ಸೋಮವಾರ, ಜೆರುಸಲೇಮಿನ ಸಂತ ಸಿರಿಲ್
ಮೊದಲವಾಚನ: ದಾನಿ 9: 4-10
4 ಪಾಪವನ್ನು ಅರಿಕೆಮಾಡಿ ನನ್ನ ದೇವರಾದ ಸರ್ವೇಶ್ವರನಿಗೆ ಹೀಗೆಂದು ಬಿನ್ನವಿಸಿದೆ: “ಹೇ
ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ. 5 “ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞಾವಿಧಿಗಳನ್ನು ತೊರೆದು ಬಿಟ್ಟಿದ್ದೇವೆ. 6 ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗೂ ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ. 7 ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗೂ ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಎಲ್ಲ ಇಸ್ರಯೇಲರು ನಾಚಿಕೆಗೆ ಈಡಾಗಿದ್ದಾರೆ. 8 ಸ್ವಾಮೀ,
ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಒಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ. 9 ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು. 10 ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.
ಕೀರ್ತನೆ 79: 8, 9, 11, 13
ಪ್ರಭೂ, ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದಿರಿ
8:
ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ ಉರಿಸಂಕಟದಲ್ಲಿರುವೆವು, ತೋರೆಮಗೆ ಕರುಣೆಯನೀಗಲೆ
9:
ದೇವಾ, ಮುಕ್ತಿದಾತ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ
11:
ಸೆರೆಹೋಗಿರುವವರ ನರಳಾಟಕೆ ಕಿವಿಗೊಡು ನೀನು ನಿನ್ನ ಶಕ್ತಿ ಕಾದಿಡಲಿ ಸಾವಿಗೀಡಾಗಿರುವ ಅವರನು
13:
ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು ನಿನಗೆ ಸ್ಮರಿಸುವೆವು ನಿನ್ನ ಮಹಿಮೆಯನು ತಲತಲಾಂತರದವರೆಗೆ ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ ಮಂದೆ
ಶುಭಸಂದೇಶ: ಲೂಕ 6: 36-38
36 ನಿಮ್ಮ ತಂದೆಯಾದ ದೇವರಂತೆ ನೀವೂ
ದಯಾವಂತರಾಗಿರಿ.
37 ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ, ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ. 38 ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ
ಕೊಡುವರು;
ಅಳತೆಯಲ್ಲಿ ತುಂಬಿ, ಕುಲುಕಿ,
ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು, ಎಂದರು.
ಚಿಂತನೆ: ನೈಜ ಪಶ್ಚಾತ್ತಾಪ ಕ್ಷಮೆಗೆ ದಾರಿ
ಮಾಡುತ್ತದೆ. ನಮ್ಮ ದೇವರು ಕರುಣಾಮಯಿ ಹಾಗೂ ದಯಾವಂತರು. ಅವರ ಕ್ಷಮೆ ಅಪಾರ. ಅವರ ಕ್ಷಮೆಗೆ
ಎಲ್ಲೆಯೇ ಇಲ್ಲ. ಅವರು ಕ್ಷಮೆಯನ್ನು ತುಂಬಿ ಅಳೆದು ತುಳುಕುವಂತೆ ನೀಡುತ್ತಾರೆ. ನಾವು ಅಂತಹ
ಕ್ಷಮೆಗೆ ಅರ್ಹರಾಗಬೇಕಾದರೆ ಇತರರನ್ನು ಉದಾರವಾಗಿ ಕ್ಷಮಿಸಬೇಕು. ಹಾಗೆಯೇ
ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಉದಾರವಾಗಿರಬೇಕು ಎನ್ನುತ್ತಾರೆ ಪ್ರಭು ಯೇಸು.
ಮಾರ್ಚ್ 18: ಜೆರುಸಲೇಮಿನ ಸಂತ ಸಿರಿಲ್, ಧರ್ಮಾಧ್ಯಕ್ಷರು

ಸಂತ ಸಿರಿಲ್ ಸುಮಾರು 315ರಲ್ಲಿ ಜೆರುಸಲೇಮಿನಲ್ಲಿ ಜನಿಸಿದರು. ಇವರು ಏರಿಯಸ್ ವಾದ ಎಂಬ ಸಿದ್ಧಾಂತವನ್ನು ಖಂಡಿಸಿದರು, ಹಾಗೂ ತಮ್ಮ ಜೀವನ ಅಂತ್ಯದಲ್ಲಿ ಅದು ನಶಿಸಿಹೋಗುವುದನ್ನು ಕಂಡರು. ದೈವಗ್ರಂಥದ ಅಭ್ಯಾಸ, ಪಠನದಲ್ಲಿ ತಮ್ಮ ಸಮಯ ಕಳೆಯುವುದಲ್ಲದೇ ಅನೇಕ ಕ್ರೈಸ್ತ ವಿಷಯಗಳ ಬಗ್ಗೆ ಅಭ್ಯಾಸಿಸಿ, ಅನೇಕ ವಿಷಯಗಳ ಬಗ್ಗೆ ಬರೆದಿದ್ದಾರೆ. ಧರ್ಮಸಭೆಯ ಎಲ್ಲಾ ವಿಶ್ವಾಸಸತ್ಯಗಳನ್ನು ಅರಿಯುವುದಲ್ಲದೆ, ಅನ್ಯಧರ್ಮದ ತತ್ವ ಶಾಸ್ತ್ರಗಳಲ್ಲಿಯೂ ಪರಿಣಿತರಾಗಿದ್ದರು.
ಇವರ ಎಲ್ಲಾ ಪರಿಣತಿಯನ್ನು ಕಂಡ ಸಂತ ಮ್ಯಾಕ್ಸಿಮುಸರು ಇವರನ್ನು ದೀಕ್ಷಾಸ್ನಾನಾರ್ಥಿಗಳಿಗೆ ಉಪದೇಶಮಾಡುವಂತೆ ನೇಮಿಸುತ್ತಾರೆ. ತದನಂತರ ಅಲ್ಲಿನ ಧರ್ಮಾಧ್ಯಕ್ಷರಾಗಿದ್ದ ಸಂತ ಮ್ಯಾಕ್ಸಿಮರ ಉತ್ತರಾಧಿಕಾರಿಯಾಗುತ್ತಾರೆ. ಕೆಲಕಾರಣದಿಂದ ಸಂತ ಸಿರಿಲ್‌ರನ್ನು ಗಡಿಪಾರು ಮಾಡಲಾಯಿತು. 11 ವರ್ಷಗಳ ನಂತರ ಪುನಃ ಜೆರುಸಲೇಮಿಗೆ ಬರುತ್ತಾರೆ. ಹಾಗೆಯೇ 381ರಲ್ಲಿ ನಡೆದ ಕಾನ್ಸ್ಟಾಂಟಿನೋಪಲ್ ಮಹಾಸಭೆಯಲ್ಲಿ ಭಾಗವಹಿಸಿ ನೈಸಿಯಾದ ವಿಶ್ವಾಸ ಪ್ರಮಾಣವನ್ನು ಎತ್ತಿಹಿಡಿಯುತ್ತಾರೆ ಮತ್ತು ಏರಿಯಸ್ ವಾದದ ಅಂತ್ಯ ಕಾಣುವುದನ್ನು ನೋಡುತ್ತಾರೆ. ನಂತರ ಶಾಂತಿಯಿಂದ ಎಂಟು ವರ್ಷಗಳನ್ನು ಕಳೆದು, 386ರಲ್ಲಿ ಜೆರುಸಲೇಮಿನಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ಮರಣ ಹೊಂದುತ್ತಾರೆ. ಅವರು ಸದಾ ನುಡಿಯುತ್ತಿದ್ದ ಮಾತೆಂದರೆ “ಒಳ್ಳೆಯ ಕುರಿಮಂದೆಯಂತೆ ಬಾಳಿರಿ, ತೋಳಗಳಿಂದ ದೂರವಿರಿ; ಆದರೆ ಧರ್ಮಸಭೆಯಿಂದ ದೂರಾಗದಿರಿ.”
No comments:
Post a Comment