂಟು ಮಾಡಿದ್ದಾರೆ. ಅವರು ಮೃತರ ದೇವರಲ್ಲ, ಜೀವಂತ ದೇವರು. ಕ್ರಿಸ್ತಯೇಸು ಸಹ ಬಂದದ್ದಾದರೋ ಜೀವನೀಡಲು, ಯಥೇಚ್ಚವಾಗಿ ನೀಡಲು (ಯೊವಾನ್ನ 10:10) ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು (ಯೊವಾನ್ನ 11:25-26) ಎಂದು ನುಡಿದ ಕ್ರಿಸ್ತಯೇಸುವಿನ ನುಡಿಗಳು ನಮ್ಮನ್ನು ಶಾಶ್ವತ ಜೀವನಕ್ಕೆ ಕರೆ ನೀಡುತ್ತದೆ. ನನಗೆ ಸಾವಿಲ್ಲ ಎಂದು ನುಡಿದ ಯೇಸುವಿನ ಮಾತುಗಳನ್ನು ಯೆಹೂದ್ಯರು ತಪ್ಪಾಗಿ ಅರ್ಥೈಸಿಕೊಂಡರು, ಅವರು ದೈಹಿಕವಾಗಿ ಅಥವಾ ಲೌಕಿಕವಾಗಿ ಸಾಯುವುದೇ ಇಲ್ಲ ಎಂದು ಭಾವಿಸಿದರು. ಯೇಸುವಾದರೋ ದೈಹಿಕ ಮರಣದ ನಂತರ ಲಭಿಸುವ ನಿತ್ಯಜೀವದ ಬಗ್ಗೆ ಮಾತನಾಡುತ್ತಿದ್ದರು. ನಿತ್ಯಜೀವವನ್ನು ನಾವು ಪ್ರವೇಶಿಸಬೇಕೆಂದರೆ ನಾವು ಲೌಕಿಕವಾಗಿ ಮರಣವನ್ನು ಹೊಂದಲೇಬೇಕು. ಮರಣ ನಮ್ಮ ಪಾಪದ ಫಲ, ಆದರೆ ನಿತ್ಯಜೀವನ ಯೇಸುವಿನ ಮರಣದ ಫಲ. ಆ ಶಾಶ್ವತ ಜೀವನಕ್ಕೆ ನಾವು ಬಾಧ್ಯಸ್ಥರಾಗುವಂತೆ ಅವರಲ್ಲಿ ವಿಶ್ವಾಸವಿರಿಸೋಣ.
- ಫಾದರ್ ಪೀಟರ್ ಚಿನ್ನಪ್ಪ
ಸಂತ ಸ್ಟ್ಯಾನಿಸ್ಲಾಸ್
ಇವೊತ್ತು ನಾವು ಹನ್ನೊಂದನೇ ಶತಮಾನದ ರಕ್ತಸಾಕ್ಷಿ ಸ್ಟ್ಯಾನಿಸ್ಲಾಸ್ ಸಿಝೆದೆನೊವ್ಸ್ಕಿನವರ
ಸ್ಮರಣೆ ಮಾಡುತ್ತಿದ್ದೇವೆ. ದೈವಭಕ್ತ ಕುಟುಂಬದಲ್ಲಿ ಕ್ರಿಸ್ತಶಕ 1030ರ
ಜುಲೈ 26ರಂದು ಜನಿಸಿದ ಸ್ಟ್ಯಾನಿಸ್ಲಾಸ್ ಗುರುತನದ ಶಿಕ್ಷಣ ಪಡೆದು ಗುರುವಾಗುತ್ತಾರೆ.
1072ರಲ್ಲಿ ಆ ಪ್ರಾಂತ್ಯದ ಬಿಷಪರು ನಿಧನರಾದಾಗ ಸ್ಟ್ಯಾನಿಸ್ಲಾಸ್ ಬಿಷಪರಾಗಿ ಆಯ್ಕೆಯಾಗುತ್ತಾರೆ.ಇವರು ತಮ್ಮ ವರ್ಚಸ್ಸಿನ ಕಾರಣ ಪೋಲೆಂಡ್ ದೇಶದ ರಾಜನ ಆಯ್ಕೆಯಲ್ಲಿ ಪ್ರಭಾವ ಬೀರುವವರಾಗಿರುತ್ತಾರೆ.
ಬಿಷಪರಾದಾಗ ಇವರಿಗೆ ಎರಡು ಹೊಣೆಗಳನ್ನು ನೀಡಲಾಗಿತ್ತು. ಮೊದಲನೆಯದು ಪೋಲೆಂಡಿಗೆ ವ್ಯಾಟಿಕನ್ ರಾಯಭಾರಿಯನ್ನು ಬರಮಾಡಿಕೊಳ್ಳುವುದು
ಹಾಗೂ ಮತ್ತೊಂದು ಪೋಲೆಂಡಿನ ಧರ್ಮಪ್ರಾಂತ್ಯವೊಂದರಲ್ಲಿ ಪೋಪರ ಪ್ರಾತಿನಿಧಿಕ ಬಿಷಪರಿಗೆ ಸ್ಥಾನ ಕಲ್ಪಿಸುವುದು.
ಡ್ಯೂಕ್ ಬೋಲೆಸ್ಲಾನನ್ನು ರಾಜನಾಗಿ ಮಾಡುವ ಪ್ರಕ್ರಿಯೆಯ ಷರತ್ತಾಗಿ ಈ ಎರಡನೆಯ ಅಂಶವನ್ನು
ಪರಿಗಣಿಸಲಾಗಿತ್ತು. 1076ರಲ್ಲಿ ಅವನು ರಾಜನಾದ. ಸ್ಟ್ಯಾನಿಸ್ಲಾಸ್ ನವರು ಹೊಸ ರಾಜನನ್ನು ಪುಸಲಾಯಿಸಿ ಪೋಲೆಂಡನ್ನು ಸಂಪೂರ್ಣ ಕ್ರೈಸ್ತ ದೇಶವಾಗಿಸುವ
ಯತ್ನವಾಗಿ ಬೆನೆಡಿಕ್ಟೈನ್ ಮಠಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು.
ಈ ನಡುವೆ ತಮ್ಮ ಧರ್ಮಪ್ರಾಂತ್ಯದ ಅಗತ್ಯಕ್ಕಾಗಿ ಒಂದು ತುಂಡುಭೂಮಿಯನ್ನು
ಅವರು ಪೀಟರ್ ಎಂಬುವನಿಂದ ಖರೀದಿಸುತ್ತಾರೆ. ಸ್ವಲ್ಪಕಾಲಾನಂತರ ಪೀಟರನ ಮರಣವಾಗಿ ಅವನ ಮಕ್ಕಳು ಜಮೀನು
ಪರಭಾರೆಯಾಗಿರುವ ವಿಚಾರಕ್ಕೆ ರಾಜನ ಬಳಿಗೆ ದೂರು ಒಯ್ಯುತ್ತಾರೆ. ರಾಜ ಆ ಮಕ್ಕಳ ಪರ
ತೀರ್ಪುನೀಡುತ್ತಾನೆ. ಜಮೀನನ್ನು ತಾವು ಖರೀದಿಸಿದ ಬಗ್ಗೆ ಬಿಷಪರ ಬಳಿ ಯಾವ ಪುರಾವೆಯೂ ಇರುವುದಿಲ್ಲ. ಮೂರುದಿನ ನಿರಂತರ ಪ್ರಾರ್ಥನೆಯಲ್ಲಿ
ತೊಡಗುವ ಬಿಷಪರು ಮೂರನೇ ದಿನ ಸಕಲ ವಸ್ತ್ರಭೂಷಿತರಾಗಿ ಮೆರವಣಿಗೆಯಲ್ಲಿ ಸಮಾಧಿಯತ್ತ ಸಾಗಿ ಅದನ್ನು
ಅಗೆಸಿ ಶವಪೆಟ್ಟಿಗೆಯಲ್ಲಿ ಮಲಗಿದ್ದ ಪೀಟರನನ್ನು ಎಬ್ಬಿಸಿ ಕರೆತಂದಾಗ ಇಡೀ ಆಸ್ಥಾನ
ಸ್ತಂಭೀಭೂತವಾಗುತ್ತದೆ. ಪೀಟರನು ತಾನು ಜಮೀನು ಮಾರಿದ್ದು ನಿಜ ಎಂದು ಹೇಳಿ ಮತ್ತೆ ಸಮಾಧಿಗೆ
ತೆರಳಿ ಚಿರನಿದ್ರೆಗೆ ಜಾರುತ್ತಾನೆ.
ಆನಂತರದಲ್ಲಿ ಮತ್ತೂ ಒಂದು ಘಟನೆ ನಡೆಯುತ್ತದೆ. ಈ ನಾಡಿನ ಸೈನಿಕರೆಲ್ಲ
ಹೊರನಾಡಿನ ಮೇಲೆ ಯುದ್ಧಕ್ಕೆ ಹೋಗಿರುವಾಗ ಇತ್ತ ನಗರಪಾಲಕರು ಅವರ ಹೊಲಗದ್ದೆತೋಟಗಳನ್ನೆಲ್ಲ ಸೂರೆ
ಮಾಡಿ ಅವರ ಹೆಂಡತಿಯರೊಂದಿಗೆ ಮಲಗುತ್ತಾರೆ. ಯುದ್ಧದಿಂದ ಹಿಂದಿರುಗಿದ ರಾಜನು ಹಾದರದ ಆರೋಪ
ಹೊರಿಸಿ ಆ ಹೆಂಗಳೆಯರನ್ನು ಶಿಕ್ಷಿಸಲೆತ್ನಿಸುವಾಗ ಮಧ್ಯಪ್ರವೇಶ ಮಾಡುವ ಸ್ಟ್ಯಾನಿಸ್ಲಾಸ್ ನವರು
ಮೊದಲು ನಿನ್ನ ಹಾದರದ ನಡತೆಯನ್ನು ತಿದ್ದಿಕೋ ಆನಂತರ ದೇಶದ ನಡವಳಿಕೆ ತಿದ್ದುವಿಯಂತೆ
ಎನ್ನುತ್ತಾರೆ. ಈ ಎರಡು ಮುಖಭಂಗಗಳಿಂದ ರಾಜ ಕೆರಳಿ ತನ್ನ ಆಪ್ತಸೈನಿಕರನ್ನು ಗುಟ್ಟಾಗಿ ಕರೆದು
ಬಿಷಪ್ ಸ್ಟ್ಯಾನಿಸ್ಲಾಸರನ್ನು ಚೂರುಚೂರಾಗಿ ಕತ್ತರಿಸಿ ಬಿಸಾಡುವಂತೆ ಆಜ್ಞಾಪಿಸುತ್ತಾನೆ.
- ಮರಿಜೋಸೆಫ್
No comments:
Post a Comment