13 ಮಾರ್ಚ್ 2019

13 ಮಾರ್ಚ್ 2019
ಬುಧವಾರ, ಸಂತ ಯುಫ್ರೇಸಿಯ

ಮೊದಲವಾಚನ: 
ಯೋನ 3: 1-10
1ಯೋನನಿಗೆ ಸ್ವಾಮಿಯ ವಾಣಿ ಪುನಃ ಕೇಳಿಸಿತು: 2ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು. 3ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. 4ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು. 5 ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊಂಡರು.

6 ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. 7ಕೂಡಲೇ ತನ್ನ ಪ್ರಜೆಗಳಿಗೆ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. 8ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. 9ಹೀಗೆ ಮಾಡಿದ್ದೇ ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು10 ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.

ಕೀರ್ತನೆ 51: 3-4, 12-13, 18-19
ಕೃಪಾಳು, ದೇವಾ, ಕರುಣಿಸೆನ್ನನು, ಅಳಿಸೆನ್ನ ದೋಷವನು

3ಒಪ್ಪಿಕೊಂಡೆನಿದೋ, ನಾನೇ ಅಪರಾಧಿ ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ
4ಹೌದು ದೇವಾ, ನಿನಗೆ ದ್ರೋಹವೆಸಗಿದೆ ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ ನಿನ್ನ ನಿರ್ಣಯವು ನ್ಯಾಯಯುತ ನೀ ನೀಡುವ ತೀರ್ಪು ನಿರ್ಲಿಪ್ತ.
12ಜೀವೋದ್ಧಾರವನು ಮರಳಿ ಸವಿಯುವಂತೆ ಮಾಡು ವಿಧೇಯನಾಗಿ ನಡೆವ ಸಿದ್ಧ ಮನಸ್ಸನು ನೀಡು
13ಬೋಧಿಸುವೆನಾಗ ನಿನ್ನ ಮಾರ್ಗವನು ದುರುಳರಿಗೆ ತಿರುಗಿಕೊಳ್ವರಾಗ ದ್ರೋಹಿಗಳು ನಿನ್ನ ಕಡೆಗೆ
18ಸಿಯೋನಿಗೆ ದೇವಾ, ಶುಭವನು ಕರುಣಿಸು ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು
19ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು

ಶುಭಸಂದೇಶ: 
ಲೂಕ 11: 29-32
29ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. 30ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು.

31ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. 32ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.


ಚಿಂತನೆ: ವಿಶ್ವಾಸ ಸಕ್ರಿಯವಾಗಿರಬೇಕು, ಅದು ನಿರಂತರವೂ ಸದೃಢಗೊಳ್ಳುತ್ತಿರಬೇಕು. ವಿಶ್ವಾಸ ಸದೃಢವಾಗಿದ್ದರೆ ತಪ್ಪಿನ ಅರಿವಾಗುತ್ತದೆ. ನಿನೆವೆಯ ಜನ ಪ್ರವಾದಿಯ ಮಾತಿಗೆ ಕಿವಿಗೊಟ್ಟು ಮನಪರಿವರ್ತನೆಗೆ ಗೋಣಿತಟ್ಟನ್ನು ಉಟ್ಟುಕೊಂಡರು. ದೇವರು ಅವರ ತಪ್ಪನ್ನು ಮನ್ನಿಸಿ ಆಲಂಗಿಸಿ ಕೊಂಡರು. ಆದರೆ ಇಸ್ರೇಲರ ಮುಂದೆ ಮಾನವ ಕುಲದ ರಕ್ಷಕರಾದ ಪ್ರಭುವೇ ನಿಂತಿದ್ದರೂ ಅವರು ಅವರಲ್ಲಿ ವಿಶ್ವಾಸವಿಡುವ ಬದಲು ಅದ್ಭುತಗಳನ್ನು ಬಯಸಿದರು. ಪ್ರಭು ಅವರನ್ನು ಖಂಡಿಸಿ ಮನಪರಿವರ್ತನೆಗೆ ಕರೆ ನೀಡುತ್ತಾರೆ. 


ಸಂತ ಯುಫ್ರೆಸಿಯಾ

 Detail | <em srcset=ಇವರು ಸುಮಾರು 380ರಲ್ಲಿ ಕಾನ್ಸ್ಟೆಂಟಿನೋಪಲ್ನಲ್ಲಿ ಜನಿಸಿದರು. ಇವರ ತಂದೆ ಅಂಟಿಗೋನ್, ಅಂದಿನ ರಾಜಾಧಿಪತಿಯಾದ ಲೆಯೋಡೋರ್ ಆಸ್ಥಾನದಲ್ಲಿ ಉನ್ನತ ಸ್ಥಾನದಲ್ಲಿದ್ದರು. ತಾಯಿ ತನ್ನ 22ನೇ ವಯಸ್ಸಿನಲ್ಲೇ ವಿಧವೆಯಾದಳು ಹಾಗೂ ಮರುಮದುವೆಗೆ ಒಪ್ಪದೆ, ತನ್ನ ಪಕ್ಕದಲ್ಲಿದ್ದ ಕನ್ಯಾಸ್ತ್ರೀ ಮಠಕ್ಕೆ ಸೇರಿಕೊಂಡಳು, ಐದು ವರ್ಷದ ಯುಫ್ರೆಸಿಯಾ ತನ್ನ ತಾಯಿಯೊಂದಿಗೆ ಮಠದಲ್ಲೇ ಬೆಳೆದಳು. ಕೆಲಕಾಲದ ನಂತರ ಯೌವನದ ಯುಫ್ರೆಸಿಯಾ ತನ್ನ ಕೈಗಳಲ್ಲಿ ಪ್ರಭುಕ್ರಿಸ್ತರ ಫೋಟೋ ಹಿಡಿದು ಗೌರವದಿಂದ ಮುತ್ತಿಡುತ್ತ ನಾನು ಪ್ರಭುಕ್ರಿಸ್ತರಿಗೆ ನನ್ನ ಜೀವವನೇ ಸಂಪೂರ್ಣವಾಗಿ ಅರ್ಪಿಸುತ್ತೇನೆಂದು ವಾಗ್ದಾನ ಮಾಡುತ್ತಾಳೆ. ತನ್ನ ಸರಳ ಹಾಗೂ ಪ್ರಾರ್ಥನಾ ಜೀವನದಿಂದ ಎಲ್ಲಾ ಶೋಧನೆಗಳನ್ನು ಜಯಿಸಿ, ವಿಜಯಶಾಲಿಯಾಗಿ ಸಂತ ಮಾರ್ಗದಲ್ಲಿ ನಡೆದು 410ರಲ್ಲಿ ಮರಣ ಹೊಂದಿದರು.


ಚಿತ್ರಗೂಗಲ್‌ ಕೃಪೆ

© 'ದನಿಮಾಧ್ಯಮ ಮನೆ

No comments:

Post a Comment