ನೇರಳೆ/ ಮಂಗಳ/ ಪವಿತ್ರವಾರದ ಮಂಗಳವಾರ
1ನೇ ವಾಚನ - ಯೆಶಾಯ 49: 1-6
ಕೀರ್ತನೆ - 71: 1-6, 15, 17
ಶುಭಸಂದೇಶ - ಯೊವಾನ್ನ 13: 21-33,36-38 1ನೇ ವಾಚನ - ಯೆಶಾಯ 49: 1-6
1ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ. 2ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ. 3ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.” 4ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. 5ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮಥ್ರ್ಯ ಇರುವುದು ಆ ದೇವರಲಿ.
6ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”
ಕೀರ್ತನೆ - 71: 1-6, 15, 17
ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು
1ಆಶ್ರಯಕೋರಿ ಹೇ ಪ್ರಭು, ನಾ ಬಂದಿರುವೆ / ಆಶಾಭಂಗವಾಗದಿರಲೆಂದು ನಾ ಬೇಡುವೆ //
2ಸತ್ಯಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಯ್ಯಾ / ನನಗೆ ಕಿವಿಗೊಟ್ಟು ಪ್ರಭು ನನ್ನನುದ್ಧರಿಸಯ್ಯಾ //
3ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು / ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು //
4ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯಾ / ಕ್ರೂರ ಕೇಡಿಗರ ವಂಶದಿಂದೆನ್ನನು ತಪ್ಪಿಸಯ್ಯಾ //
5ಸ್ವಾಮಿ ದೇವಾ, ನೀನೇ ನನ್ನ ಭರವಸೆ / ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ //
6ಹುಟ್ಟಿನಿಂದಲೆ ನಾ ನಿನಗಂಟಿ ಕೊಂಡಿರುವೆನಯ್ಯಾ / ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ / ನಿರಂತರವೂ ನಿನ್ನನು ಕೊಂಡಾಡುತ್ತಿರುವೆನಯ್ಯಾ
//
15ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು / ವಿವರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು //
17ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ?/ ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ //
ಶುಭಸಂದೇಶ - ಯೊವಾನ್ನ 13: 21-33,36-38
21ಇದೆಲ್ಲವನ್ನೂ ಹೇಳಿಯಾದ ಮೇಲೆ ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹ ಬಗೆದು ನನ್ನನ್ನು ಹಿಡಿದೊಪ್ಪಿಸುವನು,” ಎಂದು ಸ್ಪಷ್ಟವಾಗಿ ಹೇಳಿದರು. 22ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವವರಾದರು. 23ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, 24ಸಿಮೋನ ಪೇತ್ರನು, “ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆಂದು ಕೇಳು,” ಎಂದು ಸನ್ನೆ ಮಾಡಿದನು. 25ಅಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ ಸರಿದು, “ಅಂತವನು ಯಾರು ಪ್ರಭೂ?” ಎಂದು ಕೇಳಿದನು. 26ಯೇಸು, “ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ,” ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. 27ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು. 28ಆಗ ಯೇಸು, “ನೀನು ಮಾಡಬೇಕೆಂದಿರುವುದನ್ನು ಬೇಗನೆ ಮಾಡಿಮುಗಿಸು,” ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ. 29ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, ‘ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ,” ಎಂದೋ, ‘ಬಡವರಿಗೆ ಏನಾದರೂ ಕೊಡು’ ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು.
30ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು. 31ಯೂದನು ಹೊರಟುಹೋದಮೇಲೆ ಯೇಸುಸ್ವಾಮಿ ಹೀಗೆಂದರು: “ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು.
32ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು, ತಕ್ಷಣವೇ ಪ್ರಕಟಪಡಿಸುವರು. 33ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ. 36ಆಗ ಸಿಮೋನ ಪೇತ್ರನು, “ಪ್ರಭುವೇ, ನೀವು ಹೋಗುವುದಾದರೂ ಎಲ್ಲಿಗೆ?” ಎಂದು ಕೇಳಿದನು. “ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನಂತರ ಬರುವೆ,” ಎಂದು ಯೇಸು ಉತ್ತರಕೊಡಲು 37ಪೇತ್ರನು, “ಈಗಲೇ ನಿಮ್ಮ ಹಿಂದೆ ಬರಲು ಏಕಾಗದು? ಪ್ರಭೂ, ನಿಮಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿದ್ದೇನೆ,” ಎಂದನು. 38ಆಗ ಯೇಸು, “ನನಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆಂದು ಮೂರುಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗುವುದಿಲ್ಲ,” ಎಂದು ನುಡಿದರು.
ಚಿಂತನೆ
ಗುರುದ್ರೋಹಿಗೂ
ಯೇಸುವಿನಲ್ಲಿ ನೆಲೆಯಿತ್ತು. ದ್ರೋಹವೆಸಗುತ್ತಾನೆಂದು ತಿಳಿದಿದ್ದರೂ ಯೇಸು ಇಸ್ಕರಿಯೋತಿನ ಯೂದನನ್ನು
ಪ್ರೀತಿಸಿದರು, ಸತ್ಕರಿಸಿದರು. ದೈವಯೋಜನೆಯಲ್ಲಿ ದೇವರು ಸೂತ್ರಧಾರರು ಎಲ್ಲರೂ ಎಲ್ಲರೂ ಪಾತ್ರಧಾರಿಗಳು, ಅವರವರು ತಂತಮ್ಮ ಕಾರ್ಯವನ್ನು ನೆರವೇರಿಸಲೇಬೇಕೆಂಬ ಅನಿವಾರ್ಯತೆಯಿರುತ್ತದೆ
ಎಂಬುದನ್ನು ಅರಿತಿದ್ದ ಯೇಸು ಯೂದನನ್ನು ತಡೆಯದೆ, ನೀನು ಮಾಡಬೇಕಾದ ಕಾರ್ಯವನ್ನು ಮಾಡಿ ಮುಗಿಸು ಎಂದು
ಮುಕ್ತಮನಸ್ಸಿನಿಂದ ಕಳುಹಿಸಿಕೊಡುವರು.
ರೊಟ್ಟಿಯ
ತುಂಡನ್ನು ತೆಗೆದುಕೊಂಡ ಕೂಡಲೇ ಯೂದನು ಎದ್ದು ಹೊರಟನು, ಆಗ ರಾತ್ರಿಯಾಗಿತ್ತು ಎಂಬ ವಾಕ್ಯದಲ್ಲಿ ಒಳ
ಅರ್ಥವೊಂದಿದೆ. ಯೂದ ಇಲ್ಲಿ ಪ್ರಭುವಿನ ಪ್ರಸನ್ನತೆಯಿಂದ ಸೈತಾನನ ಶೋಧನೆಗೆ ಬೀಳುತ್ತಿದ್ದಾನೆ, ಬೆಳಕಿನಿಂದ
ಕತ್ತಲೆಯೆಡೆಗೆ ನಡೆಯುತ್ತಿದ್ದಾನೆ. ಯೇಸು ನೀಡಿದ ರೊಟ್ಟಿಯನ್ನು ತೆಗೆದುಕೊಂಡ ಒಡನೆ ’ಸೈತಾನ ಅವನನ್ನು
ಹೊಕ್ಕನು’ ಎನ್ನುತ್ತದೆ ಪವಿತ್ರ ಗ್ರಂಥ. ಯೇಸುವಿನೊಡನೆ ಅತೀ ನಿಕಟವಾಗಿ ಜೀವಿಸಿ ಅವರೊಡನೆ ಸಹಭೋಜನದಲ್ಲಿ
ಪಾಲ್ಗೊಂಡ ಅವರ ಅಪರಿಮಿತ ಪ್ರೀತಿಯನ್ನು ಅನುಭವಿಸಿದ ನಂತರವೂ ಸೈತಾನನ ವಶವಾಗುವುದು ಎಂತಹ ದುರಂತ!
ಯೂದ ತನ್ನನ್ನು ತಾನೇ ಜಯಿಸಲಾರದಷ್ಟು ಬಲಹೀನನಾಗಿ ಹೋಗಿದ್ದ. ಅವನೊಳಗೆ ಒಳಿತು ಮತ್ತು ಕೆಡುಕು, ಬೆಳಕು
ಮತ್ತು ಕತ್ತಲೆಯ ನಡುವೆ ಸಂಘರ್ಷವೇ ನಡೆದಿತ್ತೆಂಬುದು ಗೋಚರವಾಗುತ್ತದೆ. ಇಂತಹ ಘರ್ಷಣೆಗಳು ನಮ್ಮೊಳಗೂ
ನಡೆಯುತ್ತಿರುತ್ತದೆ. ದೇವರೋ? ಸೈತಾನನೋ? ಆಯ್ಕೆ ನಮ್ಮದು ಮಾತ್ರವೇ.
- ಫಾದರ್
ಪೀಟರ್ ಚಿನ್ನಪ್ಪ
No comments:
Post a Comment