ತಪಸ್ಸು ಕಾಲದ ಮೂರನೇ ಭಾನುವಾರ
ಮೊದಲವಾಚನ: ವಿಮೋ 3: 1-8, 13-15
1 ಮೋಶೆ ಮಿದ್ಯಾನರ ಪೂಜಾರಿಯೂ ತನ್ನ ಮಾವನೂ ಆದ ಇತ್ರೋನನ ಮಂದೆಯನ್ನು ಮೇಯಿಸುತ್ತಿದ್ದನು. ಒಮ್ಮೆ ಆ ಮಂದೆಯನ್ನು ಕಾಡಿನ ಹಿಂಭಾಗಕ್ಕೆ ನಡೆಸಿಕೊಂಡು ‘ಹೋರೇಬ್’ ಎಂಬ ದೇವರ ಬೆಟ್ಟಕ್ಕೆ ಬಂದನು. 2 ಅಲ್ಲಿ ಮುಳ್ಳಿನ ಪೊದೆಯೊಂದರ ಒಳಗೆ ಉರಿಯುವ ಬೆಂಕಿಯಲ್ಲಿ ಸರ್ವೇಶ್ವರನ ದೂತನು ಅವನಿಗೆ ಕಾಣಿಸಿಕೊಂಡನು. ಮೋಶೆ ನೋಡಿದನು. ಆ ಮುಳ್ಳಿನ ಪೊದೆ ಉರಿಯುತ್ತಲೇ ಇತ್ತು; ಆದರೆ ಸುಟ್ಟುಹೋಗದೆ ಇತ್ತು. 3 ಆಗ ಮೋಶೆ, “ಇದೇನು ಆಶ್ಚರ್ಯ! ಪೊದೆ ಸುಟ್ಟುಹೋಗದೆ ಇರುವುದಕ್ಕೆ ಕಾರಣವೇನು? ನಾನು ಹತ್ತಿರ ಹೋಗಿ ತಿಳಿದುಕೊಳ್ಳುತ್ತೇನೆ” ಎಂದುಕೊಂಡನು. 4 ಅದನ್ನು
ನೋಡಲು ಅವನು ಮುಂದಕ್ಕೆ ಬರುವುದನ್ನು ಸರ್ವೇಶ್ವರಸ್ವಾಮಿ ಕಂಡರು.
ಪೊದೆಯೊಳಗಿಂದ, “ಮೋಶೇ,
ಮೋಶೇ,” ಎಂದು ದೇವರು ಕರೆದರು. ಅದಕ್ಕವನು, “ಇಗೋ, ಇದ್ದೇನೆ,” ಎಂದು ಉತ್ತರಕೊಟ್ಟನು. 5 ದೇವರು
ಅವನಿಗೆ, “ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರಭೂಮಿ,” ಎಂದು ಹೇಳಿದರು. 6 ಅದೂ ಅಲ್ಲದೆ, “ನಾನು ನಿನ್ನ ತಂದೆಯ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು,” ಎಂದರು. ಆಗ ಮೋಶೆ ದೇವರನ್ನು ದಿಟ್ಟಿಸಿ ನೋಡಲು ಭಯಪಟ್ಟು ಮುಖವನ್ನು ಮುಚ್ಚಿಕೊಂಡನು. 7 ಆಗ
ಸರ್ವೇಶ್ವರ, “ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ
ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು
ಬಲ್ಲೆ. 8 ಆದಕಾರಣ ಅವರನ್ನು ಈಜಿಪ್ಟಿನವರ ಕೈಯಿಂದ ಬಿಡಿಸುವುದಕ್ಕು ಮತ್ತು ಆ ದೇಶದಿಂದ ಹೊರತಂದು ಹಾಲೂ ಜೇನೂ ಹರಿಯುವ ಸವಿಸ್ತಾರವಾದ ಒಳ್ಳೆಯ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಹಾಗೂ ಯೆಬೂಸಿಯರು ವಾಸವಾಗಿರುವ ನಾಡಿಗೆ ನಡೆಸಿಕೊಂಡು ಹೋಗುವುದಕ್ಕು ಇಳಿದು ಬಂದಿದ್ದೇನೆ. 13 ಮೋಶೆ
ದೇವರಿಗೆ, “ನಾನು ಇಸ್ರಯೇಲರ ಬಳಿಗೆ ಹೋಗಿ, ‘ನಿಮ್ಮ ಪೂರ್ವಜರ ದೇವರು ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ,’ ಎಂದು ಹೇಳಿದಾಗ ಅವರು ಒಂದು ವೇಳೆ, ‘ಆತನ ಹೆಸರೇನು?’ ಎಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?” ಎಂದು ಕೇಳಿದನು. 14 ಆಗ ದೇವರು ಹೀಗೆಂದರು: “ಇರುವವನಾಗಿ ಇರುವವನು ನಾನೇ; ನೀನು ಇಸ್ರಯೇಲರಿಗೆ ‘ತಾನಾಗಿ ಇರುವವನು,’ ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾನೆ ಎಂದು ಹೇಳು. ”15 ದೇವರು ಮೋಶೆಗೆ ಮತ್ತೆ ಇಂತೆಂದರು: “ನೀನು ಇಸ್ರಯೇಲರಿಗೆ, ‘ನಿಮ್ಮ
ಪೂರ್ವಜರಾದ ಅಬ್ರಹಾಮ, ಇಸಾಕ ಹಾಗೂ ಯಕೋಬರ ದೇವರಾಗಿರುವ ಸರ್ವೇಶ್ವರ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ’ ಎಂದು ಹೇಳು. ಇದು ಸದಾಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೆ ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು.
ಕೀರ್ತನೆ
103:1-2, 3-4, 6-7, 8, 11
ಪ್ರಭು, ಸಹನಶೀಲನು, ಪ್ರೀತಿಮಯನು
1:
ಭಜಿಸು ನನ್ನ ಮನವೇ, ಭಜಿಸು ಪ್ರಭುವನು ನನ್ನ ಅಂತರಂಗವೇ, ಭಜಿಸು ಆತನನು ನೆನೆ ಆತನ ಪರಮಪಾವನ ನಾಮವನು
2:
ಭಜಿಸು ನನ್ನ ಮನವೇ, ಭಜಿಸು ಪ್ರಭುವನು ಮರೆಯದಿರು ಆತನ ಉಪಕಾರಗಳೊಂದನು
3:
ಮನ್ನಿಸುವನಾತ ನನ್ನ ದೋಷಗಳನು ವಾಸಿಮಾಡುವನು ನನ್ನ ರೋಗಗಳನು
4:
ಉಳಿಸುವನು ಪಾತಾಳದ ಕೂಪದಿಂದ ನನ್ನನು ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು
6:
ಸಾಧಿಸುವನು ಪ್ರಭು ನ್ಯಾಯನೀತಿಯನು ದೊರಕಿಸುವನು ಶೋಷಿತರಿಗೆ ನ್ಯಾಯವನು
7:
ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ
8:
ಪ್ರಭು ದಯಾಳು, ಕೃಪಾಪೂರ್ಣನು ಸಹನಶೀಲನು, ಪ್ರೀತಿಮಯನು
11:
ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ
ಎರಡನೇ ವಾಚನ: 1 ಕೊರಿಂಥ 10: 1-6, 10-12
1 ಪ್ರಿಯ ಸಹೋದರರೇ, ನಮ್ಮ ಪೂರ್ವಜರಿಗೆ ಸಂಭವಿಸಿದವುಗಳತ್ತ ನಿಮ್ಮ
ಗಮನವನ್ನು ಸೆಳೆಯಬೇಕೆಂದಿದ್ದೇನೆ. ಅವರೆಲ್ಲರೂ ಮೋಡದ ನೆರಳಿನಲ್ಲಿಯೇ ನಡೆದರು. ಎಲ್ಲರೂ ಸಮುದ್ರವನ್ನು ಸುರಕ್ಷಿತವಾಗಿ ದಾಟಿದರು. 2 ಹೀಗೆ ಅವರು ಮೋಡದಲ್ಲಿಯೂ ಸಮುದ್ರದಲ್ಲಿಯೂ ಸ್ನಾನದೀಕ್ಷೆಯನ್ನು ಪಡೆದು
ಮೋಶೆಗೆ ಶಿಷ್ಯರಾದರು. 3 ಎಲ್ಲರೂ ಒಂದೇ ದೈವಿಕ ಪಾನೀಯವನ್ನು ಕುಡಿದರು;4 ಅದೂ ತಮ್ಮೊಡನೆ ಬರುತ್ತಿದ್ದ ದೈವಿಕ ಬಂಡೆಯಿಂದ ಕುಡಿದರು. ಕ್ರಿಸ್ತಯೇಸುವೇ ಈ ಬಂಡೆ. 5 ಆದರೂ ಅವರಲ್ಲಿ ಬಹುಮಂದಿ ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಆದ್ದರಿಂದಲೇ ಮರುಭೂಮಿಯಲ್ಲೇ ಮಡಿದು ಮಣ್ಣುಪಾಲಾದರು. 6 ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಂತೆ ನಾವು ಕೆಟ್ಟದಾದವುಗಳನ್ನು ಆಶಿಸಬಾರದು.
10 ಮತ್ತೆ ಕೆಲವರು ಗೊಣಗುಟ್ಟಿದರು. ಸಂಹಾರಕ ದೂತನಿಂದ ಸಂಹರಿಸಲ್ಪಟ್ಟರು. ನೀವೂ ಅವರಂತೆ ಗೊಣಗುಟ್ಟುವವರಾಗಬೇಡಿ. 11 ಇದೆಲ್ಲ
ಅವರಿಗೆ ಸಂಭವಿಸಿದುದು ಇತರರಿಗೆ ನಿದರ್ಶನವಾಗಿರಲೆಂದು. ಇವುಗಳನ್ನು ಬರೆದಿಟ್ಟಿರುವುದು, ಯುಗಾಂತ್ಯಕ್ಕೆ ಬಂದಿರುವ ನಮಗೆ ಮುನ್ನೆಚ್ಚರಿಕೆಯಾಗಿರಲೆಂದು. 12 ಆದಕಾರಣ ಸ್ಥಿರವಾಗಿ ನಿಂತಿರುವೆನೆಂದು ಕೊಚ್ಚಿಕೊಳ್ಳುವವನೇ, ಕುಸಿದುಬೀಳದಂತೆ ಎಚ್ಚರಿಕೆಯಿಂದಿರು.
ಶುಭಸಂದೇಶ: ಲೂಕ 13: 1-9
ಅದೇ ಸಮಯಕ್ಕೆ ಅಲ್ಲಿದ್ದವರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ
ವಿಷಯವನ್ನು ತಿಳಿಸಿದರು. 2ಅದಕ್ಕೆ ಯೇಸು, ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು
ಪಾಪಿಗಳೆಂದು ಭಾವಿಸುತ್ತೀರೋ? 3ಹಾಗೆ ಭಾವಿಸಕೂಡದು. ನೀವು
ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆ ಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ. 4ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ
ಸತ್ತರಲ್ಲವೆ?
ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು
ದೋಷಿಗಳಾಗಿದ್ದರೆಂದು ಭಾವಿಸುತ್ತೀರೋ? 5ಹಾಗಲ್ಲ,
ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ
ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ
ನಾಶವಾಗುವಿರಿ,
ಎಂದರು. 6ಆನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು
ನೆಡಿಸಿದ್ದ.
ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ. 7ತೋಟಗಾರನನ್ನು ಕರೆದು, 'ನೋಡು, ಮೂರು
ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ. ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?' ಎಂದು ಹೇಳಿದ. 8ಅದಕ್ಕೆ ತೋಟಗಾರನು, 'ಸ್ವಾಮಿ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿತೆಗೆದು ಗೊಬ್ಬರ ಹಾಕುತ್ತೇನೆ. 9ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದುಹಾಕೋಣ,' ಎಂದನು.
ಚಿಂತನೆ: ಮೋಶೆಯನ್ನು ದೇವರು ತನ್ನ ಜನರನ್ನು
ಈಜಿಪ್ಟಿನ ಮಹಾರಾಜ ಫರೋಹನ ದಬ್ಬಾಳಿಕೆಯಿಂದ ಬಿಡುಗಡೆ ಮಾಡಲು ಆಯ್ಕೆಮಾಡುತ್ತಾರೆ. ಮೋಶೆಗೆ ಇದು
ತುಂಬಾ ಕಷ್ಟದ ಕೆಲಸವಾಗಿತ್ತು. ಆದರೆ ದೇವರ ಯೋಜಯನ್ನು ಸಿದ್ದಿಗೆ ತರಲು ಒಲ್ಲದ ಮನಸ್ಸಿನಲ್ಲಿ
ಒಪ್ಪಿಕೊಳ್ಳುತ್ತಾನೆ. ಜನರೂ ಒಪ್ಪಿಕೊಳ್ಳುವುದಿಲ್ಲ, ಆದರೂ ಮೋಶೆ ಆ
ಜನರನ್ನು ವಾಗ್ದತ್ತ ನಾಡಿನತ್ತ ನಡೆಸುತ್ತಾನೆ.
ದೇವರ ಪ್ರೀತಿ ಮತ್ತು ತಾಳ್ಮೆಗೆ ಅಂತ್ಯವೇ ಇಲ್ಲ. ಮಾನವರು ಎಷ್ಟೇ ಕಠಿಣ
ಮನಸ್ಸುಳ್ಳವರಾಗಿದ್ದರೂ ಅವರು ಮನಪರಿವರ್ತನೆ ಹೊಂದಲು ಅಂತಿಮ ಕ್ಷಣಗಳವರೆಗೂ ಸಮಯವನ್ನು
ನೀಡುತ್ತಾರೆ. ಯಾರು ದೇವರ ಇಂಥಹ ಉದಾರ ಪ್ರೀತಿಯನ್ನು ಅರಿತುಕೊಳ್ಳುತ್ತಾರೋ ಅವರಿಗೆ ಕ್ಷಮೆ
ಕಂಡಿತವಾಗಿಯೂ ದೊರೆಯುತ್ತದೆ ಎಂದು ಇಂದಿನ ಶುಭಸಂದೇಶ ಸ್ಪಷ್ಟಪಡಿಸುತ್ತದೆ.
No comments:
Post a Comment