13 ಏಪ್ರಿಲ್ 2019

ನೇರಳೆ/ ಶನಿ/ತಪಸ್ಸುಕಾಲದ ಐದನೇ ವಾರ         
1ನೇ  ವಾಚನ  -  ಯೆಜೆ  3721-28    
ಕೀರ್ತನೆ  -  ಯೆರೆ  311೦-13            
ಶುಭಸಂದೇಶ - ಯೊವಾನ್ನ 11: 45-57 

ಐಚ್ಛಿಕ  ಸ್ಮರಣೆ  -  ಸಂತ  ಮಾರ್ಟಿನ್      ಮೊದಲನೆಯವರು  (ವಿ.ಗು)  (.ಸಾ)   

1ನೇ  ವಾಚನ  -  ಯೆಜೆ  37:  21-28    
21 : ಇದನ್ನೂ ಅವರಿಗೆ ನುಡಿ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಗೋ, ಇಸ್ರಯೇಲರು ವಶವಾಗಿರುವ ಜನಾಂಗಗಳಿಂದ ನಾನು ಅವರನ್ನು ಉದ್ಧರಿಸಿ, ಎಲ್ಲ ಕಡೆಯಿಂದಲು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು.
22 : ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ, ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿರರು; ಭಿನ್ನರಾಜ್ಯದವರಾಗಿ ಇರರು.
23 : ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯ ವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ, ತಮ್ಮನ್ನು ಇನ್ನು ಮುಂದೆ ಹೊಲೆಗೆ ಹೊಯ್ದುಕೊಳ್ಳರು. ಅವರು ಪಾಪ ಮಾಡಿಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.
24 : ನನ್ನ ದಾಸ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗು ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು.
25 : ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು.
26 : ನಾನು ಅವರೊಂದಿಗೆ ಶಾಂತಿಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು.
27 : ಹೌದು, ನನ್ನ ವಾಸಸ್ಥಾನವು ಅವರ ಮಧ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.
28 : ನನ್ನ ಪವಿತ್ರಾಲಯ ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ವಿೂಸಲು ಮಾಡಿಕೊಂಡಾತ ಸರ್ವೇಶ್ವರ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವುದು.

ಕೀರ್ತನೆ  -  ಯೆರೆ  31:  1೦-13  
ಕುರಿಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ       
10 : ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ: ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ: ಇಸ್ರಯೇಲರನ್ನು ಚದುರಿಸಿದಾತ ಕುರಿಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ.
11 : ಸರ್ವೇಶ್ವರ ಯಕೋಬರ ವಿಮೋಚಕ ಅವರನ್ನು ಅವರಿಗಿಂತ ಬಲಿಷ್ಠರ ಕೈಯಿಂದ ಬಿಡಿಸಿದಾತ.
12 : ಅವರು ಬಂದು ಹಾಡುವರು ಸಿಯೋನ್ ಶಿಖರದಲ್ಲಿ ಬರುವರು ಪ್ರವಾಹ ಪ್ರವಾಹವಾಗಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕುರಿ, ಕುರಿಮರಿ, ಸರ್ವೇಶ್ವರನ ವರದಾನಗಳನ್ನು ಅನುಭವಿಸಲಿಕ್ಕಾಗಿ. ಹದವಾಗಿ ನೀರುಹಾಯಿಸಿದ ಉದ್ಯಾನವನದಂತೆ ಅವರ ಜೀವನ ಇನ್ನು ಅವರಿಗಿರದು ವ್ಯಸನ.
13 : ಆಗ ನಾಟ್ಯವಾಡಿ ನಲಿವಳು ಯುವತಿ ಹರ್ಷಿಸುವರು ಯುವಕರು ಮುದುಕರು ಜೊತೆಯಾಗಿ. ಅವರ ದುಃಖವನ್ನು ಸಂತೋಷವಾಗಿಸುವೆನು ವ್ಯಸನ ತೊರೆದು ಆನಂದಿಸುವಂತೆ ಅವರನ್ನು ಸಂತೈಸುವೆನು.

ಶುಭಸಂದೇಶ - ಯೊವಾನ್ನ 1145-57 
45: ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು.
46: ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು.
47: ಮುಖ್ಯ ಯಾಜಕರೂ ಫರಿಸಾಯರೂನ್ಯಾಯಸಭೆಯನ್ನು ಕರೆದರು. “ಈಗ ನಾವೇನು ಮಾಡೋಣ? ಮನುಷ್ಯನು ಎಷ್ಟೋ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ;
48 : ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು. ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನೂ ನೆಲಸಮ ಮಾಡುವರು,” ಎಂದು ವಾದಿಸಿದರು.
49: ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನು,
50: “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ನುಡಿದನು.
51 ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ವರ್ಷ ಆತನು ಪ್ರಧಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು.
52: ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಮಾತಿನ ಇಂಗಿತ.
53: ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು.
54: ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು.
55: ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ದೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು.
56: ಯೇಸುವನ್ನು ನೋಡಬೇಕೆಂಬ ಆಶೆ ಅವರಿಗಿತ್ತು. “ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?” ಎಂದು ಮಹಾದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು.
57: ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.

ಚಿಂತನೆ
ದಿನಕಳೆದಂತೆ ಯೇಸುವಿನ ಮರಣಕ್ಕೆ ವೇದಿಕೆ ಸಿದ್ಧವಾಗುತ್ತಿರುವುದನ್ನು ಗಮನಿಸಬಹುದು. ಯೆಹೂದ್ಯ ಮುಖಂಡರ ಮನದಲ್ಲಿ ದ್ವೇಷ ಹೆಪ್ಪುಗಟ್ಟುತ್ತಿದೆ. ಕೊಲ್ಲಲೇಬೇಕು ಎಂಬ ನಿರ್ಧಾರ ದೃಢವಾಗುತ್ತಿದೆ. ಮರಣದಂಡನೆಗೆ ತಕ್ಕ ಆರೋಪಗಳನ್ನು ಹೆಣೆಯಲಾಗಿದೆ. ಆದರೆ ಇದಕ್ಕೆ ಚಾಲನೆ ನೀಡುವವರು ಬೇಕಾಗಿದ್ದಾರೆ. ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತ ಎನ್ನುವ ಮೂಲಕ ಪ್ರಧಾನ ಯಾಜಕ ಕಾಯಫನು ಯೇಸುವಿನ ಮರಣದಂಡನೆಯ ಮಹಾಪ್ರಕ್ರಿಯೆಗೆ ಅನುಮೋದನೆ ನೀಡುವನು. ಆದರೆ ಮರಣದಂಡನೆ ಯಾವುದೇ ಮಾನವ ಶಕ್ತಿ ಯೇಸುವಿನ ಮೇಲೆ ಹೇರಿದ ಶಿಕ್ಷೆಯಾಗಿರಲಿಲ್ಲ. ಇದು ದೇವರ ಉನ್ನತ ಯೋಜನೆ ಮತ್ತು ಕ್ರಿಸ್ತಯೇಸು ಸ್ವಇಚ್ಚೆಯಿಂದ ಆರಿಸಿಕೊಂಡ ರಕ್ಷಣೆಯ ಮಾರ್ಗ. ಸಮಸ್ತ ಜನತೆ ಎಂದರೆ ಇಡೀ ಮಾನವಕುಲ ಮತ್ತು ಸರ್ವಸೃಷ್ಟಿ ಪಾಪದ ಶಿಕ್ಷೆಯಿಂದ ಪಾರಾಗಲು ಯೇಸು ಕೈಗೊಂಡ ಆತ್ಮಾರ್ಪಣೆ. ದಿನವೂ ಅನೇಕರು ಕಾಯಿಲೆಯಿಂದ, ಅಪಘಾತಗಳಿಂದ, ವಯೋವೃದ್ಧರಾಗಿ ಸಾವನ್ನಪ್ಪುತ್ತಾರೆ. ಇನ್ನು ಕೆಲವರು ಯಾವುದೇ ಕಾರಣಗಳಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಉದಾತ್ತ ಉದ್ಧೇಶ ಮತ್ತು ಪರರ ಒಳಿತಿಗಾಗಿ ಸಾಯುವವರು ಬಹಳ ವಿರಳ. ಕ್ರಿಸ್ತಯೇಸು ಸರ್ವರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧರಾದರು.
- ಫಾದರ್ ಪೀಟರ್ ಚಿನ್ನಪ್ಪ

ಸಂತ ಒಂದನೇ ಮಾರ್ಟಿನ್
ಬೈಜಾಂಟೈನ್ ಚಕ್ರಾಧಿಪತ್ಯದಲ್ಲಿ ಪಿತೃಪ್ರಧಾನ ಸಂಸ್ಕೃತಿ ಆಚರಣೆಯಲ್ಲಿದ್ದು ಅರಸನೇ ನಾಡಿನ ಹಾಗೂ ಧರ್ಮದ ಮುಖ್ಯಸ್ಥನಾಗಿರುತ್ತಿದ್ದ. ಸುಮಾರು ಏಳನೇ ಶತಮಾನದಲ್ಲಿ ಅಲೆಕ್ಸಾಂಡ್ರಿಯಾ (ಇಂದಿನ ಈಜಿಪ್ಟ್), ಅಂತಿಯೋಕ ಮತ್ತು ಜೆರುಸಲೇಮ್ ಗಳು ಮುಸ್ಲಿಮರ ತೆಕ್ಕೆಗೆ ಹೋಗಿದ್ದಾಗಲೂ ಪೌರ್ವಾತ್ಯ ಕ್ರೈಸ್ತರಿಗೆ ಚಕ್ರವರ್ತಿಯೇ ಧಾರ್ಮಿಕ ತಂದೆಯೆನಿಸಿದ್ದ.
ಯೇಸುವಿಗೆ ಮನುಷ್ಯಾಲೋಚನೆ ಮತ್ತು ದೈವಾಲೋಚನೆಗಳಿದ್ದವರು ಎಂಬ ಜನಪ್ರಿಯ ನಂಬುಗೆಯನ್ನು ಅರಸನು ತಿರಸ್ಕರಿಸಿ ಯೇಸು ದೇವಸ್ವರೂಪಿಯಾದ್ದರಿಂದ ಅವರಿಗೆ ದೈವಚಿತ್ತವೊಂದೇ ಇತ್ತೆಂದು ಫರ್ಮಾನು ಹೊರಡಿಸಿದ್ದನು. ಆದರೆ ಧರ್ಮಸಭೆಯ ಪ್ರಕಾರ ಯೇಸುವಿಗೆ ಮನುಷ್ಯಸ್ವಭಾವ ಹಾಗೂ ದೈವಸ್ವಭಾವ ಎರಡೂ ಇದ್ದುದರಿಂದ ಅವರು ಮನುಷ್ಯರಂತೆಯೂ ಯೋಚಿಸುತ್ತಿದ್ದರು ದೇವರಂತೆಯೂ ಯೋಚಿಸುತ್ತಿದ್ದರು.
ಇಂಥಾ ಒಂದು ಸಂದರ್ಭದಲ್ಲಿ ಕ್ರಿಸ್ತಶಕ 649ರಲ್ಲಿ ಮಾರ್ಟಿನರು ಜಗದ್ಗುರುಗಳಾಗಿ ಆಯ್ಕೆಯಾದರು. ಅಧಿಕಾರ ವಹಿಸಿಕೊಂಡ ಸ್ವಲ್ಪಸಮಯದಲ್ಲೇ ಅವರು ಅರಸನ ಅನುಮತಿಗಾಗಿ ಕಾಯದೇ ಲ್ಯಾಟೆರನ್ ನಲ್ಲಿ ಆಪ್ತಮಂಡಲಿಯ ಸಭೆ ಕರೆದು ಧರ್ಮದಲ್ಲಿ ರಾಜನ ಹಸ್ತಕ್ಷೇಪವನ್ನು ಖಂಡಿಸಿ ಅರಸನೋಲೆಗಳಿಗೆ ಬೀಗ ಜಡಿದರು.
ಈ ವಿಷಯ ತಿಳಿದಿದ್ದೇ ರಾಜ ಕೆಂಡಾಮಂಡಲವಾದ. ತನ್ನ ಸೈನಿಕರನ್ನು ಕಳಿಸಿ ಪೋಪರನ್ನು ಬಂಧಿಸಿ ತರುವಂತೆ ಆಜ್ಞೆ ಹೊರಡಿಸಿದ. ಬಂಧಿತ ಪೋಪರು ಆಗಮಿಸಿದಾಗ ಅವರನ್ನು ಕೂಡಲೇ ಬಂಧೀಖಾನೆಗೆ ಕಳಿಸಿ ಮೂರು ತಿಂಗಳು ಕೊಳೆಹಾಕಿದ. ಕೊಳಕು ಬಂಧೀಖಾನೆ, ಕೊಳಕು ಊಟ, ಕೊಳಕು ನೀರು, ಅತೀವ ಚಳಿ. ಪೋಪ್ ಮಾರ್ಟಿನರಿಗೆ ಬೇಧಿ ಶುರುವಾಯಿತು. ಸೂಕ್ತ ಶುಶ್ರೂಷೆ ಸಿಗಲಿಲ್ಲ. ಆರುತಿಂಗಳ ಬಂಧೀವಾಸದ ನಂತರ ಅವರನ್ನು ಕ್ರಿಮಿಯಾ ದ್ವೀಪಕ್ಕೆ ಗಡೀಪಾರು ಮಾಡಲಾಯಿತು. ಎರಡು ವರ್ಷಗಳ ಕಾಲ ಅಲ್ಲಿನ ವನವಾಸ ಮತ್ತು ಯಾತನೆಗಳ ಕುರಿತು ಅವರು ಬರೆದ ಪತ್ರಗಳನ್ನು ಓದಿದರೆ ಕರುಳು ಚುರುಕೆನ್ನುತ್ತದೆ. ಜೊತೆಗಾದ ಪಾದ್ರಿಗಳಾರೂ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಲಿಲ್ಲ ಎಂಬುದು ನೋವಿನ ವಿಷಯ.
ಹೀಗೆ ಚಕ್ರವರ್ತಿಯನ್ನು ಧಿಕ್ಕರಿಸಿ ಧರ್ಮಸಭೆಯ ಮೌಲ್ಯವನ್ನು ಎತ್ತಿಹಿಡಿದ ಜಗದ್ಗುರುಗಳು ದಾರುಣ ಅಂತ್ಯ ಕಂಡರು.

- ಮರಿಜೋಸೆಫ್

No comments:

Post a Comment