31 ಮಾರ್ಚ್ 2019

ತಪಸ್ಸು ಕಾಲದ ನಾಲ್ಕನೇ ಭಾನುವಾರ

ಮೊದಲವಾಚನ: ಯೆಹೋ 5: 9-12
9 ಸರ್ವೇಶ್ವರಸ್ವಾಮಿ ಯೆಹೋಶುವನಿಗೆ, “ನಾನು ಈಜಿಪ್ಟಿನ ಕಳಂಕವನ್ನು ದಿನ ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ,” ಎಂದು ಹೇಳಿದ್ದರಿಂದ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿಡಲಾಗಿದೆ. 10 ಇಸ್ರಯೇಲರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ಜೆರಿಕೋವಿನ ಬಯಲಿನಲ್ಲಿ ಪಾಸ್ಕ ಹಬ್ಬವನ್ನಾಚರಿಸಿದರು. 11 ಮಾರನೆಯ ದಿನದಿಂದ ಕಾನಾನಿನ ಧಾನ್ಯವನ್ನು ಊಟಕ್ಕೆ ಬಳಸಲು ತೊಡಗಿದರು - ಹುಳಿಯಿಲ್ಲದ ರೊಟ್ಟಿಗಳನ್ನು ಮತ್ತು ಸುಟ್ಟ ತೆನೆಗಳನ್ನು ತಿನ್ನತೊಡಗಿದರು. 12 ನಾಡಿನ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ಮತ್ತೆ ಸಿಕ್ಕಲೇ ಇಲ್ಲ. ಇಸ್ರಯೇಲರು ವರ್ಷವೆಲ್ಲ ಕಾನಾನ್ ನಾಡಿನ ಉತ್ಪನ್ನವನ್ನೇ ಅನುಭವಿಸಿದರು.

ಕೀರ್ತನೆ 34:2-3, 4-5, 6-7
ಸವಿದು ನೋಡು ಪ್ರಭುವಿನ ಮಾಧುರ್ಯವನು

2: ಪ್ರಭುವಿನಲ್ಲಿದೆ ನನ್ನ ಮನದಭಿಮಾನ ದೀನರಿದನು ಕೇಳಿ, ಪಡೆಯಲಿ ಸುಮ್ಮಾನ
3: ಬನ್ನಿ, ಕೊಂಡಾಡುವ ಪ್ರಭು ದೇವನನು ಘನಪಡಿಸೋಣ ಅವನ ಶ್ರೀನಾಮವನು
4: ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು
5: ಆತನತ್ತ ತಿರುಗಿದ ಮುಖ ಅರಳುವುದು ಲಜ್ಜೆಯಿಂದೆಂದಿಗು ಕುಂದಿಹೋಗದು
6: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು ಸರ್ವಾಪತ್ತಿನಿಂದವನು ಮುಕ್ತಗೊಂಡನು
7: ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು ಕಾಯುವನು ಪ್ರಭುವಿನ ದೂತನೆ ಬಂದಿಳಿದು

ಎರಡನೇ ವಾಚನ: 2ಕೊರಿಂಥ 5: 17-21
17 ಸಹೋದರರೇ, ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದು ಹೋಗುತ್ತದೆ. ಹೊಸದಿದೋ, ಜನ್ಮ ತಳೆದಿದೆ. 18 ಇದೆಲ್ಲಾ ಆಗುವುದು ದೇವರಿಂದ. ದೇವರು ಕ್ರಿಸ್ತಯೇಸುವಿನ ಮುಖಾಂತರ ನಮ್ಮನ್ನು ತಮ್ಮೊಡನೆ ಸಂಧಾನ ಪಡಿಸಿಕೊಂಡಿದ್ದಾರೆ. ಇದಲ್ಲದೆ, ಇತರರನ್ನು ಸಂಧಾನಕ್ಕೆ ತರುವ ಕಾರ್ಯವನ್ನು ನಮಗೆ ವಹಿಸಿದ್ದಾರೆ. 19 ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ. 20 ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. 21 ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತ ಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು.

ಶುಭಸಂದೇಶ: ಲೂಕ 15: 1-3, 11-32
11ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. 2ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ, ಎಂದು ಗೊಣಗಿದರು. 3ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು:11 ಯೇಸುಸ್ವಾಮಿ ಮುಂದುವರಿಸುತ್ತಾ ಈ ಸಾಮತಿಯನ್ನು ಹೇಳಿದರು: ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. 12ಅವರಲ್ಲಿ ಕಿರಿಯವನು 'ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,' ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. 13ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲು ಮಾಡಿಬಿಟ್ಟ. 14ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. 15ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. 16ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. 17ಆಗ ಅವನಿಗೆ ಬುದ್ಧಿ ಬಂದಿತು. 'ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. 18ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, 'ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; 19ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,' ಎಂದುಕೊಂಡ. 20ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. 21ಆದರೂ ಮಗನು, 'ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ' ಎಂದ. 22ತಂದೆಯಾದರೋ ಆಳುಗಳನ್ನು ಕರೆದು, 'ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ; 23ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ. 24ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,' ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.
25 ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. 26'ಮನೆಯಲ್ಲೇನು ವಿಶೇಷ?' ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. 27'ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,' ಎಂದು ಆಳು ತಿಳಿಸಿದ.  
28 ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ 29ಅವನು, 'ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. 30ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!' ಎಂದು ವಾದಿಸಿದ. 31ಆಗ ತಂದೆ ಅವನಿಗೆ, 'ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. 32ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?' ಎಂದನು.

ಚಿಂತನೆ: ದೇವರು ಕರುಣಾಮಯಿ ಹಾಗೂ ದಯಾಸಾಗರ. ಅವರು ಮಾನವರ ತಪ್ಪುಗಳನ್ನು ಲೆಕ್ಕಿಸುವುದಿಲ್ಲ. ಅವರ ಪ್ರೀತಿ ಅಪಾರ ಹಾಗೂ ಅನಂತ. ಮೊದಲನೇ ವಾಚನದಲ್ಲಿ ಯೆಹೋಶುವನ ನಾಯಕತ್ವದಲ್ಲಿ ಇಸ್ರಯೇಲರು ಪ್ರಥಮ ಬಾರಿಗೆ ದೇವರು ವಾಗ್ದಾನ ಮಾಡಿದ್ದ ಹಾಲು ಜೇನು ಹರಿಯುವ ಕಾನಾನ್ ನಾಡಿನ ಪ್ರಥಮ ಫಲವನ್ನು ಭುಜಿಸುತ್ತಾರೆ. ಈ ಮೂಲಕ ದೇವರ ಅನಂತ ಪ್ರೀತಿಯನ್ನು ಸವಿಯುತ್ತಾರೆ.
ಎರಡನೇ ವಾಚನದಲ್ಲಿ ಯಾರು ಕ್ರಿಸ್ತ ಯೇಸುವನ್ನು ಅಂಗಿಕರಿಸುತ್ತಾನೋ ಅಂಥವರು ನೂತನ ಸೃಷ್ಟಿಗಳಾಗುತ್ತಾರೆ. ಅವರಲ್ಲಿ ಹಳೆಯ ಸ್ವಭಾವಗಳು ಮಾಯವಾಗುತ್ತವೆ ಎಂದು ಸಂತ ಪೌಲ ಸ್ಪಷ್ಟ ಪಡಿಸುತ್ತಾನೆ.

ಶುಭಸಂದೇಶದಲ್ಲಿ ಪ್ರಭು ಮನಪರಿವರ್ತನೆ ಹೊಂದುವವರಿಗೆ ದೇವರ ಅನಂತ ಸಂಭಾವನೆ ಅಂದರೆ ಪಾಪ ಕ್ಷಮೆ ದೊರಕುವುದೆಂದು ತಿಳಿಸುತ್ತಾರೆ. ಮಾನವ ತಪ್ಪು ಮಾಡುವುದು ಸಹಜ ಅದನ್ನು ಸಮರ್ಥಿಸಿಕೊಳ್ಳುವ ಬದಲು ನೈಜ ಪ್ರಾಯಶ್ಚಿತ್ತ ಪಟ್ಟು ದೇವರೆಡೆಗೆ ತಿರುಗಿಕೊಂಡರೆ ಮತ್ತೆ ಪೂರ್ವ ಸ್ಥಿತಿಗೇರಲು ಸಾಧ್ಯ ಎಂಬ ಸತ್ಯ ಇಂದಿನ ಶುಭಸಂದೇಶದಲ್ಲಿ ನಿಚ್ಚಳವಾಗಿದೆ. 

No comments:

Post a Comment