21 ಮಾರ್ಚ್ 2019

ಗುರುವಾರ, ತಪಸ್ಸುಕಾಲದ ಎರಡನೇ ವಾರ

ಮೊದಲವಾಚನ: ಯೆರೆಮೀಯ 17: 5-10
5 ಇವು ಸರ್ವೇಶ್ವರನ ಮಾತುಗಳು: “ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರಜನ್ಮದವರನ್ನೇ ತನ್ನ ಭುಜಬಲ ವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು!6 ಇಂಥವನು ಅಡವಿಯಲ್ಲಿನ ಜಾಲಿಗಿಡಕ್ಕೆ ಸಮಾನನು. ಶುಭಸಂಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳು ಬೆಳೆಯಿಲ್ಲದ ಬೆಂಗಾಡಿನೊಳು ವಾಸಿಸುವವನ ಪರಿಸ್ಥಿತಿ ಅವನದು. 7 ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ. 8 ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆಬಿಡುವ, ಫಲನೀಡುವ ಮರಕ್ಕೆ ಸಮಾನನು ಆತ. 9 ಮಾನವ ಹೃದಯ ಎಲ್ಲಕ್ಕಿಂತ ವಂಚಕ ಅದಕ್ಕೆ ಅಂಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ. 10 ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ ಹೌದು, ಅಂತರಿಂದ್ರಿಯಗಳನ್ನು ಪರಿಶೋಧಿಸುವಾತ.

ಕೀರ್ತನೆ 1: 1-2, 3, 4, 6
ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು

1: ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ ನನ್ನ ಕೂಗು ಸೇರಲಿ ನಿನ್ನ ಬಳಿಗೆ
2: ಕಷ್ಟಕಾಲದೊಳು ವಿಮುಖನಾಗಬೇಡ ನೀನೆನಗೆ ಕಿವಿಗೊಡು, ಮೊರೆಯಿಡುವಾಗಲೆ, ಸದುತ್ತರಿಸು ಬೇಗನೆ
3: ಮಾಯವಾಗುತ್ತಿದೆ ನನ್ನೀ ಜೀವಮಾನ ಹೊಗೆಯಂತೆ ಉರಿಯುತ್ತಿವೆ ಎನ್ನೆಲುಬುಗಳು ಒಲೆಯಲ್ಲಿಟ್ಟ ಕೊರಡಿನಂತೆ
4: ಬಿಸಿಲಿಗೆ ಬಾಡಿದ ಹುಲ್ಲಿನಂತಿದೆ ಎನ್ನೆದೆ ತಿಂಡಿತೀರ್ಥವನುಣ್ಣಲೂ ನಾ ಮರೆತು ಹೋದೆ
6: ಅಡವಿಯ ರಣಹದ್ದಿಗೆ ಸಮನಾದೆ ಹಾಳೂರಿನ ಗೂಗೆಯ ಹಾಗಾದೆ

ಶುಭಸಂದೇಶ: ಲೂಕ 16: 19-31
19 ಒಬ್ಬ ಧನಿಕನಿದ್ದ. ಬೆಲೆಬಾಳುವ ಉಡುಗೆ-ತೊಡುಗೆಗಳನ್ನೂ ನಯವಾದ ನಾರುಮಡಿಗಳನ್ನೂ ಧರಿಸಿಕೊಂಡು ದಿನನಿತ್ಯವೂ ಸುಖಭೋಗಗಳಲ್ಲಿ ಮೈಮರೆಯುತ್ತಿದ್ದ. 20ಅವನ ಮನೆಯ ಬಾಗಿಲಲ್ಲೇ ಲಾಜರನೆಂಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. 21ಧನಿಕನು ತಿಂದು ಬಿಸಾಡಿದ ಎಂಜಲಿನಿಂದ ಹಸಿವು ನೀಗಿಸಿಕೊಳ್ಳಲು ಅವನು ಹಂಬಲಿಸುತ್ತಿದ್ದ. ಅಷ್ಟುಮಾತ್ರವಲ್ಲ, ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
22 ಒಂದು ದಿನ ಆ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ. ಅವನ ಶವಸಂಸ್ಕಾರವೂ ಮುಗಿಯಿತು. 23ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದ ಲಾಜರನನ್ನೂ ಕಂಡ. 24'ಓ ಪಿತಾಮಹ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆಪಡುತ್ತಿದ್ದೇನೆ; ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಗೆಗೆ ತಂಪನ್ನುಂಟುಮಾಡುವಂತೆ ಅವನನ್ನು ಇಲ್ಲಿಗೆ ಕಳುಹಿಸಿಕೊಡು' ಎಂದು ದನಿಯೆತ್ತಿ ಮೊರೆಯಿಟ್ಟ. 25ಅದಕ್ಕೆ ಅಬ್ರಹಾಮನು, 'ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖಸಂಪತ್ತನ್ನು ನೀನು ಅನುಭವಿಸಿದೆ; ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟಪಡುತ್ತಿರುವೆ. 26ಅಷ್ಟೇ ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದರೂ ಬರಲಾಗದು; ಆ ಕಡೆಯಿಂದ ನಮ್ಮ ಬಳಿಗೆ ದಾಟಿಬರಲೂ ಸಾಧ್ಯವಿಲ್ಲ,' ಎಂದ. 27ಆಗ ಆ ಧನಿಕ, 'ಪಿತಾಮಹ ಅಬ್ರಹಾಮ, ಲಾಜರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು. 28ನನಗೆ ಐವರು ಸೋದರರಿದ್ದಾರೆ; ಅವರೂ ಈ ಯಾತನಾಸ್ಥಳಕ್ಕೆ ಬಾರದಂತೆ ಇವನು ಹೋಗಿ ಎಚ್ಚರಿಕೆಕೊಡಲಿ,' ಎಂದು ಬೇಡಿಕೊಂಡ. 29ಅದಕ್ಕೆ ಅಬ್ರಹಾಮನು, 'ಅವರಿಗೆ ಎಚ್ಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳ ಗ್ರಂಥಗಳಿವೆ. ಅವುಗಳಿಗೆ ಕಿವಿಗೊಡಲಿ,' ಎಂದು ಉತ್ತರಕೊಟ್ಟ. 30'ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು,' ಎಂದು ಧನಿಕನು ಮತ್ತೆ ಕೇಳಿಕೊಂಡ. 31ಅದಕ್ಕೆ ಅಬ್ರಹಾಮನು, 'ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತನಾಗಿ ಎದ್ದುಬಂದರೂ ಅವರು ನಂಬುವುದಿಲ್ಲ,' ಎಂದ.


ಚಿಂತನೆ: ಸರ್ವೇಶ್ವರನಲ್ಲಿ ಭರವಸೆ ಇಟ್ಟವನು ನಿಶ್ಚಿಂತೆಯಿಂದಿರಬಹುದು. ಏಕೆಂದರೆ ದೇವರು ಅವರಿಗೆ ಎಲ್ಲವನ್ನೂ ಒದಗಿಸುವರು. ಸರ್ವೇಶ್ವರನಲ್ಲಿ ಭರವಸೆ ಇಲ್ಲದವನು ಸರ್ವವನ್ನೂ ಕಳೆದುಕೊಳ್ಳುವನು. ಲಾಜರ್ ಸರ್ವೇಶ್ವರನಲ್ಲಿ ಭರವಸೆ ಇಟ್ಟಿದ್ದ. ಲೌಕಿಕವಾಗಿ ನಿರ್ಬಾಗ್ಯನಾಗಿದ್ದ. ಸತ್ತಾಗ ಪರಮಾನಂದವನ್ನು ಅನುಭವಿಸಿದ. ಧನಿಕನಿಗೆ ಲೌಕಿಕವಾಗಿ ಎಲ್ಲ ಸೌಭಾಗ್ಯವೂ ಇತ್ತು, ತಿಂದು ತೇಗಿದ. ತನ್ನ ಕಣ್ಮುಂದೆಯೇ ಕಷ್ಟದಲ್ಲಿದ್ದ ಲಾಜರ್ ಅವನಿಗೆ ಕಾಣಲೇ ಇಲ್ಲ. ಧನಿಕನು ಸತ್ತ ನಂತರ ಲಾಜರ್ ಅಬ್ರಹಾಮನ ಪಕ್ಕದಲ್ಲಿ ಕುಳಿತು ಆನಂದಿಸುವುದನ್ನು ಕಂಡು ದಂಗಾದ, ಬೇಡಿದ ಆದರೆ ಅದು ಫಲಿಸಲಿಲ್ಲ. ಕಾರಣ ಈ ಲೋಕದಲ್ಲಿ ಅವನೆಂದೂ ಲಾಜರನ ಸಂತೋಷಕ್ಕೆ ಕಾರಣವಾಗಲಿಲ್ಲ. ನೀವು ಕೊಟ್ಟ ಅಳತೆಯಲ್ಲಿಯೇ ನಿಮಗೂ ಕೊಡಲಾಗುವುದು ಎಂಬ ಸತ್ಯವನ್ನು ಮರೆತು ಸ್ವಾರ್ಥದಲ್ಲಿ ಮುಳುಗಿಹೋಗಿದ್ದ. ಈಗ ಹನಿ ನೀರಿಲ್ಲದೆ ತವಕಿಸುತಿದ್ದಾನೆ!

No comments:

Post a Comment