ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
01 ಫೆಬ್ರವರಿ 2೦19
ಶುಕ್ರವಾರ/ ಹಸಿರು/ ಸಾಧಾರಣ ಕಾಲದ ಮೂರನೇ ವಾರ
1ನೇ ವಾಚನ - ಹಿಬ್ರಿ 1೦: 32-39
ಕೀರ್ತನೆ - 37: 3-4, 5-6, 23-24, 39-4೦
ಶುಭಸಂದೇಶ - ಮಾರ್ಕ 4: 26-34
ಐಚ್ಛಿಕ ಸ್ಮರಣೆ - ಸಂತ ಹೆನ್ರಿ ಮೋರ್ಸ್
ವಾಚನಗಳು
ಮೊದಲನೇ ವಾಚನ
ಹಿಬ್ರೀಯರಿಗೆ ಬರೆದ ಪತ್ರದಿಂದ ವಾಚನ
ಹಿಬ್ರಿ 1೦:
32-39
32ನಿಮ್ಮ ಹಿಂದಿನ ದಿನಗಳನ್ನು
ನೆನಪಿಗೆ ತಂದುಕೊಳ್ಳಿ: ನಿಮಗೆ ಜ್ಞಾನೋದಯವಾದ ತರುವಾಯ,
ಕಷ್ಟಸಂಕಟಗಳಿಂದ ಕೂಡಿದ ಹೋರಾಟವನ್ನು ಎದುರಿಸಿದಿರಿ! 33ಕೆಲವೊಮ್ಮೆ ಬಹಿರಂಗವಾಗಿ ಹಿಂಸೆಬಾಧೆಗಳಿಗೂ ನಿಂದೆ ಅವಮಾನಗಳಿಗೂ ಗುರಿಯಾದಿರಿ;
ಮತ್ತೆ ಕೆಲವೊಮ್ಮೆ ನಿಮ್ಮಂತೆ ಸಂಕಟಪಡುವವರ ಸಂಗಡ ಸಹಭಾಗಿಗಳಾದಿರಿ; 34ಸೆರೆಯಾಳುಗಳಿಗೆ ಸಂತಾಪ ತೋರಿಸಿದಿರಿ, ನಿಮ್ಮ
ಸೊತ್ತನ್ನು ಸುಲಿಗೆ ಮಾಡಿದಾಗ ಸಂತೋಷದಿಂದ
ಬಿಟ್ಟುಕೊಟ್ಟಿರಿ. ಏಕೆಂದರೆ, ಇದಕ್ಕೂ ಶ್ರೇಷ್ಠವಾದ ಹಾಗೂ
ಶಾಶ್ವತವಾದ ಸೊತ್ತು ನಿಮಗಿದೆಯೆಂದು ಚೆನ್ನಾಗಿ
ಅರಿತಿದ್ದಿರಿ. 35ಆ ದೃಢ ನಂಬಿಕೆಯನ್ನು
ಕಳೆದುಕೊಳ್ಳಬೇಡಿ; ಅದರ ಪ್ರತಿಫಲ ಮಹತ್ತಾದುದು. 36ದೇವರ ಚಿತ್ತವನ್ನು ನೆರವೇರಿಸಿ,
ಅವರು ವಾಗ್ದಾನ ಮಾಡಿರುವುದನ್ನು ಪಡೆದುಕೊಳ್ಳುವಂತೆ,
ನೀವು ದೃಢಮನಸ್ಕರಾಗಿರಬೇಕು. 37ಏಕೆಂದರೆ: “ಇನ್ನು ಅಲ್ಪ, ಅತ್ಯಲ್ಪ
ಕಾಲದಲ್ಲೇ ಬರುವಾತನು ಬಂದೇ ಬರುವನು, ವಿಳಂಬಮಾಡನು. 38ಸಜ್ಜನರಾದ ನನ್ನ ಭಕ್ತರು ವಿಶ್ವಾಸದಿಂದಲೇ
ಬಾಳುವರು ಅವರು ಹಿಂಜರಿದರಾದರೆ ಮೆಚ್ಚೆನು
ನಾನವರನು,” ಎನ್ನುತ್ತದೆ ಪವಿತ್ರಗ್ರಂಥ. 39ಆದರೆ ನಾವು ಹಿಮ್ಮೆಟ್ಟಿ
ಹಾಳಾಗುವ ಜನರಲ್ಲ; ವಿಶ್ವಾಸವುಳ್ಳವರಾಗಿ ಜೀವೋದ್ಧಾರವನ್ನು
ಪಡೆಯುವವರು.
ಕೀರ್ತನೆ
ಕೀರ್ತನೆ 37: 3-4, 5-6, 23-24, 39-40
ಸಜ್ಜನರ ಜೀವೋದ್ಧಾರ ಪ್ರಭುವಿನಿಂದ
ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು
ಸುರಕ್ಷಿತವಾಗಿ ಬಾಳು ಸಿರಿನಾಡಿನಲ್ಲಿದ್ದು
ಪ್ರಭುವಿನಿಂದಲೆ ಬಯಸು ನಿನ್ನಾನಂದವನು
ನೆರವೇರಿಸುವನಾತ ನಿನ್ನ ಮನದಾಸೆಯನು.
ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು
ಭರವಸೆಯಿಂದಿರು, ಆತನದನು ಸಾಗಿಸುವನು
ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ
ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ.
ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ
ಅವನ ನಡತೆಗೆ ಆತನೆ ಮಾರ್ಗದರ್ಶನ
ಬಿದ್ದರೂ ಅವನೆದ್ದೇ ತೀರುವನು
ಪ್ರಭು ಅವನಿಗೆ ಊರುಗೋಲಾಗಿಹನು.
ಸಜ್ಜನರ ಜೀವೋದ್ಧಾರ ಪ್ರಭುವಿನಿಂದ
ಆಪತ್ಕಾಲದಲಿ ಆಶ್ರಯ ಆತನಿಂದ
ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು
ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು.
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 4: 26-34
26ಯೇಸುಸ್ವಾಮಿ ಇನ್ನೊಂದು
ಸಾಮತಿಯನ್ನು ಹೇಳಿದರು: ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ. 27ಬಿತ್ತನೆಯಾದ ಬಳಿಕ ಅವನು
ರಾತ್ರಿಯಲ್ಲಿ ಮಲಗಿರಲಿ, ಹಗಲಲ್ಲಿ ಎದ್ದಿರಲಿ, ಅವನಿಗೆ ಹೇಗೆಂದು ತಿಳಿಯದೆಯೇ ಆ ಬೀಜವು ಮೊಳೆತು ಬೆಳೆಯುತ್ತಿರುತ್ತದೆ. 28ಭೂಮಿ ಮೊದಲು ಸಸಿಯನ್ನೂ
ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೆ ತಾನೇ ಉತ್ಪತ್ತಿಮಾಡುತ್ತದೆ. 29ಬೆಳೆಯು ಮಾಗಿದಾಗ, ಸುಗ್ಗಿಯು
ಬಂತೆಂದು ವ್ಯವಸಾಯಗಾರನು ಕುಡುಗೋಲನ್ನು ಬಳಸುತ್ತಾನೆ, ಎಂದರು.
30ಯೇಸುಸ್ವಾಮಿ ತಮ್ಮ ಉಪದೇಶವನ್ನು ಮುಂದುವರಿಸಿ, ದೇವರ ಸಾಮ್ರಾಜ್ಯವನ್ನು ಇನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ? 31ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆಕಾಳಿಗೂ ಅದನ್ನು ಹೋಲಿಸಬಹುದು. 32ಸಾಸಿವೆಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿಪಲ್ಯದ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಕೂಡ ಬಂದು ಅದರ ನೆರಳಿನಲ್ಲಿ ಗೂಡುಕಟ್ಟಿ ವಾಸಿಸುವಷ್ಟು ದೊಡ್ಡದಾದ ರೆಂಬೆಗಳನ್ನು ಅದು ತಳೆಯುತ್ತದೆ, ಎಂದರು.
33ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೆ ಅವರು ಬೋಧಿಸುತ್ತಿರಲಿಲ್ಲ. 34ಆದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.
ಚಿಂತನೆ
ದೇವರ ಸಾಮ್ರಾಜ್ಯ
ದೇವರ ಸಾಮ್ರಾಜ್ಯ
ಯೇಸು ಸ್ವಾಮಿಯು ಸಾಮತಿಯ ಮೂಲಕ ಸ್ವರ್ಗ ಸಾಮ್ರಾಜ್ಯದ ಬಗ್ಗೆ ವಿವರಿಸುತ್ತಾರೆ. ಇಂದಿನ ಶುಭಸಂದೇಶದಲ್ಲಿ ಸ್ವರ್ಗ ಸಾಮ್ರಾಜ್ಯವನ್ನು ಸಾಸಿವೆ ಕಾಳಿಗೆ ಹೋಲಿಸುತ್ತಾರೆ. ಪ್ಯಾಲೆಸ್ಟಿನ್ ನಾಡಿನಲ್ಲಿ ಸಾಸಿವೆಗಿಡವು ಸುಮಾರು ಹತ್ತು ಮೀಟರ್ ಎತ್ತರವಾಗಿ ಬೆಳೆಯುತ್ತದೆ. ಹಾಗಾಗಿ ಚಿಕ್ಕ ಪಕ್ಷಿಗಳು ಅದರಲ್ಲಿ ವಾಸಿಸುತ್ತವೆ. `ಆಕಾಶದ ಹಕ್ಕಿಗಳು ಅದರಲ್ಲಿ ವಾಸಿಸುತ್ತವೆ' ಎಂಬ ವಚನವು ದಾನಿಯೇಲ್ ಪ್ರವಾದಿಯ 4:20-21 ಈ ವಚನಗಳನ್ನು ನೆನಪಿಸುತ್ತದೆ. ನೆಬೂಕದ್ನೆಚರನ ಸಾಮ್ರಾಜ್ಯವನ್ನು ಅತಿ ದೊಡ್ಡ ಮರಕ್ಕೂ ಮತ್ತು ಆತನಿಗೆ ಕಪ್ಪ ಕಾಣಿಕೆ ಅರ್ಪಿಸುತ್ತಿದ್ದ ರಾಜರುಗಳನ್ನು ಮರದಲ್ಲಿ ಗೂಡು ಕಟ್ಟಿ ವಾಸಮಾಡುತ್ತಿದ್ದ ಹಕ್ಕಿಗಳಿಗೂ ಹೋಲಿಸಲಾಗಿದೆ. ದೇವರ ಸಾಮ್ರಾಜ್ಯ ಕೇವಲ ಒಂದು ಜನಾಂಗಕ್ಕೆ - ಧರ್ಮಕ್ಕೆ ಸೀಮಿತವಾಗಿಲ್ಲ. ದೇವರ ಸಾಮ್ರಾಜ್ಯ ಮಾನವನ ಊಹೆಗಿಂತ, ಅನಿಸಿಕೆಗಿಂತ ಭಿನ್ನವಾದದ್ದು. ಹನ್ನೆರಡು ಶಿಷ್ಯರೊಂದಿಗೆ ಕ್ರಿಸ್ತ ಸ್ಥಾಪಿಸಿದ ಸಾಮ್ರಾಜ್ಯ ಇಂದು ಜಗತ್ತಿನಾದ್ಯಂತ ಹಬ್ಬಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಚಿತ್ರ: ಗೂಗಲ್ ಕೃಪೆ

No comments:
Post a Comment