ಮಂಗಳವಾರ, ಸಂತ ಜೋಸೆಫರ ಮಹೋತ್ಸವ
ಮೊದಲವಾಚನ: 2 ಸಮುವೇಲ 7: 4-5 ,12-14,
16
4 ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು: 5
ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು:
“ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ? 12
ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ
ಅವನ ರಾಜ್ಯವನ್ನು ಸ್ಥಿರಪಡಿಸುವೆನು. 13 ಅವನು
ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.
14 ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. 16 ನಿನ್ನ
ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”
ಕೀರ್ತನೆ 89: 2-3, 4-5, 27, 29
ಶಾಶ್ವತವಾಗಿರುವುದು
ಅವನ ಸಂತತಿ
2:
ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ
3:
ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ ನನ್ನ ದಾಸ ದಾವೀದನಿಗಿತ್ತಿರುವೆ ಈ
ತೆರನಾದ ಶಪಥ:
4:
“ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು”
5:
ಪ್ರಸಿದ್ಧಪಡಿಸುವುದು ಪ್ರಭು,
ಗಗನವು ನಿನ್ನ ಮಹತ್ತನು ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು
27:
ಮಾಡುವೆನವನನು ಜೇಷ್ಠ ಪುತ್ರನನ್ನಾಗಿ ಭೂರಾಜರುಗಳೊಳು ಅತ್ಯುನ್ನತನನ್ನಾಗಿ
29:
ಉಳಿಸುವೆನು ಅವನ ಸಂತಾನವನು ನಿರಂತರವಾಗಿ ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ
ಎರಡನೇ ವಾಚನ: ರೋಮ 4: 13, 16-18,
22
13: ಅಬ್ರಹಾಮನಿಗೂ ಆತನ ಸಂತತಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದರು. ಈ ವಾಗ್ದಾನವನ್ನು ಅಬ್ರಹಾಮನು ಪಡೆದದ್ದು ಧರ್ಮಶಾಸ್ತ್ರದ ಪಾಲನೆಯಿಂದ ಅಲ್ಲ, ಆದರೆ ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರಿಂದ.
16: ದೈವವಾಗ್ದಾನಕ್ಕೆ ವಿಶ್ವಾಸವೇ ಆಧಾರ. ಇವೆಲ್ಲಕ್ಕೂ ದೈವಾನುಗ್ರಹವೇ ಮೂಲ. ಇವು ಅಬ್ರಹಾಮನ ಸಂತತಿಯವರಿಗೆ, ಅಂದರೆ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರಿಗೆ ಮಾತ್ರವಲ್ಲ, ಅಬ್ರಹಾಮನಂತೆ ದೇವರಲ್ಲಿ ವಿಶ್ವಾಸ ಇಟ್ಟವರೆಲ್ಲರಿಗೂ ಖಚಿತವಾಗಿ ದೊರೆಯುತ್ತದೆ. ಏಕೆಂದರೆ, ಅಬ್ರಹಾಮನೇ ನಮ್ಮೆಲ್ಲರಿಗೂ ಮೂಲಪಿತ.
17: “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತನನ್ನಾಗಿ ನೇಮಿಸಿದ್ದೇನೆ,” ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ. ಹೌದು, ಮೃತರನ್ನು ಜೀವಂತಗೊಳಿಸುವವರೂ ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವರೂ ಆದ ದೇವರಲ್ಲಿ ಆತನು ವಿಸ್ವಾಸವಿಟ್ಟನು. ಆದ್ದರಿಂದ ಈ ವಾಗ್ದಾನವನ್ನು ಸಾಕ್ಷಾತ್ ದೇವರಿಂದಲೇ ಪಡೆದನು.
18: ಆತನ ವಿಶ್ವಾಸ ಮತ್ತು ಭರವಸೆ ಎಷ್ಟರಮಟ್ಟಿಗೆ ಇತ್ತೆಂದರೆ, ಈ ದೈವವಾಗ್ದಾನವು ನೆರವೇರುವ ನಿರೀಕ್ಷೆ ಇಲ್ಲದಿದ್ದರೂ ಆತನು ದೇವರನ್ನು ನಂಬಿದನು. ಆದುದರಿಂದಲೇ “ನಿನ್ನ ಸಂತಾನವು ನಕ್ಷತ್ರಗಳಷ್ಟು ಅಸಂಖ್ಯಾತ ಆಗುವುದು,” ಎಂಬ ಹೇಳಿಕೆಯಂತೆ ಆತನು ಅನೇಕ ಜನಾಂಗಗಳಿಗೆ ಮೂಲಪಿತನಾದನು.
22: ಆದ್ದರಿಂದಲೇ, “ದೇವರು ಆತನನ್ನು ತಮ್ಮೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಲಿಖಿತವಾಗಿದೆ.
ಶುಭಸಂದೇಶ: ಮತ್ತಾಯ 1: 18-21, 24
18 ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು
ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು
ಪವಿತ್ರಾತ್ಮ ಪ್ರಭಾವದಿಂದ. 19 ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ
ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. 20 ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. 21 ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು 'ಯೇಸು'
ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ"
ಎಂದನು. 24 ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು
ವಿವಾಹ ಮಾಡಿಕೊಂಡನು
ಚಿಂತನೆ: ಸಂತ ಜೋಸೆಫರು ದೈವ ಭಕ್ತರೂ
ನೀತಿವಂತರೂ ಆಗಿದ್ದರು. ಇವರು ದೇವರಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು ಹಾಗೂ ನಿರಂತರವೂ
ವಿಧೇಯರಾಗಿದ್ದರು. ಮಾತೆ ಮರಿಯಳ ಕಷ್ಟ ದುಃಖದಲ್ಲಿ ಆಶ್ರಯದಾತರಾಗಿದ್ದರು. ಪ್ರಭು ಕ್ರಿಸ್ತರಿಗೆ
ಆದರ್ಶ ತಂದೆಯಾಗಿ ಪವಿತ್ರ ಕುಟುಂಬದ ನಿರ್ವಹಣೆಯಲ್ಲಿ ಸಫಲರಾದ ಮಹಾ ತ್ಯಾಗಮಯಿ. ಅಂದಿನ
ಸಮಾಜದಲ್ಲಿ ನೀತಿವಂತರಾಗಿ ಜೀವನ ಸಾಗಿಸುವುದು ಅಷ್ಟು ಸುಲಭವಾಗಿರಲಿಲ್ಲ ಆದರೂ ಜೋಸೆಫರು ತಮ್ಮ
ಸರಳ ಹಾಗೂ ಉದಾರ ಮನಸ್ಸಿನಿಂದ ಜನರ ಮೆಚ್ಚಿಗೆಗೂ ಪಾತ್ರರಾಗಿದ್ದರು. ಇದಕ್ಕೆ ಕಾರಣ ಅವರು
ದೇವರನ್ನು ತಮ್ಮ ಜೀವನದ ಕೇಂದ್ರ ಬಿಂದುವಾಗಿಟ್ಟಕೊಂಡು ನಿಸ್ವಾರ್ಥ ಬದುಕನ್ನು
ರೂಡಿಸಿಕೊಂಡಿದ್ದರು. ನಮ್ಮ ಕುಟುಂಬಗಳಿಗೆ ಅವರು ನಿಜವಾಗಲೂ ಆದರ್ಶಪ್ರಾಯರು.
ಮಾರ್ಚ್ 19 : ಸಂತ ಜೋಸೆಫರು

ಪವಿತ್ರ ಗ್ರಂಥ ನಮಗೆ ತಿಳಿಸುವಂತೆ, ಸಂತ ಜೋಸೆಫರು ದಾವೀದ ವಂಶದವರು ಮಿನುಗುವ ಪಿತಾಮಹಾರಲ್ಲಿ ಒಬ್ಬರು. ಇವರು ಸರಳರು, ದೀನರು ಮತ್ತು ಬಡಗಿಯೂ ಆಗಿದ್ದರು. ಸಂತ ಜೋಸೆಫರು ಒಬ್ಬ ನೀತಿವಂತ, ಕರುಣಾಮಯಿ ಮತ್ತು ಇತರರಿಗೆ ಒಳಿತನ್ನು ಬಯುಸುವ ವ್ಯಕ್ತಿಯಾಗಿದ್ದರು. ಈ ಕಾರಣದಿಂದಲೇ ಮರಿಯಳು ಗರ್ಭಿಣಿ ಎಂದು ತಿಳಿದಾಗ ಆಕೆಯನ್ನು ಸಮಾಜದ ಕೆಟ್ಟ ದೃಷ್ಟಿಗೆ, ಮತ್ತು ಅವಮಾನಕ್ಕೆ ಗುರಿಮಾಡದೆ, ಯಾರಿಗೂ ತಿಳಿಯದಂತೆ ಬಿಟ್ಟು ಬಿಡಲು ಯೋಚಿಸುತ್ತಾನೆ. ಆದರೆ ದೇವದೂತನ ಸಂದೇಶದ ಪ್ರಕಾರ, ಮರಿಯಳನ್ನು ಮದುವೆಯಾಗಿ, ಒಳ್ಳೆಯ ಗಂಡನಾಗಿ ಮತ್ತು ಬಾಲಯೇಸುವಿಗೆ ಒಳ್ಳೆಯ ಪೋಷಕ ತಂದೆಯಾಗುತ್ತಾರೆ. (ಮತ್ತಾಯ 1:19-25) ಪುನಃ ದೇವದೂತನ ಆದೇಶದಂತೆ, ಬಾಲಯೇಸುವನ್ನು, ಹೆರೋದರಸನ ಕೊಲೆಗಡುಕ ಸೈನಿಕರಿಂದ ರಕ್ಷಿಸಲು, ಪತ್ನಿ ಮರಿಯಳೊಂದಿಗೆ, ಬಾಲಯೇಸುವಿನೊಂದಿಗೆ ಈಜಿಪ್ಟ್ ದೇಶಕ್ಕೆ ಕೊಂಡುಹೋಗಿ, ಅವರನ್ನು ರಕ್ಷಿಸುತ್ತಾರೆ. (ಮತ್ತಾಯ 2: 13-23) ಸಂತ ಜೋಸೆಫರು ಯೇಸುವನ್ನು ಅತ್ಯಧಿಕವಾಗಿ ಪ್ರೀತಿಸಿದರು. ಯಾವಾಗಲೂ ಬಾಲಯೇಸುವನ್ನು ರಕ್ಷಿಸುವ, ಕಾಪಾಡುವ ಕೆಲಸವನ್ನು ದೇವರು ಅವರಿಗೆ ನೀಡಿದರು. ದೇವರ ಕಾರ್ಯವನ್ನು, ಚಿತ್ತವನ್ನು ಸಂಪೂರ್ಣವಾಗಿ ನೆರವೇರಿಸಿದರು. ಯೇಸುವಿನ ಸೇವಾ ಜೀವನ, ಅವರ ಮರಣ, ಪುನರುತ್ಥಾನದ ಸಂದರ್ಭದಲ್ಲಿ ಸಂತ ಜೋಸೆಫರ ಸುಳಿವಿಲ್ಲದಿರುವುದರಿಂದ, ಇವುಗಳ ಮುಂಚೆಯೇ ಮರಣ ಹೊಂದಿರಬಹುದೆಂದು ಕೆಲವು ಇತಿಹಾಸಕಾರರ ಆಲೋಚನೆ. ಈ ಕಾರಣದಿಂದಲೇ ಇಂದು ಇವರನ್ನು ಮರಣ ಹೊಂದುವವರ ಪಾಲಕ ಸಂತರು (Patron Saint of the dying) ಎನ್ನುತ್ತಾರೆ. ಬಹುಶಃ ಮಾತೆ ಮರಿಯಳು ಹಾಗೂ ಯೇಸುವು ಅವರ ಮರಣದ ಸಮಯದಲ್ಲಿ ಹತ್ತಿರವಿದ್ದರು, ಅಂತೆಯೇ ಮಾನವರೆಲ್ಲರಿಗೂ ಆ ಅವಕಾಶ ಸಿಗಲೆಂದು ಅವರಲ್ಲಿ ಇಂದಿಗೂ ಪ್ರಾರ್ಥಿಸುವ ವಾಡಿಕೆಯಿದೆ.
ಸಂತ ಜೋಸೆಫರು ಇಂದು ಸರ್ವವ್ಯಾಪಿ ಧರ್ಮಸಭೆಯ, ಕುಟುಂಬದ, ತಂದೆಯರ, ಗರ್ಭಿಣಿ ಮಹಿಳೆಯರ, ಪ್ರಯಾಣಿಕರ, ನಿರಾಶ್ರಿತರ, ಎಲ್ಲಾ ಕಾರ್ಮಿಕರ ಪಾಲಕ ಸಂತರೆಂದು ಕರೆಯಲ್ಪಡುತ್ತಾರೆ.
ಪ್ರಾರ್ಥನೆ: ಸಂತ ಜೋಸೆಫರೇ, ಸರ್ವ ಧರ್ಮಸಭೆಯ ಪಾಲಕ ಸಂತರೇ, ಯೇಸುಬಾಲರನ್ನು ಪ್ರೀತಿಯಿಂದ, ಅತ್ಯಂತ ಕಾಳಜಿಯಿಂದ, ಮುತುವರ್ಜಿಯಿಂದ ಕಾಪಾಡಿದಂತೆ, ನಮ್ಮ ಧರ್ಮಸಭೆಯನ್ನು ನಮ್ಮ ಕುಟುಂಬಗಳನ್ನು ಕಾಯ್ದು ಸಂರಕ್ಷಿಸಿರಿ, ನಮ್ಮೆಲ್ಲರಿಗೂ ಬೇಕಾದ ನಿಮ್ಮ ಸಹಾಯಹಸ್ತ ಮತ್ತು ಮಾರ್ಗದರ್ಶನವನ್ನು ನೀಡುತ್ತ, ನಿಮ್ಮ ಪುತ್ರ ಪ್ರಭು ಯೇಸುವಿನಡೆ ಮುನ್ನಡೆಸಿರಿ ಆಮೆನ್.
No comments:
Post a Comment