ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.
23 ಜನವರಿ 2019
ಬುಧವಾರ/ಹಸಿರು/ ಸಾಧಾರಣ ಕಾಲದ ಎರಡನೇ ವಾರ
1ನೇ ವಾಚನ - ಹಿಬ್ರಿ 7: 1-3, 15-17ಕೀರ್ತನೆ - 11೦: 1-4
ಶುಭಸಂದೇಶ - ಮಾರ್ಕ 3: 1-6
ವಾಚನಗಳು
ಮೊದಲನೇ ವಾಚನ
ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ
1ಈ ಮೆಲ್ಕಿಸದೇಕನು ಸಾಲೇಮ್ ನಗರದ ರಾಜನೂ ಮಹೋನ್ನತ ದೇವರ ಯಾಜಕನೂ ಆಗಿದ್ದನು. ಶತ್ರುರಾಜರನ್ನು ಗೆದ್ದು ಹಿಂದಿರುಗುತ್ತಿದ್ದ ಅಬ್ರಹಾಮನನ್ನು ಈತನು ಎದುರುಗೊಂಡು ಆಶೀರ್ವದಿಸಿದನು. 2ಆಗ ಅಬ್ರಹಾಮನು ತಾನು ಗೆದ್ದು ತಂದಿದ್ದ ಎಲ್ಲದರಲ್ಲೂ ದಶಮಾಂಶವನ್ನು ಆತನಿಗೆ ಕೊಟ್ಟು ಗೌರವಿಸಿದನು. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ, ‘ನ್ಯಾಯ ನೀತಿಯ ಅರಸ.’ ಅಲ್ಲದೆ, ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ ‘ಶಾಂತಿಸಮಾಧಾನದ ಅರಸ’ ಎಂಬ ಅರ್ಥವೂ ಉಂಟು. 3ಆತನಿಗೆ ತಂದೆತಾಯಿಯಾಗಲಿ ವಂಶಾವಳಿಯಾಗಲಿ ಇಲ್ಲ. ಆತನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಆತನು ದೇವಪುತ್ರನನ್ನು ಹೋಲುತ್ತಾನೆ. ಶಾಶ್ವತ ಯಾಜಕನಾಗಿ ಉಳಿಯುತ್ತಾನೆ.
15ಹೀಗೆ ಕಾಣಿಸಿಕೊಂಡ ಯಾಜಕ ಮೆಲ್ಕಿಸದೇಕನನ್ನು ಹೋಲುವುದರಿಂದ ನಾವು ಹೇಳುವ ವಿಷಯ ಇನ್ನೂ ಸ್ಪಷ್ಟವಾಗುತ್ತದೆ. 16ಇವರು ಯಾಜಕರಾದುದು ಅಳಿವಿಲ್ಲದ ಜೀವಶಕ್ತಿಯಿಂದ; ಕುಲಗೋತ್ರಗಳ ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ. 17“ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕನು,” ಎಂದು ಪವಿತ್ರಗ್ರಂಥ ಸಮರ್ಥಿಸುತ್ತದೆ.
ಕೀರ್ತನೆ
ಶ್ಲೋಕ: ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ
1 : ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ /
“ಆಸೀನನಾಗಿರು ನೀನು ನನ್ನ ಬಲಗಡೆಗೆ /
ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ” //
2 : ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು /
ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು //
3 : ಸೇನೆಯನು ನೀ ಅಣಿಗೊಳಿಸುವ ದಿನದೊಳು /
ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು /
ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು /
ಉದಯಕಾಲದಿಬ್ಬನಿಯಂತೆ ಇಳಿದು ಬರುವರು //
4 : “ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ” /
ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ ಮಾತ //
7 : ತೊರೆಯ ನೀರನು ಕುಡಿವನಾ ಒಡೆಯ /
ತಲೆಯೆತ್ತಿ ನಡೆವನು ಗಳಿಸಿ ವಿಜಯ /
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
1ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಪುನಃ ಹೋದರು. ಅಲ್ಲಿ ಒಬ್ಬ ಬತ್ತಿದ ಕೈಯುಳ್ಳವನು ಇದ್ದನು. 2ಅವನನ್ನು ಸಬ್ಬತ್‌ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪುಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚುಹಾಕುತ್ತಿದ್ದರು. 3ಯೇಸು ಬತ್ತಿದ ಕೈಯುಳ್ಳವನಿಗೆ, ಎದ್ದು ಮುಂದಕ್ಕೆ ಬಾ, ಎಂದರು. ಬಳಿಕ ಅಲ್ಲಿದ್ದವರನ್ನು ಉದ್ದೇಶಿಸಿ, 4ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ, ಎಂದು ಕೇಳಲು ಅವರು ಮಾತೇ ಎತ್ತಲಿಲ್ಲ. 5ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, ನಿನ್ನ ಕೈಯನ್ನು ಚಾಚು, ಎಂದರು. ಅವನು ಚಾಚಿದನು, ಅದು ಸಂಪೂರ್ಣವಾಗಿ ಸ್ವಸ್ಥವಾಯಿತು.
6ಫರಿಸಾಯರು ಅಲ್ಲಿಂದ ಹೊರಗೆ ಹೋದರು. ಕೂಡಲೇ ಹೆರೋದಿಯರೊಡನೆ ಸೇರಿಕೊಂಡು ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು.
ಚಿಂತನೆ
ಪಾಪಕ್ಷಮೆಯ ಅಧಿಕಾರವುಳ್ಳ ಯೇಸು
ಮಾರ್ಕ 2:28ರಲ್ಲಿ `ನರಪುತ್ರನು ಸಬ್ಬತ್ತಿಗೂ ಒಡೆಯ' ಎಂದು ನುಡಿದ ಮಾತು ಫರಿಸಾಯರಿಗೆ ಮನದಟ್ಟಾಗುವಂತೆ ಪುನಃ ಸಬ್ಬತ್ ದಿನದಲ್ಲಿ ಯೇಸು ಪವಾಡವನ್ನು ಮಾಡುತ್ತಾರೆ. ಸತ್ಕಾರ್ಯಕ್ಕೆ ಕಾಲ ಭೇದವಿಲ್ಲ ಎಂದು ಯೇಸು ಸಬ್ಬತ್ ದಿನದಲ್ಲಿ ಬತ್ತಿದ್ದ ಕೈಯುಳ್ಳವನನ್ನು ಗುಣಪಡಿಸುತ್ತಾರೆ. ದೇವರು ಸೃಷ್ಟಿಕರ್ತ, ಸರ್ವವನ್ನು ಸೃಷ್ಟಿಸಿದವ. ಆದಿಕಾಂಡ 1:31ರಲ್ಲಿ ನೋಡುವಂತೆ ``ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು, ಅವೆಲ್ಲವೂ ಬಹಳ ಚೆನ್ನಾಗಿತ್ತು. '' ಹಾಗಾಗಿ ಅವರ ಸೃಷ್ಟಿಯಲ್ಲಿ ಒಳ್ಳೆಯ ದಿನ, ಕೆಟ್ಟದಿನ, ಶುಭಗಳಿಗೆ, ಕೆಟ್ಟಗಳಿಗೆ, ಅದೃಷ್ಟ, ದುರಾದೃಷ್ಟ ಇದ್ಯಾವುದನ್ನು ದೇವರು ನಿರ್ಧರಿಸಿರಲಿಲ್ಲ. ಸಬ್ಬತ್ ದಿನ ದೇವರಿಗೆ ಮೀಸಲಿಟ್ಟ ದಿನವೇ ಹೊರತು, ಒಳ್ಳೆಯ ಕೆಲಸ ಮಾಡಬಾರದೆಂಬುದು ಫರಿಸಾಯರ ಕಪಟತನವಾಗಿತ್ತು. ಮೌಢ್ಯಗಳನ್ನು ಖಂಡಿಸುತ್ತಾ, ಯೇಸುವಿನಂತೆ ಒಳ್ಳೆಯ ಕಾರ್ಯಗಳನ್ನು ಮಾಡಲು ಸದಾ ನಾವು ಮುಂದಾಗೋಣ.
ಚಿತ್ರ: ಗೂಗಲ್ ಕೃಪೆ
No comments:
Post a Comment