ಗುರುವಾರ, ತಪಸ್ಸುಕಾಲದ ಮೂರನೇ ವಾರ, ಸಂತ ಮೂರನೇ ಸಿಕ್ಸ್ಟಸ್
ಮೊದಲವಾಚನ: ಯೆರೆ 7: 23-28
23 ನಾನು ಕೊಟ್ಟ ಒಂದು ಕಟ್ಟಳೆಯೆಂದರೆ ಇದು – ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೆ ನಡೆಯಿರಿ. 24 ಆದರೆ ಅವರು ಕೇಳಲಿಲ್ಲ. ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು. 25 ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದಿದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ. 26 ನಿಮ್ಮವರಾದರೋ
ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ. ನನ್ನ ಆಜ್ಞೆಗೆ ಮಣಿಯಲಿಲ್ಲ. ತಮ್ಮ ಪೂರ್ವಜರಿಗಿಂತಲೂ ಕೆಟ್ಟವರಾಗಿ ನಡೆದುಕೊಂಡರು. 27 “ಯೆರೆಮೀಯನೇ,
ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ. 28 ಆದಕರಣ ನೀನು ಅವರಿಗೆ – ‘ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದುಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದು ಹೋಗಿದೆ’ ಎಂದು ಹೇಳು. ”
ಕೀರ್ತನೆ
95:1-2, 6-7, 8-9
ಆತನ ಕರೆಗೆ ಕಿವಿಗೊಟ್ಟರೆನಿತೋ
ಒಳಿತು ನೀವಿಂದೇ
ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ
1 ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ
2 ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ
6 ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ
7 ಆತನೆಮ್ಮ ದೇವರು, ನಾವು ಆತನ ಕೈಮಂದೆ ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ
8 ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು
ನೀವಿಂದೇ ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ
9 ನೋಡಿದರಾದರೂ ನನ್ನ ಮಹತ್ಕಾರ್ಯಗಳನು ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು
ಶುಭಸಂದೇಶ: ಲೂಕ 11: 14-23
14 ಒಮ್ಮೆ ಯೇಸುಸ್ವಾಮಿ ಒಂದು ಮೂಕ
ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ
ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. 15 ಆದರೆ ಅವರಲ್ಲಿ ಕೆಲವರು, ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು
ಬಿಡಿಸುತ್ತಾನೆ,
ಎಂದರು. ಬೇರೆ ಕೆಲವರು
ಯೇಸುವನ್ನು ಪರೀಕ್ಷಿಸುವುದಕ್ಕಾಗಿ 16 ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು. 17 ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. 18 ಅಂತೆಯೇ ಸೈತಾನನ ಪಕ್ಷದವರು ಒಬ್ಬರ
ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? 19 ನಾನು ಬೆಲ್ಜೆಬೂಲನ ಶಕ್ತಿಯಿಂದ
ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. 20 ನಾನು ದೇವರ ಶಕ್ತಿಯಿಂದ ದೆವ್ವಗಳನ್ನು
ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. 21 ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ
ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. 22 ಆದರೆ ಇವನಿಗಿಂತಲೂ ಬಲಿಷ್ಠನು
ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು
ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. 23 ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ, ಎಂದರು.
ಚಿಂತನೆ: ಸತ್ಯ ಮಾನವರನ್ನು ಎಲ್ಲಾ ಬಂಧನಗಳಿಂದ ಬಿಡುಗಡೆಗೊಳಿಸುತ್ತದೆ. ಸಂಶಯ
ಸತ್ಯವನ್ನು ಗ್ರಹಿಸಲು ಅಡ್ಡಿ. ಯೆಹೂದ್ಯರು, ಪ್ರಭು ಯೇಸುವೇ ಪರಮಸತ್ಯ ಎಂಬುದನ್ನು
ಗ್ರಹಿಸುವುದರಲ್ಲಿ ಸಂಪೂರ್ಣವಾಗಿ ವಿಫಲರಾದರು. ಅವರಲ್ಲಿ ಬಹುಪಾಲು ಪ್ರಭುವನ್ನು ತಿರಸ್ಕರಿಸಿದರು.
ಪ್ರಭುವಿನ ಕೆಲಸಕಾರ್ಯಗಳನ್ನು ಸಂಶಯದಿಂದ ನೋಡಲಾರಂಭಿಸಿದರು. ಏಕೆಂದರೆ ಸೈತಾನ ಅವರಲ್ಲಿ
ಮನೆಮಾಡಿದ್ದ. ಅಂದು ಜನರು ಆಧ್ಯಾತ್ಮಿಕವಾಗಿ ದಿವಾಳಿಯಾಗಿದ್ದರು. ಆಧ್ಯಾತ್ಮಿಕ ದಿವಾಳಿತನ
ಸತ್ಯವನ್ನು ಮರೆಮಾಚುತ್ತದೆ. ಇಂದೂ ಸಹ ಜನ ಸತ್ಯಕ್ಕೆ ಬದಲಾಗಿ ಅಸತ್ಯವನ್ನೇ ಬಯಸುತ್ತಾರೆ.
No comments:
Post a Comment