ಜನವರಿ ೧೦, ೨೦೧೯

ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

10 ಜನವರಿ 2019

ಗುರುವಾರ/ ಬಿಳಿ/ದೈವದರ್ಶನದ ನಂತರದ ಗುರುವಾರ
1ನೇ ವಾಚನ - 1 ಯೊವಾನ್ನ 4: 19-5: 4
ಕೀರ್ತನೆ  -  72:  1-2,  14-15,  17
ಶುಭಸಂದೇಶ  -  ಲೂಕ  4:  14-23



ವಾಚನಗಳು
ಮೊದಲನೇ  ವಾಚನ

ಸಂತ ಯೊವಾನ್ನನು ಬರೆದ ಮೊದಲ ಪತ್ರದಿಂದ ವಾಚನ

19ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ನಾವು ಪ್ರೀತಿಸುತ್ತೇವೆ. 20ತಾನು ದೇವರನ್ನು ಪ್ರೀತಿಸುತ್ತೇನೆಂದು ಒಬ್ಬನು ಹೇಳುತ್ತಾ ತನ್ನ ಸಹೋದರನನ್ನು ದ್ವೇಷಿಸಿದರೆ, ಅವನು ಸುಳ್ಳುಗಾರನಾಗುತ್ತಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಹೇಗೆ ಪ್ರೀತಿಸಿಯಾನು? 21ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು ಕ್ರಿಸ್ತಯೇಸು ನಮಗೆ ಮಾಡಿರುವ ಆಜ್ಞೆ.


5:1ಯೇಸುವೇ 'ಕ್ರಿಸ್ತ' ಎಂದು ವಿಶ್ವಾಸಿಸುವ ಪ್ರತಿಯೊಬ್ಬನೂ ದೇವರ ಮಗು. ತಂದೆಯನ್ನು ಪ್ರೀತಿಸುವವನು ಆತನ ಮಗುವನ್ನೂ ಪ್ರೀತಿಸುತ್ತಾನೆ.  2ದೇವರನ್ನು ಪ್ರೀತಿಸಿ, ಅವರ ಆಜ್ಞೆಗಳನ್ನು ಪಾಲಿಸುವುದರಿಂದ ನಾವು ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದು ನಿಶ್ಚಯ ಆಗುತ್ತದೆ.  3ದೇವರನ್ನು ಪ್ರೀತಿಸುವುದು ಎಂದರೆ ಅವರು ಕೊಟ್ಟ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ. ಅವರ ಆಜ್ಞೆಗಳು ನಮಗೆ ಹೊರೆಯೇನೂ ಅಲ್ಲ. 4ದೇವರಿಂದ ಜನಿಸಿದ ಪ್ರತಿ ಒಬ್ಬನೂ ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದು ನಮ್ಮ ವಿಶ್ವಾಸವೇ.


ಕೀರ್ತನೆ 
        
ಶ್ಲೋಕ: ಎಲ್ಲಾ ರಾಷ್ಟ್ರಗಳು ಸಾಷ್ಟಾಂಗವೆರಲಿ ಸರ್ವೇಶ್ವರಸ್ವಾಮಿಗೆ

1 : ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ|
     ಕಲಿಸು ನಿನ್ನ ನೀತಿಯನು ರಾಜಕುವರನಿಗೆ||

2 : ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ|
     ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ||

14 : ಅವರ ಜೀವ ಆತನ ದೃಷ್ಟಿಯಲಿ ಅಮೂಲ್ಯ|
       ಜುಲುಮೆ ಶೋಷಣೆಗಳ ನೀಗಿಪುದು ಆತನ ಕಾರ್ಯ||

15 : ಅರಸ ಬಾಳಲಿ ಚಿರಕಾಲ; ದೊರಕಲಿ ಆತನಿಗೆ ಶೆಬಾದ ಬಂಗಾರ|
       ಜರುಗಲಿ ಪ್ರಾರ್ಥನೆ ಸದಾಕಾಲ; ಆಶೀರ್ವಾದ ಸಿಗಲಿ ಅನವರತ||


17 : ಶಾಶ್ವತವಾಗಲಿ ಶ್ರೀನಾಮ ಆತನಿಗೆ|
       ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ|
       ಆತನಾಶೀರ್ವಾದ ಕೋರಲಿ ಸರ್ವರು ತಮಗೆ|
       ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ||


ಶುಭಸಂದೇಶ

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ

14ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. 15ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಅವರು ಬೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ! 16ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್‌ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, 17ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು:


18ದೇವರಾತ್ಮ ನನ್ನ ಮೇಲಿದೆ
  ದೀನದಲಿತರಿಗೆ ಶುಭಸಂದೇಶವನ್ನು
    ಬೋಧಿಸಲೆಂದು
  ಅವರೆನ್ನನು ಅಭಿಷೇಕಿಸಿದ್ದಾರೆ;
  ಬಂಧಿತರಿಗೆ ಬಿಡುಗಡೆಯನ್ನು,
  ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ 
  ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ
19ದೇವರು ತಮ್ಮ ಜನತೆಯನ್ನು ಉದ್ಧರಿಸುವ 
    ಕಾಲ ಬಂತೆಂದು ಸಾರಲೂ
  ಅವರು ನನ್ನನ್ನು ಕಳುಹಿಸಿದ್ದಾರೆ.

20ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. 21ಆಗ ಯೇಸು, ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು, ಎಂದು ವಿವರಿಸಲಾರಂಭಿಸಿದರು. 22ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. ಇವನು ಜೋಸೆಫನ ಮಗನಲ್ಲವೇ? ಎಂದು ಮಾತನಾಡಿಕೊಂಡರು. 23ಅನಂತರ ಯೇಸು ಅವರಿಗೆ,  ‘ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ', ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ; ಅಲ್ಲದೆ, 'ಕಫೆರ್ನವುಮಿನಲ್ಲಿ ನೀನು ಎಂಥೆಂಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ; ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು,' ಎಂದೂ ಹೇಳುವಿರಿ.



ಚಿಂತನೆ
ಸಂಪ್ರದಾಯಗಳ ಮೇಲಿನ ಗೌರವ

ಯೇಸು ಜನಿಸಿದ್ದು ಯೆಹೂದ್ಯ ಕುಟುಂಬದಲ್ಲಿ, ಹಾಗಾಗಿ ಯೆಹೂದ್ಯ ಸಂಪ್ರದಾಯದಲ್ಲೇ ಬೆಳೆದರು. ವಾಡಿಕೆಯ ಪ್ರಕಾರ ಯೆಹೂದ್ಯರು ಸಬ್ಬತ್ ದಿನವನ್ನು ಪವಿತ್ರವಾಗಿ ಆಚರಿಸುತ್ತಿದ್ದರು. ಒಬ್ಬ ಯೆಹೂದ್ಯನಾಗಿ ಕ್ರಿಸ್ತ ಅವರ ಸಂಪ್ರದಾಯಗಳನ್ನು, ವಾಡಿಕೆಯನ್ನು ಗೌರವಿಸಿದರು ಮತ್ತು ಅವುಗಳಲ್ಲಿ ನ್ಯೂನತೆಗಳನ್ನು ಸರಿಪಡಿಸಿ ಹೊಸತನ ತುಂಬಲು ಪ್ರಯತ್ನಿಸಿದರು.

ಪ್ರಾರ್ಥನಾ ಮಂದಿರದಲ್ಲಿ ಕ್ರಿಸ್ತ ಯೆಶಾಯನ ಸುರುಳಿಯನ್ನು ಓದುವುದರ ಮೂಲಕ ತಮ್ಮ ಆಗಮನದ ಉದ್ದೇಶವನ್ನು ತಿಳಿಸುತ್ತಾರೆ. ಇಂದಿನ ಶುಭಸಂದೇಶವನ್ನು ಕ್ರಿಸ್ತನ ಜೀವನದ ಪ್ರಣಾಳಿಕೆಯೆಂದು ಕರೆಯಬಹುದು. ತಮ್ಮ ಜೀವನದ ಉದ್ದೇಶವನ್ನು ಅರಿತಿದ್ದ ಕ್ರಿಸ್ತ ಅದನ್ನು ಪೂರೈಸಿದರು. ಯೇಸುವಿನ ಹಿಂಬಾಲಕರಾಗಿ ಅವರ ಉದ್ದೇಶಗಳು ನಮ್ಮ ಉದ್ದೇಶಗಳಾಗಬೇಕು.


© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment