ಜನವರಿ ೧೧, ೨೦೧೯

ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

11 ಜನವರಿ 2019

ಶುಕ್ರವಾರ/ ಬಿಳಿ/ದೈವದರ್ಶನದ ನಂತರದ ಶುಕ್ರವಾರ
1ನೇ ವಾಚನ - 1 ಯೊವಾನ್ನ 5: 5-13
ಕೀರ್ತನೆ  -  147:  12-15,  19-2೦

ಶುಭಸಂದೇಶ  -  ಲೂಕ  5:  12-16



ವಾಚನಗಳು
ಮೊದಲನೇ ವಾಚನ

ಸಂತ ಯೊವಾನ್ನನು ಬರೆದ ಮೊದಲ ಪತ್ರದಿಂದ ವಾಚನ

5ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? 6ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಜಲದಿಂದ ಮಾತ್ರವಲ್ಲ, ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. 7ಇದಕ್ಕೆ ಪವಿತ್ರಾತ್ಮ ಸಾಕ್ಷಿ. ಏಕೆಂದರೆ, ಪವಿತ್ರಾತ್ಮ ಸತ್ಯಸ್ವರೂಪಿ. 8ಹೀಗೆ ಪವಿತ್ರಾತ್ಮ, ಜಲ ಮತ್ತು ರಕ್ತವೆಂಬ ಮೂರು ಸಾಕ್ಷಿಗಳು ಇವೆ. ಈ ಮೂರೂ ಕೊಡುವ ಸಾಕ್ಷ್ಯ ಒಂದೇ. 9ಮನುಷ್ಯರು ಕೊಡುವ ಸಾಕ್ಷ್ಯವನ್ನು ನಾವು ಅಂಗೀಕರಿಸುತ್ತೇವೆ. ದೇವರು ನೀಡುವ ಸಾಕ್ಷ್ಯ ಅದಕ್ಕಿಂತಲೂ ಶ್ರೇಷ್ಠವಾದುದು. ದೇವರ ಈ ಸಾಕ್ಷ್ಯ ಅವರ ಪುತ್ರನನ್ನು ಕುರಿತದ್ದಾಗಿದೆ.

10ದೇವರ ಪುತ್ರನಲ್ಲಿ ವಿಶ್ವಾಸವಿಡುವವನು ಈ ಸಾಕ್ಷ್ಯವನ್ನು ತನ್ನ ಅಂತರಂಗದಲ್ಲೇ ಹೊಂದಿರುತ್ತಾನೆ. ದೇವರಲ್ಲಿ ವಿಶ್ವಾಸವಿಡದವನಾದರೋ ಅವರನ್ನು ಸುಳ್ಳುಗಾರರನ್ನಾಗಿಸುತ್ತಾನೆ. ಹೇಗೆಂದರೆ, ದೇವರು ತಮ್ಮ ಪುತ್ರನ ಪರವಾಗಿ ಕೊಟ್ಟ ಸಾಕ್ಷ್ಯದಲ್ಲಿ ಅವನಿಗೆ ನಂಬಿಕೆಯಿಲ್ಲ. 11ದೇವರು ನಮಗೆ ನಿತ್ಯ ಜೀವವನ್ನು ಅನುಗ್ರಹಿಸಿದ್ದಾರೆ. ಆ ಜೀವ ಅವರ ಪುತ್ರನಲ್ಲಿದೆ ಎಂಬುದೇ ಈ ಸಾಕ್ಷ್ಯ. 12ಯಾರಲ್ಲಿ ದೇವರ ಪುತ್ರ ಇದ್ದಾನೋ ಅವನಲ್ಲಿ ಆ ಜೀವವಿರುತ್ತದೆ. ಯಾರಲ್ಲಿ ದೇವರ ಪುತ್ರನಿಲ್ಲವೋ ಅವನಲ್ಲಿ ಆ ಜೀವ ಇರುವುದಿಲ್ಲ. 13ದೇವರ ಪುತ್ರನ ನಾಮದಲ್ಲಿ ವಿಶ್ವಾಸ ಇಟ್ಟಿರುವ ನೀವು ನಿತ್ಯಜೀವವನ್ನು ಪಡೆದವರು ಎಂಬುದನ್ನು ತಿಳಿಸಲೆಂದೇ ನಾನು ನಿಮಗೆ ಇದನ್ನೆಲ್ಲಾ ಬರೆದಿದ್ದೇನೆ.


ಕೀರ್ತನೆ 
        
ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು

12 : ಜೆರುಸಲೇಮೇ, ಕೀರ್ತಿಸು ಪ್ರಭುವನು|
       ಸಿಯೋನೇ, ಸ್ತುತಿಸು ನಿನ್ನ ದೇವರನು||

13 : ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು|
       ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು||

14 : ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ|
       ನೀಡುವನು ನಿನಗೆ ಅತ್ಯುತ್ತಮ ಗೋದಿ||

15 : ಕಳಿಸುವನು ಧರೆಗೆ ತನ್ನ ಆಣತಿ|
       ಸಿದ್ಧಿಯಾಗುವುದದು ಬಲು ಶೀಘ್ರದಿ||

19 : ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ|
       ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ||

20 : ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ|
       ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ| ಅಲ್ಲೆಲೂಯ||


ಶುಭಸಂದೇಶ

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ

12ಯೇಸುಸ್ವಾಮಿ ಒಂದು ಪಟ್ಟಣದಲ್ಲಿ ಇದ್ದಾಗ, ಮೈಯೆಲ್ಲಾ ಕುಷ್ಠ ಹಿಡಿದಿದ್ದ ರೋಗಿ ಒಬ್ಬನು ಅಲ್ಲಿಗೆ ಬಂದು ಅವರಿಗೆ ಅಡ್ಡಬಿದ್ದು, ಸ್ವಾವಿ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ, ಎಂದು ಬೇಡಿಕೊಂಡನು. 13ಯೇಸು ಕೈಚಾಚಿ ಅವನನ್ನು ಮುಟ್ಟಿ, ಖಂಡಿತವಾಗಿಯೂ ನನಗೆ ಮನಸ್ಸಿದೆ; ನಿನಗೆ ಗುಣವಾಗಲಿ, ಎಂದರು. ತಕ್ಷಣವೇ ಕುಷ್ಠವು ಮಾಯವಾಗಿ ಅವನು ಗುಣಹೊಂದಿದನು. 14ಇದನ್ನು ಯಾರಿಗೂ ಹೇಳಕೂಡದು ಎಂದು ಯೇಸು ಅವನನ್ನು ಎಚ್ಚರಿಸಿ, ನೀನು ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ; ನಂತರ ಮೋಶೆ ನಿಯಮಿಸಿರುವ ಪ್ರಕಾರ ನೀನು ಗುಣಹೊಂದಿದ್ದಕ್ಕಾಗಿ ಶುದ್ಧೀಕರಣ ವಿಧಿಯನ್ನು ಅನುಸರಿಸು; ಇದು ಜನರಿಗೆ ಸಾಕ್ಷಿಯಾಗಿರಲಿ, ಎಂದರು. 15ಯೇಸು ಎಷ್ಟು ಎಚ್ಚರಿಸಿದರೋ ಅಷ್ಟೂ ಅಧಿಕವಾಗಿ ಅವರ ಸುದ್ಧಿ ಹರಡಿತು. ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ತಂಡೋಪತಂಡವಾಗಿ ಬರುತ್ತಿದ್ದರು. 16ಯೇಸುವಾದರೋ ನಿರ್ಜನ ಪ್ರದೇಶಕ್ಕೆ ಹೋಗಿ ಎಂದಿನಂತೆ ಪ್ರಾರ್ಥನೆಯಲ್ಲಿ ಮಗ್ನರಾಗುತ್ತಿದ್ದರು.



ಚಿಂತನೆ
ಕರುಣಾಮಯಿ

ಯೆಹೂದ್ಯರ ನಂಬಿಕೆಯ ಪ್ರಕಾರ ಕುಷ್ಠರೋಗವು ದೇವರ ಶಾಪವಾಗಿತ್ತು. ದೇವರ ಶಾಪವಾಗಿದ್ದರಿಂದ ದೇವರು ಮಾತ್ರ ಅದನ್ನು ಗುಣಪಡಿಸಬಲ್ಲರು ಎಂಬ ನಂಬಿಕೆಯು ಅವರಲ್ಲಿ ಇತ್ತು. ಇಲ್ಲಿ ಕುಷ್ಠರೋಗವೆಂದರೆ ಒಂದು ರೀತಿಯ ಚರ್ಮ ರೋಗವಾಗಿದ್ದಿರಬಹುದು. (ಯಾಜಕ ಕಾಂಡ 13). ಯೆಹೂದ್ಯರ ಪ್ರಕಾರ ಅಶುದ್ಧರನ್ನು ಮುಟ್ಟಿದರೂ ಸಾಕು ಶುದ್ಧರು ಅಶುದ್ಧರಾಗುತ್ತಾರೆ ಎಂಬ ಮನೋಭಾವವಿತ್ತು(ಯಾಜಕ ಕಾಂಡ 13:46). ಪರಿಶುದ್ಧರಾದ ಯೇಸು ಅಶುದ್ಧರಾಗಿದ್ದವರನ್ನು ಪರಿಶುದ್ಧಗೊಳಿಸುತ್ತಿದ್ದರು. ಇಂದಿನ ಶುಭಸಂದೇಶದಲ್ಲಿ ಯೇಸುವಿನ ದಯಾಳು ಮನೋಭಾವ ಮತ್ತು ಗುಣಪಡಿಸುವ ಅಧಿಕಾರವನ್ನು ಕಾಣಬಹುದು. ಸಮಾಜದಿಂದ ಬಹಿಷ್ಕೃತರಾದ, ನಿರ್ಗತಿಕರ, ಬಡಬಗ್ಗರ, ಅಸಹಾಯಕರ ಬದುಕನ್ನು ಕ್ರಿಸ್ತ ಪುನರ್ ನಿರ್ಮಿಸಲು ಪ್ರಯತ್ನಿಸಿದಂತೆ ನಾವು ಪ್ರಯತ್ನಿಸಬೇಕೆಂಬುದು ಅವರ ಹೆಬ್ಬಯಕೆ. 


© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment