02
ಮಾರ್ಚ್
2019, ಶನಿವಾರ
ಸಾಧಾರಣ ಕಾಲದ ಏಳನೇ ವಾರ
ಮೊದಲ ವಾಚನ:
ಸಿರಾಖ 17: 1-15
ಸಿರಾಖ 17: 1-15
1ಸರ್ವೇಶ್ವರ ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿದರು ಪುನಃ ಮಣ್ಣಿಗೇ ಅವನು ಸೇರುವಂತೆ ಮಾಡಿದರು. 2ಮಾನವನಿಗೆ ನಿಯಮಿತ ಕಾಲಗಳನ್ನೂ ದಿನಗಳನ್ನೂ ನೇಮಿಸಿದರು ಭೂಮಿಯ ಮೇಲಿರುವ ಸಕಲದರ ಮೇಲೆ ಅವನಿಗೆ ಅಧಿಕಾರ ವಹಿಸಿದರು. 3ತಮ್ಮ ಪ್ರತಿರೂಪದಲ್ಲಿಯೇ ಮಾನವನನ್ನು ಸೃಷ್ಟಿಸಿದರು ಅವನಿಗೆ ಬೇಕಾದ ಶಕ್ತಿಯನು ಅನುಗ್ರಹಿಸಿದರು. 4ಮಾಡಿದರು ಎಲ್ಲಾ ಜೀವಿಗಳು ಮನುಷ್ಯನಿಗೆ ಭಯಪಡುವಂತೆ ಅಂತೆಯೇ ಮನುಷ್ಯನು ಪಶುಪಕ್ಷಿಗಳ ಮೇಲೆ ಒಡೆತನ ಮಾಡುವಂತೆ. 5ಪಂಚೇಂದ್ರಿಯಗಳನ್ನು ಸರ್ವೇಶ್ವರ ಮನುಷ್ಯನಿಗೆ ದಯಪಾಲಿಸಿದರು ಆರನೇದಾಗಿ, ತನ್ನ ಬುದ್ಧಿಶಕ್ತಿಯಲ್ಲಿ ಅವನು ಪಾಲುಗಾರನನ್ನಾಗಿ ಮಾಡಿದರು ಇವುಗಳನ್ನೆಲ್ಲಾ ವಿಚಾರಿಸಿ ಗ್ರಹಿಸಿಕೊಳ್ಳಲು ಏಳನೇ ವರವನ್ನು ನೀಡಿದರು. 6ಇದಲ್ಲದೆ, ತಿಳಿದುಕೊಳ್ಳಲು ಅವರಿಗೆ ಬುದ್ಧಿಮತಿಯನ್ನು ನೀಡಿದರು ನಾಲಗೆ, ಕಣ್ಣು, ಕಿವಿ, ಹೃದಯಗಳನು ದಯಪಾಲಿಸಿದರು. 7ಜ್ಞಾನವನ್ನೂ ಅರಿವನ್ನೂ ಅವನಲ್ಲಿ ತುಂಬಿಸಿದರು ಒಳ್ಳೆಯದು ಕೆಟ್ಟದು ಯಾವುದೆಂಬುದನ್ನು ವಿವೇಚಿಸುವಂತೆ ಮಾಡಿದರು. 8ತನ್ನ ಕಾರ್ಯಗಳ ಮಹತ್ವವನ್ನು ಅವನಿಗೆ ತೋರಿಸಬೇಕೆಂದು ಇರಿಸಿದರು ಅವನ ಅಂತಃಕರಣದ ಮೇಲೆ ತಮ್ಮ ದೃಷ್ಟಿಯನು. 9ತಮ್ಮ ಈ ಎಲ್ಲ ಕಾರ್ಯಗಳನು ಮನುಷ್ಯ ಹೊಗಳುವಂತೆ ಅನುಗ್ರಹಿಸಿದರು ಸೌಲಭ್ಯವನ್ನು ಅವನಿಗೆ. 10ವಂದಿಸುವರು ಜನರು ಆತನ ಪವಿತ್ರ ನಾಮವನು ಹೊಗಳುವರು ಆತನ ಕಾರ್ಯಗಳ ಮಹಿಮೆಯನು. 11ದಯಪಾಲಿಸಿದನಾತ ಅವರಿಗೆ ವಿವೇಕವನು ಸ್ವಾಸ್ತ್ಯವಾಗಿ ನೀಡಿದನು ಜೀವದಾಯಕ ಧರ್ಮಶಾಸ್ತ್ರವನು. 12ನರರೊಂದಿಗೆ ಮಾಡಿಕೊಂಡನಾತ ಶಾಶ್ವತ ಒಡಂಬಡಿಕೆಯನು ತೋರಿಸಿಕೊಟ್ಟನು ಅವರಿಗೆ ತನ್ನ ವಿಧಿವಚನಗಳನು. 13ಮಾನವರ ಕಣ್ಣುಗಳು ಕಂಡವು ಆತನ ಮಹಿಮೆಯ ಪ್ರಭಾವವನು ಅವರ ಕಿವಿಗಳು ಕೇಳಿದವು ಆತನ ಧ್ವನಿಯ ಗಾಂಭೀರ್ಯವನು. 14ಎಲ್ಲಾ ದುಷ್ಟಕಾರ್ಯಗಳ ಬಗ್ಗೆ ಎಚ್ಚರಿಕೆ’ ಎಂದು ವಿಧಿಸಿದನಾತ ನೆರೆಯವನನ್ನು ಕುರಿತ ನಿಯಮವನು ಆಜ್ಞಾಪಿಸಿದನಾತ. 15ಸರ್ವೇಶ್ವರಸ್ವಾಮಿಯೇ ನ್ಯಾಯಾಧೀಶ ಮನುಷ್ಯರ ಮಾರ್ಗಗಳಿವೆ ನಿತ್ಯವೂ ದೇವರ ಎದುರಿಗೆ ಅವು ಮರೆಯಾಗಿರಲಾರವು ಆತನ ದೃಷ್ಟಿಗೆ.
ಕೀರ್ತನೆ 103: 13-14, 15-16, 17-18
ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ
ಯುಗಯುಗಾಂತರಕೂ
ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ ಕನಿಕರಿಸುವನಾತ ತನಗೆ ಅಂಜುವವರಿಗೆ
ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ
ಮಾನವನ ಆಯುಷ್ಕಾಲ ಹುಲ್ಲಿಗೆ ಸಮಾನ ಹೊಲದ ಹೂವಿನಂತೆ ಅವನ ಬೆಡಗುಬಿನ್ನಾಣ
ಬಿದ್ದುಹೋಗುವುದಾ ಹೂವು ಗಾಳಿಯ ಬಡಿತಕ್ಕೆ ಅದರ ಗುರುತೂ ಇರದಲ್ಲಿ ಮರಳಿ ನೋಡಲಿಕ್ಕೆ
ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು
ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ
ಶುಭಸಂದೇಶ:
ಮಾರ್ಕ 10: 13-16
ಮಾರ್ಕ 10: 13-16
13ಕೆಲವರು, ತಮ್ಮ
ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುಸ್ವಾಮಿಯ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು. 14ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ. 15ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ, ಎಂದರು. 16ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನ್ನಿರಿಸಿ ಹರಸಿದರು.
ಚಿಂತನೆ: ದೇವರ
ಸಾಮ್ರಾಜ್ಯ ಕೆಲವರ ಸ್ವತ್ತಲ್ಲ. ಅದು ಸರ್ವರ ಸ್ವತ್ತು. ಅದು ತ್ರೈಏಕ ದೇವರು ತಮ್ಮ ಅಪರಿಮಿತ
ಪ್ರೀತಿಯಿಂದ ಮಾನವರಿಗೆ ಉದಾರವಾಗಿ ನೀಡುವ ಬೆಲೆ ಕಟ್ಟಲಾಗದ, ಅದ್ಭುತ ಉಡುಗೊರೆ. ಅದು ತ್ರೈಏಕ ದೇವರು ನಮಗೆ ನೀಡುವ ಶಾಶ್ವತ ನಿವಾಸ. ಆ ಸಾಮ್ರಾಜ್ಯದಲ್ಲಿ
ಸಕ್ರಿಯವಾಗಿ ಭಾಗವಹಿಸಲು ಅದರ ಸವಿಯನ್ನು ಸವಿದು ಅನುಭವಿಸಿ ಸಂತೃಪ್ತರಾಗಲು, ಬೇಕು ಮಗುವಿನಂತಹ
ಮುಗ್ದ ಮನಸ್ಸು. ನಿರ್ಮಲ ಹೃದಯ. ಹಣ-ಅಧಿಕಾರದಿಂದ ಅದು ಸಿಗುವುದಿಲ್ಲ. ಶಿಪಾರಸ್ಸಿಗೆ ಅಥವ ನಮ್ಮ
ಶ್ರಮಕ್ಕೆ ಸಿಗುವ ಸಾಮ್ರಾಜ್ಯ ಅದಲ್ಲ. ಪ್ರೀತಿ-ಕ್ಷಮೆ, ನ್ಯಾಯ-ನೀತಿ, ದಯೆ-ಧರ್ಮ ಇರುವಲ್ಲಿ ಅದು ಉದಯವಾಗಿ ನಮ್ಮ ಮುಂದಿನ ಬದುಕಿಗೆ ಆಶ್ರಯ ತಾಣವಾಗುತ್ತದೆ.
ಚಿತ್ರ: ಗೂಗಲ್ ಕೃಪೆ
© 'ದನಿ' ಮಾಧ್ಯಮ ಮನೆ
No comments:
Post a Comment