ಜನವರಿ ೧೭, ೨೦೧೯

ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

17 ಜನವರಿ 2019

ಗುರುವಾರ/ಬಿಳಿ/ಸಂತಅಂತೋಣಿ(ಮಠಾ.) ಸ್ಮರಣೆ 
1ನೇ ವಾಚನ - ಹಿಬ್ರಿ 3: 7-14 
ಕೀರ್ತನೆ - 95: 6-7, 8.9, 1೦-11 
ಶುಭಸಂದೇಶ, ಮಾರ್ಕ 1: 4೦-45



ವಾಚನಗಳು
ಮೊದಲನೇ  ವಾಚನ

ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ

7ಆದಕಾರಣ ಪವಿತ್ರಾತ್ಮ ಹೇಳುವ ಪ್ರಕಾರ: 
“ದೇವರ ದನಿಯನು ಕೇಳುವಿರಾದರೆ ನೀವಿಂದು 
ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು.
8ದೇವರನು ಪರೀಕ್ಷಿಸಿದರು ಮರುಭೂಮಿಯಲ್ಲವರು  
ಆತನ ವಿರುದ್ಧ ಅಲ್ಲೇ ದಂಗೆ ಎದ್ದರು. 
9ಎಂದೇ ದೇವರಿಂತೆಂದರು: 
'ಮರುಭೂಮಿಯಲ್ಲಿ ಅವರೆನ್ನನು ಕೆಣಕಿದರು
ನಲವತ್ತು ವರುಷ ನಾನೆಸಗಿದ ಮಹತ್ಕಾರ್ಯಗಳನು 
ಕಂಡರಾದರೂ ಎನ್ನ ಕೆಣಕಿ ಪರೀಕ್ಷಿಸಿದರು. 
10ಎಂತಲೇ ಆ ಜನರ ವಿರುದ್ಧ ಕೆರಳಿ ಇಂತೆಂದೆನು: 
ಹಾದಿ ತಪ್ಪಿದ ಹೃದಯಿಗಳು ಇವರೆಂದಿಗೂ, 
ಗ್ರಹಿಸಿಕೊಳ್ಳರಿವರು ಎನ್ನ ಮಾರ್ಗವನು 1
1ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ 
ಎಂದು ಸಿಟ್ಟುಗೊಂಡು ಶಪಥ ಮಾಡಿದೆನು.'” 

12ಸಹೋದರರೇ, ಜೀವಸ್ವರೂಪರಾದ ದೇವರನ್ನು ಬಿಟ್ಟಗಲುವ ಕೆಟ್ಟಬುದ್ಧಿಯೂ ಅವಿಶ್ವಾಸವೂ ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಾಗಿರಿ. 13ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ “ಇಂದು” ಎನ್ನುವ ಕಾಲವು ಇರುವ ತನಕ ಪ್ರತಿನಿತ್ಯವು ಒಬ್ಬರನ್ನೊಬ್ಬರು ಎಚ್ಚರಿಸಿರಿ. 14ನಾವೆಲ್ಲರೂ ಕ್ರಿಸ್ತಯೇಸುವಿನೊಡನೆ ಸಹಬಾಧ್ಯರು; ಆದರೆ, ಪ್ರಾರಂಭದಲ್ಲಿ ನಮಗಿದ್ದ ನಂಬಿಕೆ-ನಿರೀಕ್ಷೆಯನ್ನು ಕೊನೆಯವರೆಗೂ ಸ್ಥಿರವಾಗಿ ಇರಿಸಿಕೊಳ್ಳಬೇಕು.


ಕೀರ್ತನೆ 
        
ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ

1 :   ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ|
       ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ||

2 :   ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ|
       ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ||

3 :   ಏಕೆಂದರೆ ಪ್ರಭು ದೇವಾಧಿದೇವನು|
       ದೇವರುಗಳಲೆಲ್ಲ ರಾಜಾಧಿರಾಜನು||

4 :   ಆತನ ಕೈಯಲ್ಲಿವೆ ಬುವಿಯಂತರಾಳಗಳು| 
       ಆತನವೇ ಪರ್ವತಗಳಾ ತುತ್ತತುದಿಗಳು||

5 :   ಸಮುದ್ರವು ಆತನದೆ-ಅದ ನಿರ್ಮಿಸಿದವ ಆತನೆ|
       ಒಣನೆಲವು ಆತನದೆ-ಅದ ರೂಪಿಸಿದವ ಆತನೆ||

6 :   ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ|
       ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ||

7 :   ಆತನೆಮ್ಮ ದೇವರು, ನಾವು ಆತನ ಕೈಮಂದೆ|
       ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ||

8 :   ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ|
       ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ|
       ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ||

9 :   ನೋಡಿದರಾದರೂ ನನ್ನ ಮಹತ್ಕಾರ್ಯಗಳನು|
       ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು||

10 : ನಲವತ್ತು ವರುಷ ಆ ಪೀಳಿಗೆಯ ಬಗ್ಗೆ ನಾ ಬೇಸರಗೊಂಡೆ|
       ‘ತಪ್ಪುಮನಸ್ಕರು ಇವರು, ನನ್ನ ಮಾರ್ಗವನು ಮೆಚ್ಚರಿವರು’ ಎಂದುಕೊಂಡೆ||

11 : ಎಂತಲೆ ಸೇರರಿವರು ನನ್ನ ವಿಶ್ರಾಂತಿ ನೆಲೆ|
       ಎಂದು ಸಿಟ್ಟಿನಿಂದ ಕೆರಳಿ ನಾ ಶಪಥಮಾಡಿದೆ||



ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

40ಒಮ್ಮೆ ಕುಷ್ಠರೋಗಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, ಮೊಣಕಾಲೂರಿ, ತಾವು ಮನಸ್ಸುಮಾಡಿದ್ದಲ್ಲಿ ನನ್ನನ್ನು ಗುಣ ಮಾಡಬಲ್ಲಿರಿ, ಎಂದು ದೈನ್ಯದಿಂದ ಬೇಡಿಕೊಂಡನು. ಯೇಸುವಿನ ಮನ ಕರಗಿತು. ಅವರು ಕೈಚಾಚಿ, ಕುಷ್ಠರೋಗಿಯನ್ನು ಮುಟ್ಟಿ, 41ಖಂಡಿತವಾಗಿ ನನಗೆ ಮನಸ್ಸಿದೆ, ನಿನಗೆ ಗುಣವಾಗಲಿ, ಎಂದರು. 42ತಕ್ಷಣ ಅವನ ಕುಷ್ಠವು ಮಾಯವಾಯಿತು. ಅವನು ಗುಣಹೊಂದಿದನು. 43-44ಯೇಸು ಅವನಿಗೆ, ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ, ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು. 45ಆದರೆ ಅವನು ಹೋಗಿ ಈ ಸಮಾಚಾರವನ್ನು ಎಲ್ಲೆಲ್ಲೂ ಸಾರಿದನು. ಈ ಕಾರಣ ಯೇಸು ಬಹಿರಂಗವಾಗಿ ಯಾವ ಪಟ್ಟಣದೊಳಕ್ಕೂ ಹೋಗಲು ಆಗಲಿಲ್ಲ. ಆದುದರಿಂದ ನಿರ್ಜನ ಪ್ರದೇಶಗಳಲ್ಲೇ ಇರತೊಡಗಿದರು. ಆದರೂ ಜನರು ನಾಲ್ದೆಸೆಗಳಿಂದ ಅವರು ಇದ್ದೆಡೆಗೆ ಬರುತ್ತಲೇ ಇದ್ದರು. 


ಚಿಂತನೆ
ಪರ-ಪ್ರೀತಿ, ಪರ-ಕಾಳಜಿ

ಇಂದಿನ ಶುಭಸಂದೇಶದಲ್ಲಿ ಎರಡು ಅಂಶಗಳನ್ನು ಗಮನಿಸೋಣ. 
1) ಯೇಸುವು ಕುಷ್ಠರೋಗಿಯ ಮೇಲೆ ತೋರುವ ಕನಿಕರ ಹಾಗೂ 
2) ಕುಷ್ಠರೋಗಿಯು ಯೇಸುವಿನ ಮೇಲಿಟ್ಟಿರುವ ವಿಶ್ವಾಸ. 

ಆ ಕಾಲದಲ್ಲಿ ಕುಷ್ಠವು ಒಂದು ಭಯಾನಕ ಮಾರಕ ರೋಗವಾಗಿತ್ತು. ದೇವರ ಶಾಪವೆಂದೇ ಪರಿಗಣಿಸಲಾಗಿತ್ತು. ಈ ರೋಗಕ್ಕೆ ತುತ್ತಾದವರನ್ನು ಊರಿನಿಂದ ಹೊರಗಿಡುತ್ತಿದ್ದರು. ಜನರ ಮತ್ತು ಸ್ವಂತ ಮನೆಯವರ ಸಂಪರ್ಕವೂ ಅವರಿಗೆ ಇರುತ್ತಿರಲಿಲ್ಲ. ಯಾಜಕಕಾಂಡ 13:45-46ರಲ್ಲಿ ಇರುವಂತೆ, ``ಯಾರಲ್ಲಿ ಕುಷ್ಠದ ಗುರುತು ಕಾಣುವುದೋ ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯನ್ನು ಕೆದರಿಕೊಂಡು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು, `ನಾನು ಅಶುದ್ದನು, ಅಶುದ್ದನು,' ಎಂದು ಕೂಗಿಕೊಳ್ಳಬೇಕು.'' ಇಂತಹ ಹೀನಸ್ಥಿತಿಯಲ್ಲಿದ್ದ ರೋಗಿಯು ವಿಶ್ವಾಸದಿಂದ ಕ್ರಿಸ್ತನ ಬಳಿ ಬಂದಾಗ ಕ್ರಿಸ್ತ ಆತನ ಚಿಂತಾಜನಕ ಸ್ಥಿತಿಯನ್ನು ಮತ್ತು ವಿಶ್ವಾಸವನ್ನು ಕಂಡು ಗುಣಪಡಿಸುತ್ತಾರೆ. ಕ್ರಿಸ್ತನ ಪರ-ಪ್ರೀತಿ, ಪರ-ಕಾಳಜಿ ನಮ್ಮಲ್ಲೂ ಮೂಡಲಿ ಎಂದು ಪ್ರಾರ್ಥಿಸೋಣ.


ಇಂದಿನ ಸಂತರು

ಮಠಾಧಿಪತಿ ಸಂತ ಅಂತೋನಿ(ಕ್ರಿಸ್ತಶಕ 251-356)

‘ನಿಸರ್ಗ ನಿರ್ಮಿತ ವಸ್ತುಗಳೇ ನನ್ನ ಹೊತ್ತಿಗೆ. ನಾನು ಓದಲು ಬಯಸಿದಾಗ, ಅವು ದೇವರ ವಾಕ್ಯವನ್ನು ನನ್ನೆದುರು ಪ್ರಸ್ತುತ ಪಡಿಸುತ್ತವೆ’. 

ಇದು ತೋಟಿಯಾಗಿ ಕಾರ್ಯನಿರ್ವಹಿಸುತ್ತಾ ಮತ್ತು ಚಾಪೆ ಹೆಣೆಯುತ್ತಾ ತನ್ನ ಬದುಕು ಸವೆಸಿ, ಮೊದಲು ಏಕಾಂಗಿಯಾಗಿ ಏಕಾಂತದಲ್ಲಿ ವಾಸಿಸುತ್ತಾ ನಂತರ ಕ್ರೈಸ್ತ ಸನ್ಯಾಸಿ ಮಠವೊಂದನ್ನು (ಮೊನ್ಯಾಸ್ಟರಿ) ಕಟ್ಟಿ, ದೇವರ ಮಾರ್ಗದರ್ಶನಕ್ಕಾಗಿ ಹೊತ್ತಿಗೆಗಳ ಮರೆ ಹೊಗದೇ ನೈಸರ್ಗಿಕ ಪರಿಸರದ ಜಗತ್ತನ್ನೇ ನೋಡುತ್ತಿದ್ದ ಮಠಾಧಿಪತಿ ಸಂತ ಅಂತೋನಿ ಅವರ ನೇರ, ಸ್ಪಷ್ಟ ನುಡಿ. 

ನೂರೈವತ್ತು ವರ್ಷಗಳ ಕಾಲ ಬದುಕಿದ್ದ ಮಠಾಧಿಪತಿ ಸಂತ ಅಂತೋನಿ  ಅವರನ್ನು, ಅವರು ಬದುಕಿದ್ದ ದೇಶದ ಹಿನ್ನೆಲೆಯಲ್ಲಿ ಈಜಿಪ್ತಿನ ಸಂತ ಅಂತೋನಿ ಎಂದು ಕರೆಯಲಾಗುತ್ತದೆ. ಮಹಾಶಯ ಸಂತ ಅಂತೋನಿ, ಮರುಭೂಮಿಯ ಸಂತ ಅಂತೋನಿ, ಥೀಬ್ಸಿನ ಸಂತ ಅಂತೋನಿ, ತಂದೆ ಸಂತ ಅಂತೋನಿ, ಸಕಲ ಸನ್ಯಾಸಿಗಳ ತಂದೆ ಸಂತ ಅಂತೋನಿ ಎಂದೂ ಅವರನ್ನು ಕರೆಯಲಾಗುತ್ತದೆ. 

‘ಹೋಗು, ನಿನ್ನಲ್ಲಿರುವ ಸಂಪತ್ತನ್ನು ಮಾರಿ, ಬಡಬಗ್ಗರಲ್ಲಿ ಹಂಚು, ಸ್ವರ್ಗದಲ್ಲಿನ ಖಜಾನೆ ನಿನ್ನದಾಗುವುದು’ ಎಂಬ ಪ್ರಭು ಯೇಸುಕ್ರಿಸ್ತರ ನುಡಿಗಳಿಂದ ಪ್ರಭಾವಿತರಾಗಿ ಇವರು ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲೇ ತಮ್ಮ ತಂದೆತಾಯಿಗಳಿಂದ ಮತ್ತು ವಂಶಪಾರಂಪರೆಯಿಂದ ಬಂದ ಆಸ್ತಿಪಾಸ್ತಿಗಳನ್ನು ಮಾರಿ ಬಡವರಿಗೆ ಹಂಚಿಬಿಡುತ್ತಾರೆ. ಯೇಸುಸ್ವಾಮಿಯ ಧ್ಯಾನದ ದಿನಗಳನ್ನು ಅನುಕರಿಸತ್ತಾ, ನಾರುಡುಗೆ ತೊಟ್ಟು ಮರುಭೂಮಿಯಲ್ಲಿ ಏಕಾಂಗಿಯಾಗಿ ಸನ್ಯಾಸಿ ಜೀವನ ಆರಂಭಿಸುತ್ತಾರೆ. ಸ್ವಲ್ಪ ಬ್ರೆಡ್ ಮತ್ತೊಂದಿಷ್ಟು ಉಪ್ಪು ಮತ್ತು ನೀರನ್ನಷ್ಟೇ ಅವರು ಸೇವಿಸುತ್ತಿದ್ದುದು.  ಇವರು ಮಲಗುತ್ತಿದ್ದುದು ನೆಲದ ಮೇಲೆ.  ಈಜಿಪ್ತಿನ ಮರುಭೂಮಿಯ ಕಡಿದಾದ ಬೆಟ್ಟದ ತುದಿಯಲ್ಲಿನ ಗುಹೆಗಳು ಅವರ ನಿವಾಸವಾಗಿದ್ದರೆ, ಅವರ ಆಪ್ತರೊಬ್ಬರು ಆರುತಿಂಗಳಿಗೊಮ್ಮೆ ನೀರು, ಧಾನ್ಯ ತಲುಪಿಸುತ್ತಿದ್ದರು. ತಮ್ಮ 55 ಹರೆಯದಲ್ಲಿ ಏಕಾಂತವಾಸವನ್ನು ತೊರೆದು ಸನ್ಯಾಸಿಮಠವನ್ನು (ಮೊನ್ಯಾಸ್ಟರಿ) ಇವರು ಸ್ಥಾಪಿಸುತ್ತಾರೆ. ಅದುವೇ ಕ್ರೈಸ್ತ ಧರ್ಮದವರ ಮೊದಲ ಸನ್ಯಾಸಿ ಮಠ ಎಂದು ಗುರುತಿಸಲಾಗುತ್ತದೆ. ಅವರು ಪ್ರಥಮ ವನವಾಸಿ ಸಂತ ವನಚಿನ್ನಪ್ಪರ ಅಂತಿಮಗಳಿಗೆಯಲ್ಲಿ ಅವರನ್ನು ಕಂಡು ಸೇವೆ ಸಲ್ಲಿಸಿದ್ದರು, ಅವರು ತೀರಿಕೊಂಡ ಬಳಿಕ ಅವರ ಉತ್ತರಕ್ರಿಯೆಗಳನ್ನು ನಡೆಸಿಕೊಟ್ಟರೆಂದೂ ಹೇಳಲಾಗುತ್ತದೆ. 

ಸುಮಾರು ಕ್ರಿಸ್ತಶಕ1100ರಲ್ಲಿ ಅವರ ಆದರ್ಶದ ಆಶಯದಲ್ಲಿ ಆರಂಭವಾದ ಸನ್ಯಾಸಿ ಮಠಗಳ ಸನ್ಯಾಸಿಗಳು ಕಪ್ಪು ಒರಟು ಬಟ್ಟೆ ತೊಟ್ಟು, ನೀಲಿ ಬಣ್ಣದ ಶಿಲುಬೆ ಹಾಕಿಕೊಂಡು ಗಂಟೆ ಬಾರಿಸಿಕೊಂಡು ಹೋಗಿ ದಾನ ಪಡೆಯುತ್ತಿದ್ದರು. ತಮ್ಮ ಆದರ್ಶದ ಸಂತ ಅಂತೋನಿ ಅವರಂತೆಯೇ ಈ ಸನ್ಯಾಸಿಗಳು ಪ್ರಾಣಿ ಪಕ್ಷಿಗಳ ಮೇಲೆ ದಯೆತೋರುತ್ತಿದ್ದರು. 

ಸಾಕು ಪ್ರಾಣಿಗಳ, ದನಕರುಗಳ, ಕಟುಕರ, ಕಟ್ಟಿಗೆ (ಸೌದೆ) ಒಡೆಯುವವರ, ರೊಟ್ಟಿ (ಬ್ರೆಡ್) ಮಾಡುವವರ, ಕಾಳುಕಡಿ ಮಾರುವ ದಿನಸಿ ಅಂಗಡಗಳವರ, ಸಮಾಧಿ ತೋಡುವವರ, ಬುಟ್ಟಿ ಹೆಣೆಯುವವರೂ ಸೇರಿದಂತೆ ಹಲವಾರು ಬಗೆಯ ಕಾಯಕ ಪ್ರಿಯ ಉದ್ಯೋಗಿಗಳ ಪಾಲಕ ಸಂತರಾಗಿರುವ ಇವರ ಸ್ಮರಣೆಯನ್ನು ಜನವರಿ ತಿಂಗಳ 17 ರಂದು ಕಥೋಲಿಕ ಧರ್ಮಸಭೆಯು ಆಚರಿಸುತ್ತದೆ. ಬೆಂಕಿ, ಚರ್ಮರೋಗಗಳನ್ನು ದೂರವಿಡುವ ಸಂತರೆಂದು ಅವರು ಹೆಸರುವಾಸಿಯಾಗಿದ್ದಾರೆ. 

ಕೆಲವು ದೇಶಗಳಲ್ಲಿ ಭಕ್ತಾದಿಗಳು ತಮ್ಮ ಸಾಕುಪ್ರಾಣಿಗಳನ್ನು ಮತ್ತು ದನಕರುಗಳನ್ನು ಅವರ ಸ್ಮರಣೆಯ ಹಬ್ಬದ ದಿನ ಚರ್ಚಿಗೆ ಕರೆದುಕೊಂಡು ಬಂದು ಅಲ್ಲಿನ ಪಾದ್ರಿಗಳಿಂದ ಆಶಿರ್ವಾದ ಪಡೆಯುತ್ತಾರೆ. ಕರ್ನಾಟಕದ ತಮಿಳುನಾಡಿನ ಗಡಿಯಂಚಿನ ಕಥೋಲಿಕ ಕ್ರೈಸ್ತ ಭಕ್ತರು ಅವರ ಸ್ಮರಣೆಯ ಹಬ್ಬದ ದಿನ ಪೊಂಗಲ್ ಹಬ್ಬವನ್ನು ಆಚರಿಸುವ ಪರಿಪಾಠವಿದೆ. ವನಚಿನ್ನಪ್ಪರ ಬೇಡುದಲೆಯಂತೆ ಊರ ಸಮೀಪದ ಬೆಟ್ಟಕ್ಕೋ, ಗೋಮಾಳಕ್ಕೋ. ಕೆರೆಯಂಚಿಗೋ ತೆರಳುವ ಭಕ್ತರು ಅಲ್ಲಿ ಒಲೆ ಹೂಡಿ ಅಡುಗೆ ಮಾಡಿಕೊಂಡು ಹಂಚಿಕೊಂಡು ತಿನ್ನುವ ಸಂಪ್ರದಾಯವಿದೆ. ಪ್ರಾಣಿಪಕ್ಷಿಗಳ ಸಂಗದಲ್ಲಿ ಅವರು ನಿಂತಿರುವ ಚಿತ್ರಪಟಗಳು, ಕುರಿ, ಮೊಲ, ಹಂದಿ, ನಾಯಿಗಳೊಂದಿಗೆ ನಿಂತಿರುವ ಅವರ ಸ್ವರೂಪಗಳು ಭಕ್ತಾದಿಗಳ ಆದರಕ್ಕೆ ಪಾತ್ರವಾಗಿವೆ. 


ಚಿತ್ರ: ಗೂಗಲ್‌ ಕೃಪೆ
© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment