22 ಮಾರ್ಚ್ 2019

ಶುಕ್ರವಾರ, ತಪಸ್ಸುಕಾಲದ ಎರಡನೇ ವಾರ

ಮೊದಲವಾಚನ: ಆದಿ 37: 3-4, 12-13, 17-28
3 ಜೋಸೆಫನು ಯಕೋಬನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗ. ಎಂದೇ ಯಕೋಬನಿಗೆ ಅವನ ಮೇಲೆ ಮಿಕ್ಕ ಮಕ್ಕಳಿಗಿಂತ ಮಿಗಿಲಾದ ಪ್ರೀತಿ. ಅಲಂಕೃತವಾದ ಒಂದು ನಿಲುವಂಗಿಯನ್ನೂ ಅವನಿಗೆ ಮಾಡಿಸಿಕೊಟ್ಟಿದ್ದ. 4 ತಂದೆ ತನ್ನ ಎಲ್ಲ ಮಕ್ಕಳಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸುವುದನ್ನು ಕಂಡು, ಅಣ್ಣಂದಿರು ಜೋಸೆಫನನ್ನು ಹಗೆ ಮಾಡಿದರು. ಅವನೊಡನೆ ಸ್ನೇಹಭಾವದಿಂದಲೂ ಮಾತಾಡದೆ ಹೋದರು. 12 ಒಮ್ಮೆ ಜೋಸೆಫನ ಅಣ್ಣಂದಿರು ತಂದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ13 ಯಕೋಬನು ಜೋಸೆಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ, ಅಲ್ಲವೇ? ಅವರ ಬಳಿಗೆ ನಿನ್ನನ್ನು ಕಳಿಸಬೇಕೆಂದಿದ್ದೇನೆ,” ಎನ್ನಲು17 ಅದಕ್ಕೆ ಮನುಷ್ಯ, “ಅವರು ಇಲ್ಲಿಂದ ಹೊರಟುಹೋದರು; ‘ದೋತಾನಿಗೆ ಹೋಗೋಣಎಂದು ಮಾತಾಡುವುದನ್ನು ಕೇಳಿದೆ,” ಎಂದ. ಜೋಸೆಫನು ಅವರನ್ನು ಹುಡುಕುತ್ತಾ ಹೋಗಿ, ದೋತಾನಿನಲ್ಲಿ ಅವರನ್ನು ಕಂಡ. 18 ಅಣ್ಣಂದಿರು ಅವನನ್ನು ದೂರದಿಂದಲೇ ನೋಡಿದರು. ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲಲು ಒಳಸಂಚು ಮಾಡಿಕೊಂಡರು. 19 “ಅಗೋ ಕನಸುಗಾರ ಬರುತ್ತಾ ಇದ್ದಾನೆ!20 ನಾವು ಅವನನ್ನು ಕೊಂದು ಬಾವಿಯೊಂದರಲ್ಲಿ ಹಾಕಿಬಿಡೋಣ. ‘ಕಾಡುಮೃಗ ಅವನನ್ನು ತಿಂದುಬಿಟ್ಟಿತು’; ಎಂದು ಹೇಳಿದರೆ ಆಯಿತು, ಬನ್ನಿ. ಆಗ ಅವನ ಕನಸುಗಳು ಏನಾಗುತ್ತವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 21 ರೂಬೇನನು ಮಾತನ್ನು ಕೇಳಿಸಿಕೊಂಡು, ಅವನನ್ನು ಅವರ ಕೈಯಿಂದ ತಪ್ಪಿಸುವ ಉದ್ದೇಶದಿಂದ, “ನಾವು ಅವನ ಪ್ರಾಣ ತೆಗೆಯಬೇಕಾಗಿಲ್ಲ, 22 ರಕ್ತಪಾತ ಕೂಡದು. ಕಾಡಿನಲ್ಲಿರುವ ಬಾವಿ ಒಂದರಲ್ಲಿ ಹಾಕಿಬಿಡಿ, ಅವನ ಮೇಲೆ ಕೈಹಾಕಬೇಡಿ,” ಎಂದು ಅವರಿಗೆ ಹೇಳಿದ. ಅವನನ್ನು ಅವರಿಂದ ತಪ್ಪಿಸಿ ತಂದೆಗೆ ಮತ್ತೆ ಒಪ್ಪಿಸಬೇಕೆಂಬ ಗುರಿ ರೂಬೇನನದಾಗಿತ್ತು. 23 ಜೋಸೆಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದುಬಿಟ್ಟರು. 24 ಅವನನ್ನು ಹಿಡಿದು ಬಾವಿಯೊಳಗೆ ಹಾಕಿದರು. ಬಾವಿ ನೀರಿಲ್ಲದೆ ಬರಿದಾಗಿತ್ತು. 25 ತರುವಾಯ ಅವರು ಊಟಕ್ಕೆ ಕುಳಿತುಕೊಂಡರು. ಅಷ್ಟರಲ್ಲಿ, ಇಷ್ಮಾಯೇಲರ ಗುಂಪೊಂದು ಗಿಲ್ಯಾದಿನಿಂದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒಂಟೆಗಳ ಮೇಲೆ ಪರಿಮಳ ಪದಾರ್ಥ, ಸುಗಂಧ ತೈಲ, ರಸಗಂಧ ಇವುಗಳನ್ನು ಹೇರಿಕೊಂಡು, ಈಜಿಪ್ಟಿಗೆ ಪ್ರಯಾಣಮಾಡುತ್ತಿದ್ದರು. 26 ಆಗ ಯೆಹೂದನು ತನ್ನ ಅಣ್ಣತಮ್ಮಂದಿರಿಗೆ, “ನಾವು ನಮ್ಮ ತಮ್ಮನನ್ನು ಕೊಂದು ಕೊಲೆಯನ್ನು ಮರೆಮಾಡಿದರೆ ಪ್ರಯೋಜನವೇನು? 27 ಅವನನ್ನು ಇಷ್ಮಾಯೇಲರಿಗೆ ಮಾರಿಬಿಡೋಣ, ಬನ್ನಿ; ನಾವು ಅವನ ಮೇಲೆ ಕೈ ಹಾಕಬಾರದು, ಅವನು ನಮ್ಮ ತಮ್ಮನಲ್ಲವೆ? ರಕ್ತಸಂಬಂಧಿಯಲ್ಲವೆ?” ಎಂದು ಹೇಳಿದ. ಅವನ ಮಾತಿಗೆ ಅಣ್ಣತಮ್ಮಂದಿರು ಒಪ್ಪಿದರು. 28 ಅಷ್ಟರಲ್ಲಿ, ಮಿದ್ಯಾನಿನ ವರ್ತಕರು ಹಾದುಹೋಗುತ್ತಿದ್ದರು. ಅವರು ಜೋಸೆಫನನ್ನು ಬಾವಿಯೊಳಗಿಂದ ಎತ್ತಿ ಇಷ್ಮಾಯೇಲರಿಗೆ ಇಪ್ಪತ್ತು ಬೆಳ್ಳಿನಾಣ್ಯಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡು ಹೋದರು.

ಕೀರ್ತನೆ 105:16-17, 18-19, 20-21
ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು

16: ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು ಮುರಿದುಬಿಟ್ಟನು ಆಹಾರವೆಂಬಾ ಊರುಗೋಲನು
17: ಕಳಿಸಿದ ಅವರಿಗೆ ಮುಂದಾಗಿ ಒಬ್ಬಾತನನು ದಾಸತ್ವಕೆ ಮಾರಲಾದ ಜೋಸೆಫನನು
18: ಅವನ ಕಾಲು ನೊಂದವು ಸಂಕೋಲೆಗಳಿಂದ ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ
19: ಕ್ರಮೇಣ ಕೈಗೂಡಿತು ಜೋಸೆಫನು ನುಡಿದದ್ದು ಪ್ರಭುವಿನ ವಾಣಿ ಕಂಡು ಬಂದಿತು ಸತ್ಯವೆಂದು
20: ಬಿಡಿಸಲವನನು ಅರಸ ಕಳಿಸಿದ ಆಳನು ಬಿಡುಗಡೆಮಾಡಿದ ಜನಾಧಿಪತಿ ಅವನನು
21: ನೇಮಿಸಿದವನನು ತನ್ನ ಮನೆಗೆ ಯಜಮಾನನ್ನಾಗಿ ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ

ಶುಭಸಂದೇಶ: ಮತ್ತಾಯ 21: 33-43, 45-46
33 ಯೇಸುಸ್ವಾಮಿ ಮುಖ್ಯಯಾಜಕರಿಗೂ ಪ್ರಜಾಪ್ರಮುಖರಿಗೂ ಈ ಸಾಮತಿಯನ್ನು ಹೇಳಿದರು: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಆನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. 34 ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. 35 ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು. 36 ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು. 37 ಕಟ್ಟಕಡೆಗೆ ಯಜಮಾನ, 'ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು' ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ. 38 ಆದರೆ ಗೇಣಿದಾರರು ಮಗನನ್ನು ಕಂಡೊಡನೇ, 'ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ,' ಎಂದು ತಮ್ಮತಮ್ಮಲ್ಲೇ ಒಳಸಂಚು ಮಾಡಿಕೊಂಡರು. 39 ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ, ಕೊಂದುಹಾಕಿದರು.
40 ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರರಿಗೆ ಏನು ಮಾಡುವನು? ಎಂದು ಯೇಸು ಕೇಳಿದರು. 41 ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು, ಎಂದು ಅಲ್ಲಿದ್ದವರು ಉತ್ತರಕೊಟ್ಟರು.
                42 ಬಳಿಕ ಯೇಸು ಇಂತೆಂದರು:
'ಮನೆ ಕಟ್ಟುವವರು
     ಬೇಡವೆಂದು ಬಿಸಾಡಿದ ಆ ಕಲ್ಲೇ
     ಪ್ರಮುಖ ಮೂಲೆಗಲ್ಲಾಯಿತು!
     ಸರ್ವೇಶ್ವರನಿಂದಲೇ ಆದ ಈ ಕಾರ್ಯ
     ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!'
ಎಂಬ ವಾಕ್ಯವನ್ನು ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೆ? 43 ಆದುದರಿಂದ ನಾನು ನಿಮಗೆ ಹೇಳುತ್ತೇನೆ, 'ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು. 45 ಮುಖ್ಯ ಯಾಜಕರೂ ಫರಿಸಾಯರೂ ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, 'ಇವನು ನಮ್ಮನ್ನು ಕುರಿತೇ ಹೀಗೆ ಮಾತನಾಡುತ್ತಿದ್ದಾನೆ,' ಎಂದು ಅರ್ಥ ಮಾಡಿಕೊಂಡರು. ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. 46 ಆದರೆ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ, ಜನರು ಯೇಸುವನ್ನು ಪ್ರವಾದಿ ಎಂದು ಸನ್ಮಾನಿಸುತ್ತಿದ್ದರು.


ಚಿಂತನೆ: ಯಾಕೋಬನ ಕಿರಿಯ ಮಗ ಜೋಸೆಫ್. ಇವನನ್ನು ಇತರ ಮಕ್ಕಳಿಗಿಂತ ಸ್ವಲ್ಪ ಹೆಚ್ಚಾಗಿ ಪ್ರೀತಿಸಿದ. ಇದು ಜೋಸೆಫನ ಸಹೋದರರಲ್ಲಿ ಅಸೂಯೆಯನ್ನು ಉಂಟು ಮಾಡಿತು. ಆ ಕಾರಣ ಅವರು ಅವನನ್ನು ಸಂಪೂರ್ಣವಾಗಿ ಮುಗಿಸಿಬಿಡಲು ಯೋಜನೆ ರೂಪಿಸಿದರು. ನೀರಿಲ್ಲದ ಬಾವಿಯಲ್ಲಿ ಹಾಕಿದರು. ಸಫಲರಾದೆವೆಂದು ಆನಂದಿಸಿದರು. ಆದರೆ ಅಂತಿಮವಾಗಿ ಅವನ ಗುಲಾಮರಾದರು. ಇಂದಿನ ಶುಭಸಂದೇಶದಲ್ಲಿಯೂ ಜನರು ಅಸೂಯೆ ಹಾಗೂ ಸ್ವಾರ್ಥದಿಂದ ತಮ್ಮ ರಕ್ಷಕನನ್ನೇ ತಿರಸ್ಕರಿಸುತ್ತಾರೆ. ತಮ್ಮ ರಕ್ಷಣೆಯನ್ನು ತಾವೇ ಕಳೆದುಕೊಳ್ಳುತ್ತಾರೆ. ರಕ್ಷಣೆ ಉಚಿತ. ಆದರೆ ಅದನ್ನು ತಿರಸ್ಕರಿಸುವವನಿಗೆ ದಂಡನೆ ಖಚಿತ. 

No comments:

Post a Comment