ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ
1ನೇ ವಾಚನ - ಯೆಶಾಯ 43: 16-21
ಕೀರ್ತನೆ - 126: 1-6
2ನೇ ವಾಚನ - ಫಿಲಿಪ್ಪಿ 3: 8-14
ಶುಭಸಂದೇಶ - ಯೊವಾನ್ನ 8: 1-11
ಸಂತ ಜಾನ್ ಬಾಪಿಸ್ಟ್ ದೆ ಲ್ ಸಾಲ್ ಸ್ಮರಣೆ ಇರುವುದಿಲ್ಲ
1ನೇ ವಾಚನ - ಯೆಶಾಯ 43: 16-21
16ಸಮುದ್ರದ ಮಧ್ಯೆ ದಾರಿಮಾಡಿದವನಾರೋ, ಭೋರ್ಗರೆವ ಜಲರಾಶಿಗಳಲ್ಲಿ ಮಾರ್ಗವೇರ್ಪಡಿಸಿದವನಾರೋ, 17ಅಶ್ವರಥಭಟಸೈನ್ಯಗಳನ್ನು
ಹೊರಡಿಸಿದವನಾರೋ, ಅವು ಬಿದ್ದು ಏಳಲಾಗದೆ, ಬತ್ತಿಕರಗಿ ಹೋಗುವಂತೆ ಮಾಡಿದವನಾರೋ, ಆ ಸ್ವಾಮಿ ಸರ್ವೇಶ್ವರ ನುಡಿದ ಮಾತಿದೋ: 18“ಗತಿಸಿಹೋದ ಘಟನೆಗಳನ್ನು ನೆನೆಯಬೇಕಾಗಿಲ್ಲ ಪುರಾತನ ಕಾರ್ಯಗಳ ನೆನಸಿಕೊಳ್ಳಬೇಕಾಗಿಲ್ಲ. 19ಇಗೋ, ನೂತನ ಕಾರ್ಯವನು ನಾನೆಸಗುವೆ ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೇ? ಮಾರ್ಗವನ್ನು ಏರ್ಪಡಿಸುವೆ ಮರುಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ. 20ಕಾಡುಮೃಗಗಳು, ನರಿ, ಉಷ್ಟ್ರಪಕ್ಷಿಗಳು ಕೂಗಿ ಕೊಂಡಾಡುವುವು ನನ್ನನ್ನು. ಏಕೆನೆ ಕೊಡುವೆನು ನೀರನ್ನು ಮರುಭೂಮಿಯಲಿ ಹರಿಸುವೆನು ತೊರೆನದಿಗಳನ್ನು ಅರಣ್ಯದಲಿ. 21ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನು.”
ಕೀರ್ತನೆ - 126: 1-6
ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ/ ಎಂತಲೆ ನಾವಾನಂದಭರಿತರಾಗುವುದು ಉಚಿತ
1ಸೆರೆಯಿಂದೆಮ್ಮನು ಪ್ರಭು ಸಿಯೋನಿಗೆ ಮರಳಿಸಿದಾಗ / ಅದೊಂದು ಕನಸು ಕಂಡಂತಿತ್ತು ನಮಗೆ ಆವಾಗ
2ಉಕ್ಕಿತಾಗ ಮುಖತುಂಬ ನಗು, ಬಾಯ್ತುಂಬ ಹರ್ಷಗೀತೆ / “ಎಂಥ ಮಹತ್ಕಾರ್ಯವೆಸಗಿದನಾ ಪ್ರಭು ಇವರ ಪರತೆ” / ಇಂತೆಂದು ಆಡಿಕೊಂಡರು ತಂತಮ್ಮೊಳಗೆ ಅನ್ಯಜನತೆ
3ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ / ಎಂತಲೆ ನಾವಾನಂದಭರಿತರಾಗುವುದು
ಉಚಿತ
4ಬತ್ತಿದ ನದಿಯಲಿ ನೀರು ಮರಳಿ ಉಕ್ಕಿ ಹರಿವಂತೆ / ನೀಡು ಸಿರಿ ಸೌಭಾಗ್ಯ, ಹೇ ಪ್ರಭೂ, ನಮಗೆ ಮತ್ತೆ
5ಅಳುತಳುತಾ ಬಿತ್ತುವವರು / ನಲಿನಲಿಯುತ್ತಾ ಕೊಯ್ಯುವರು
6ದುಃಖಿಸುತ್ತಾ ಬೀಜಬಿತ್ತಲು ಹೋದವನು | ಹರ್ಷಿಸುತ್ತಾ ಕೊಯ್ದು ತರುವನು ತೆನೆಗಳನು ||
2ನೇ ವಾಚನ - ಫಿಲಿಪ್ಪಿ 3: 8-14
8ನಿಶ್ಚಯವಾಗಿಯೂ ನನ್ನ ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕøಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನು ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ, ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ. 9ಧರ್ಮಶಾಸ್ತ್ರದ ಪಾಲನೆಯಿಂದ ದೊರಕುವ, ನನ್ನದೇ ಎಂದು ಹೇಳಿಕೊಳ್ಳಬಹುದಾದ ಸತ್ಸಂಬಂಧ ಯಾವುದೂ ನನಗಿಲ್ಲ. ಪ್ರತಿಯಾಗಿ, ನಾನು ಕ್ರಿಸ್ತಯೇಸುವಿನಲ್ಲಿಟ್ಟಿರುವ ವಿಶ್ವಾಸದ ಪ್ರಯುಕ್ತ ದೇವರೊಂದಿಗೆ ಸರಿಯಾದ ಸತ್ಸಂಬಂಧವನ್ನು ಹೊಂದಿದ್ದೇನೆ. ಈ ಸಂಬಂಧವು ದೇವರು ನನಗೆ ದಯಪಾಲಿಸಿರುವ ಅನುಗ್ರಹ. ನನ್ನ ವಿಶ್ವಾಸದ ಆಧಾರದ ಮೇಲೆ ಅವರೇ ನೀಡಿರುವ ಕೃಪಾವರ. 10ಯೇಸುಸ್ವಾಮಿಯನ್ನು ಅರಿಯಬೇಕು; ಅವರ ಪುನರುತ್ಥಾನದ ಪ್ರಭಾವವನ್ನು ಅನುಭವಿಸಬೇಕು; ಅವರ ಯಾತನೆಗಳಲ್ಲಿ ಪಾಲುಗೊಳ್ಳಬೇಕು; ಅವರ ಮರಣದಲ್ಲಿ ಅವರಂತೆಯೇ ಆಗಬೇಕು - ಇದೇ ನನ್ನ ಹೆಬ್ಬಯಕೆ. 11ಹೀಗೆ ನಾನೂ ಸಹ ಮೃತ್ಯುಂಜಯನಾಗುತ್ತೇನೆ ಎಂಬುದೇ ನನ್ನ ನಂಬಿಕೆ - ನಿರೀಕ್ಷೆ. 12ಈಗಾಗಲೇ ನಾನಿದೆಲ್ಲವನ್ನೂ ಸಾಧಿಸಿದ್ದೇನೆ, ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ನೀವು ಭಾವಿಸಬಾರದು. ಕ್ರಿಸ್ತಯೇಸು ನನ್ನನ್ನು ಯಾವುದಕ್ಕಾಗಿ ತಮ್ಮವನನ್ನಾಗಿ ಮಾಡಿಕೊಂಡರೋ, ಅದನ್ನು ನನ್ನದಾಗಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. 13ಸಹೋದರರೇ, ಆ ಗುರಿಯನ್ನು ತಲುಪಿದ್ದೇನೆಂದು ನಾನೆಂದೂ ಹೇಳಿಕೊಂಡಿಲ್ಲ. ಆದರೆ ಇದು ನಿಜ. ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ಮುಂದಿನವುಗಳ ಮೇಲೆ ಕಣ್ಣಿಟ್ಟು ನಾನು ಓಡುತ್ತಿದ್ದೇನೆ. 14ಮೇಲಣ ಬಹುಮಾನವನ್ನು ಪಡೆಯಲೆಂದು ದೇವರು ನನಗೆ ಕ್ರಿಸ್ತಯೇಸುವಿನ ಮುಖಾಂತರ ಕರೆನೀಡಿದ್ದಾರೆ. ಆ ಗುರಿಯನ್ನು ತಲುಪಲೆಂದೇ ನಾನು ಮುಂದೋಡುತ್ತಲಿದ್ದೇನೆ.
ಶುಭಸಂದೇಶ - ಯೊವಾನ್ನ 8: 1-11
1(ಯೇಸುಸ್ವಾಮಿ ಓಲಿವ್ ಗುಡ್ಡಕ್ಕೆ ಹೋದರು. 2ಮರುದಿನ ಮುಂಜಾನೆ ಅವರು ಮತ್ತೆ ಮಹಾದೇವಾಲಯಕ್ಕೆ ಬಂದರು. ಜನರು ಸುತ್ತಲೂ ಬಂದು ನೆರೆಯಲು ಯೇಸು ಕುಳಿತುಕೊಂಡು ಬೋಧಿಸತೊಡಗಿದರು. 3ಆಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ಹೆಂಗಸನ್ನು ಅಲ್ಲಿಗೆ ಕರೆತಂದರು; ಅವಳು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಳು. 4ಅವಳನ್ನು ಎಲ್ಲರ ಮುಂದೆ ನಿಲ್ಲಿಸಿ, “ಬೋಧಕರೇ, ಈ ಹೆಂಗಸು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಳು. 5ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು. 6ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನನ್ನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆಹಾಕುತ್ತಲೇ ಇದ್ದರು. 7ಆಗ ಯೇಸು ನೆಟ್ಟಗೆ ಕುಳಿತು, “ನಿಮ್ಮಲ್ಲಿ ಪಾಪ ಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ,” ಎಂದು ಹೇಳಿ, 8ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. 9ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು. 10ಆಗ ಯೇಸು ತಲೆಯೆತ್ತಿ, “ತಾಯಿ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೆ?” ಎಂದು ಕೇಳಿದರು. 11ಅವಳು “ಇಲ್ಲ, ಸ್ವಾವಿೂ,” ಎಂದಳು. ಯೇಸು ಅವಳಿಗೆ, “ನಾನೂ ನಿನಗೆ ಶಿಕ್ಷೆವಿಧಿಸುವುದಿಲ್ಲ,
ಹೋಗು; ಇನ್ನು ಮೇಲೆ ಪಾಪಮಾಡಬೇಡ,” ಎಂದರು).
ಚಿಂತನೆ
ತಪ್ಪು ಮಾಡುವುದು ಮಾನವ ಸಹಜ ಗುಣ, ಆ ತಪ್ಪನ್ನು ಕ್ಷಮಿಸುವುದು ದೈವ ಗುಣ. ಪಾಪಿಗಳನ್ನು ಕ್ಷಮಿಸಿ ಉದ್ಧರಿಸುವುದು ದೇವರ ಪ್ರಮುಖ ಕಾರ್ಯ ಎಂದು ಕ್ರಿಸ್ತ ಪ್ರತಿಪಾದಿಸಿದರು. ನಾನು ಬಂದಿರುವುದು ಧರ್ಮಿಷ್ಠರನ್ನು ಕರೆಯುವುದಕ್ಕಲ್ಲ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖಿಗಳಾಗಿರಿ ಎಂದು ಪಾಪಿಷ್ಟರನ್ನು ಕರೆಯುವುದಕ್ಕೆ ಎಂದು ಅವರು ಸಾರಿ ಹೇಳಿದರು. ವ್ಯಭಿಚಾರಿಣಿ ಮಹಿಳೆಗೆ ಯೇಸು ಕರುಣಿಸಿದ ಕ್ಷಮಾದಾನ, ಪಾಪಿಸಂಕುಲಕ್ಕೆ ದೇವರು ಕರುಣಿಸುವ ಕ್ಷಮೆಗೆ ಒಂದು ನಿದರ್ಶನವಷ್ಟೇ. ಯೆಹೂದ್ಯರ ದೃಷ್ಟಿಯಲ್ಲಿ ಮತ್ತು ಧರ್ಮಶಾಸ್ತ್ರದ ಪ್ರಕಾರ ಆಕೆ ಒಬ್ಬಳು ಪಾಪಿ ಮತ್ತು ಅವಳ ಕೃತ್ಯ ಶಿಕ್ಷಾರ್ಹವಾದುದು. ಆದರೆ ಕ್ರಿಸ್ತನ ದೃಷ್ಟಿಯಲ್ಲಿ ಆಕೆ ದೇವರ ಮಗಳು. ಮತ್ತು ಕ್ಷಮೆಗೆ ಯೋಗ್ಯಳು. ಸದಾ ಕಾಲ ಪರರ ತಪ್ಪುಗಳ ಕಡೆಗೆ ಬೆರಳು ತೋರಿಸುವ ನಾವು ಎಂಥವರು. ನಮ್ಮ ಹೃದಯ ಮತ್ತು ಮನಸ್ಸು ಎಷ್ಟು ನಿರ್ಮಲ ಎಂಬುದನ್ನು ನೋಡಿಕೊಳ್ಳುವುದೇ ಇಲ್ಲ. ವ್ಯಭಿಚಾರಿಣಿಯನ್ನು ಶಿಕ್ಷಿಸಲೇಬೇಕು? ಎನ್ನುತ್ತಾ ಆವೇಶಭರಿತರಾಗಿದ್ದವರು ಒಂದು ಕ್ಷಣ ತಮ್ಮನ್ನೇ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅವಕಾಶ ನೀಡುತ್ತಾರೆ ಯೇಸು. ತೀರ್ಪು ನೀಡಲು, ಶಿಕ್ಷಿಸಲು ಹೆಚ್ಚು ಸಮಯ ಬೇಕಿಲ್ಲ. ಕ್ಷಮಿಸಲು ಮತ್ತು ಮನಪರಿವರ್ತಿಸಲು ಹೆಚ್ಚು ಸಮಯ ಬೇಕು. ಮರಳಿನ ಮೇಲೆ ಬರೆಯುತ್ತಾ ಸಮಯವನ್ನು ಕಳೆಯುವುದರ ಉದ್ದೇಶವಿದೇ ಇರಬಹುದು.
ಕ್ರಿಸ್ತಯೇಸುವಿನ ದೈವತ್ವದ ಶಿಖರದ ಮುಂದೆ ನಾವು ಅತ್ಯಲ್ಪರೆಂದು ಅರಿತ ಆ ಜನರು ಕಲ್ಲುಗಳನ್ನು ಕೆಳಗೆಸೆದು ನಾಚಿಕೆಯಿಂದ ಜಾಗ ಕಾಲಿ ಮಾಡಿದರು. ಪರರನ್ನು ದೂಷಿಸುವ ಮುನ್ನ, ಶಿಕ್ಷಿಸುವ ಮುನ್ನ ನಮ್ಮೊಳಗೆ ನಾವು ಇಣುಕಿ ನೋಡೋಣ, ಶಿಕ್ಷಿಸುವ ಮೊದಲು ಪರಿವರ್ತನೆಗೆ, ಪಶ್ಚಾತ್ತಾಪಕ್ಕೆ ಕಾಲಾವಕಾಶ ನೀಡುವ ಉದಾರತೆಯನ್ನು ಬೆಳೆಸಿಕೊಳ್ಳೋಣ.
ಫಾ. ಪೀಟರ್ ಚಿನ್ನಪ್ಪ (ಬೆಂಗಳೂರು ಮಹಾಧರ್ಮಕ್ಷೇತ್ರ)
No comments:
Post a Comment