ಜನವರಿ ೧೬, ೨೦೧೯

ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

16 ಜನವರಿ 2019

ಬುಧವಾರ/ಬಿಳಿ/ಸಂತಜೋಸೆಫ್ ವಾಜ್ (ಯಾ.) ಸ್ಮರಣೆ 
1ನೇ ವಾಚನ - ಹಿಬ್ರಿ 2:14-18 
ಕೀರ್ತನೆ - 118: 1, 2 
ಶುಭಸಂದೇಶ - ಮಾರ್ಕ 1: 14-2೦



ವಾಚನಗಳು
ಮೊದಲನೇ  ವಾಚನ

ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ

14ಇದಲ್ಲದೆ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು. 15ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆ ಮಾಡಲು ಅವರು ಮನುಷ್ಯರಾದರು. 16ಅವರು ಉದ್ಧಾರ ಮಾಡಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು. 17ಆದಕಾರಣ, ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಾಗಿತ್ತು; ಜನರ ಪಾಪನಿವಾರಣೆಗಾಗಿ ದೇವರ ಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಕಸ್ಥನೂ ಆದ ಪ್ರಧಾನ ಯಾಜಕನಾಗಬೇಕಾಗಿತ್ತು. 18ಸ್ವತಃ ತಾವೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ ನೆರವಾಗಲು ಯೇಸು ಸಮರ್ಥರಾದರು.


ಕೀರ್ತನೆ 
        
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು|
ಮಾಡಿರಿ ಆತನ ನಾಮಸ್ಮರಣೆಯನು|
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು||

2 : ಹಾಡಿ ಪಾಡಿ ಹೊಗಳಿರಿ ಪ್ರಭುವನು|
 ಧ್ಯಾನಿಸಿ ನೀವು ಆತನ ಪವಾಡಗಳನು||

3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ|
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ||

4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ|
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು||

5 : ಆತನ ದಾಸ ಅಬ್ರಹಾಮನ ಸಂತತಿಯವರೇ|
ಆತನಾರಿಸಿಕೊಂಡ ಯಕೋಬನ ವಂಶದವರೇ||

6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು|
ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು}}

7 : ಪ್ರಭು ನಮ್ಮ ದೇವನೆಂಬುದು ಶ್ರುತ|
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ||

8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು|
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು||

9 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು|
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು||



ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

14ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು: 

15"ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ, ಶುಭಸಂದೇಶದಲ್ಲಿ ವಿಶ್ವಾಸವಿಡಿ", 
ಎಂದು ಘೋಷಿಸಿದರು. 

16ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸಿಮೋನನನ್ನೂ ಆತನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ ಬಲೆಬೀಸುತ್ತಾ ಇದ್ದರು. 17ಯೇಸು ಅವರಿಗೆ, 

"ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು"' ಎಂದು ಕರೆದರು. 

18ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 19ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು. 20ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.   


ಚಿಂತನೆ

ಭಾರತದ ಸಂತ ಜೋಸೆಫ್ ವಾಜ್ 

ಇಂದು ಧರ್ಮಸಭೆಯು ಸಂತ ಜೋಸೆಫ್ ವಾಜ್ ಅವರ ಹಬ್ಬವನ್ನು ಆಚರಿಸುತ್ತಿದೆ. ಶ್ರೀಲಂಕಾವನ್ನು ಕ್ಯಾಲ್ವಿನಿಸ್ಟರ ಹಿಡಿತದಿಂದ ತಪ್ಪಿಸಿ ಕಥೋಲಿಕರು ನಿರಾತಂಕವಾಗಿ ಬದುಕಲು ಸಾಧ್ಯವಾಗುವಂತೆ ಮಾಡಿದ ಭಾರತದ ಸಂತ, ಸಂತ ಜೋಸೆಫ್ ವಾಜ್. ಸುಮಾರು 5೦ ವರ್ಷಗಳ ಈ ಅವಧಿಯಲ್ಲಿ ಶ್ರೀಲಂಕಾದಲ್ಲಿ ಒಬ್ಬನೇ ಒಬ್ಬ ಕಥೋಲಿಕ ಧರ್ಮಗುರು ಇರಲಿಲ್ಲ. ಇಂಥಾ ಸ್ಥಿತಿಯಲ್ಲಿ ಪವಿತ್ರಾತ್ಮರ ಪ್ರೇರಣೆಯಿಂದ ಪ್ರಾಣವನ್ನೂ ಲೆಕ್ಕಿಸದೆ ಶ್ರೀಲಂಕಾದ ಉದ್ವಿಗ್ನ ಪರಿಸ್ಥಿತಿಯಲ್ಲೂ ಕಥೋಲಿಕ ಧರ್ಮ ಉಳಿಸುವುದಕ್ಕಾಗಿ ದಿಟ್ಟ ಹೆಜ್ಜೆಯಿಟ್ಟವರು ಸಂತ ಜೋಸೆಫ್‌ ವಾಜ್. ಈ ಕಾರಣಕ್ಕಾಗಿ ಇಂದಿನ ಶ್ರೀಲಂಕಾ ಕಥೋಲಿಕ ಚರ್ಚ್ ಜೋಸೆಫ್ ವಾಜ್‌ರವರಿಗೆ ಋಣಿಯಾಗಿದೆ. 1711ರ ಜನವರಿ 16ರಂದು ಜೋಸೆಫ್ ವಾಜ್ ಕೊನೆಯುಸಿರೆಳೆಯುತ್ತಾರೆ. ಇದಾಗಿ ಸರಿಯಾಗಿ 284 ವರ್ಷಗಳ ನಂತರ ಜನವರಿ 21, 1995ರಲ್ಲಿ ಜಗದ್ಗುರು 2ನೇ ಜಾನ್ ಪಾಲರು ಅವರನ್ನು `ಪುನೀತ' ಪದವಿಗೇರಿಸಿತ್ತಾರೆ. ಜೂನ್ 14, 2೦15ರಲ್ಲಿ ಜಗದ್ಗುರು ಫ್ರಾನ್ಸಿಸ್‌ರವರು ಅವರನ್ನು ಸಂತರ ಪದವಿಗೇರಿಸುತ್ತಾರೆ.


ಇಂದಿನ ಸಂತರು

ಪುನೀತ ಸಂತ ಜೋಸೆಫ್ ವಾಜ್ (1651-1711)


ಜೋಸೆಫ್ ವಾಜ್‌ರವರು, 1651ರಲ್ಲಿ ಗೋವಾದ ಬೆನೋಲಿಮ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರು ತಮ್ಮ ತಾಯಿಗೆ ಮೂರನೇ ಮಗ. ತಂದೆ, ತಾಯಿಗಳಿಬ್ಬರೂ ನಿಷ್ಠೆಯಲ್ಲಿ ಕ್ಯಾಥೊಲಿಕ್ಕರು. ವಾಜ್‌ರವರು ಪ್ರತಿಭಾವಂತರಾಗಿದ್ದರಿಂದ ಪೋರ್ಚುಗೀಸ್ ಹಾಗೂ ಲ್ಯಾಟಿನ್ ಭಾಷೆಗಳನ್ನು ಚೆನ್ನಾಗಿ ಕಲಿತರು, ಅವರು, ಶಿಕ್ಷಣದಲ್ಲಿ ತ್ವರಿತವಾಗಿ ಪ್ರಗತಿ ಹೊಂದಿದ ಕಾರಣ, ತಂದೆಯವರು ಅವರನ್ನು ಉನ್ನತ ವಿದ್ಯಾರ್ಜನೆಗಾಗಿ ಗೋವಾ ಪಟ್ಟಣಕ್ಕೆ ಕಳುಹಿಸುತ್ತಾರೆ. ಅಲ್ಲಿ, ಭಾಷಾಲಂಕಾರ, ತತ್ವಶಾಸ್ತ್ರ, ಇತ್ಯಾದಿಗಳನ್ನೂ ಬಳಿಕ, ದೈವಶಾಸ್ತ್ರವನ್ನೂ ಅಭ್ಯಸಿಸುತ್ತಾರೆ. 

ಇವರು 1675ರಲ್ಲಿ ಗೋವಾದ ಧರ್ಮಕ್ಷೇತ್ರದ ಡೀಕನ್ ಆಗಿ, ನಂತರ ಯಾಜಕರಾಗಿ ಅಭಿಷಿಕ್ತರಾಗುತ್ತಾರೆ. ಬರಿಗಾಲಿನಲ್ಲೇ ನಡೆದು, ಬಡವರಂತೆ ಬಾಳುತ್ತಿದ್ದ ವಾಜ್‌ರವರ ಪ್ರಬೋಧನೆಗಳೂ ಪಾಪನಿವೇದನಾ ಕ್ರಮವೂ ಜನಪ್ರಿಯವಾದವು. ಮುಂದೆ ಯಾಜಕರಾಗುವವರಿಗಾಗಿ ಒಂದು ಲ್ಯಾಟಿನ್ ಶಾಲೆಯನ್ನು ಇವರು ತೆರೆಯುತ್ತಾರೆ. ತಮ್ಮನ್ನು 'ಮರಿಯಮ್ಮನವರ ಗುಲಾಮ' ಎಂದೇ ಅವರು ಕರೆದುಕೊಳ್ಳುತ್ತಿದ್ದರು. 

ಅವರಿಗೆ, ಅಂದಿನ ಸಿಲೋನಿಗೆ(ಇಂದಿನ ಶ್ರೀಲಂಕಾ) ಹೋಗಬೇಕೆಂಬ ಮನಸ್ಸಿದ್ದರೂ ಅವರನ್ನು ಕನ್ನಡ(ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ)ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿನ ತಿಕ್ಕಾಟ, ಒಳಜಗಳಗಳನ್ನು ತಮ್ಮ ಮುತ್ಸದ್ದಿತನ, ತಗ್ಗಿದ ಮನೋಭಾವಗಳಿಂದ ಸರಿಪಡಿಸಿ, ಎರಡು ಬಣಗಳ ನಡುವೆ ಒಪ್ಪಂದವನ್ನು ತರುತ್ತಾರೆ. ಜೊತೆಗೆ, ಜನರ ಧಾರ್ಮಿಕ ಸ್ವಸ್ಥತೆಗಾಗಿಯೂ ಇವರು ದುಡಿಯುತ್ತಾರೆ. ಇವರು ಕನ್ನಡ ಜಿಲ್ಲೆಗಳಾದ್ಯಂತ ‘ಸಹೋದರತ್ವದ ಕೂಟ’ಗಳನ್ನು ಏರ್ಪಡಿಸಿದ್ದು ಒಂದು ವಿಶೇಷವೇ. 

ವಾಜ್‌ರವರು ಪವಾಡಪುರುಷರೂ ಹೌದು. ಒಮ್ಮೆ ಅವರನ್ನು ಕೊಲ್ಲಲೆಂದೇ ಕೆಲವರು, ಅವರನ್ನು ಬೆಟ್ಟದ ತುದಿಗೆ ಕರೆದುಕೊಂಡು ಹೋದಾಗ, ವಾಜ್‍ನವರು ಮೊಣಕಾಲೂರಿ, ತಮ್ಮ ಕೋಲನ್ನು ಅಲ್ಲಿ ನೆಟ್ಟು ಪ್ರಾರ್ಥಿಸುವಾಗ, ಮಿಂಚು ಹೊಳೆದು, ಅವರು ಮೊಣಕಾಲೂರಿದ ಸ್ಥಳಗಳಿಂದ ನೀರು ಚಿಮ್ಮಿ, ಹಂತಕರು ಗಾಬರಿಯಾಗಿ ಓಡಿಹೋಗುತ್ತಾರೆ. ಪ್ರಸ್ತುತ ಅಲ್ಲೊಂದು ದೇವಾಲಯವಿದೆ. 

ಮತ್ತೆ ಅವರು ಗೋವಾಗೆ ವರ್ಗಾವಣೆಯಾಗಿ ಪ್ರಬೋಧನೆ, ಜನಸೇವೆಯಲ್ಲಿ ಮುಂದುವರಿಯುತ್ತಾರೆ. ಅಲ್ಲಿ ಇತರ ಯಾಜಕರೊಂದಿಗೆ ಕೂಡು ಬಾಳ್ವೆ ನಡೆಸಿ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಾರೆ.

ಆಗ, ಸಿಲೋನಿನಲ್ಲಿ ಎಷ್ಟೋ ವರ್ಷಗಳಿಂದ ಕ್ಯಾಥೊಲಿಕ್ ಯಾಜಕರು ಇಲ್ಲದ ಕಾರಣದಿಂದ ವಾಜ್‌ರವರ ಇಚ್ಛೆಯಂತೆ ಅವರನ್ನು ಅಲ್ಲಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಭಿಕ್ಷುಕರಂತೆ, ಕೂಲಿಗಳಂತೆ ವೇಷಧರಿಸಿ, ಇವರು ತಮ್ಮ ಸಹಾಯಕನೊಂದಿಗೆ ಊರೂರು ಅಲೆಯುತ್ತಾರೆ. ಅಂತಿಮವಾಗಿ ಅವರು, ಜಾಫ್ನಾ ತಲಪಿದಾಗ, ಅವರ ಆರೋಗ್ಯವೂ ಹದಗೆಡುತ್ತದೆ. ಒಬ್ಬ ಸ್ತ್ರೀ ಇವರಿಗೆ ಗಂಜಿ ಕುಡಿಸಿ, ಆರೈಕೆ ಮಾಡಿದ ಮೇಲೆ ಅವರು ಚೇತರಿಸಿಕೊಳ್ಳುತ್ತಾರೆ. 

ಜಾಫ್ನಾದಲ್ಲಿ ಅಡಗಿಕೊಂಡಿದ್ದ ಕ್ಯಾಥೊಲಿಕ್ಕರನ್ನು ಇವರು ಗುರುತಿಸಿ, ಅವರಿಗೆ ರಾತ್ರಿ ಭೋಜನ ಸಂಸ್ಕಾರವನ್ನು ನೀಡಲು ತೊಡಗುತ್ತಾರೆ. ಇದನ್ನು ಹೇಗೋ ತಿಳಿದ ಅಲ್ಲಿಯ ಅಧಿಕಾರಿಗಳು ಅವರಿಗೆ ಕಿರುಕುಳ ಕೊಡಲು ಮುಂದಾದಾಗ ಅವರು ಕ್ಯಾಂಡಿಗೆ ತಪ್ಪಿಸಿಕೊಂಡು ಹೋಗುತ್ತಾರೆ. ಆ ಊರಿನಲ್ಲಿ ವಾಜ್‌ರವರನ್ನು ಗೃಹಬಂಧನದಲ್ಲಿರಿಸಲಾಗುತ್ತದೆ. ಹಾಗಿದ್ದರೂ ಇವರ ಪ್ರಭಾವದಿಂದ ಅನೇಕರು ಕ್ಯಾಥೊಲಿಕ್ ಧರ್ಮವನ್ನು ಸ್ವೀಕರಿಸುವುದನ್ನು ತಪ್ಪಿಸಲಾಗುವುದಿಲ್ಲ.  ಅಲ್ಲೆಲ್ಲಾ ಸಿಡುಬು ರೋಗ ಹರಡಿದ್ದಾಗಲೂ, ರೋಗಿಗಳ ಮಧ್ಯೆ ಅವರು ಧೈರ್ಯದಿಂದ ಸೇವೆಮಾಡಿ, ಅನೇಕ ಮಿಷನರಿಗಳು ಅಲ್ಲಿಗೆ ಬರಲು ಪ್ರೇರಕರಾಗುತ್ತಾರೆ. 


ತಮ್ಮ 59ನೇ ವಯಸ್ಸಿನಲ್ಲಿ ವಾಜ್‌ರವರು ನಿಧನರಾಗುತ್ತಾರೆ. 2015ರಲ್ಲಿ, ಪೋಪ್ ಫ್ರಾನ್ಸಿಸ್‌ರವರು ವಾಜ್‌ರವರನ್ನು ಸಂತರೆಂದು ಘೋಷಿಸುತ್ತಾರೆ. ಆ ಮೂಲಕ ಅವರು, ಏಷ್ಯಾದ ಮೊತ್ತಮೊದಲ ಸಂತರಾಗುತ್ತಾರೆ.


ಚಿತ್ರ: ಗೂಗಲ್‌ ಕೃಪೆ
© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment