ಶುಕ್ರವಾರ, ಸಂತ ಜಕರಿ
ಮೊದಲವಾಚನ: ಯೆಜೆ 18: 21-28
“ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲ ವಿಧಿಗಳನ್ನು ಕೈಗೊಂಡು, ನ್ಯಾಯ ನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು. 22 ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದು. ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು. 23 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ದುಷ್ಟನ
ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. 24 ಆದರೆ ಶಿಷ್ಯನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು.
25 “ಆದರೆ ನೀವು, ‘ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೆ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ. 26 ಶಿಷ್ಟನು
ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು. 27 ದುಷ್ಟನು
ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ,
ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28 ಅವನು
ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನು, ಖಂಡಿತ ಜೀವಿಸುವನು.
ಕೀರ್ತನೆ 130: 1-2, 3-4, 5-7, 7-8
ಪಾಪಗಳ ನೀ ಪಟ್ಟಿಮಾಡಿದೆಯಾದರೆ
ಪ್ರಭೂ
ನಿನ್ನ ಮುಂದೆ ಯಾರು ತಾನೇ ನಿಲ್ಲಬಲ್ಲರು
ವಿಭೂ?
1:
ಅಂತರಾಳದಿಂದ ಪ್ರಭು, ಮೊರೆಯಿಡುತ್ತಿರುವೆ ನಿನಗೆ
2:
ಆಲಿಸು, ಕಿವಿಗೊಡು ಪ್ರಭೂ, ನನ್ನಾರ್ತ ವಿಜ್ಞಾಪನೆಗೆ
3:
ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭು
ನಿನ್ನ ಮುಂದೆ ಯಾರುತಾನೆ ನಿಲ್ಲಬಲ್ಲರು ವಿಭು?
4:
ಪಾಪವನು ಕ್ಷಮಿಸುವವನು ನೀನು ಎಂತಲೆ ಭಯಭಕ್ತಿಗೆ ಪಾತ್ರನು
5:
ಪ್ರಭುವಿಗಾಗಿ ಎನ್ನ ಮನ ಕಾದಿದೆ ಆತನ ವಾಕ್ಯದಲಿ ನಂಬಿಕೆ ನನಗಿದೆ
6:
ಸೂರ್ಯೋದಯಕ್ಕಾಗಿ ಕಾವಲುಗಾರ ಕಾದಿರುವುದಕ್ಕಿಂತ ಆತುರದಿಂದ
ಬೆಳಗಾಗುವುದನು ಎದುರು ನೋಡುವುದಕ್ಕಿಂತ ಅತಿಯಾಗಿ ಪ್ರಭುವನು ನಿರೀಕ್ಷಿಸುತಿದೆ ಎನ್ನ ಮನ ನಿರುತ
7:
ಇಸ್ರಯೇಲೇ, ನಂಬಿಕೊಂಡಿರು ಪ್ರಭುವನೆ ಆತನಲ್ಲಿದೆ ಕರುಣೆ, ಪೂರ್ಣ ವಿಮೋಚನೆ
8:
ಇಸ್ರಯೇಲನು ಉದ್ಧರಿಸುವನಾತ ಅದು ಗೈದ ಸಕಲ ದೋಷಗಳಿಂದ
ಶುಭಸಂದೇಶ: ಮತ್ತಾಯ 5: 20-26
20 ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ
ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು
ಪ್ರವೇಶಿಸಲಾರಿರಿ ಎಂಬುದು ನಿಶ್ಚಯ. "
21
" 'ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು' ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 22 ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಸೋದರನ
ಮೇಲೆ (ನಿಷ್ಕಾರಣವಾಗಿ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ
ಒಳಗಾಗುವನು;
‘ಮೂರ್ಖ' ಎಂದು
ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. 23 ಆದಕಾರಣ, ಬಲಿಪೀಠದ
ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ
ನೆನಪಿಗೆ ಬಂದರೆ,
24 ನಿನ್ನ ಕಾಣಿಕೆಯನ್ನು ಆ ಬಲಿಪೀಠದ
ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ
ಸೋದರನೊಡನೆ ಸಮಾಧಾನಮಾಡಿಕೊ, ಆನಂತರ ಬಂದು
ನಿನ್ನ ಕಾಣಿಕೆಯನ್ನು ಒಪ್ಪಿಸು. "
25
"ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ
ಅವನೊಡನೆ ಬೇಗ ಸಂಧಾನಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೋಲೀಸರ ವಶಕ್ಕೆ ಬಿಡಬಹುದು. ಆನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! 26 ಅಲ್ಲಿಂದ ನೀನು ಹೊರಗೆ ಬರಬೇಕಾದರೆ
ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು. "
ಚಿಂತನೆ: ದೇವರು ನಿರಂತರವೂ ದುಷ್ಟನ ಮನ ಪರಿವರ್ತನೆಯನ್ನು
ಬಯಸುತ್ತಾರೆ. ದೇವರ ನಿರ್ಣಯದಲ್ಲಿ ಯಾವುದೇ ದೋಷವಿರುವುದಿಲ್ಲ. ಅವರು ಉತ್ತಮ ನ್ಯಾಯಾಧಿಪತಿ. ದುಷ್ಟನನ್ನು
ವಿನಾಕಾರಣ ಶಿಕ್ಷಿಸುವ ಬದಲು ತಪ್ಪಿಗೆ ಪ್ರಾಯಶ್ಚಿತ್ತಪಟ್ಟು ತಮ್ಮೆಡೆಗೆ ತಿರುಗಿಕೊಳ್ಳುವಂತೆ
ಕಾಲಾವಕಾಶವನ್ನು ನೀಡುತ್ತಾರೆ. ಹಾಗೆಯೇ ನಾವು ನಮ್ಮ ಸಹೋದರ/ರಿಯರನ್ನು ನಿಂದಿಸುವುದಾಗಲಿ, ತುಚ್ಚೀಕರಿಸುವುದಾಗಲಿ ಮಾಡಬಾರದು. ಮನಸ್ತಾಪಗಳಾದಾಗ ಸಂಧಾನ
ಮಾಡಿಕೊಳ್ಳಬೇಕೇ ಹೊರತು ದ್ವೇಷಿಸಬಾರದು ಎಂದು ಪ್ರಭು ಮನವರಿಕೆ ಮಾಡುತ್ತಾರೆ.
No comments:
Post a Comment