ಬಿಳಿ/ ಗುರು/ಪವಿತ್ರಗುರುವಾರ /ಎಣ್ಣೆಗಳ ಆಶೀರ್ವಚನ
ಪೂಜೆ
1ನೇ ವಾಚನ: ವಿಮೋಚನಾಕಾಂಡ 12:1-8, 11-14
ಕೀರ್ತನೆ 116:12-13,15-16,17-18
2ನೇ ವಾಚನ 1 ಕೊರಿಂಥಿಯರಿಗೆ 11:23-26
ಶುಭಸಂದೇಶ -ಯೊವಾನ್ನ 13:1-151ನೇ ವಾಚನ: ವಿಮೋಚನಾಕಾಂಡ 12:1-8, 11-14
1ಈಜಿಪ್ಟ್ ದೇಶದಲ್ಲಿ ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೀಗೆಂದರು:
2“ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು. 3ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು: ‘ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು. 4ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ. 5ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು. 6ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು. 7ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. 8ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿ ಆದ ಪಲ್ಯಗಳ ಸಮೇತ ಊಟಮಾಡಬೇಕು. 11ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗಬೇಗನೆ ಊಟ ಮಾಡಬೇಕು. ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ.
12‘ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು; ಮನುಷ್ಯರಾಗಿ ಇರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ! 13ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು.
14ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು’.
ಕೀರ್ತನೆ 116:12-13,15-16,17-18
ನಾವು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರೀಸ್ತೇಸುವಿನ ರಕ್ತದಲ್ಲಿ ಪಾಲ್ಗೊಳ್ಳುತ್ತೇವೆ
13ತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
14ಆತನಿಗೆ ನಾ ಹೊತ್ತ ಹರಕೆಗಳನು / ಆತನ ಸಭೆಮುಂದೆಯೆ ತೀರಿಸುವೆನು //
15ಪ್ರಭು ಅಲ್ಪವೆಂದೆಣಿಸನು / ತನ್ನ ಭಕ್ತರ ಮರಣವನು //
16ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು / ನಿನ್ನ ದಾಸಿಯ ಮಗನು, ನಿನ್ನ ಸೇವಕನು / ಬಿಡಿಸಿರುವೆ ನೀನು ನನ್ನ ಬಂಧನಗಳನು //
17ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
18ಹೇ ಜೆರುಸಲೇಮೇ, ನಿನ್ನ ಮಧ್ಯದೊಳು / ಆತನಿರುವ ಮಂದಿರದ ಅಂಗಳದೊಳು /
2ನೇ ವಾಚನ 1 ಕೊರಿಂಥಿಯರಿಗೆ 11:23-26
23ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು 24ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ,” ಎಂದರು. 25ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ,” ಎಂದರು. 26ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.
ಶುಭಸಂದೇಶ -ಯೊವಾನ್ನ 13:1-15
1ಅಂದು ಪಾಸ್ಕ ಹಬ್ಬದ ಹಿಂದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನ ಬಳಿಗೆ ಹೋಗಬೇಕಾದ ಗಳಿಗೆ ಬಂದಿರುವುದು ಎಂದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪರಮಾವಧಿಯನ್ನು ಈಗ ತೋರಿಸಲಿದ್ದರು. 2(ಯೇಸುವನ್ನು ಗುರುದ್ರೋಹದಿಂದ ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಸೈತಾನನು ಸಿಮೋನನ ಮಗ ಇಸ್ಕರಿಯೋತಿನ ಯೂದನಲ್ಲಿ ಈಗಾಗಲೇ ಹುಟ್ಟಿಸಿದ್ದನು). 3ಊಟಕ್ಕೆ ಎಲ್ಲರೂ ಕುಳಿತಿದ್ದರು. ಪಿತನು ಎಲ್ಲವನ್ನೂ ತಮ್ಮ ಕೈಗೆ ಒಪ್ಪಿಸಿರುವರೆಂದೂ ತಾವು ದೇವರ ಬಳಿಯಿಂದ ಬಂದಿದ್ದು, ಈಗ ದೇವರ ಬಳಿಗೇ ಮರಳುತ್ತಿದ್ದೇನೆಂದೂ ಯೇಸುವಿಗೆ ತಿಳಿದಿತ್ತು. 4ಅವರು ಊಟದಿಂದ ಎದ್ದು, ತಮ್ಮ ಮೇಲುಹೊದಿಕೆಯನ್ನು ತೆಗೆದಿಟ್ಟರು. ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡರು.
5ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಒರಸತೊಡಗಿದರು. 6ಹೀಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬಂದಾಗ ಆತ, “ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?” ಎಂದನು. 7ಯೇಸು, “ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮುಂದೆ ಅರ್ಥವಾಗುತ್ತದೆ,” ಎಂದು ಉತ್ತರಿಸಿದರು. 8“ನೀವು ನನ್ನ ಕಾಲುಗಳನ್ನು ತೊಳೆಯುವುದು ಎಂದಿಗೂ ಕೂಡದು,” ಎಂದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, “ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ,” ಎಂದು ನುಡಿದರು. 9ಆಗ ಪೇತ್ರನು, “ಹಾಗಾದರೆ ಪ್ರಭೂ, ನನ್ನ ಕಾಲುಗಳನ್ನು ಮಾತ್ರವಲ್ಲ, ನನ್ನ ಕೈಗಳನ್ನೂ ತಲೆಯನ್ನೂ ತೊಳೆಯಿರಿ,” ಎಂದನು. 10ಯೇಸು, “ಸ್ನಾನಮಾಡಿಕೊಂಡವನು ಕಾಲುಗಳನ್ನು ತೊಳೆದುಕೊಂಡರೆ ಸಾಕು, ಅವನ ಮೈಯೆಲ್ಲಾ ಶುದ್ಧವಾಗಿರುತ್ತದೆ. ನೀವೂ ಕೂಡ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು.
11ತಮ್ಮನ್ನು ಗುರುದ್ರೋಹದಿಂದ ಹಿಡಿದುಕೊಡುವವನು ಯಾರೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು, ‘ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,’ ಎಂದು ಹೇಳಿದರು. 12ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲುಹೊದಿಕೆಯನ್ನು ಹಾಕಿಕೊಂಡು ಕುಳಿತುಕೊಂಡರು. ತಮ್ಮ ಶಿಷ್ಯರಿಗೆ, “ನಿಮಗೆ, ನಾನು ಮಾಡಿರುವುದು ಏನೆಂದು ಅರ್ಥವಾಯಿತೇ? 13‘ಬೋಧಕರೇ, ಪ್ರಭುವೇ’ ಎಂದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೆ. ನಾನು ಬೋಧಕನೂ ಹೌದು, ಪ್ರಭುವೂ ಹೌದು. 14ನಿಮಗೆ ಪ್ರಭುವೂ ಬೋಧಕನೂ ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನಿವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹಂಗಿನಲ್ಲಿದ್ದೀರಿ. 15ನಾನು ನಿಮಗೆ ಒಂದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದಂತೆಯೇ ನೀವೂ ಇತರರಿಗೆ ಮಾಡಿರಿ.
ಚಿಂತನೆ
ಕೆಲವು
ಸಂಕೇತಗಳು ಅಥವಾ ಚಿಹ್ನೆಗಳು ಜನಾಂಗಗಳನ್ನೇ ಕಟ್ಟಲು ಮತ್ತು ಬಹುಕಾಲದವರೆಗೆ ಒಗ್ಗೂಡಿಸಲು ನೆರವಾಗಿವೆ.
ಒಂದು ಧ್ವಜ, ಒಂದು ಲಾಂಛನ, ಒಂದು ರಾಷ್ಟ್ರಗೀತೆ, ಒಂದು ಘೋಷವಾಕ್ಯ ಹೀಗೆ ಹಲವು ಚಿಹ್ನೆಗಳು ಜನರ ಭಾವನೆಗಳನ್ನು
ಉದ್ದೀಪಿಸಲು, ಭಾವನಾತ್ಮಕವಾಗಿ ಐಕ್ಯತೆಯನ್ನು ತರಲು ಹಾಗೂ ಒಬ್ಬ ವ್ಯಕ್ತಿಯ ಪರವಾಗಿ ನಿಲ್ಲಲು ಮತ್ತು
ಆತನ ತತ್ವಸಿದ್ಧಾಂತಗಳನ್ನು ಒಪ್ಪಿ ಕೈಗೊಂಡು ನಡೆಯಲು ಪ್ರೇರಣಾ ಸಾಧನಗಳಾಗುತ್ತವೆ. ಪವಿತ್ರ ಗುರುವಾರ
ಕ್ರಿಸ್ತಯೇಸು ನಮಗೆ ಇಂತಹ ಸಂಕೇತಗಳನ್ನು ಸ್ಥಾಪಿಸಿದ ದಿನ.
ಸೇವೆಗೊಂದು
ಹೊಸ ವ್ಯಾಖ್ಯಾನ: ಒಂದು ನೂತನ ಕಟ್ಟಳೆ
ಕೆಳವರ್ಗದವರು
ಮೇಲ್ವರ್ಗದವರ ಸೇವೆ ಮಾಡುವುದು, ಇಲ್ಲದವರು ಇರುವವರನ್ನು ಸತ್ಕರಿಸುವುದು, ಬಲಹೀನರು ಬಲಾಢ್ಯರನ್ನು
ಆದರಿಸುವುದು ಸರ್ವೇಸಾಮಾನ್ಯ. ಹಿಂದೆ, ಇಂದು, ಮುಂದೆ ಎಂದೆಂದೂ ಸೇವೆಯ ಈ ವಿಧಾನ ಚಾಲ್ತಿಯಲ್ಲಿರುತ್ತದೆ.
ಆದರೆ ಕ್ರಿಸ್ತನ ವಿಧಾನವೇ ಬೇರೆ, ಇಲ್ಲಿ ಪ್ರಭುವೂ, ಗುರುವೂ ಆದ ಕ್ರಿಸ್ತನೇ ತಮ್ಮ ಶಿಷ್ಯರ ಪಾದಗಳನ್ನು
ತೊಳೆಯುವ ದೀನತೆಯನ್ನು ಪ್ರದರ್ಶಿಸುತ್ತಾರೆ ಮತ್ತು ನೀವೂ ಹೀಗೆಯೇ ಮಾಡಿರಿ ಎಂದು ಆದೇಶಿಸುತ್ತಾರೆ.
ಕ್ರಿಸ್ತನ ಸೇವೆಯ ಈ ಆಜ್ಞೆಯನ್ನು ಧರ್ಮಸಭೆ ಅಂದಿನಿಂದ ಇಂದಿನವರೆಗೆ ತನ್ನದೇ ರೀತಿಯಲ್ಲಿ ಮುಂದುವರಿಸಿಕೊಂಡು
ಬಂದಿದೆ. ಅಂದರೆ ಕೇವಲ ಪಾದತೊಳೆಯುವ ಆಚರಣೆ ಮಾತ್ರವಲ್ಲ, ಬಡವರ, ರೋಗಿಗಳ, ನಿರಾಶ್ರಿತರ, ಶೋಷಿತರ
ಪರ ನಿಲ್ಲುವ ಮಾನವೀಯ ಸೇವೆ. ಇಂತಹ ನಿಸ್ವಾರ್ಥ ಸೇವೆಗೈಯ್ಯುವ ಕರಗಳು ಬಲಗೊಳ್ಳಲಿ, ಇನ್ನಷ್ಟು ಕರಗಳು,
ಮನಗಳು ಇದಕ್ಕೆ ಸೇರ್ಪಡೆಯಾಗಲಿ.
- ಫಾದರ್ ಪೀಟರ್ ಚಿನ್ನಪ್ಪ
No comments:
Post a Comment