23 ಮಾರ್ಚ್ 2019

ಶನಿವಾರ, ತಪಸ್ಸುಕಾಲದ ಎರಡನೇ ವಾರ, ಸಂತ ತುರಿಬಿಯುಸ್

ಮೊದಲವಾಚನ: ಮೀಕ 7: 14-15, 18-20
14 ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. 15 ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ. 18 ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. 19 ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ.
20 ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ

ಕೀರ್ತನೆ 103:1-2, 3-4, 9-10, 11-12
ಪ್ರಭು ದಯಾಳು, ಕೃಪಾಪೂರ್ಣನು ಸಹನಶೀಲನು, ಪ್ರೀತಿಮಯನು

1: ಭಜಿಸು ನನ್ನ ಮನವೇ, ಭಜಿಸು ಪ್ರಭುವನು ನನ್ನ ಅಂತರಂಗವೇ, ಭಜಿಸು ಆತನನು ನೆನೆ ಆತನ ಪರಮಪಾವನ ನಾಮವನು
2: ಭಜಿಸು ನನ್ನ ಮನವೇ, ಭಜಿಸು ಪ್ರಭುವನು ಮರೆಯದಿರು ಆತನ ಉಪಕಾರಗಳೊಂದನು
3: ಮನ್ನಿಸುವನಾತ ನನ್ನ ದೋಷಗಳನು ವಾಸಿಮಾಡುವನು ನನ್ನ ರೋಗಗಳನು
4: ಉಳಿಸುವನು ಪಾತಾಳದ ಕೂಪದಿಂದ ನನ್ನನು ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು
9: ಆತನು ಸದಾ ತಪ್ಪು ಹುಡುಕುವವನಲ್ಲ ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ
10: ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ
11: ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ
12: ಪಡುವಣದಿಂದ ಮೂಡಣವೆಷ್ಟೋ ದೂರ ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ

ಶುಭಸಂದೇಶ: ಲೂಕ 15: 1-3, 11-32
ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. 2ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ, ಎಂದು ಗೊಣಗಿದರು. 3ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು:11 ಯೇಸುಸ್ವಾಮಿ ಮುಂದುವರಿಸುತ್ತಾ ಈ ಸಾಮತಿಯನ್ನು ಹೇಳಿದರು: ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. 12ಅವರಲ್ಲಿ ಕಿರಿಯವನು 'ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,' ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. 13ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲು ಮಾಡಿಬಿಟ್ಟ. 14ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. 15ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. 16ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. 17ಆಗ ಅವನಿಗೆ ಬುದ್ಧಿ ಬಂದಿತು. 'ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. 18ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, 'ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; 19ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,' ಎಂದುಕೊಂಡ. 20ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ.
ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. 21ಆದರೂ ಮಗನು, 'ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ' ಎಂದ. 22ತಂದೆಯಾದರೋ ಆಳುಗಳನ್ನು ಕರೆದು, 'ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ; 23ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ. 24ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,' ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.
25ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. 26'ಮನೆಯಲ್ಲೇನು ವಿಶೇಷ?' ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. 27'ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,' ಎಂದು ಆಳು ತಿಳಿಸಿದ.  
28ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ 29ಅವನು, 'ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. 30ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!' ಎಂದು ವಾದಿಸಿದ. 31ಆಗ ತಂದೆ ಅವನಿಗೆ, 'ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. 32ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?' ಎಂದನು.

ಚಿಂತನೆ: ಮುರಿದ ಸಂಬಂಧಗಳನ್ನು ಮರುರೂಪಿಸುವುದು ಕ್ಷಮೆ. ಮನಪರಿವರ್ತನೆ ಹೊಂದಿ ತಮ್ಮ ತಪ್ಪುಗಳಿಗೆ ತಕ್ಕ ಪ್ರಾಯಶ್ಚಿತ್ತ ಮಾಡುವ ಸರ್ವರಿಗೂ ಕ್ಷಮೆ ಹೇರಳವಾಗಿ ಲಭಿಸುತ್ತದೆ. ಯಾಕೆಂದರೆ ದೇವರು ನೈಜ ಮನಪರಿವರ್ತನೆ ಹೊಂದುವ ಸರ್ವರಿಗೂ ಕ್ಷಮೆ ನೀಡಲು ಸದಾ ತವಕಿಸುತ್ತಾರೆ.

ಇಂದಿನ ಶುಭಸಂದೇಶ ಇದಕ್ಕೆ ಉತ್ತಮ ಉದಾಹರಣೆ. ದುಂದುಗಾರನ ಮಗನಿಗೆ ತನ್ನ ತಪ್ಪಿನ ಅರಿವಾದಾಗ ಕ್ಷಮೆ ಯಾಚಿಸಲು ಪ್ರಾಯಶ್ಚಿತ್ತ ಮನಸ್ಸಿನಿಂದಲೂ, ಭರವಸೆಯಿಂದಲೂ ತಂದೆಯ ಮನೆಗೆ ತ್ವರೆಯಿಂದ ಧಾವಿಸುತ್ತಾನೆ. ಒಲವಿನ ತಂದೆ ತನ್ನ ಮಗನ ಬರುವಿಕೆಯನ್ನೇ ಹಗಳಿರುಳು ನಿರೀಕ್ಷಿಸುತ್ತಿದ್ದರು ಬಂದಾಗ ಅವನ ತಪ್ಪನ್ನು ಲೆಕ್ಕಿಸದೆ, ತಮ್ಮ ನೈಜ ಪ್ರೀತಿಯನ್ನು ಉದಾರವಾಗಿ ವ್ಯಕ್ತಪಡಿಸುತ್ತಾರೆ. ಮಾನವನ ಪ್ರೀತಿಗೆ, ಕ್ಷಮೆಗೆ ಇತಿ ಮಿತಿ ಇದೆ. ಆದರೆ ದೈವ ಪ್ರೀತಿಗೂ ಮತ್ತು ಕ್ಷಮೆಗೂ ಎಲ್ಲೆಯೇ ಇಲ್ಲ, ಅದು ನಿರಂತರ. ತಪ್ಪಿಗೆ ತಕ್ಕ ಪ್ರಾಯಶ್ಚಿತ್ತ ಪಟ್ಟಾಗ ದೈವೀ ಕ್ಷಮೆಯು ಹೊನಲು ಹೊನಲಾಗಿ ಹರಿಯುತ್ತದೆ. ಕ್ಷಮೆ ಯಾಚಿಸುವವರ ಜೀವನವನ್ನು ಪುನರ್ ರೂಪಿಸುತ್ತಾರೆ. ಕ್ಷಮೆ ಯಾಚಿಸುವವರ ಬದುಕು ಹೊಸಬೆಳಕನ್ನು ಕಂಡು ಪರಪ್ರೀತಿ ಮತ್ತು ಸ್ನೇಹದಲ್ಲಿ ಮುನ್ನಡೆಯುತ್ತದೆ. 


ಮಾರ್ಚ್ 23 : ಮೊಗ್ರೋವೇಜೊದ ಸಂತ ತುರೀಬಿಯಸ್
<em srcset=
ಸಂತ ತುರೀಬಿಯಸರು 1538ರಲ್ಲಿ ಸ್ಪೇನ್ ದೇಶದ ಮರ್ಯೊಗದಲ್ಲಿ ಹುಟ್ಟಿದರು. ಇವರು ನ್ಯಾಯಶಾಸ್ತ್ರವನ್ನು ಓದಿ ವಕೀಲರಾಗಿಯೂ ಮತ್ತು ಅವರ ಬೋಧಕರಾಗಿಯೂ ಕಾರ್ಯನಿರ್ವಹಿಸಿದರು, ಹಾಗೂ ಅಂದಿನ ರಾಜನಾದ 2ನೇ ಫಿಲಿಪ್‌ನ ಆಸ್ಥಾನದಲ್ಲಿ ಮುಖ್ಯ ನಾಯಾಧೀಶರಾಗಿದ್ದರು. 1580ರಲ್ಲಿ ರಾಜನು ಇವರನ್ನು ಮಹಾಧರ್ಮಾಧ್ಯಕ್ಷನರಾಗಿ ಪೆರು ದೇಶದ ಲೀಮಾ ಧರ್ಮಪ್ರಾಂತ್ಯಕ್ಕೆ ನೇಮಕಮಾಡಿದನು. ಅಲ್ಲಿ ಇವರು ಸ್ಥಳಿಯರ ಹಕ್ಕುಗಳಿಗಾಗಿ ಶ್ರಮವಹಿಸಿ ದುಡಿದರು, ಏಕೆಂದರೆ ಸ್ಥಳಿಯರು ಸ್ಪೇನ್ ದೇಶದವರ ದಬ್ಬಾಳಿಕೆಗೆ ಒಳಗಾಗಿ ನರಳುತ್ತಿದ್ದರು. ಸಂತ ತುರೀಬಿಯಸರು ಅನೇಕ ಶಾಲೆಗಳನ್ನು ದೇವಾಲಯಗಳನ್ನು, ಆಸ್ಪತ್ರೆಗಳನ್ನು ಮತ್ತು ಹೊಸ ಪ್ರಪಂಚದ ಮೊದಲನೆಯ ಗುರುಮಠವನ್ನು ಸ್ಥಾಪಿಸಿದರು, ಅಷ್ಟೇ ಮಾತ್ರವಲ್ಲದೆ, ಸ್ಥಳೀಯರ ಸೇವೆಗಾಗಿ ಅನೇಕ ಸ್ಥಳೀಯ ಭಾಷೆಯನ್ನು ಕಲಿತು, ತಮ್ಮ ಅಮೋಘ ಸೇವೆಯನ್ನು ಮಾಡಿದರು. 1726ರಲ್ಲಿ ಇವರನ್ನು ಸಂತರ ಪದವಿಗೆ ಏರಿಸಲಾಯಿತು.

No comments:

Post a Comment