ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ
1ನೇ ವಾಚನ - ವಿಮೋ 32: 7-14
ಕೀರ್ತನೆ - 106: 19-20, 21-22, 23
ಶುಭಸಂದೇಶ - ಯೊವಾನ್ನ 5: 31-47
ಐಚ್ಛಿಕ ಸ್ಮರಣೆ - ಸಂತ ಇಜಿದೋರ್ (ಧರ್ಮಾ ಮತ್ತು ಧ.ಪಂ)
1ನೇ ವಾಚನ - ವಿಮೋ 32: 7-14
7ಇತ್ತ ಸರ್ವೇಶ್ವರ ಮೋಶೆಗೆ, “ನೀನು ಕೂಡಲೆ ಬೆಟ್ಟದಿಂದ ಇಳಿದುಹೋಗು. ಈಜಿಪ್ಟಿನಿಂದ ನೀನು ಕರೆದುತಂದ ನಿನ್ನ ಜನರು ಕೆಟ್ಟುಹೋದರು. 8ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದುಬಿಟ್ಟು ತಮಗೇ ಲೋಹದ ಹೋರಿಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡಬಿದ್ದು, ಬಲಿಗಳನ್ನರ್ಪಿಸಿ, ‘ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರು’ ಎಂದು ಹೇಳಿಕೊಳ್ಳುತ್ತಿದ್ದಾರೆ. 9“ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು. 10ಆದಕಾರಣ ನೀನು ನನಗೆ ಅಡ್ಡಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು,” ಎಂದು ಹೇಳಿದರು.
11ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: “ಸ್ವಾಮಿ ಸರ್ವೇಶ್ವರಾ, ಮಹಾಶಕ್ತಿಯಿಂದಲೂ ಭುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ? 12ಈಜಿಪ್ಟಿನವರು ತಮ್ಮ ವಿಷಯದಲ್ಲಿ, ‘ಸರ್ವೇಶ್ವರನು ಕೇಡುಮಾಡಬೇಕೆಂಬ ಉದ್ದೇಶದಿಂದಲೇ ಇಸ್ರಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದದ್ದು; ಅವರನ್ನು ಬೆಟ್ಟಗುಡ್ಡಗಳಲ್ಲಿ ಸಾಯಿಸಿ ಇಳೆಯಲ್ಲಿ ಉಳಿಯದಂತೆ ನಿರ್ಮೂಲಮಾಡಬೇಕೆಂದೇ ಅವರನ್ನು ಕರೆದುಕೊಂಡು ಹೋದದ್ದು ಎಂದು ಆಡಿಕೊಳ್ಳುವುದಕ್ಕೆ ಎಡೆಮಾಡಿಕೊಳ್ಳಬೇಕೆ? ತಾವು ಕೋಪಾಗ್ನಿಯನ್ನು ಬಿಟ್ಟು, ತಮ್ಮ ಪ್ರಜೆಗೆ ಕೇಡುಮಾಡಬೇಕೆಂಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ. 13ತಮ್ಮ ದಾಸರಾದ ಅಬ್ರಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ. ತಾವು ತಮ್ಮ ಜೀವದಾಣೆ ಪ್ರಮಾಣಮಾಡಿ ಅವರಿಗೆ, ‘ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು’ ಎಂದು ತಾವು ಮಾತುಕೊಡಲಿಲ್ಲವೆ?” ಎಂದನು.
14ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.
ಕೀರ್ತನೆ - 106: 19-20, 21-22, 23
ಮರೆಯಬೇಡನ್ನನು ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ
19ಹೋರೇಬಿನಲಿ ಮಾಡಿದರು ಬಸವನನು / ಆರಾಧಿಸಿದರು ಆ ಎರಕದ ಶಿಲೆಯನು //
20ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು / ಆರಿಸಿಕೊಂಡರು ಹುಲ್ಲುತಿನ್ನುವ ಬಸವನ ವಿಗ್ರಹವನು //
21ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು / ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು //
22ಹಾಮನಾಡಿನಲಿ ಮಾಡಿದ ಅದ್ಭುತಗಳನು / ಕೆಂಗಡಬಳಿ ನಡೆದ ಘೋರ ಕೃತ್ಯಗಳನು //
23ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು / ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು / ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು //
ಶುಭಸಂದೇಶ - ಯೊವಾನ್ನ 5: 31-47
31“ನನ್ನ ಪರವಾಗಿ ನಾನೇ ಸಾಕ್ಷಿ ನೀಡಿದರೆ ನನ್ನ ಸಾಕ್ಷಿಗೆ ಬೆಲೆಯಿರದು.
32ನನ್ನ ಪರವಾಗಿ ಸಾಕ್ಷಿ ನೀಡುವಾತನು ಇನ್ನೊಬ್ಬನಿದ್ದಾನೆ. ಆತನು ನೀಡುವ ಸಾಕ್ಷ್ಯಕ್ಕೆ ಬೆಲೆಯಿದೆ ಎಂದು ನಾನು ಬಲ್ಲೆ. 33ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ. 34ನನಗೆ ಮಾನವ ಸಾಕ್ಷಿ ಬೇಕೆಂದು ಅಲ್ಲ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕ್ಕೆಂದು ನಾನು ಹೇಳುತ್ತಿದ್ದೇನೆ.
35ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪಕಾಲ ನಲಿದಾಡಿದಿರಿ. 36ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು: ನಾನು ಸಾಧಿಸುತ್ತಿರುವ ಸುಕೃತ್ಯಗಳೇ, ಅಂದರೆ, ಪಿತನು ನನಗೆ ಮಾಡಿ ಮುಗಿಸಲು ಕೊಟ್ಟ ಕಾರ್ಯಗಳೇ, ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ ಸಾಕ್ಷಿಕೊಡುತ್ತವೆ. 37ನನ್ನನ್ನು ಕಳುಹಿಸಿದ ಪಿತನೇ ನನ್ನ ಪರವಾಗಿ ಸಾಕ್ಷಿ ನೀಡಿದ್ದಾರೆ. ನೀವಾದರೋ ಅವರ ಧ್ವನಿಯನ್ನು ಎಂದೂ ಕೇಳಿಲ್ಲ, ಅವರ ದರ್ಶನವನ್ನು ಎಂದೂ ಕಂಡಿಲ್ಲ. 38ಅವರ ಸಂದೇಶ ನಿಮ್ಮಲ್ಲಿ ನೆಲಸಿಲ್ಲ. ಏಕೆಂದರೆ, ಅವರು ಕಳುಹಿಸಿದವನಲ್ಲಿ ನೀವು ವಿಶ್ವಾಸವಿಡಲಿಲ್ಲ. 39ಪವಿತ್ರ ಗ್ರಂಥದಿಂದಲೇ ನಿತ್ಯಜೀವ ಲಭಿಸುವುದೆಂದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ. ಆ ಗ್ರಂಥವು ಸಹ ನನ್ನ ಪರವಾಗಿ ಸಾಕ್ಷಿಹೇಳುತ್ತದೆ. 40ಆದರೂ ನಿತ್ಯಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ. 41“ನಾನು ಮನುಷ್ಯರಿಂದ ಬರುವ ಗೌರವವನ್ನು ಅರಸುವುದಿಲ್ಲ. 42ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನಾನು ಚೆನ್ನಾಗಿ ಬಲ್ಲೆ. 43ನಾನು ಬಂದಿರುವುದು ಪಿತನ ಹೆಸರಿನಲ್ಲೇ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದನೆಂದರೆ ಅಂಥವನನ್ನು ನೀವು ಬರಮಾಡಿಕೊಳ್ಳುತ್ತೀರಿ. 44ಕಾರಣ, ದೇವರಿಂದ ಸಿಗುವಂಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯಸುತ್ತೀರಿ. ಹೀಗಿರುವಲ್ಲಿ, ನಿಮ್ಮಲ್ಲಿ ವಿಶ್ವಾಸಮೂಡಲು ಹೇಗೆ ತಾನೆ ಸಾಧ್ಯ? ಪಿತನ ಮುಂದೆ ನಾನು ನಿಮ್ಮನ್ನು ಆಪಾದಿಸುತ್ತಿರುವೆನೆಂದು
ಎಣಿಸಬೇಡಿ. 45ಆಪಾದಿಸುವವನು ಒಬ್ಬನಿದ್ದಾನೆ. ಆತನೇ ನೀವು ಆಶ್ರಯಿಸಿಕೊಂಡಿರುವ ಮೋಶೆ. 46ಮೋಶೆಯಲ್ಲಿ ನಿಮಗೆ ವಿಶ್ವಾಸ ಇದ್ದಿದ್ದರೆ ನನ್ನಲ್ಲಿ ವಿಶ್ವಾಸ ಇಡುತ್ತಿದ್ದಿರಿ. ಏಕೆಂದರೆ, ಆತನು ಬರೆದುದು ನನ್ನನ್ನು ಕುರಿತೇ. 47ಆತನು ಬರೆದುದರಲ್ಲಿ ನಿಮಗೆ ನಂಬಿಕೆಯಿಲ್ಲವೆಂದ ಮೇಲೆ ನನ್ನ ಮಾತಿನಲ್ಲಿ ನಿಮಗೆ ಹೇಗೆ ನಂಬಿಕೆ ಹುಟ್ಟೀತು?”
ಚಿಂತನೆ
ಒಳ್ಳೆಯವರಿಗೆ ಎಲ್ಲವೂ ಒಳ್ಳೆಯದೇ ಸಂಭವಿಸುವುದಿಲ್ಲ, ಈ ಲೋಕ ಸಜ್ಜನರನ್ನು ಎಲ್ಲಾ ಕಾಲದಲ್ಲೂ ಅನುಮಾನದಿಂದಲೇ ನೋಡಿದೆ, ಕೆಟ್ಟದಾಗಿ ನಡೆಸಿಕೊಂಡಿದೆ. ಮಾತಿಗಿಂತ ಕೃತಿ ಮೇಲು, ಆಡುವವರಿಗಿಂತ ಮಾಡುವವರು ಉತ್ತಮ ಎಂಬಂತೆ ಕ್ರಿಸ್ತಯೇಸು ಬೋಧನೆಯ ವ್ಯಕ್ತಿ ಮಾತ್ರವೇ ಆಗಿರದೆ ಸಾಧನೆಯ ವ್ಯಕ್ತಿಯಾದರು. ಶುಭಸಂದೇಶದ ಪ್ರತಿಯೊಂದು ಪುಟದಲ್ಲೂ ಇದು ಗೋಚರವಾಗುತ್ತದೆ. ಜನರ ಕಷ್ಟಗಳಿಗೆ ಸ್ಪಂಧಿಸುತ್ತಾ, ಅವರನ್ನು ಸ್ಪರ್ಷಿಸಿ ಗುಣಪಡಿಸುತ್ತಾ ಅವರೊಡನೆ ಒಂದಾಗಿ ಹೋದರು. ಬರೀ ಉತ್ಸವ ಮೂರ್ತಿಯಾಗಿ ಉಳಿಯದೆ ಜನರ ದೈವವಾಗಿ ಕಾಣಿಸಿಕೊಂಡರು. ಅವರಲ್ಲಿ ಇಷ್ಟೆಲ್ಲಾ ಒಳ್ಳೆಯ ಅಂಶಗಳನ್ನು ಕಾಣದ ಜನರು ಅವರನ್ನು ಅನುಮಾನಿಸಿದರು, ಅವಮಾನಿಸಿದರು ಮಾತ್ರವಲ್ಲ ಅವರಲ್ಲಿ ವಿಶ್ವಾಸವನ್ನು ಕಳೆದುಕೊಂಡರು. ನಮ್ಮ ಜೀವನ ಸನ್ನಿವೇಶಗಳಲ್ಲಿಯೂ ಸಹ ವ್ಯಕ್ತಿಯ ಮೇಲಿನ ದ್ವೇಷ ಅವರನ್ನು ದ್ವೇಷಿಸುವಂತೆ ಮಾಡುತ್ತದೆ. ವ್ಯಕ್ತಿ ಯಾರೇ ಆಗಿರಲಿ ಅವರು ಮಾಡುವ ಕಾರ್ಯ ಒಳ್ಳೆಯದಾಗಿದ್ದರೆ, ಆಡುವ ಮಾತು ಸತ್ಯವಾಗಿದ್ದರೆ ಮನ್ನಣೆ ನೀಡುವಂತಹ ಪ್ರಬುದ್ಧತೆ ನಮ್ಮಲ್ಲಿ ಬರಬೇಕು.
- ಫಾ. ಪೀಟರ್ ಚಿನ್ನಪ್ಪ (ಬೆಂಗಳೂರು ಮಹಾಧರ್ಮಕ್ಷೇತ್ರ)
ಸಂತ ಇಸಿದೋರ್
ಕ್ರಿಸ್ತಶಕ 560ರಲ್ಲಿ ಸ್ಪೇನ್ ನಲ್ಲಿ ಜನಿಸಿದ ಇಸಿದೋರ್ ನವರು ಬಾಲ್ಯದಲ್ಲಿ ಒಬ್ಬ
ಪೆದ್ದ ಹುಡುಗ. ಓದಿದ್ದೇನೂ ತಲೆಗೆ ಹತ್ತುತ್ತಿರಲಿಲ್ಲ. ಬಂಡೆಯ ಮೇಲೆ ತೊಟ್ಟಿಕ್ಕುವ ನೀರ ಹನಿಗಳು
ಕ್ರಮೇಣ ಬಂಡಯಲ್ಲಿ ಒಂದು ಕುಳಿಯನ್ನು ಉಂಟುಮಾಡುವುದನ್ನು ನೋಡಿದ ಅವರ ಸತತ ಪ್ರಯತ್ನದಿಂದ ಏನು
ಬೇಕಾದರೂ ಸಾಧಿಸಬಹುದು ಎಂಬುದನ್ನು ಕಂಡುಕೊಂಡರು. ಅಂತೆಯೇ ಪಟ್ಟಾಗಿ ಓದಿ ಜ್ಞಾನವನ್ನು
ಅರಗಿಸಿಕೊಂಡರು. ಏನು ಸಿಕ್ಕಿದರೂ ಬಿಡದೇ ಓದಿ ವಿಜ್ಞಾನ, ಗಣಿತ, ಭೂಗೋಳ, ವೈದ್ಯಕೀಯ ಯಾವುದೂ
ತಮಗೆ ವರ್ಜ್ಯವಲ್ಲ ಎಂದುಕೊಂಡರು. ಮುಂದೆ ಅವರು
ಶಿಕ್ಷಕರಾಗಿ ಸ್ಪೇನಿನಲ್ಲಿ ಹಲವಾರು ಸೆಮಿನರಿಗಳನ್ನು ತೆರೆದು ಅಲ್ಲಿನ ವಿದ್ಯಾರ್ಥಿಗಳಲ್ಲಿ ತಮ್ಮ
ಜ್ಞಾನವನ್ನು ಧಾರೆಯೆರೆದರು. ಯೂರೂಪಿನ ಪಠ್ಯಪುಸ್ತಕಗಳಲ್ಲಿ ಅರಿಸ್ಟಾಟಲನ್ನು ಪರಿಚಯಿಸುವ
ವೇಳೆಗಾಗಲೇ ಸ್ಪೇನಿನ ಜನ ಅರಿಸ್ಟಾಟಲನನ್ನು ಚೆನ್ನಾಗಿ ಅರಿತುಕೊಂಡಿದ್ದರು. ಅದು ಇಸಿದೋರ್ ನವರ
ಹೆಗ್ಗಳಿಕೆ. ಅತ್ಯುತ್ತಮ ವಾಗ್ಮಿಯೂ ಆಗಿದ್ದ ಅವರು ಐರೋಪ್ಯ ಆಚಾರವಿಚಾರಗಳನ್ನು ಗಮನಿಸುತ್ತಲೇ
ಕ್ರೈಸ್ತಧರ್ಮವನ್ನು ಅನೂಚಾನವಾಗಿ ಅನುಸರಿಸುತ್ತಾ ಬಂದರು. ಪಾದರಿಯಾಗಿ ವಿದ್ವಾಂಸರಾಗಿ ಇವರು
ಜನಪದ ಆಚರಣೆಗಳನ್ನು ನಿರಾಕರಿಸದೇ ಕ್ರೈಸ್ತ ಪರಂಪರೆಯನ್ನು ಎತ್ತಿ ಹಿಡಿಯುವುದು ಸಾಧ್ಯ ಎಂಬುದರ
ಬಗ್ಗೆ ತುಲನಾತ್ಮಕ ಅಧ್ಯಯನ ಕೈಗೊಂಡು ಅದನ್ನು ನಿರೂಪಿಸಿ ತೋರಿಸಿದರು. ಇವರ ಪ್ರತಿಪಾದನೆಯನ್ನು
ಕಟ್ಟಾ ಸಂಪ್ರದಾಯವಾದಿಗಳು ಒಪ್ಪಿಕೊಳ್ಳಲೇಬೇಕಾಯಿತು. ನುಡಿಯರಿಗರೂ ಆಗಿದ್ದ ಇಸಿದೊರರು ಯೂರೋಪಿನ
ಅಲೆಮಾರಿ ಜನಾಂಗಗಳ ಹಲವಾರು ನಶಿಸಿಹೋಗುತ್ತಿದ್ದ ಭಾಷೆಗಳ ಮೂಲಸ್ವರೂಪ, ಇತಿಹಾಸ,
ಬೆಳವಣಿಗೆಗಳನ್ನು ಅಧ್ಯಯನ ಮಾಡಿ ಅವನ್ನು ಸಂರಕ್ಷಿಸಿದರು. ಇದೇ ಅಲೆಮಾರಿಗಳನ್ನು ಪ್ರೀತಿಯಿಂದ
ಮಣಸಿ ಕ್ರೈಸ್ತಧರ್ಮದ ಬಗ್ಗೆ ಅವರು ತಳೆದಿದ್ದ ತಪ್ಪುಗ್ರಹಿಕೆಗಳನ್ನು ನಿವಾರಿಸಿದರು. ಹಾಗಾಗಿ
ಇಸಿದೋರರನ್ನು ಪಾಷಂಡವಾದಿಗಳ ನಿವಾರಕ, ಕ್ರೈಸ್ತಧರ್ಮದ ಪುನರ್ ಸ್ಥಾಪಕ ಎಂದು ಬಣ್ಣಿಸಲಾಗುತ್ತದೆ.
- ಮರಿಜೋಸೆಫ್
No comments:
Post a Comment