11
ಮಾರ್ಚ್ 2019
ಸೋಮವಾರ, ತಪಸ್ಸುಕಾಲದ ಮೊದಲ ವಾರ
ಮೊದಲವಾಚನ:
ಯಾಜಕ 19: 1-2,11-18
ಯಾಜಕ 19: 1-2,11-18
1ಇಸ್ರಯೇಲ್ ಸಮಾಜದವರಿಗೆ ಹೀಗೆ ಆಜ್ಞಾಪಿಸುವಂತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು:2 “ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು. 11“ಕಳಬೇಡ; ಹುಸಿಯನುಡಿಯಲು ಬೇಡ; ಒಬ್ಬರನ್ನೊಬ್ಬರು ಮೋಸಗೊಳಿಸುವುದು ಬೇಡ. 12ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡ. ನಾನೇ ಸರ್ವೇಶ್ವರ. 13“ಮತ್ತೊಬ್ಬನನ್ನು ಬಲಾತ್ಕರಿಸಬೇಡ; ಅವನ ಸೊತ್ತನ್ನು ಅಪಹರಿಸಬೇಡ. ಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಡ. 14ಕಿವುಡರನ್ನು ದೂಷಿಸಬೇಡ; ಕುರುಡರು ನಡೆಯುವ ದಾರಿಯಲ್ಲಿ ಎಡರು ಕಲ್ಲನ್ನು ಇಡಬೇಡ. ನಿನ್ನ ದೇವರಲ್ಲಿ ಭಯಭಕ್ತಿಯಿರಲಿ. ನಾನೇ ಸರ್ವೇಶ್ವರ. 15“ವ್ಯಾಜ್ಯತೀರಿಸುವಾಗ ಅನ್ಯಾಯವಾದ ತೀರ್ಪನ್ನು ಕೊಡಬೇಡ. ಬಡವನ ಬಡತನ ವನ್ನಾಗಲಿ, ದೊಡ್ಡವನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದ ತೀರ್ಪನ್ನು ಕೊಡು. 16“ನಿನ್ನ ಜನರ ನಡುವೆ ಚಾಡಿಕೋರನಾಗಿ ತಿರುಗಾಡಬೇಡ; ಮತ್ತೊಬ್ಬನಿಗೆ ಮರಣಶಿಕ್ಷೆ ಆಗಲೇಬೇಕೆಂದು ಛಲ ಹಿಡಿಯಬೇಡ. ನಾನೇ ಸರ್ವೇಶ್ವರ. 17“ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು. 18ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ, ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನು ಸರ್ವೇಶ್ವರ.
ಕೀರ್ತನೆ 19: 8, 9, 10, 15
ಸ್ವಾಮಿ ಸರ್ವೇಶ್ವರಾ, ನಿಮ್ಮ ಮಾತುಗಳೇ ಆತ್ಮ ಮತ್ತು ಜೀವ
8ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ
9ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ ಶಾಶ್ವತ, ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ
10ಅಪೇಕ್ಷಣೀಯವಾದುವವು ಚಿನ್ನ
ಅಪರಂಜಿಗಿಂತ ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ
15ನಿನಗೊಪ್ಪಿಗೆಯಾಗಲಿ ನನ್ನ
ಬಾಯಮಾತು,
ಹೃದಯಧ್ಯಾನ
ನೀನೆನ್ನ ಪ್ರಭು,
ನನಗೆ
ಉದ್ಧಾರಕ, ನನಗಾಶ್ರಯ ಧಾಮ
ಶುಭಸಂದೇಶ:
ಮತ್ತಾಯ 25: 31-46
ಮತ್ತಾಯ 25: 31-46
31ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ
ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. 32ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು
ಬೇರ್ಪಡಿಸುವನು.
33ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ
ಇರಿಸುವನು.
34ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, 'ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ
ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ. 35ಏಕೆಂದರೆ, ನಾನು
ಹಸಿದಿದ್ದೆ,
ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು
ಕೊಟ್ಟಿರಿ;
ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ. 36ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು
ಕೊಟ್ಟಿರಿ.
ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ,' ಎಂದು ಹೇಳುವನು. 37ಅದಕ್ಕೆ ಆ ಸಜ್ಜನರು, 'ಸ್ವಾವಿ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು? 38ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು? 39ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು
ಸಂಧಿಸಲು ಬಂದೆವು?'
ಎಂದು ಕೇಳುವರು. 40ಆಗ ಅರಸನು ಪ್ರತ್ಯುತ್ತರವಾಗಿ, 'ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ
ಕನಿಷ್ಟನಾಗಿರಲಿ,
ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,' ಎನ್ನುವನು.
41ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, 'ಶಾಪಗ್ರಸ್ತರೇ, ನನ್ನಿಂದ
ತೊಲಗಿರಿ.
ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. 42ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು
ಕೊಡಲಿಲ್ಲ;
ಅಪರಿಚಿತನಾಗಿದ್ದೆ, ನನಗೆ ಆಶ್ರಯ ನೀಡಲಿಲ್ಲ. 43ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು
ಕೊಡಲಿಲ್ಲ;
ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ,' ಎಂದು ಹೇಳುವನು. 44ಅದಕ್ಕೆ ಅವರು ಕೂಡ, 'ಸ್ವಾವಿ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ
ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ
ಮತ್ತು ಬಂಧಿಯಾಗಿದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ಎಂದು ಪ್ರಶ್ನಿಸುವರು. 45ಅದಕ್ಕೆ ಪ್ರತ್ಯುತ್ತರವಾಗಿ ಅರಸನು, 'ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಠನಾಗಿರಲಿ, ನೀವು ಹಾಗೆ
ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,' ಎನ್ನುವನು.
46ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು” ಎಂದು ಹೇಳಿದರು ಸ್ವಾಮಿ.
ಚಿಂತನೆ: ಸತ್ಕಾರ್ಯಗಳಿಲ್ಲದ ಧರ್ಮ, ಧರ್ಮವೇ ಅಲ್ಲ. ಸತ್ಕಾರ್ಯವೇ ಧರ್ಮದ ಸುಭದ್ರವಾದ ಬುನಾದಿ. ಎಲ್ಲವೂ
ಮಾಯವಾಗಿ ಹೋಗುತ್ತವೆ ಆದರೆ ಧಾನ ಧರ್ಮ ಮಾತ್ರ ಪ್ರತಿಫಲವನ್ನು ನೀಡುತ್ತವೆ. ಅವು ವ್ಯರ್ಥವಾಗಿ
ಹೋಗುವುದೇ ಇಲ್ಲ. ಕಷ್ಟ,
ನಷ್ಟ, ದುಃಖದಲ್ಲಿರುವವರಿಗೆ
ಯಾರು ಸಹಾಯ ಹಸ್ತ ನೀಡುತ್ತಾರೋ ಅವರು ನಿತ್ಯ ಸಂಭಾವನೆಯನ್ನು ಪಡೆಯುತ್ತಾರೆ. ಅವರು ಈ ಲೋಕದಲ್ಲಿ
ಮಾತ್ರವಲ್ಲ ಮರುಲೋಕದಲ್ಲಿಯೂ ಸನ್ಮಾನಕ್ಕೆ ಪಾತ್ರರಾಗುತ್ತಾರೆ. ಇಂದಿನ ವಾಚನಗಳು ನಮಗಿದನ್ನು
ನೆನೆಪಿಸುತ್ತವೆ.
ಚಿತ್ರ: ಗೂಗಲ್ ಕೃಪೆ
© 'ದನಿ' ಮಾಧ್ಯಮ ಮನೆ
No comments:
Post a Comment