ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ
1ನೇ ವಾಚನ - ಯೆಶಾಯ 49: 8-15
ಕೀರ್ತನೆ - 145: 8-9, 14-15, 18-19
ಶುಭಸಂದೇಶ - ಯೊವಾನ್ನ 5: 17-30
1ನೇ ವಾಚನ - ಯೆಶಾಯ 49: 8-15
8ತಮ್ಮ ಪ್ರಜೆಗೆ ಇಂತೆನ್ನುತ್ತಾರೆ ಸರ್ವೇಶ್ವರಸ್ವಾಮಿ: “ನಿನಗೆ ದಯಪಾಲಿಸುವೆನು ಸದುತ್ತರವನು ಪ್ರಸನ್ನತೆಯ ಕಾಲದಲಿ ಸಹಾಯ ನೀಡುವೆನು ರಕ್ಷಣೆಯ ದಿನದಲಿ ನಿನ್ನನು ಕಾಪಾಡಿ ನೇಮಿಸುವೆನು ಜನತೆಗೆ ಸ್ಥಿರ ಒಡಂಬಡಿಕೆಯಾಗಿ. 9‘ಹೊರಟುಹೋಗಿರಿ’ ಎನ್ನುವೆನು ಸೆರೆಯಾಳುಗಳಿಗೆ ‘ಬೆಳಕಿಗೆ ಬನ್ನಿರಿ’ ಎನ್ನುವೆನು ಕತ್ತಲಲ್ಲಿರುವವರಿಗೆ ಪಾಳುಬಿದ್ದ ಸೊತ್ತುಗಳನ್ನು ಹಂಚಿಕೊಡುವೆನು ಅವರಿಗೆ. ದೇಶವನ್ನು ಪುನಃ ತರುವೆನು ಪೂರ್ವಸ್ಥಿತಿಗೆ ದಾರಿಯುದ್ಧಕ್ಕೂ ಆಹಾರ ಒದಗಿಸುವೆನು ನನ್ನ ಪ್ರಜೆಗೆ ಬೋಳು ಬೆಟ್ಟಗಳೆಲ್ಲ ಹುಲ್ಲುಗಾವಲು ಗಳಾಗುವುವು ನನ್ನಾ ಮಂದೆಗೆ. 10ಇರದು ಅವರಿಗೆ ಹಸಿವು ಬಾಯಾರಿಕೆ ಬಡಿಯವು ಅವರಿಗೆ ಬಿಸಿಲುಬೇಗೆ. ನಡೆಸುವೆನು ನೀರುಕ್ಕುವ ಚಿಲುಮೆಗಳ ಬಳಿಗೆ ಕರುಣಾಕರನು ದಾರಿತೋರಿಸುವನು ಅವರಿಗೆ. 11ಸಮದಾರಿಯಾಗಿಸುವೆನು ನನ್ನ ಬೆಟ್ಟಗುಡ್ಡಗಳನು ಎತ್ತರಿಸುವೆನು ನನ್ನ ರಾಜಮಾರ್ಗಗಳನು.
12ನೋಡಿ, ಬರುತಿಹರು ನನ್ನ ಜನರು ದೂರದಿಂದ ಹೌದು, ಬರುತಿಹರು ಉತ್ತರ ಪಶ್ಚಿಮದಿಂದ ದಕ್ಷಿಣದ ಆ ಅಶ್ವಾನ್ ನಾಡಿನಿಂದ. 13ಹರ್ಷಧ್ವನಿಗೆ ಆಕಾಶವೇ ಉಲ್ಲಾಸಪಡು ಪೊಡವಿಯೇ ತಟ್ಟಾಡಿರಿ ಬೆಟ್ಟಗುಡ್ಡಗಳೇ ಏಕೆನೆ ಸಂತೈಸಿಹನು ಸರ್ವೇಶ್ವರ ತನ್ನ ಪ್ರಜೆಯನು ಕನಿಕರಿಸಿಹನು ಶೋಷಿತರಾದ ತನ್ನ ಜನರನು. 14ಜೆರುಸಲೇಮಿನ ಜನರಾದರೋ ಇಂತೆಂದರು: “ಸರ್ವೇಶ್ವರ ನಮ್ಮನ್ನು ಕೈಬಿಟ್ಟಿಹನು, ಆ ಸ್ವಾಮಿ ನಮ್ಮನ್ನು ಮರೆತುಬಿಟ್ಟಿಹನು.” 15ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನನು ಮರೆಯೆ.
ಕೀರ್ತನೆ - 145: 8-9, 14-15, 18-19
ಪ್ರಭು ದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು
8ಪ್ರಭು ದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು
9ಪ್ರಭುವಿನ ಕರುಣೆ ಎಲ್ಲರ ಮೇಲೆ / ಆತನ ಕೃಪೆಯು ಸೃಷ್ಟಿಯ ಮೇಲೆ
13ಶಾಶ್ವತವಾದುದು ನಿನ್ನ ರಾಜ್ಯವು / ಇರುವುದೆಂದಿಗು ನಿನ್ನ ಆಳ್ವಿಕೆಯು
14ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು / ನಡೆಯಲಿ ಆತನು ಸದಾ ಪ್ರೀತಿಮಯನು
17ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು / ಎಲ್ಲರ ಕೋರಿಕೆಗಳನು ಈಡೇರಿಸುವವನು
18 ಪ್ರಭುವಿನ ಮಾರ್ಗ ಧರ್ಮಸಮ್ಮತ / ಆತನ ಕಾರ್ಯವೆಲ್ಲ ಪುನೀತ
ಶುಭಸಂದೇಶ - ಯೊವಾನ್ನ 5: 17-30
17ಅದಕ್ಕೆ ಉತ್ತರವಾಗಿ ಯೇಸು, “ನನ್ನ ಪಿತ ಸತತವೂ ಕಾರ್ಯನಿರತರು. ಅವರಂತೆಯೇ ನಾನು ಸದಾ ಕಾರ್ಯನಿರತನಾಗಿದ್ದೇನೆ,”
ಎಂದು ನುಡಿದರು. 18ಯೇಸು ಸಬ್ಬತ್ತಿನ ನಿಯಮವನ್ನು ಮುರಿದುದೇ ಅಲ್ಲದೆ, ದೇವರನ್ನು ತನ್ನ ಪಿತನೆಂದು ಹೇಳಿಕೊಳ್ಳುತ್ತಾ, ತನ್ನನ್ನೇ ದೇವರಿಗೆ ಸರಿಸಮ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಅವರನ್ನು ಕೊಲ್ಲಲು ಮತ್ತಷ್ಟು ಹವಣಿಸಿದರು. 19ಯೇಸುಸ್ವಾಮಿ ಅವರನ್ನು ಉದ್ದೇಶಿಸಿ ಹೀಗೆಂದರು: “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಪಿತನು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ಪಿತನು ಮಾಡುವುದನ್ನೇ ಪುತ್ರನೂ ಮಾಡುವುದು. 20ಪುತ್ರನೆಂದರೆ ಪಿತನಿಗೆ ಪ್ರೀತಿ. ಆದುದರಿಂದ ತಾವು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ಇದಲ್ಲದೆ ಇನ್ನೂ ಎಷ್ಟೋ ಮಿಗಿಲಾದ ಕಾರ್ಯಗಳನ್ನು ಪುತ್ರನಿಗೆ ತೋರಿಸುತ್ತಾರೆ. ಅವುಗಳನ್ನು ಕಂಡು ನೀವು ಬೆರಗಾಗುವಿರಿ.
21ಪಿತನು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವವನ್ನು ಕೊಡುವಂತೆಯೇ ಪುತ್ರನೂ ತನಗೆ ಬೇಕಾದವರಿಗೆ ಜೀವವನ್ನು ಕೊಡುತ್ತಾನೆ. 22ಲ್ಲದೆ, ಪಿತನು ಯಾರನ್ನೂ ತೀರ್ಪಿಗೆ ಗುರಿಮಾಡುವುದಿಲ್ಲ. ತೀರ್ಪುಕೊಡುವ ಅಧಿಕಾರವನ್ನೆಲ್ಲಾ ಅವರು ಪುತ್ರನಿಗೆ ಕೊಟ್ಟಿದ್ದಾರೆ. 23ಏಕೆಂದರೆ, ತಮ್ಮನ್ನು ಗೌರವಿಸುವಂತೆಯೇ ಜನರೆಲ್ಲರು ಪುತ್ರನನ್ನು ಗೌರವಿಸಬೇಕೆಂಬುದು ಅವರ ಬಯಕೆ. ಪುತ್ರನನ್ನು ಗೌರವಿಸದವನು ಆತನನ್ನು ಕಳುಹಿಸಿದ ಪಿತನನ್ನೂ ಗೌರವಿಸುವುದಿಲ್ಲ. 24“ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನ್ನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯಜೀವವನ್ನು ಪಡೆದಿರುತ್ತಾನೆ. ಅವನು ಖಂಡನೆಗೆ ಗುರಿ ಆಗನು; ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ. 25ಸತ್ಯವಾಗಿ ನಿಮಗೆ ಮತ್ತೆ ಹೇಳುತ್ತೇನೆ; ಸತ್ತವರು ದೇವರ ಪುತ್ರನ ಧ್ವನಿಯನ್ನು ಕೇಳುವ ಕಾಲ ಬರುವುದು; ಈಗಾಗಲೇ ಬಂದಿದೆ; ಈ ಧ್ವನಿಯನ್ನು ಕೇಳುವವರು ಜೀವಿಸುವರು. 26ಪಿತನು ತಾವೇ ಸ್ವಯಂ ಜೀವಮೂಲವಾಗಿರುವಂತೆ ಪುತ್ರನು ಸಹ ಸ್ವಯಂ ಜೀವಮೂಲವಾಗಿರುವಂತೆ ಕರುಣಿಸಿದ್ದಾರೆ. 27ಅದೂ ಅಲ್ಲದೆ, ಆತನು ನರಪುತ್ರನಾಗಿರುವ ಕಾರಣ ತೀರ್ಪನ್ನು ಕೊಡುವ ಹಕ್ಕನ್ನು ಆತನಿಗೇ ದಯಪಾಲಿಸಿದ್ದಾರೆ. 28ಇದನ್ನು ಕೇಳಿ ನೀವು ಬೆರಗಾಗುವುದು ಬೇಡ. ಸತ್ತು ಸಮಾಧಿಯಲ್ಲಿರುವವರೆಲ್ಲರೂ
ಆತನ ಧ್ವನಿಯನ್ನು ಕೇಳುವ ಕಾಲ ಬರುವುದು. 29ಹಾಗೆ ಕೇಳಿದವರೆಲ್ಲಾ ಸಮಾಧಿಯನ್ನು ಬಿಟ್ಟು ಎದ್ದುಬರುವರು; ಸಜ್ಜನರು ಸಜ್ಜೀವಕ್ಕಾಗಿ ಪುನರುತ್ಥಾನರಾಗುವರು, ದುರ್ಜನರು ದಂಡನಾ ತೀರ್ಪಿಗಾಗಿ ಪುನರುತ್ಥಾನ ಆಗುವರು. 30“ನನ್ನಷ್ಟಕ್ಕೇ ನಾನೇ ಏನೂ ಮಾಡಲಾರೆ. ಪಿತನು ನನಗೆ ತಿಳಿಸಿದ ಪ್ರಕಾರ ನಾನು ತೀರ್ಪುಕೊಡುತ್ತೇನೆ. ಈ ನನ್ನ ತೀರ್ಪು ನ್ಯಾಯಬದ್ಧ ಆದುದು. ಏಕೆಂದರೆ, ನಾನು ನನ್ನ ಸ್ವಂತ ಇಚ್ಛೆಯನ್ನು ನೆರವೇರಿಸದೆ ಪಿತನ ಚಿತ್ತವನ್ನೇ ನೆರವೇರಿಸಲು ಆಶಿಸುತ್ತೇನೆ.
ಚಿಂತನೆ
ಬಾಲ್ಯದಿಂದಲೂ ಯೇಸುವಿನಲ್ಲಿ ದೇವರು ತನ್ನ ತಂದೆ ಮತ್ತು ತಾನು ಅವರ ಪುತ್ರ ಎಂಬ ಸುಪ್ತ ಭಾವ ಮನೆಮಾಡಿತ್ತು. ಕಾಲಕ್ರಮೇಣ ಆ ಭಾವನೆ ಜಾಗೃತಗೊಳ್ಳುತ್ತಾ ಹೋಯಿತು. ಹನ್ನೆರಡು ವರ್ಷದ ಬಾಲಕನಾಗಿರುವಾಗಲೇ ತಮ್ಮ ತಂದೆ ತಾಯಿಯರಿಗೆ, ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂಬುದು ನಿಮಗೆ ತಿಳಿಯದೆ ಹೋಯಿತೆ (ಲೂಕ 2:49) ಎಂದು ಕೇಳಿದ್ದರು. ’ಪಿತನು ನನ್ನಲ್ಲಿ ನೆಲೆಸಿದ್ದಾರೆ, ನಾನು ಪಿತನಲ್ಲಿ ನೆಲೆಸಿದ್ದೇನೆ’, ’ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು’ ಎಂಬ ಮಾತುಗಳನ್ನು ಆಗಾಗ್ಗೆ ನುಡಿಯುತ್ತಿದ್ದರು. ಯೇಹೂದ್ಯ ನಾಯಕರಿಗಿದು ಸಹಿಸಲಾರದ ಅಪರಾಧವೆಂಬಂತೆ ತೋರಿತು. ದೇವರು ತನ್ನ ತಂದೆಯೆಂದು ಕರೆದದ್ದು ಅವರಲ್ಲಿ ಅಸಹನೆಯನ್ನುಂಟು ಮಾಡಿತ್ತು. ಕ್ರಿಸ್ತಯೇಸು ದೇವರು ಮತ್ತು ಮಾನವರ ನಡುವಿನ ಅಂತರವನ್ನು ಬಹಳಷ್ಟು ಕಡಿಮೆಗೊಳಿಸಿದರು. ಕಣ್ಣಿಗೆ ಕಾಣದ ಅಗೋಚರ ಶಕ್ತಿಯನ್ನು ಆಪ್ತಭಾವನೆಯಿಂದ ಅಪ್ಪಾ ತಂದೆಯೇ ಎಂದು ಸಂಬೋಧಿಸಲು ಕಲಿಸಿಕೊಟ್ಟರು. ನಮ್ಮಲ್ಲಿ ದೇವರ ಬಗ್ಗೆ ಭಯಕ್ಕಿಂತಲೂ ಹೆಚ್ಚಾಗಿ ಪ್ರೀತಿಯಿರಬೇಕು. ಪ್ರಭುಯೇಸುವಿನಂತೆ ನಮ್ಮ ಹೃದಯಗಳಲ್ಲಿ ಪಿತೃಭಾವ ಜಾಗೃತಗೊಳ್ಳಲಿ.
- ಫಾದರ್ ಪೀಟರ್ ಚಿನ್ನಪ್ಪ (ಬೆಂಗಳೂರು ಮಹಾಧರ್ಮಕ್ಷೇತ್ರ)
No comments:
Post a Comment