ಶುಕ್ರವಾರ, ತಪಸ್ಸುಕಾಲದ ಮೂರನೇ ವಾರ
ಮೊದಲವಾಚನ: ಹೊಶೇಯ 14: 1-9
1 ಸರ್ವೇಶ್ವರ ಇಂತೆಂದು ನುಡಿಯುತ್ತಾರೆ: ಇಸ್ರಯೇಲೇ, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. 2 ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ,
ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. 3 ಅಸ್ಸೀರಿಯದಿಂದ
ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ,” ಎಂದು ಹೇಳು. 4 ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ
ಮೇಲಿದ್ದ ಕೋಪವನು. 5 ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. 6 ಹರಡಿಕೊಳ್ಳುವುದದು ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. 7 ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ
ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. 8 ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ”. ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದಂತಿರುವೆ ಅದಕ್ಕೆ
ಫಲವನ್ನು ನೀಡುವವನು ನಾನೇ. ”9 ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿ ಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು
ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.
ಕೀರ್ತನೆ
81:6-8, 8-9, 10-11, 14, 17
ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು, ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ
6:
ಅಪರಿಚಿತ ವಾಣಿಯೊಂದು ನುಡಿಯಿತೀ ಮಾತನು: “ತಪ್ಪಿಸಿದೆ ನಾನು ಹೆಗಲಮೇಲೆ ನೀ ಹೊರೆಹೊರುವುದನು ಬಿಡುಗಡೆ ಮಾಡಿದೆ ಗೂಡೆಯೆತ್ತುವ ಕೈಗಳನು
7:
“ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ ನಿನ್ನನು ಗುಡುಗುವ ಮೇಘದಿಂದ ಕೊಟ್ಟೆ ನಿನಗೆ ಸದುತ್ತರವನು ಮೆರೀಬಾ ಪ್ರವಾಹಗಳ ಬಳಿ ಪರೀಕ್ಷಿಸಿದೆ ನಿನ್ನನು,
8:
“ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ ಹಾಗೆ ಮಾಡಿದರೆ ಇಸ್ರಯೇಲರೆ, ಹಿತ ನಿಮಗೆ,
9:
“ಇರಬಾರದು ಅನ್ಯದೇವತೆಗಳು ನಿಮ್ಮಲಿ ಪರದೇವತೆಗಳ ಪೂಜೆ ಕೂಡದು ನಿಮ್ಮಲಿ,
10:
“ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು ತೆರೆಯಿರಿ ನಿಮ್ಮ ಬಾಯನು, ತುಂಬಿಸಿ ತೃಪ್ತಿಪಡಿಸುವೆ ನಾನದನು
11:
“ಆದರೆ ಕೇಳಲಿಲ್ಲಾ ಜನತೆ ನನ್ನ ಮಾತುಗಳನು ತೋರಲಿಲ್ಲ ಇಸ್ರಯೇಲರು ನನಗೆ ವಿಧೇಯತೆಯನು,
14:
“ಅಡಗಿಸುತ್ತಿದ್ದೆ ಅವರ ಶತ್ರುಗಳನು ಸುಲಭವಾಗಿ ಸದೆಬಡಿಯುತ್ತಿದ್ದೆ ಅವರ
ವೈರಿಗಳನು ಸರಿಯಾಗಿ,
15:
“ಮುದುರಿಕೊಳ್ಳುತ್ತಿದ್ದರಾ ಎದುರಾಳಿಗಳು ಅವರ ಮುಂದೆ ಅಳಿಯದೆ ಉಳಿದುಕೊಳ್ಳುತ್ತಿತ್ತು ಅವರಿಗಾದ
ದಂಡನೆ ಮುಗಿವಿಲ್ಲದೆ,
16:
“ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು”
ಶುಭಸಂದೇಶ: ಮಾರ್ಕ 12: 28-34
28 ಈ ತರ್ಕವನ್ನು ಕೇಳುತ್ತಿದ
ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ
ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು? ಎಂದು ಕೇಳಿದನು. 29 ಯೇಸು ಅವನಿಗೆ, ಇಸ್ರಯೇಲ್
ಸಮಾಜವೇ ಕೇಳು:
ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; 30 ನಿನ್ನ ದೇವರಾದ ಸರ್ವೇಶ್ವರನನ್ನು
ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ
ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ
ಆಜ್ಞೆ.
31 ನಿನ್ನನ್ನು ನೀನೇ
ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ, ಎಂದರು. 32 ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, ಬೋಧಕರೇ, ಚೆನ್ನಾಗಿ
ಹೇಳಿದಿರಿ.
ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು
ಹೇಳಿದ್ದು ಸತ್ಯ;
33 ಅವರನ್ನು ನಾವು ಪೂರ್ಣ ಹೃದಯದಿಂದಲೂ
ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ
ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ
ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು, ಎಂದನು. 34 ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ, ಎಂದರು. ಇದಾದ ಬಳಿಕ
ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.
ಚಿಂತನೆ: ಸಮಾಜದ ಒಳಿತಿಗೆ, ಮಾನವನ ಸಮಗ್ರ ಪ್ರಗತಿಗೆ ಕಾನೂನು ಕಟ್ಟಳೆಗಳು ಬೇಕೇ ಬೇಕು. ಹಾಗೆಯೇ
ಮಾನವನು ಸಾಕ್ಷಾತ್ಕಾರ ಹೊಂದಲು ದೈವಾಜ್ಞೆಗಳು ಬೇಕು. ಸನ್ಮಾರ್ಗಿಗಳು ದೇವರ ಆಜ್ಞೆಗಳನ್ನು
ಪಾಲಿಸಿ ಪಾವನರಾಗುವರು. ದೇವರ ಮೆಚ್ಚಿಗೆಗೆ ಪಾತ್ರರಾಗುವರು. ದುರ್ಮಾರ್ಗಿಗಳು ದೇವರ
ಆಜ್ಞೆಗಳನ್ನು ದಿಕ್ಕರಿಸುವರು. ದೇವರಿಂದ ದೂರ ಸರಿಯುವರು. ಸರ್ವೇಶ್ವರ ಸ್ವಾಮಿ ಪ್ರತಿ ಮಾನವನ
ಕೇಂದ್ರಬಿಂದುವಾದಾಗ ಜೀವನ ಸುಮಧುರವಾಗುತ್ತದೆ. ಪರ ಪ್ರೀತಿಯ ಉಗಮಕ್ಕೆ ಪ್ರೇರಣೆಯಾಗುತ್ತದೆ. ಸಮಾಜದ
ಪ್ರಗತಿಗೆ ನಾಂದಿಯಾಗುತ್ತದೆ. ದೈವ ಪ್ರೀತಿ ಹಾಗೂ ಪರ ಪ್ರೀತಿ ಒಂದಾದಲ್ಲಿ ಸ್ವರ್ಗದ ಬಾಗಿಲು ಸಹ
ತೆರೆದುಕೊಳ್ಳುತ್ತದೆ.
ಧರ್ಮಶಾಸ್ತ್ರದಲ್ಲಿ ಪ್ರಮುಖ ಆಜ್ಞೆ ದೇವರನ್ನು ಪೂರ್ಣಮನದಿಂದ ಪ್ರೀತಿಸುವುದು ಹಾಗೆ ಎಲ್ಲಾ
ಮಾನವರನ್ನು ಪ್ರೀತಿಸುವುದು. ದೇವರೊಬ್ಬರನ್ನೇ ಪ್ರೀತಿಸಿದರೆ ಯಾವ ಆಜ್ಞೆಯೂ
ಸಂಪೂರ್ಣವಾಗುವುದಿಲ್ಲ. ಏಕೆಂದರೆ ದೇವರ ಸೃಷ್ಟಿಯ ಮುಕುಟವಾದ ಮಾನವರನ್ನು ಪ್ರೀತಿಸದಿದ್ದಲ್ಲಿ
ದೈವ ಪ್ರೀತಿ ಸಂಪೂರ್ಣವಾಗುವುದಿಲ್ಲ. ಮಾನವರನ್ನು ಪ್ರೀತಿಸಿ ಅವರ ಒಳಿತಿಗಾಗಿ ನಿತ್ಯವೂ
ಶ್ರಮಿಸಿದಾಗ ದೈವ ಪ್ರೀತಿಯ ಸೆಲೆ ಮಾನವನ ಅಂತರಂಗದಲ್ಲಿ ಉದಯವಾಗುತ್ತದೆ. ಈ ಕಾರಣ ಮಾನವರನ್ನು
ಪ್ರೀತಿಸದೆ ದೇವರನ್ನು ಪ್ರೀತಿಸುವುದು ವ್ಯರ್ಥ. ಅದರಿಂದ ಯಾವ ಆದ್ಯಾತ್ಮಿಕ ಪ್ರಗತಿಯು
ಸಾಧ್ಯವಿಲ್ಲ. ಅದು ಗೋರ್ಕಲ್ಲ ಮೇಲೆ ಮಳೆಸುರಿದಂತೆ. ಮಾನವರನ್ನು ಪ್ರೀತಿಸದೇ ದೇವರನ್ನು
ಪ್ರೀತಿಸಲು ಸಾಧ್ಯವೇ ಇಲ್ಲ!
No comments:
Post a Comment