17 ಮಾರ್ಚ್ 2019

ತಪಸ್ಸು ಕಾಲದ ಎರಡನೇ ಭಾನುವಾರ (ಸಂತ ಪ್ಯಾಟ್ರಿಕ್)

ಮೊದಲವಾಚನ: ಆದಿ 15: 5-12, 17-18
5 ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, “ಆಕಾಶದ ಕಡೆಗೆ ನೋಡು. ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!” ಎಂದರು. 6 ಅಬ್ರಾಮನು ಸರ್ವೇಶ್ವರಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು. 7 ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: “ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ,” ಎಂದರು. 8 ಅದಕ್ಕೆ ಅಬ್ರಾಮನು, “ಸರ್ವೇಶ್ವರಾ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?” ಎಂದನು. 9 ಸರ್ವೇಶ್ವರ ಪ್ರತ್ಯುತ್ತರವಾಗಿ, “ನೀನು ಮೂರು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗೂ ಒಂದು ಮರಿಪಾರಿವಾಳವನ್ನು ತೆಗೆದುಕೊಂಡು ಬಾ,” ಎಂದರು10 ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳು ಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. 11 ಪ್ರಾಣಿಗಳ ತುಂಡುಗಳ ಮೇಲೆ ರಣಹದ್ದುಗಳು ಎರಗಿದಾಗ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. 12 ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು. 17 ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗೂ ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡು ತುಂಡುಗಳ ನಡುವೆ ಹಾದುಹೋದವು. 18 ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: “ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,”

ಕೀರ್ತನೆ 27: 1, 7-8, 8-9, 13-14
ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೇ.

1: ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ ನಾನಾರಿಗೂ ಅಳುಕೆನು ನನ್ನ ಬಾಳಿಗಾಧಾರ ಪ್ರಭುವೆ ನಾನಾರಿಗೂ ಅಂಜೆನು
7: ಪ್ರಭೂ, ನಿನಗೆ ಮೊರೆಯಿಡುವೆನು ಕರುಣಿಸೆನಗೆ ಸದುತ್ತರವನು
8: “ಅರಸೆನ್ನ ಮುಖದರುಶನವನು”, ಎಂದೆ ನೀನು ಅರಸುವೆನು ಅದನೇ”, ಎಂದು ಮರುನುಡಿದೆ ನಾನು
9: ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ
13: ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು
14: ಪ್ರಭುವನು ಎದುರುನೋಡುತ್ತಿರು ಮನವೇ ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ

ಎರಡನೇ ವಾಚನ: ಫಿಲಿಪ್ಪಿ 3: 17ರಿಂದ 4: 1
17 ಸಹೋದರರೇ, ನೀವು ನನ್ನನ್ನು ಅನುಸರಿಸಿರಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ. 18 ಕ್ರಿಸ್ತಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಅನೇಕರಿದ್ದಾರೆ. ಇದನ್ನು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ. 19 ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ. 20 ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು, ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ. 21 ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನ ದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು. ಹೀಗಿರಲಾಗಿ ಒಲವಿನ ಸಹೋದರರೇ ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ.

ಶುಭಸಂದೇಶ: ಲೂಕ 9: 28-36
28 ಇದನ್ನೆಲ್ಲ ಹೇಳಿ ಸುಮಾರು ಎಂಟು ದಿನಗಳಾದ ಬಳಿಕ ಪೇತ್ರ, ಯೊವಾನ್ನ ಮತ್ತು ಯಕೋಬ ಇವರನ್ನು ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನು ಹತ್ತಿದರು. 29ಪ್ರಾರ್ಥನೆ ಮಾಡುವ ಸಮಯದಲ್ಲಿ ಯೇಸುವಿನ ಮುಖಚರ್ಯೆಯು ಮಾರ್ಪಟ್ಟಿತು. ಅವರ ಉಡುಪು ಬೆಳ್ಳಗೆ ಪ್ರಜ್ವಲಿಸಿತು. 30 ಇದ್ದಕಿದ್ದ ಹಾಗೆ ಮೋಶೆ ಮತ್ತು ಎಲೀಯ ಎಂಬ ಇಬ್ಬರು ಪ್ರವಾದಿಗಳು ಅವರೊಡನೆ ಮಾತನಾಡುತ್ತಿದ್ದರು. 31 ದಿವ್ಯ ವೈಭವದಿಂದ ಕಂಗೊಳಿಸುತ್ತಿದ್ದ ಇವರಿಬ್ಬರು ಯೇಸು ಜೆರುಸಲೇಮಿನಲ್ಲಿ ಪ್ರಾಣತ್ಯಾಗಮಾಡಿ ದೈವೇಚ್ಛೆಯನ್ನು ನೆರವೇರಿಸಲಿದ್ದ ವಿಷಯವಾಗಿ ಸಂಭಾಷಿಸುತ್ತಿದ್ದರು. 32 ಗಾಢ ನಿದ್ರೆಯಲ್ಲಿದ್ದ ಪೇತ್ರ ಮತ್ತು ಸಂಗಡಿಗರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರೊಡನೆ ನಿಂತಿದ್ದ ಆ ಇಬ್ಬರನ್ನೂ ಕಂಡರು. 33 ಅವರಿಬ್ಬರೂ ಯೇಸುವನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು ಯೇಸುವಿಗೆ, ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು - ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು, ಎಂದನು. ತಾನು ಏನು ಹೇಳುತ್ತಿರುವೆನೆಂದೇ ಪೇತ್ರನು ಗ್ರಹಿಸಲಿಲ್ಲ. 34 ಆತನು ಇದನ್ನು ಹೇಳುತ್ತಿದ್ದ ಹಾಗೆ ಮೇಘವೊಂದು ಬಂದು ಅವರನ್ನಾವರಿಸಿತು. ಆ ಮೇಘದಲ್ಲಿ ಅವರು ಅದೃಶ್ಯರಾದಾಗ ಶಿಷ್ಯರು ದಿಗಿಲುಗೊಂಡರು. 35 ಅದರೊಳಗಿಂದ, ಈತನು ನನ್ನ ಪುತ್ರನು; ನಾನು ಆರಿಸಿಕೊಂಡವನು. ಈತನ ಮಾತಿಗೆ ಕಿವಿಕೊಡಿರಿ, ಎಂಬ ವಾಣಿ ಕೇಳಿಸಿತು. 36 ಆ ವಾಣಿ ಆದಮೇಲೆ ಕಾಣಿಸಿಕೊಂಡವರು ಯೇಸು ಮಾತ್ರ. ಶಿಷ್ಯರು ತಾವು ನೋಡಿದ್ದನ್ನು ಕುರಿತು ಆ ದಿನಗಳಲ್ಲಿ ಏನನ್ನೂ ಹೇಳದೆ, ಯಾರಿಗೂ ತಿಳಿಸದೆ, ತತ್ಕಾಲ ಮೌನದಿಂದ ಇದ್ದರು.


ಚಿಂತನೆ: ಅಬ್ರಹಾಮ ದೇವರ ಪರಮ ಭಕ್ತ. ಸರ್ವೇಶ್ವರ ಸ್ವಾಮಿಯಲ್ಲಿ ಅವನಿಗೆ ಅಪಾರವಾದ ವಿಶ್ವಾಸವಿತ್ತು. ಆತನಲ್ಲಿ ಕಿಂಚಿತ್ತೂ ಅಪನಂಬಿಕೆ ಇರಲಿಲ್ಲ. ವಯೋವೃದ್ದನಾಗಿದ್ದರೂ ಅಪನಂಬಿಕೆ ಅವನ ಬಳಿ ಸುಳಿಯಲೇ ಇಲ್ಲ. ಪಭು ಯೇಸು ಹಲವು ಬಾರಿ ತಾವು ಯಾರೆಂಬುದನ್ನು ವಿವಿಧ ರೀತಿಯಲ್ಲಿ ತಮ್ಮ ಶಿಷ್ಯರಿಗೆ ತಿಳಿಸಿದ್ದರು. ಆದರೆ ಶಿಷ್ಯರು ಮಾತ್ರ ಪಭುವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದರು. ಆಗ ಮತ್ತೊಮ್ಮೆ ತಾಬೋರ್ ಬೆಟ್ಟದ ಮೇಲೆ ಆಯ್ಕೆಯಾದ ಪೇತ್ರ, ಯಾಕೋಬ ಮತ್ತು ಯೊವಾನ್ನರ ಮುಂದೆ ಪ್ರಭು ತಮ್ಮ ನೈಜ ರೂಪವನ್ನು ಹಾಗೂ ತಾವು ಯಾರೆಂಬುದನ್ನು ಅವರ ಮುಂದೆ ಅನಾವರಣಗೊಳಿಸಿದರು. ಆದರೂ ಪೇತ್ರ ಲೌಕಿಕವಾಗಿಯೇ ಆಲೋಚಿಸಿದ. ಎಲ್ಲಿಯವರೆಗೆ ನಾವು ಲೌಕಿಕತೆಯಲ್ಲಿಯೇ ಮುಳುಗಿರುತ್ತೇವೋ ಅಲ್ಲಿಯವರೆಗೆ ನಮ್ಮ ಆಧ್ಯಾತ್ಮಿಕ ಬದುಕು ಜ್ಞಾನಬೆಳಕನ್ನು ಗಳಿಸಲು ಸಾಧ್ಯವೇ ಇಲ್ಲ. ಸಂತ ಪೌಲ ಸಹ ನಾವು ಲೌಕಿಕತೆಯ ಗೆರೆಯನ್ನು ದಾಟಿ ಸ್ವರ್ಗದೆಡೆ ಸಾಗಬೇಕು ಎನ್ನುತ್ತಾನೆ. 

No comments:

Post a Comment