26 ಮಾರ್ಚ್ 2019


ಮಂಗಳವಾರ, ತಪಸ್ಸುಕಾಲದ ಮೂರನೇ ವಾರ

ಮೊದಲವಾಚನ: ಅಜರ್ಯ 1:2, 11-20 ಅಥವಾ ದಾನಿಯೇಲ 3: 25, 34-43
ಅಜರ್ಯನು ಬೆಂಕಿಯ ನಡುವೆ ನಿಂತುಕೊಂಡು ಗಟ್ಟಿಯಾಗಿ ಕೂಗಿ ಹೀಗೆಂದು ಪ್ರಾರ್ಥನೆ ಮಾಡಿದ: ಪ್ರಭೂದೇವಾ, ನಿಮ್ಮ ನಾಮದ ಪ್ರಯುಕ್ತ ನಮ್ಮನ್ನು ಎಂದೆಂದಿಗೂ ತ್ಯಜಿಸಬೇಡಿ, ನಿಮ್ಮ ಒಡಂಬಡಿಕೆಯನ್ನು ರದ್ದುಗೊಳಿಸಬೇಡಿ. ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ  ನಿಮ್ಮ ದಾಸ ಇಸಾಕನ, ನಿಮ್ಮ ಭಕ್ತ ಯಕೋಬನ ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ. ಇವರಿಗೆ, ನಿಮ್ಮ ಸಂತಾನವನ್ನು ಆಕಾಶದ ನಕ್ಷತ್ರಗಳಂತೆ ಸಮುದ್ರ ತೀರದ ಮರಳಿನಂತೆ ಸಂಖ್ಯವಾಗಿಸುವೆ” ಎಂದು ನೀವು ವಾಗ್ದಾನ ಮಾಡಿದಿರಲ್ಲವೆ? ಒಡೆಯಾ ಉಳಿದ ರಾಷ್ಟ್ರಗಳಿಗಿಂತ ನಾವು ಕನಿಷ್ಟರಾಗಿಬಿಟ್ಟೆವು, ನಮ್ಮ ಪಾಪಗಳ ಕಾರಣ ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು. ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ, ನಾಯಕರಿಲ್ಲ,; ಹೋಮವಿಲ್ಲ; ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ. ಕಾಣಿಕೆಯನ್ನರ್ಪಿಸಿ ನಿಮ್ಮ ಕೃಪೆ ಪಡೆಯಲು ಸ್ಥಳವೂ ಇಲ್ಲ; ಆದರೂ ಪಶ್ಚತ್ತಾಪದ ಹೃದಯ, ದೀನ ಮನ ನಿಮಗೆ ಅಂಗೀಕೃತವಾಗಲಿ. ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದಂತೆ ನಮ್ಮ ಅಂತರಂಘದ ಬಲಿ ನಿಮಗಿಂದು ಅಂಗೀಕೃತವಾಗಲಿ. ಪೂರ್ಣ ಹೃದಯದಿಂದ ನಾವು ನಿಮ್ಮನ್ನು ಹಿಂಬಾಲಿಸುವಂತೆ ಅನುಗ್ರಹಿಸಿರಿ.  ಏಕೆಂದರೆ ನಿಮ್ಮಲ್ಲಿ ನಂಬಿಕೆಯಿಡುವವರಿಗೆ ಆಶಾಭಂಗವಾಗುವುದಿಲ್ಲ. ಪೂರ್ಣ ಹೃದಯದಿಂದ ನಿಮ್ಮನ್ನೀಗ ಹಿಂಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಯಿಡುತ್ತೇವೆ, ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ. ನಮ್ಮನ್ನು ನಿರಾಶೆಗೊಳಿಸಬೇಡಿ ನಿಮ್ಮ ಸೈರಣೆಗೆ ತಕ್ಕಂತೆ ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸಂಗಡ ವರ್ತಿಸಿ. ಸರ್ವೇಶ್ವರಾ ನಿಮ್ಮ ಮಹತ್ಕಾರ್ಯಗಳ ಮೂಲಕ ನಮ್ಮನ್ನು ಬಿಡುಗಡೆಮಾಡಿ ನಿಮ್ಮ ಹೆಸರಿಗೆ ಹೊಸ ಕೀರ್ತಿ ಬರುವಂತೆ ಮಾಡಿ.
ಕೀರ್ತನೆ 25:4-5, 6-7, 8-9
ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು

4: ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು
5: ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ
6: ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು ಆದಿಯಿಂದ ನೀ ತೋರಿದಚಲ ಪ್ರೀತಿಯನು
7: ಯೌವನದೆನ್ನ ಪಾಪ ಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ
8: ತ್ಯಸ್ವರೂಪನು, ದಯಾವಂತನು ಪ್ರಭು ದಾರಿತಪ್ಪಿದವರಿಗೆ ಬೋಧಕನು ವಿಭು
9: ದೀನರನು ನಡೆಸುವನು ತನ್ನ ವಿಧಿಗನುಸಾರ ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ

ಶುಭಸಂದೇಶ: ಮತ್ತಾಯ 18: 21-35
21 ಆನಂತರ ಪೇತ್ರನು ಯೇಸುವಿನ ಬಳಿಗೆ ಬಂದು, ಸ್ವಾಮಿ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ? ಎಂದು ಕೇಳಿದನು. 22 ಏಳು ಸಲವಲ್ಲ, ಏಳೆಪ್ಪತ್ತು ಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ ಎಂದು ಯೇಸು ಉತ್ತರವಿತ್ತರು. 23 ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. 24 ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ 'ಚಿನ್ನದ ನಾಣ್ಯ'ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. 25 ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. 26 ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: 'ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮಿ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,' ಎಂದು ಅಂಗಲಾಚಿದ. 27 ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ.
28 ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು 'ಬೆಳ್ಳಿಕಾಸು' ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. 29 ಅವನನ್ನು ಹಿಡಿದು, 'ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,' ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, 'ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,' ಎಂದು ಕಾಲಿಗೆ ಬಿದ್ದು ಕೇಳಿಕೊಂಡ. 30 ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. 31 ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. 32 ರಾಜನು ಅವನನ್ನು ಕರೆಯಿಸಿ, 'ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. 33 ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?' ಎಂದು ಸಿಟ್ಟುಗೊಂಡ. 34 ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. 35 ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು, ಎಂದರು.

ಚಿಂತನೆ: ದೇವರ ಪ್ರೀತಿ ಹಾಗೂ ಕ್ಷಮೆಗೆ ಎಲ್ಲೆಯೇ ಇಲ್ಲ. ಅದು ನಿರಂತರವೂ ಉದಾರವಾಗಿ ಮಾನವರಿಗೆ ದೊರೆಯುವ ದೇವರ ಉಚಿತ ಕೊಡುಗೆ. ಕ್ಷಮೆ ಏಳು ಬಾರಿ ಅಲ್ಲ ಏಳೆಪ್ಪತ್ತು ಬಾರಿ ಅಂದರೆ ಇದು ಸದಾಕಾಲ ದೇವರು ತೋರುವ ಉದಾರ ಪ್ರೀತಿ. ಈ ಪ್ರೀತಿ ನಿಷ್ಕಲ್ಮಶವಾದುದು. ಇದರ ಉದ್ದಗಲವೂ ಕ್ಷಮೆಯಿಂದ ತುಂಬಿ ಹೊರಸೂಸುತ್ತದೆ. ತಾವು ಮಾಡಿದ ಪಾಪಕ್ಕೆ ಯಾರು ನೈಜ ಪಶ್ಚಾತ್ತಾಪ ಪಡುತ್ತಾರೋ ಅವರಿಗೆ ಕ್ಷಮೆ ದೊರಕುವುದು ಖಚಿತ. ಇಂದಿನ ಶುಭಸಂದೇಶ ಅದನ್ನು ಖಚಿತಪಡಿಸುತ್ತದೆ.


No comments:

Post a Comment