30 ಮಾರ್ಚ್ 2019

ಶನಿವಾರ, ತಪಸ್ಸುಕಾಲದ ಮೂರನೇ ವಾರ, ಸಂತ ಜಾನ್ ಕ್ಲಿಮಿಕಸ್

ಮೊದಲವಾಚನ: ಹೊಶೇಯ 6: 1-6
1 ನನ್ನನ್ನು ಜನರು ಮರೆಹೊಗುತ್ತಾ ಹೀಗೆನ್ನುವರು: “ಬನ್ನಿ, ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು. 2 ಮೂರನೆಯ ದಿನದಲ್ಲಿ ಅವರು ನಮ್ಮನ್ನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು. 3 ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು. 4 ಆದರೆ ಸರ್ವೇಶ್ವರ ಹೇಳುವುದೇನೆಂದರೆ: “ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗುವ ಇಬ್ಬನಿಯಂತಿದೆ. 5 ಖಂಡ ತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯ ದಂಡನೆ ಮಿಂಚಿನಂತೆ ಹೊರಡುವುದು. 6 ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ; ನನಗೆ ಬೇಕಾದುದು ದೈವಜ್ಞಾನ, ದಹನಬಲಿ ದಾನವಲ್ಲ

ಕೀರ್ತನೆ 51:3-4, 18-19, 20-21
ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ

3: ಒಪ್ಪಿಕೊಂಡೆನಿದೋ, ನಾನೇ ಅಪರಾಧಿ ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ
4: ಹೌದು ದೇವಾ, ನಿನಗೆ ದ್ರೋಹವೆಸಗಿದೆ ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ ನಿನ್ನ ನಿರ್ಣಯವು ನ್ಯಾಯಯುತ ನೀ ನೀಡುವ ತೀರ್ಪು ನಿರ್ಲಿಪ್ತ
18: ಸಿಯೋನಿಗೆ ದೇವಾ, ಶುಭವನು ಕರುಣಿಸು ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು
19: ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು

ಶುಭಸಂದೇಶ: ಲೂಕ 18: 9-14
9ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: 10 ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. 11 ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: 'ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. 12 ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ.
13 ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, 'ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,' ಎನ್ನುತ್ತಾ ಎದೆಬಡಿದುಕೊಂಡ.
14 ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು, ಎಂದರು ಯೇಸು.


ಚಿಂತನೆ: ಭಕ್ತನ ಭಕ್ತಿ ಬೇಗನೇ ಮಾಯವಾಗುವ ಇಬ್ಬನಿಯಂತಿರಬಾರದು. ಅದು ಸದೃಢವಾಗಿರಬೇಕು. ಅಂತವರ ಪ್ರಾರ್ಥನೆ ದೇವರಿಗೆ ಮೆಚ್ಚಿಗೆಯಾಗುತ್ತದೆ. ಪ್ರಾರ್ಥನೆಯಲ್ಲಿ ಸರಳತೆ ನೈಜತೆ ಮತ್ತು ಪ್ರಾಮಾಣಿಕತೆ ತುಂಬಿರಬೇಕು. ಪ್ರಾರ್ಥನೆ ನಾವು ಮಾಡುವ ಪುಣ್ಯ ಕಾರ್ಯಗಳ ಮನವಿ ಮಾಲೆಯಲ್ಲ. ಅದು ದೇವರನ್ನು ಸ್ತುತಿಸಿ, ಹಾಡಿ, ಹೊಗಳಲು ಇರುವ ಪವಿತ್ರ ಸಾಧನ. ನಮ್ಮ ಅಂತರಾಳದ, ಶುದ್ಧ ಮನಸ್ಸಿನ ನಿವೇದನೆ. ಅಲ್ಲಿ ಸ್ವಾರ್ಥಕ್ಕೆ ಎಡೆ ಇರುವುದಿಲ್ಲ. ನಮ್ಮ ತಪ್ಪನ್ನು ನಿವೇದಿಸಿ ಮುರಿದ ಮನಗಳನ್ನು ಸರಿಪಡಿಸಿಕೊಳ್ಳಲು ಸದವಾಕಾಶ ಪ್ರಾರ್ಥನೆಯಲ್ಲಿದೆ. ಮನಗಳ ಶುದ್ಧಿಕರಣ ಹಾಗೂ ನವೀಕರಣಗಳೆರಡೂ ಪ್ರಾರ್ಥನೆಯಲ್ಲಿ ಸಾಧ್ಯ. 

No comments:

Post a Comment