25 ಮಾರ್ಚ್ 2019

ಸೋಮವಾರ, ಮಂಗಳವಾರ್ತೆಯ ಮಹೋತ್ಸವ

ಮೊದಲವಾಚನ: ಯೆಶಾಯ 7: 10-14, 8: 10
10 ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ: 11 “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳುಎಂದರು.
12 ಅದಕ್ಕೆ ಆಹಾಜನುಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲಎಂದನು. 13 ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? 14 ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು.“ ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ, ಕೈಗೂಡದು ನೀವು ಮಾಡಿದ ಪ್ರತಿಜ್ಞೆ, ಕಾರಣ, ದೇವನಿರುವನು ನಮ್ಮೊಡನೆ.

ಕೀರ್ತನೆ 40:7, 8-9, 10, 11
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ

7: ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ?
8: ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ
9: ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ
10: ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು
11: ಅಗಲಿಸಬೇಡ ಪ್ರಭೂ, ನಿನ್ನ ಕೃಪೆಯನು ನನ್ನಿಂದ ನಿನ್ನ ಪ್ರೀತಿ ಸತ್ಯಕೆ ಕಾದಿರಿಸಲಿ ನನ್ನನು ಸತತ


ಎರಡನೇ ವಾಚನ: ಹಿಬ್ರಿ 10: 4-10
4: ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ.
5: ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು.
6: ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು.
7: ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.”
8: ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ.
9: ಅನಂತರ, “ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ.
10 : ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.

ಶುಭಸಂದೇಶ: ಲೂಕ 1: 26-38
26ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. 27ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. 28ದೇವದೂತನು ಆಕೆಯ ಬಳಿಗೆ ಬಂದು ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ! ಎಂದನು. 29ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. 'ಇದೆಂಥ ಶುಭಾಶಯ' ಎಂದು ಅವಳು ಯೋಚಿಸತೊಡಗಿದಳು. 30ದೂತನು ಆಕೆಗೆ, ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; 31ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ 'ಯೇಸು' ಎಂಬ ಹೆಸರಿಡಬೇಕು; 32ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. 33ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು, ಎಂದನು. 34ಅದಕ್ಕೆ ಮರಿಯಳು, ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ? ಎಂದು ವಿಚಾರಿಸಿದಳು. 35ದೂತನು ಪ್ರತ್ಯುತ್ತರವಾಗಿ, ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು 'ದೇವರ ಪುತ್ರ' ಎನಿಸಿಕೊಳ್ಳುವನು. 36ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. 37ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ಎಂದನು. 38ಆಗ ಮರಿಯಳು, ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ, ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.


ಚಿಂತನೆ: ದೇವರ ವಾಗ್ದಾನ ಎಂದೂ ನಿರರ್ಥಕವಾಗುವುದಿಲ್ಲ. ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಪ್ರಜೆಗಳಾಗುವಿರಿ, ಇದು ದೇವ ಮಾನವರ ನಿರಂತರ ಸಂಬಂಧ. ಈ ಕಾರಣ ತಮ್ಮಿಂದ ದೂರ ಸರಿದಿರುವ ಮಾನವಕುಲವನ್ನು ಸರ್ವ ಬಂಧನಗಳಿಂದ ಬಿಡಿಸಿ ಅವರನ್ನು ಮತ್ತೆ ತಮ್ಮ ಸಾಮ್ರಾಜ್ಯದ ಯೋಗ್ಯ ಪ್ರಜೆಗಳನ್ನಾಗಿ ಮಾಡಲು ತವಕಿಸಿ ಯೋಜನೆಯೊಂದನ್ನು ರೂಪಿಸುತ್ತಾರೆ. ಆ ಶ್ರೇಷ್ಠ ಯೋಜನೆಯನ್ನು ಸಿದ್ಧಿಗೆ ತರಲು ತಾವೇ ಆಯ್ಕೆ ಮಾಡಿದ ಮಾತೆ ಮರಿಯಳ ಬಳಿಗೆ ತಮ್ಮ ದೂತರನ್ನು ಕಳುಹಿಸಿ ತಮ್ಮ ಪರಮ ಯೋಜನೆಯನ್ನು ಪ್ರಕಟಿಸುತ್ತಾರೆ. ಆದಿಯಿಂದಲೇ ರೂಪುಗೊಂಡಿದ್ದ ಆ ಯೋಜನೆಯು ಕಾಲವು ಪರಿಪಕ್ವವಾದಾಗ ಪ್ರಕಟಗೊಂಡಿತು. ದೇವರ ಯೋಜನೆಯನ್ನು ಯಾರೂ ತಿರಸ್ಕರಿಸಲು ಸಾದ್ಯವಿಲ್ಲ. ಸರ್ವರ ಒಳಿತೇ ದೇವರ ಯೋಜನೆಯ ಪ್ರಥಮ ಆದ್ಯತೆ. ನಮ್ಮ ಸ್ವಾರ್ಥ ಯೋಜನೆಗಳು ನಿಷ್ಫಲವಾಗುವುದು ಖಚಿತ. 

No comments:

Post a Comment