ಫೆಬ್ರವರಿ ೧೬, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

1ಫೆಬ್ರವರಿ 2೦19


ಶನಿವಾರ/ ಹಸಿರು / ಸಾಧಾರಣ ಕಾಲದ ಐದನೇ ವಾರ 
1ನೇ ವಾಚನ - ಆದಿ 3: 9-24 
ಕೀರ್ತನೆ - 90: 2, 3-4, 5-6, 12-13 
ಶುಭಸಂದೇಶ - ಮಾರ್ಕ 8: 1-10 
ಐಚ್ಛಿಕ ಸ್ಮರಣೆ - ಸಂತ ಒನೆಸಿಮುಸ್

ವಾಚನಗಳು
ಮೊದಲನೇ  ವಾಚನ

ಆದಿಕಾಂಡದಿಂದ ವಾಚನ
ಆದಿ 3: 9-24
9ಆದರೆ ಸರ್ವೇಶ್ವರನಾದ ದೇವರು, “ಎಲ್ಲಿರುತ್ತೀಯಾ?” ಎಂದು ಆದಾಮನನ್ನು ಕೂಗಿ ಕೇಳಿದರು. 10ಅದಕ್ಕೆ ಅವನು, “ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ,” ಎಂದನು. 11ನೀನು ಬೆತ್ತಲೆಯಾಗಿರುತ್ತಿಯೆಂದು ನಿನಗೆ ತಿಳಿಸಿದವರು ಯಾರು?” ಎಂದು ಕೇಳಿದರು. 12ಅದಕ್ಕೆ ಆದಾಮನು, “ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆ,” ಎಂದನು. 13ಸರ್ವೇಶ್ವರನಾದ ದೇವರು ಈ ಮಹಿಳೆಯನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಆಕೆ, “ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು,” ಎಂದು ಉತ್ತರ ಕೊಟ್ಟಳು. 14ಆಗ, ಸರ್ವೇಶ್ವರನಾದ ದೇವರು, ಇಂತೆಂದರು ಸರ್ಪಕ್ಕೆ: “ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶು ಪ್ರಾಣಿಗಳಿಗಿಂತ; ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ ತಿನ್ನುವೆ ಮಣ್ಣನೆ ಜೀವಮಾನ ಪರಿಯಂತ. 15ಹಗೆತನವಿರಿಸುವೆನು ನಿನಗೂ ಈ ಮಹಿಳೆಗೂ ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ. ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನುಕಚ್ಚುವೆ ನೀನಾ ಸಂತಾನದ ಹಿಮ್ಮಡಿಯನು.”

16ಬಳಿಕ ಆ ಮಹಿಳೆಗೆ: “ಹೆಚ್ಚಿಸುವೆನು ಪ್ರಸವಕಾಲದ ನಿನ್ನ ವೇದನೆಯನ್ನು; ಹೆರುವೆ ನೀನು ಸಂಕಷ್ಟದಿಂದಲೇ ಮಕ್ಕಳನ್ನು. ಆದರೂ ನಿನಗಿರುವುದು ಗಂಡನ ಬಯಕೆ ಒಳಗಾಗುವೆ ನೀನು ಆತನ ಒಡೆತನಕ್ಕೆ.” 17ಅನಂತರ ಆದಾಮನಿಗೆ: “ತಿನ್ನಬಾರದೆಂದು ನಾ ವಿಧಿಸಿದ ಮರದ ಹಣ್ಣನ್ನು ತಿಂದೆ ನೀನು, ಕೇಳಿ ನಿನ್ನಾ ಮಡದಿಯ ಮಾತನ್ನು. ಇದಕಾರಣ ಹಾಕಿರುವೆನು ಶಾಪ ಹೊಲನೆಲಕ್ಕೆ ದುಡಿವೆ ನೀನು ಜೀವಮಾನವಿಡೀ ಅದರ ಕೃಷಿಗೆ. 18ಬೆಳಸುವುದದು ಅತುಳ ಕಳೆಯನ್ನು, ಮುಳ್ಳುಗಿಡಗಳನ್ನು ತಿನ್ನಬೇಕಾಗುವುದು ನೀನು ಬೈಲಿನ ಬೆಳೆಯನ್ನು. 19ನೀನುತ್ಪತ್ತಿಯಾದ ಮಣ್ಣಿಗೆ ಮರಳಿ ಸೇರುವ ತನಕ ಗಳಿಸಬೇಕು ಕವಳವನ್ನು ನೆತ್ತಿ ಬೆವರಿಡುತ. ಮಣ್ಣಿನಿಂದಲೇ ಬಂದವನು ನೀನು ಮರಳಿ ಮಣ್ಣಿಗೆ ಸೇರತಕ್ಕವನು.” 

20ಆದಾಮನು ತನ್ನ ಹೆಂಡತಿಗೆ “ಹವ್ವ” ಎಂದು ಹೆಸರಿಟ್ಟನು. ಏಕೆಂದರೆ ಮಾವನಕುಲಕ್ಕೆ ಮೂಲಮಾತೆ ಆಕೆ. 21ಸರ್ವೇಶ್ವರನಾದ ದೇವರು ಆದಾಮನಿಗೂ ಆತನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದರು. 22ಸರ್ವೇಶ್ವರನಾದ ದೇವರು, “ಮನುಷ್ಯನು ಈಗ ನಮ್ಮಲ್ಲಿ ಒಬ್ಬರಂತೆ ಒಳಿತು - ಕೆಡುಕುಗಳ ಜ್ಞಾನವನ್ನು ಪಡೆದುಬಿಟ್ಟಿದ್ದಾನೆ. ಇನ್ನು ಅಮರ ಜೀವಿಯಾಗಲು ಜೀವವೃಕ್ಷದ ಹಣ್ಣಿಗೆ ಕೈ ಚಾಚಿ ಬಿಡಬಾರದು,” ಎಂದುಕೊಂಡರು. 23ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡಲೆಂದು ಏದೆನ್ ತೋಟದಿಂದ ಹೊರಡಿಸಿ ಬಿಟ್ಟರು. 24ಅದಲ್ಲದೆ, ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕಾಗಿ ಆ ವನದ ಪೂರ್ವದಿಕ್ಕಿನಲ್ಲೆ ‘ಕೆರೂಬಿ’ಯರನ್ನೂ ಪ್ರಜ್ವಲಿಸುತ್ತಾ ಎಲ್ಲ ಕಡೆ ಸುತ್ತುವ ಕತ್ತಿಯನ್ನೂ ಇರಿಸಿದರು.



ಕೀರ್ತನೆ 

ಕೀರ್ತನೆ 90: 2, 3-4, 5-6, 12-13
ನೀನೆಮಗೆ ದೇವರು ಯುಗಯುಗಗಳಿಂದ

ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ
ಭೂದೇಶಗಳು ಆಗುವುದಕೆ ಮೊದಲಿಂದ
ನೀನೆಮಗೆ ದೇವರು ಯುಗಯುಗಗಳಿಂದ.

ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ
ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿಎನ್ನುತಿಹೆ
ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ
ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ.

ಮನುಜರು ನೀ ಹರಿದೋಡಿಸುವ ಹೊಯಿಲು
ಇರುಳಿನ ಕನಸು, ಹಗಲಿನ ಗರಿಹುಲ್ಲು
ಚಿಗುರಿ ಹೂಬಿಡುವುದದು ಬೆಳಗಿನಲಿ
ಸೊರಗಿ ತರಗಾಗುವುದು ಬೈಗಿನಲಿ.

ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು
ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು
ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ?

ನಿನ್ನೀ ಸೇವಕರ ಮೇಲಿರಲಿ ಮರುಕ.

ಶುಭಸಂದೇಶ

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 8: 1-10 
1ಜನರು ಪುನಃ ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. 2ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು, “ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ದಾರೆ; ಊಟಕ್ಕೆ ಇವರಲ್ಲಿ ಏನೂ ಇಲ್ಲ. 3ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಕೆಲವರಂತೂ ಬಹುದೂರದಿಂದ ಬಂದಿದ್ದಾರೆ,” ಎಂದರು. 4ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಮರುನುಡಿದರು. 5ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಲು ಅವರು, “ಏಳು ಇವೆ,” ಎಂದರು. 6ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು. 7ಅವರಲ್ಲಿ ಕೆಲವು ಸಣ್ಣ ವಿೂನುಗಳಿದ್ದವು. ಯೇಸು ಅವುಗಳಿಗಾಗಿಯೂ ದೇವಸ್ತುತಿಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. 8ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಕುಕ್ಕೆಗಳ ತುಂಬ ಆದುವು. 9ಊಟಮಾಡಿದವರ ಸಂಖ್ಯೆ ನಾಲ್ಕು ಸಾವಿರ. 10ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು, ವಿಳಂಬಮಾಡದೆ ದೋಣಿಯನ್ನು ಹತ್ತಿ, ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು. 

ಚಿಂತನೆ
ಪಾಪದ ಜವಾಬ್ದಾರಿ
ಪಾಪದ ದುಷ್ಪರಿಣಾಮಗಳನ್ನು ಇಂದಿನ ಮೊದಲನೆಯ ವಾಚನದಲ್ಲಿ ಕಾಣುತ್ತೇವೆ. ಪಾಪದ ಮುನ್ನ ದೇವರೊಂದಿಗೆ ಸಂಭಾಷಿಸುತ್ತಿದ್ದ ಮತ್ತು ಹೆಜ್ಜೆ ಹಾಕುತ್ತಿದ್ದ ಆದಾಮ್ ಮತ್ತು ಏವಳು ಪಾಪದ ನಂತರ ಭಯದಿಂದ ಅವಿತುಕೊಳ್ಳುತ್ತಾರೆ. ದೇವರಿಗೆ ತಮ್ಮ ಮುಖ ತೋರಿಸಲು ಅಂಜುತ್ತಾರೆ. ಪಾಪದಲ್ಲಿ ಬಿದ್ದ ಮನುಷ್ಯ ದೇವರನ್ನು ಮುಖಾಮುಖಿ ನೋಡಲು ಹೆದರುತ್ತಾನೆ, ದೇವರೊಂದಿಗಿನ ಬಾಂಧವ್ಯ ಕಳೆದುಕೊಳ್ಳುತ್ತಾರೆ. ದೇವರು ಆದಾಮನನ್ನು ಪ್ರಶ್ನಿಸಿದಾಗ, ಆತನು ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಏವಳನ್ನು ದೂರುತ್ತಾನೆ. ಏವಳು ಸರ್ಪವನ್ನು ದೂರುತ್ತಾಳೆ. ಸಹಜವಾಗಿ ಮಾನವ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಇತರರನ್ನು ದೂಷಿಸುವುದು ಹಾಗೂ ಇತರರನ್ನು ಪಾಪಕ್ಕೆ ಹೊಣೆಮಾಡುವುದು ಸಾಮಾನ್ಯ. ನಮ್ಮ ಪಾಪದ ಜವಾಬ್ದಾರಿಯನ್ನು ನಾವು ಹೊರಲು ಸಿದ್ಧರಿದ್ದೇವೆಯೇ?

ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment