17 ಏಪ್ರಿಲ್ 2019

ನೇರಳೆ/ ಬುಧ/ಪವಿತ್ರವಾರದ ಬುಧವಾರ          
1ನೇ ವಾಚನ - ಯೆಶಾಯ 5೦: 4-9      
ಕೀರ್ತನೆ  -  697-92೦-213೦,32-33                         
ಶುಭಸಂದೇಶ - ಮತ್ತಾಯ 26: 14-25  

1ನೇ ವಾಚನ - ಯೆಶಾಯ 5೦4-9     
4ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು5ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು6ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ7ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗ ಪಡಲಾರೆನೆಂದು ಗೊತ್ತು  ನನಗೆ8ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ ನನಗೆ ಪ್ರತಿಕಕ್ಷಿ ಯಾರೆ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯ ಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ9ಇಗೋ, ಸ್ವಾಮಿ ಸರ್ವೇಶ್ವರ ನಿಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿ ತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ.

ಕೀರ್ತನೆ  -  69:  7-9,  2೦-21,  3೦,32-33  
8ನನ್ನವರಿಗೇ ನಾನನ್ಯನಾದೆನಯ್ಯಾ / ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ //
9ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ / ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ //
10ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ / ಚುಚ್ಚುಮಾತಿಗೆ ಕಾರಣವಾಯಿತಲ್ಲಾ //
21ಹಸಿದ ನನಗೆ ವಿಷಬೆರೆತ ಆಹಾರವಿತ್ತ ರಯ್ಯಾ / ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ //
22ಅವರಿಗೆ ಬಡಿಸಿದ ಊಟವೇ ಅವರಿಗೆ ಉರುಲಾಗಲಿ / ಅವರ ಹಬ್ಬದೌತಣವೇ ಅವರಿಗೆ ಬೋನಾಗಲಿ //
31ಸ್ವಾಮಿ ದೇವನಿಗಿದುವೇ ಸುಪ್ರೀತ / ಕೊಂಬುಗೊರಸುಳ್ಳ ಗೂಳಿಬಲಿಗಿಂತ //
33ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು / ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು //
34ಭೂಮ್ಯಾಕಾಶಗಳು ಆತನನು ಕೊಂಡಾಡಲಿ / ಸಾಗರಗಳು, ಜಲಚರಗಳು ಆತನನು ಭಜಿಸಲಿ //

ಶುಭಸಂದೇಶ - ಮತ್ತಾಯ 2614-25   
14ಇದಾದ ಮೇಲೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು15ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿಮಾಡಿ ಕೊಟ್ಟರು16 ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು17ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು18ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು.

19ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು20ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು21ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು22ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು23ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ24ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು25ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.

ಚಿಂತನೆ
ಯೂದ ಕೇವಲ ೩೦ ನಾಣ್ಯಗಳಿಗೆ ಪ್ರಭುಯೇಸುವನ್ನು ಹಿಡಿದುಕೊಡುವುದು ಅತ್ಯಂತ ಅಸಹನೀಯ ಮತ್ತು ಅಮಾನವೀಯ ಕೃತ್ಯ. ತಾನು ಏನು ಮಾಡುತ್ತಿದ್ದೇನೆಂದು ತಿಳಿದೂ ಅದನ್ನು ಮುಂದುವರಿಸುವುದು ಮಹಾಪಾಪ. ಯೂದನಿಗೆ ತಾನು ಮಾಡುತ್ತಿರುವುದರ ಸಂಪೂರ್ಣ ಅರಿವಿತ್ತು. ಯೇಸು ನಮ್ಮನ್ನು ರಕ್ಷಿಸಲು ಬಂದವರು, ಅವರೇ ಲೋಕೋದ್ಧಾರಕ ಎಂಬ ಜ್ಞಾನ ಆತನಿಗಿತ್ತು. ಪೇತ್ರನಂತೆ, ತೋಮನಂತೆ ಮತ್ತು ಇತರ ಪ್ರೇಷಿತರಂತೆ ಬಹಿರಂಗವಾಗಿ ತಮ್ಮ ವಿಶ್ವಾಸವನ್ನು ನಿವೇದಿಸದೇ ಹೋದರೂ ಅವನ ಮನಸ್ಸಿನಲ್ಲಿ ಎಲ್ಲವೂ ಅಡಗಿತ್ತು. ಆದರೆ ಯೇಸು ತನ್ನ ನಿರೀಕ್ಷೆ ಮತ್ತು ಕಲ್ಪನೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂಬುದು ಅವನ ಅಸಮಾಧಾನ. ಜ಼ಲಟರು ಎಂಬ ಕ್ರಾಂತಿಕಾರಿ ಗುಂಪಿಗೆ ಸೇರಿದ್ದ ಆತ ಯೇಸುವನ್ನು ಕೂಡ ಒಬ್ಬ ಕ್ರಾಂತಿಕಾರಿಯೆಂಬಂತೆ ಕಾಣಲೆತ್ನಿಸಿದ. ಆದರೆ ಯೇಸುವಿನ ಪ್ರೀತಿ, ಕ್ಷಮೆ, ಕರುಣೆ, ದೀನತೆ ಇವ್ಯಾವ ಗುಣಗಳೂ ಅವನಿಗೆ ಸೂಕ್ತವೆನಿಸಲಿಲ್ಲ. ಯೇಸು ತನ್ನ ಆಸೆಗಳನ್ನೆಲ್ಲಾ ನಿರಾಸೆ ಮಾಡುತ್ತಿದ್ದಾರೆ, ಕನಸುಗಳನ್ನೆಲ್ಲಾ ಹುಸಿಗೊಳಿಸುತ್ತಿದ್ದಾರೆ ಎಂಬ ಅಸಮಾಧಾನ ಮೊಳಕೆಯೊಡೆದು, ನಂತರ ದ್ವೇಷವಾಗಿ ಮಾರ್ಪಟ್ಟು ಆತ ತನ್ನ ರಕ್ಷಕರನ್ನೇ ಯೆಹೂದ್ಯ ಮುಖಂಡರಿಗೆ ಹಿಡಿದುಕೊಡುವ ಹೇಯ ಕೃತ್ಯಕ್ಕೆ ಮುದ್ರೆಯೊತ್ತುತ್ತಾನೆ. ದೇವರ ಅತ್ಯುನ್ನತ ಕೊಡುಗೆ ಸ್ವಾತಂತ್ರ್ಯ, ಅವರು ನಮ್ಮಿಂದ ತಾವು ಬಯಸಿದ್ದನ್ನೇ ಮಾಡಬೇಕು, ಆಜ್ಞಾಪಿಸಿದಂತೆಯೇ ನಡೆಯಬೇಕೆಂಬ ಒತ್ತಡ ಹೇರುವುದಿಲ್ಲ. ಬದಲಾಗಿ ನಮ್ಮ ಮನದ ಇಚ್ಚೆಯಂತೆ ನಡೆಯಲು ಸಂಪೂರ್ಣ ಸ್ವಾತಂತ್ರ್ಯವನ್ನು ನಮಗೆ ನೀಡುವರು. ಆ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಾಗ ನಾವು ಪಾಪದಲ್ಲಿರುತ್ತೇವೆ. 
- ಫಾದರ್ ಪೀಟರ್ ಚಿನ್ನಪ್ಪ

No comments:

Post a Comment