ಎರಡನೇ ಸ್ಥಳ

ನಾ ಶಿಲುಬೆ ಹೊತ್ತಾಗ....

ಒಬ್ಬರು: ಸ್ವಾಮಿ ಯೇಸುವೇ ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲರೂ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.


ಅಂದು ಯೇಸು ಶಿಲುಬೆ ಹೊತ್ತುಕೊಂಡಾಗ ನಾಡಿನಲ್ಲೆಲ್ಲಾ ಸ್ಮಶಾನಮೌನ. ಯೇಸುವನ್ನು ಶಿಲುಬೆಗೇರಿಸುತ್ತಾರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅದಾಗಲೇ ಜನ ಯೇಸುವಿನ ಸುತ್ತ ನೆರೆಯಲಾರಂಭಿಸಿದರು. ಆ ಸಮಯದಲ್ಲಿ ನಾನು ಸುಂಕ ವಸೂಲಿ ಮಾಡುತ್ತಿದ್ದೆ. ಅದಾಗಲೇ ಜನ ಗೊಂದಲದಲ್ಲಿರುವಂತೆ ಮಾತಾಡಿಕೊಳ್ಳುತ್ತಾ ರಾಜಭವನದ ಕಡೆಗೆ ಓಡುತ್ತಿದ್ದರು. ನನಗೋ ಏನೂ ಅರ್ಥವಾಗಲಿಲ್ಲ. ಅದೇ ಸಮಯದಲ್ಲಿ ನನ್ನ ಜೊತೆಗಾರ ಸುಂಕವಸೂಲಿಯವ ಬಂದು"ಜಕ್ಕಾಯ...ನೀನು ರಾಜಭವನಕ್ಕೆ ಬರುವುದಿಲ್ಲವೇ"ಎಂದು ಕೇಳಿದಾಗ ನಾನು ‘ಏಕೆ?’ ಎಂದು ಮರುಪ್ರಶ್ನೆ ಹಾಕಿದೆ. ಆಗ ಅವನು ಕೊಟ್ಟ ಉತ್ತರ ನನಗೆ ದಿಗ್ಭ್ರಮೆಯುಂಟುಮಾಡಿತ್ತು. ಅವನು ಯೇಸುವನ್ನು ಶಿಲುಬೆಗೇರಿಸುತ್ತಾರೆ ಎಂದಾಗ ನನ್ನ ಶರೀರ ಕ್ಷಣಕಾಲ ನಿಶ್ಚಲವಾಗಿ ಬಿಟ್ಟಿತು. ಅವನ ಮಾತನ್ನು ನಂಬಲಾರದೆ ಚೇತರಿಸಿಕೊಂಡು ರಾಜಭವನದತ್ತ ದೌಡಾಯಿಸಿದೆ. ನಾನಲ್ಲಿಗೆ ಹೋದಾಗ ಕಂಡ ಆ ದೃಶ್ಯ ನನ್ನ ಮನಸ್ಸನ್ನು ಮಂಕುಗೊಳಿಸಿತ್ತು. ನನ್ನ ಕಣ್ಣುಗಳನ್ನು ನಾನೇ ನಂಬಲಾಗಲಿಲ್ಲ. "ಅಯ್ಯೋ ದೇವರೇ...ಇದೆಂಥಹ ಅನ್ಯಾಯ? ದೇವಪುತ್ರನನ್ನೇ ಈ ಮತಿಹೀನ ಜನ ಶಿಲುಬೆ ಹೊರುವಂತೆ ಮಾಡಿದ್ದಾರಲ್ಲ...?" ಆ ಜನಜಂಗುಳಿಯಲ್ಲಿ ಕ್ರಿಸ್ತನನ್ನು ಮಾತಾಡಿಸಬೇಕೆಂದು ಹೊರಟೆ ಆದರೆ ಆ ಕ್ರೂರ ಸಿಪಾಯಿಗಳು ನನ್ನನ್ನು ಪಕ್ಕಕ್ಕೆ ದೂಡಿಬಿಟ್ಟರು. ಕೆಳಗೆಬಿದ್ದೆ. ಆಗ ನೆನಪಾದದ್ದು ಅಂದು ಆಲದಮರದ ಮೇಲೆ ಹತ್ತಿ ಕ್ರಿಸ್ತನನ್ನು ಕಾಣಲು ಕಾತುರನಾಗಿದ್ದ ನನ್ನನ್ನು ಆತನೇ ಬಂದು ಕರೆದಿದ್ದು. ಅಂದು ನನ್ನ ಮನೆಗೆ ಬಂದು ಅಲ್ಲೇ ತಂಗಿದ್ದು. ಬಹು ಕಾಲದ ನನ್ನ ಮನದ ಯಾತನೆಗಳನ್ನು ದೂರ ಮಾಡಿ ನನ್ನ ಪಾಪಗಳನ್ನೆಲ್ಲಾ ಕ್ಷಮಿಸಿದ್ದು. ಆದರೆ ಈಗ ಆ ಲೋಕೋದ್ಧಾರಕ ಶಿಲುಬೆ ಹೊತ್ತಿದ್ದಾರೆ. ಅವರು ಮುಂದೆ ನಡೆದಂತೆ ಅವರ ಹಿಂದೆ ಕ್ರೂರ ಸಿಪಾಯಿಗಳು ಚಾಟಿಗಳಿಂದ ಹೊಡೆಯುತ್ತಿದ್ದಾರೆ. ಆ ರಕ್ಕಸ ಚಾಟಿಗಳೋ ಕ್ರಿಸ್ತನ ಕೋಮಲ ದೇಹದ ಮಾಂಸವನ್ನು ಕಿತ್ತು ತೆಗೆಯುತ್ತಿವೆ. ನೋಡುಗರಿಗೇ ಆ ದೃಶ್ಯ ಭಯಾನಕವಾಗಿ ತೋರಬೇಕಾದರೆ ಇನ್ನು ಕ್ರಿಸ್ತ ಅದನ್ನು ಹೇಗೆ ಸಹಿಸಿಕೊಳ್ಳುತ್ತಿದ್ದಾರೆ? ಅವರ ಅಮೂಲ್ಯ ರಕ್ತ ಎಲ್ಲೆ ಇಲ್ಲದ ನದಿಯಂತೆ ಧಾರಾಕಾರವಾಗಿ ಹರಿಯುತ್ತಿದೆ. ಇದರ ಜೊತೆಗೆ ಆತನ ವಿರುದ್ಧವಾಗಿದ್ದ ಯೆಹೂದ್ಯರು, ಪ್ರಧಾನ ಯಾಜಕರ ಹಿಂಬಾಲಕರು ಯೇಸುವಿನ ಯಾತನೆಯನ್ನು ನೋಡಿ ಕೇಕೆ ಹಾಕುತ್ತಿದ್ದಾರೆ. ಆದರೂ ದೇವಪುತ್ರ ಮರುಮಾತನಾಡುತ್ತಿಲ್ಲ. ಯಮಭಾರದ ಶಿಲುಬೆ ಹೊತ್ತು ಮುಂದೆ ನಡೆಯುತ್ತಾರೆ. ಆ ನೋವಲ್ಲೂ ಅವರು ಯಾರನ್ನೂ ಶಪಿಸಲಿಲ್ಲ, ದೂರಲಿಲ್ಲ. ಆ ಸಂಯಮಮೂರ್ತಿ ಹಿಂದೆ ನೋಡದೆ ಮುಂದೆ ನಡೆಯುತ್ತಾರೆ. ಆ ಕರುಣಾಜನಕ ದೃಶ್ಯ ನನ್ನನ್ನು ಮೂಕನನ್ನಾಗಿಸಿತ್ತು. ನನಗೆ ಅರಿವಿಲ್ಲದೆಯೇ ನನ್ನನ್ನು ಕುಗ್ಗಿಸಿತ್ತು. ಕಾಣದ ಒಂದು ಅತೀತ ಶಕ್ತಿ ನನ್ನೊಳಗೆ ಸಂಚರಿಸಿ ಕಣ್ಣೀರಧಾರೆ ಹರಿಸಿ, ನನ್ನ ಆ ಶಿಲುಬೆಯನ್ನು ಹಿಂಬಾಲಿಸುವಂತೆ ಮಾಡಿತ್ತು.
ಪ್ರಾರ್ಥನೆ
ಕರುಣೆಯ ಕ್ರಿಸ್ತ... ನನಗಾಗಿ ಶಿಲುಬೆ ಹೊತ್ತ ನಿನಗೆ, ನಾ ಮಾಡಿದ್ದಾದರೂ ಏನು? ಪಾಪ ಕೂಪದಿ ಮುಳುಗಿದ್ದ ನನ್ನ ಕೈ ಹಿಡಿದು ಮೇಲೆತ್ತಿ ಋಣಿಯಾಗಿಸಿದ ನಿನಗೆ ನಾ ಕೊಟ್ಟ ಪ್ರತಿಫಲ ಕ್ರೂರಶಿಲುಬೆ. ಪ್ರಭುವೆ ನನಗೆ ಗೊತ್ತು.ಈ ಜೀವನ ಒಂದು ನಿರಂತರ ಶಿಲುಬೆಹಾದಿ. ಈ  ಕ್ರೂರ ಹಾದಿಯಲಿ ಅದೆಷ್ಟೋ ಕಲ್ಲುಮುಳ್ಳುಗಳಿವೆ, ಹಳ್ಳ ಕೊರಕಲುಗಳಿವೆ. ಈ  ಕತ್ತಲ ಹಾದಿಯಲಿ ನನ್ನ ಬೆಳಕಾಗು. ಸೋತು ದಣಿದಾಗ ಹೆಗಲಾಗು. ಹತಾಶ ಸಾಗರದಿ ಸಿಲುಕಿಹ ಒಂಟಿ ನೌಕೆ ನಾನು,  ನೀ ಎನ್ನ ಸ್ಪೂರ್ತಿ ನಾವಿಕನಾಗು.
"ಮುಂದೆ ಹೋಗುವೆನು ನನ್ನ ಯೇಸುವಿನೊಂದಿಗೆ
ಹಿಂದೆ ನೋಡದೆ ಹೋಗುವೆನು
ಗುರಿ ಮುಟ್ಟುವ ತನಕ "

ಒಬ್ಬರು : ನಮ್ಮ ಮೇಲೆ ದಯೆತೋರಿ ಸ್ವಾಮೀ.
ಎಲ್ಲರೂ: ನಮ್ಮ ಮೇಲೆ ದಯೆತೋರಿ ಸ್ವಾಮೀ.
ಒಬ್ಬರು: ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ.
ಎಲ್ಲರೂ: ಆಮೆನ್



No comments:

Post a Comment