12 ಮಾರ್ಚ್ 2019

12 ಮಾರ್ಚ್ 2019
ಮಂಗಳವಾರ, ಸಂತ ಥಿಯೊಫೇನ್ಸ್

ಮೊದಲವಾಚನ: 
ಯೆಶಾಯ 55: 10-11
10ಸ್ವಾಮಿ ಸರ್ವೇಶ್ವರ ಹೀಗೆನ್ನುತ್ತಾರೆ: ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. 11ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಕೀರ್ತನೆ 34: 4-5, 6-7, 16-17, 18-19
ಸಜ್ಜನನಿಗೊದಗುವ ಸಂಕಟಗಳು ವಿಪರೀತ ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ

4ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು
5ಆತನತ್ತ ತಿರುಗಿದ ಮುಖ ಅರಳುವುದು ಲಜ್ಜೆಯಿಂದೆಂದಿಗು ಕುಂದಿಹೋಗದು
6ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು ಸರ್ವಾಪತ್ತಿನಿಂದವನು ಮುಕ್ತಗೊಂಡನು
7ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು ಕಾಯುವನು ಪ್ರಭುವಿನ ದೂತನೆ ಬಂದಿಳಿದು
16ದುರ್ಜನರಿಗಾದರೋ ಪ್ರಭು ವಿಮುಖನು ಅವರ ಹೆಸರನು ಧರೆಯಿಂದ ಅಳಿಸುವನು
17ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ ನೆರವೀವನವರ ಕಷ್ಟನಿವಾರಣೆಗೆ
18ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ
19ಸಜ್ಜನನಿಗೊದಗುವ ಸಂಕಟಗಳು ವಿಪರೀತ ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ

ಶುಭಸಂದೇಶ: 
ಮತ್ತಾಯ 6: 7-15
7"ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. 8ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ

9ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ:

10 "ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ,
    ನಿಮ್ಮ ಪವಿತ್ರ ನಾಮ ಪೂಜಿತವಾಗಲಿ;
    ನಿಮ್ಮ ಸಾಮ್ರಾಜ್ಯ ಬರಲಿ;
    ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ
    ಜಗತ್ತಿನಲ್ಲಿಯೂ ನೆರವೇರಲಿ.
 11ನಮ್ಮ ಅನುದಿನದ ಆಹಾರವನ್ನು
   ನಮಗಿಂದು ಕೊಡಿ.
 12ನಮಗೆ ತಪ್ಪು ಮಾಡಿದವರನ್ನು ನಾವು
   ಕ್ಷಮಿಸುವ ಪ್ರಕಾರ
   ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ.
 13ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ;
   ಕೇಡಿನಿಂದ ನಮ್ಮನ್ನು ರಕ್ಷಿಸಿರಿ.

14"ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. 15ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು. "


ಚಿಂತನೆ: ದೇವರ ವಾಕ್ಯ ಎಂದೂ ನಿಷ್ಫಲವಾಗುವುದಿಲ್ಲ ಅದು ನಿರಂತರವೂ ಫಲಭರಿತವಾದುದು. ಹಾಗೆಯೇ ನೈಜ ಪ್ರಾರ್ಥನೆ ಭುವಿಯಾಕಾಶಗಳನ್ನೂ ಬದಲಿಸಬಲ್ಲದು. ನೈಜ ಪ್ರಾರ್ಥನೆಯಲ್ಲಿ ಪೂರ್ಣ ಪ್ರೀತಿ ಹಾಗೂ ಕ್ಷಮೆ ಇರುತ್ತದೆ. ಯಾರು ಇತರರನ್ನು ಉದಾರವಾಗಿ ಕ್ಷಮಿಸುತ್ತಾರೋ ದೇವರೂ ಸಹ ಅವರನ್ನು ಉದಾರವಾಗಿ ಕ್ಷಮಿಸುತ್ತಾರೆ ಎಂದು ಇಂದಿನ ಶುಭಸಂದೇಶದಲ್ಲಿ ಪ್ರಭು ಸ್ಪಷ್ಟಪಡಿಸುತ್ತಾರೆ. ಪ್ರಾರ್ಥನೆ ನಮ್ಮ ಬದುಕನ್ನೇ ಬದಲಿಸುವ ಪ್ರಬಲ ಸಾಧನ. ಅದು ನಮ್ಮ ಮತ್ತು ದೇವರ ಸಂಬಂಧವನ್ನೂ, ನಮ್ಮ ಮತ್ತು ನಮ್ಮ ನೆರೆಹೊರೆಯವರ ಸಂಬಂಧವನ್ನೂ ಸಹ ಬೆಸೆಯುತ್ತದೆ. ಹೊಸ ಹಾಗೂ ನೈಜ ಸಂಬಂಧಗಳನ್ನು ಸೃಷ್ಟಿಸುತ್ತದೆ. 


ಚಿತ್ರಗೂಗಲ್‌ ಕೃಪೆ

© 'ದನಿಮಾಧ್ಯಮ ಮನೆ

No comments:

Post a Comment