ಫೆಬ್ರವರಿ ೨೮, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

28 ಫೆಬ್ರವರಿ 2೦19


ಗುರುವಾರ / ಹಸಿರು / ಸಾಧಾರಣ ಕಾಲದ ಏಳನೇ ವಾರ
1ನೇ ವಾಚನ - ಸಿರಾಖ 5: 1-8
ಕೀರ್ತನೆ - 1: 1-4, 6
ಶುಭಸಂದೇಶ - ಮಾರ್ಕ 9: 41-50
ಐಚ್ಛಿಕ ಸ್ಮರಣೆ - ಸಂತ ಹಿಲರಿ

ವಾಚನಗಳು
ಮೊದಲನೇ  ವಾಚನ


ಆದಿಕಾಂಡದಿಂದ ವಾಚನ
ಸಿರಾಖ 5: 1-8
1ಸಿರಿತನ ಮತ್ತು ಸೊಕ್ಕು ನಿನ್ನ ಆಸ್ತಿಯನ್ನೇ ನೆಚ್ಚಿಕೊಂಡಿರಬೇಡ, ಅದರಲ್ಲೇ ಸಂತುಷ್ಟನಾಗಿರಬೇಡ.
2ನಿನ್ನ ಇಚ್ಛಾಸಕ್ತಿಗಳಿಗೆ ಬಲಿಯಾಗಬೇಡ, ನಿನ್ನ ಮನದಾಶೆಗೆ ಗುಲಾಮ ನಾಗಬೇಡ. 3ಕೊಚ್ಚಿಕೊಳ್ಳಬೇಡ, ನನ್ನನ್ನು ಕಟ್ಟಿ ಆಳುವವರಾರೆಂದು ಸರ್ವೇಶ್ವರ ನಿನ್ನ ಸೊಕ್ಕನ್ನು ಮುರಿದುಬಿಟ್ಟಾನು! 4ಪಾಪಮಾಡಿದ ನನಗೇನಾಯಿತು? ಎಂದುಕೊಳ್ಳಬೇಡ ಏಕೆಂದರೆ ದೀರ್ಘಶಾಂತನು ಸರ್ವೇಶ್ವರ ! 5ಪಾಪಕ್ಕೆ ಪಾಪವನ್ನು ಕೂಡಿಸಿ ಹಾಕಿಕೊಳ್ಳಬೇಡ, ದೇವರಿಂದ ಕ್ಷಮೆ ಪಡೆಯುವ ಬಗ್ಗೆ ನಿರ್ಭಯದಿಂದಿರಬೇಡ. 6ದೇವರು ಕರುಣಾಸಾಗರ ಎಂದು ನೆಪಹೇಳಬೇಡ, ಲೆಕ್ಕವಿಲ್ಲದ ಪಾಪಮಾಡಿದರೂ ಕ್ಷಮೆ ದೊರಕುವುದೆಂದು ನೆನೆಯಬೇಡ. ದಯೆಯಿದ್ದಂತೆ ಕೋಪವೂ ಆತನಲ್ಲಿದೆ ಪಾಪಿಗಳ ಮೇಲೆ ಆತನ ಕೋಪ ಎರಗಲಿದೆ. 7ಸರ್ವೇಶ್ವರನಿಗೆ ಅಭಿಮುಖನಾಗಲು ತಡಮಾಡಬೇಡ, ‘ಇಂದು, ನಾಳೆ’ ಎಂದು ದಿನವನ್ನು ಮುಂದೂಡಬೇಡ. ಸರ್ವೇಶ್ವರನ ಕೋಪ ಎರಗಬಹುದು ದಿಢೀರೆಂದು ನೀ ಹಾಳಾಗಿ ಹೋಗುವೆ ಮುಯ್ಯಿತೀರಿಸುವ ದಿನದಂದು. 8ಮನಸ್ಸಿಡಬೇಡ ಅನ್ಯಾಯದ ಗಳಿಕೆಯಲಿ ಅದರಿಂದ ಯಾವ ಲಾಭವಿರದು ವಿನಾಶದ ದಿನದಲಿ. ಸರಳತೆ ಮತ್ತು ಸಂಯಮ

ಕೀರ್ತನೆ 


ಕೀರ್ತನೆ - 1: 1-4, 6
ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು

ದುರ್ಜನರ ಆಲೋಚನೆಯಂತೆ ನಡೆಯದೆ 
ಪಾಪಾತ್ಮರ ಪಥದಲಿ ಕಾಲೂರದೆ 
ಧರ್ಮನಿಂದಕರ ಕೂಟದಲಿ ಕೂರದೆ
ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು
ಹಗಲಿರುಳೆನ್ನದೆ ಅದನೆ ಧ್ಯಾನಿಸು ತಿರುವವನಾರೋ - ಅವನೇ ಧನ್ಯನು

ನದಿಯ ಬದಿಯಲೇ ಬೆಳೆದಿಹ ಮರದಂತೆ 
ಸಕಾಲಕೆ ಫಲವೀವ ವೃಕ್ಷದಂತೆ 
ಎಲೆಬಾಡದೆ ಪಸಿರಿರುವ ತರುವಂತೆ 
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ 

ದುರುಳರಾದರೊ ತೂರಿ ಹೋಗುವರು 
ಬಿರುಗಾಳಿಗೆ ತರಗೆಲೆಯಾಗುವರು
ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ 
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ


ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 9: 41-50
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, 41ನೀವು ಕ್ರಿಸ್ತಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಎಂದರು. 42ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, ನನ್ನಲ್ಲಿ ವಿಶ್ವಾಸ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು. 43ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು; 44ಎರಡು ಕೈಗಳಿದ್ದು ನರಕದ ಆರದ ಬೆಂಕಿಗೆ ಗುರಿಯಾಗುವುದಕ್ಕಿಂತ ಅಂಗಹೀನನಾಗಿ ಅಮರಜೀವವನ್ನು ಪಡೆಯುವುದೇ ಲೇಸು. 45ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು, 46ಎರಡು ಕಾಲುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಕುಂಟನಾಗಿ ಅಮರಜೀವವನ್ನು ಪಡೆಯುವುದೇ ಲೇಸು. 47ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು. ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು. 48ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು.  49ಊಟಕ್ಕೆ ಉಪ್ಪಿನಂತೆ ಪ್ರತಿಯೊಬ್ಬನಿಗೆ ಅಗ್ನಿಪರೀಕ್ಷೆ ಅವಶ್ಯಕ. 50ಉಪ್ಪೇನೋ ಪ್ರಯೋಜನಕರ. ಆದರೆ ಉಪ್ಪೇ ಸಪ್ಪೆಯಾದರೆ, ಇನ್ನು ಯಾವುದರಿಂದ ಅದನ್ನು ಪುನಃ ರುಚಿಗೊಳಿಸಲಾದೀತು? ನೀವು ಉಪ್ಪಿನಂತೆ ಒಬ್ಬರಿಗೊಬ್ಬರು ಒಪ್ಪಿಗೆಯಾಗಿ ಸಮಾಧಾನದಿಂದಿರಿ, ಎಂದರು. 


ಚಿಂತನೆ
ನರಕದ ಬೆಂಕಿಯೇ ಗತಿ


ಪಾಪಕ್ಕೆ ಪ್ರಚೋದನೆ ನೀಡುವವರನ್ನು ಇಂದಿನ ಶುಭಸಂದೇಶದಲ್ಲಿ ಕಟುವಾಗಿ ಖಂಡಿಸಲಾಗಿದೆ. ಯೆಹೂದ್ಯ ಧರ್ಮ ಪಂಡಿತರ ಪ್ರಕಾರ ನಬಾತನ ಮಗನಾದ ಯೊರೊಬ್ಬಾಮನನ್ನು ಇಸ್ರಾಯೇಲರಲ್ಲಿಯೇ ಕಡು ಪಾಪಿ ಎಂದು ಗುರುತಿಸಿದ್ದರು. ಕಾರಣ ತಾನು ಪಾಪ ಮಾಡಿದ್ದಲ್ಲದೆ, ಇಸ್ರಯೇಲರನ್ನು ಪಾಪ ಮಾಡಲು ಪ್ರೇರೆಪಿಸುತ್ತಿದ್ದನು (1 ಅರಸ 14:16). ಪ್ಯಾಲಸ್ತೆನ್ ನಾಡಿನಲ್ಲಿ 2 ರೀತಿಯ ಬೀಸುವ ಕಲ್ಲುಗಳಿದ್ದವು. ಚಿಕ್ಕ ಬೀಸುವ ಕಲ್ಲನ್ನು ಮನೆಯಲ್ಲಿಯೇ ದೈನಿಂದಿನ ಉಪಯೋಗಕ್ಕೆ ಬಳಸುತ್ತಿದ್ದರು. ದೊಡ್ಡ ಬೀಸುವ ಕಲ್ಲನ್ನು ಕತ್ತೆಯ ಸಹಾಯದಿಂದ ತಿರುಗಿಸಿ ಧಾನ್ಯಗಳನ್ನು ಪುಡಿಮಾಡುತ್ತಿದ್ದರು. ಯೇಸು ಹೇಳುತ್ತಿರುವುದು ಈ ದೊಡ್ಡ ಬೀಸುವ ಕಲ್ಲನ್ನು ಕಟ್ಟಿ ಸಮುದ್ರದಲ್ಲಿ ದಬ್ಬಲು.

ಹಿಬ್ರೂ ಭಾಷೆಯ `ಘೆಹಿನ್ನೊಮ್' ಎಂಬ ಪದವನ್ನು ಗ್ರೀಕ್ ಭಾಷೆಯಲ್ಲಿ `ಘೆಹೆನ್ನಾ' ಎಂದು ಭಾಷಾಂತರಿಸಲಾಗಿದೆ. ಆಂಗ್ಲ ಭಾಷೆಯಲ್ಲಿ `ಹೆಲ್' ಎಂತಲೂ ಕನ್ನಡದಲ್ಲಿ `ನರಕ' ಎಂದು ಅನುವಾದಮಾಡಲಾಗಿದೆ. ಪಾಪದಲ್ಲಿ ಜೀವಿಸುವವರಿಗೆ ಮತ್ತು ಪ್ರಚೋದನೆ ನೀಡುವವರಿಗೆ ನರಕದ ಬೆಂಕಿಯೇ ಗತಿ ಎಂದು ಎಚ್ಚರಿಸುತ್ತಿದ್ದಾರೆ.
ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment