ಯೋಬನ ಹೆಂಡತಿ

"ಸುಖದಲ್ಲಿಯೂ, ದುಃಖದಲ್ಲಿಯೂ, ಸಿರಿತನದಲ್ಲಿಯೂ, ಬಡತನದಲ್ಲಿಯೂ, ಆರೋಗ್ಯದಲ್ಲಿಯೂ, ಅನಾರೋಗ್ಯದಲ್ಲಿಯೂ, ನಾವಿಬ್ಬರೂ ಒಬ್ಬರಿಗೊಬ್ಬರು ಆತುಕೊಂಡಿರುತ್ತೇವೆ” ಎಂಬರ್ಥ ಬರುವ ಗಂಭೀರ ಪ್ರಮಾಣವಚನವನ್ನು ನಾವು ಎಲ್ಲಾ ವಿವಾಹ ಸಂದರ್ಭಗಳಲ್ಲಿ ಕೇಳಿಸಿಕೊಂಡಿರುತ್ತೇವೆ, ಅಲ್ಲವೇ? ಆದರೆ, ಯೋಬನ ಹೆಂಡತಿಯ ಪ್ರಸ್ತಾಪವನ್ನು ನಾವು ಪವಿತ್ರ ಬೈಬಲ್ಲಿನಲ್ಲಿ ಓದುವಾಗ, ನಮಗೆ ಬೇಸರವಾಗುತ್ತದೆ, ಕೋಪ ಬರುತ್ತೆ. “ಛೇ, ಇಂಥಾ ಹೆಂಡತಿಯರೂ ಇರುತ್ತಾರಾ?” ಎಂಬ ಉದ್ಗಾರ ನಮ್ಮಿಂದ ಹೊಮ್ಮುತ್ತದೆ! 

ಕಾವ್ಯಮಯವಾದ ಯೋಬನ ಗ್ರಂಥ, ಸತ್ಯವೇದದ ಅತ್ಯಂತ ಪುರಾತನ ಗ್ರಂಥಗಳಲ್ಲಿ ಒಂದಾಗಿದೆ. ಯೋಬನು ತುಂಬಾ ಸ್ಥಿತಿವಂತ. ಗಂಡು ಹೆಣ್ಣುಮಕ್ಕಳ, ದನ, ಕರು, ಕುರಿಗಳ ಸೌಭಾಗ್ಯವನ್ನು ಹೊಂದಿದ್ದ ಪರಮಭಕ್ತ. ವಿವೇಕಿಯೂ ಹೌದು. ಒಮ್ಮೆ, ದೇವರು, ತನ್ನ ಸನ್ನಿಧಿಗೆ ಬಂದಿದ್ದ ಸೈತಾನನೊಡನೆ ಯೋಬನ ಬಗ್ಗೆ ತುಂಬಾ ಅಭಿಮಾನದಿಂದ ಪ್ರಸ್ತಾಪಿಸಿದಾಗ, ಅವನು, ”ನೀನು ಯೋಬನಿಗೆ ನೀಡಿರುವ ಸೌಭಾಗ್ಯಗಳನ್ನೆಲ್ಲಾ ಅಳಿಸಿಹಾಕಿ ನೋಡು. ಆಗ, ಅವನು ನಿನ್ನನ್ನು ಖಂಡಿತವಾಗಿಯೂ ದೂಷಿಸುವನು” ಎಂದು ಹಮ್ಮಿನಿಂದ ನುಡಿಯುತ್ತಾನೆ. ಯೋಬನನ್ನು ಪರೀಕ್ಷಿಸಲು ಸರ್ವೇಶ್ವರನು ಸೈತಾನನಿಗೆ ಅನುಮತಿ ನೀಡುತ್ತಾನೆ. 

ಸರಿ, ಯೋಬನ ಆಸ್ತಿಪಾಸ್ತಿಗಳು ಒಂದೊಂದಾಗಿ ಹಾಳಾಗುತ್ತವೆ, ಮಕ್ಕಳೆಲ್ಲರೂ ಸಾಯುತ್ತಾರೆ. ಯೋಬನ ಆರೋಗ್ಯವೂ ಹದಗೆಟ್ಟು, ತನ್ನ ಮೈಯಲ್ಲೆಲ್ಲಾ ಎದ್ದ ಕುರುಗಳನ್ನು ಅವನು ಬೋಕಿಯಿಂದ ಕೆರೆದುಕೊಳ್ಳುತ್ತಾ, ಬೂದಿಯಲ್ಲಿ ಕೂರುವ ಕಾಲ ಬರುತ್ತದೆ. ಈ ಬಗೆಯ ದುಃಸ್ಥಿತಿಯಲ್ಲೂ ಯೋಬನು ದೇವರನ್ನು ಶಪಿಸಲಿಲ್ಲ! ”ದೇವರ ಹಸ್ತದಿಂದ ನಾವು ಒಳ್ಳೇದನ್ನು ಹೊಂದುತ್ತೇವೆ, ಕೆಟ್ಟದ್ದನ್ನು ಹೊಂದಬಾರದೋ?” (ಯೋಬ 2:9) ಎಂಬ ಪ್ರಸಿದ್ಧ ವಾಕ್ಯವನ್ನು ನುಡಿದು, ಗುಣುಗುಟ್ಟುತ್ತಿದ್ದ ಹೆಂಡತಿಯ ಬಾಯಿ ಅವನು ಮುಚ್ಚಿಸುತ್ತಾನೆ. 

ಆದರೆ, ಅವಳಿಗೆ ತಮ್ಮ ಈ ಭಯಾನಕ ಪರಿಸ್ಥಿತಿಯನ್ನು ಅನುಭವಿಸಿ ರೋಸಿಹೋಗಿದೆ. ಇದುವರೆಗೆ ಐಶ್ವರ್ಯದಲ್ಲಿ ಓಲಾಡುತ್ತಾ, ಮಕ್ಕಳು, ಆಳುಕಾಳುಗಳೊಂದಿಗೆ ಆನಂದದಿಂದ ಇದ್ದವಳಿಗೆ ಇಷ್ಟೆಲ್ಲಾ ಕೀಳುಸ್ಥಿತಿ ಬಂದಿದ್ದರೂ, ಇನ್ನೂ ತನ್ನ ಗಂಡ, “ದೇವರು, ದೇವರು, ಎನ್ನುತ್ತಲೇ ಇದ್ದಾನೆ, ಆತನಿಂದಲೇ ನಮಗೆ ಈ ದಾರಿದ್ರ್ಯ, ಸಂಕಟಗಳು ಒದಗಿವೆ” ಎಂದು ಅವಳ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಆಗ, ಅವಳು, ತನ್ನ ಗಂಡನನ್ನು ಹಂಗಿಸುತ್ತಾ, ”ಯೋಬನೆ, ನಿನ್ನ ಯಥಾರ್ಥವನ್ನು ನೀನು ಇನ್ನೂ ಬಿಡಲಿಲ್ಲವೋ? ನೀನು ದೇವರನ್ನು ದೂಷಿಸಿ, ಸಾಯಿ” ಎಂದು ಯಾವ ಹೆಂಡತಿಯ ಬಾಯಿಂದಲೂ ಬರಬಾರದ ಕಟುವಾದ ಮಾತುಗಳನ್ನು ಹೊರಹಾಕುತ್ತಾಳೆ. ಯೋಬನು ನೈತಿಕವಾಗಿ ಕುಸಿಯುವಂತೆ ಮಾಡಲು ಪ್ರಯತ್ನಿಸುತ್ತಾಳೆ. 

ಅವಳ ಮನಸ್ಸಿನಲ್ಲಿ ಯೋಬನು, ದೇವರನ್ನು ಒಮ್ಮೆ ದೂಷಿಸಿದರೂ ಸಾಕು, ಸೈತಾನನು ವಿಜಯಿಯಾಗಿ, ತಮಗಾಗಿರುವ ಎಲ್ಲಾ ನಷ್ಟವನ್ನೂ ತುಂಬಿಸಿಕೊಡುತ್ತಾನೆ, ನಾವು ನಮ್ಮ ಹಿಂದಿನ ಸುಖ, ಸಂಪತ್ತುಗಳನ್ನು ಮತ್ತೆ ಪಡೆದುಕೊಳ್ಳಬಹುದು, ಎಂಬ ಯೋಚನೆಯಿಂದಲೇ ಈ ಊಹಿಸಲೂ ಆಗದ ಮಾತುಗಳನ್ನು ಆಡಿದಳು. ತಮ್ಮ ಆತ್ಮಗಳನ್ನು ಸೈತಾನನಿಗೆ ಒಪ್ಪಿಸಿಸಿಬಿಟ್ಟರೆ ಸಾಕು, ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ ಎಂಬ ಅಭಿಪ್ರಾಯ ಅವಳದ್ದು. ಈ ಸ್ತ್ರೀ, ಲೌಕಿಕತೆಯ ಪ್ರತೀಕವಾಗಿದ್ದು, ಪವಿತ್ರಾತ್ಮಾಧೀನನಾದ ಗಂಡನ ಸುಗುಣಗಳ ಲವಲೇಶವೂ ಅವಳಲ್ಲಿದ್ದಿಲ್ಲ. 

ಯೋಬನ ಹೆಂಡತಿಯು, ತನ್ನ ಹೃದಯದಲ್ಲಿ ಸೈತಾನನಿಗೆ ಸ್ಥಳ ನೀಡಿದ್ದ ಕಾರಣ, ಈ ಎಲ್ಲಾ ಅಶುದ್ಧ ಮಾತುಗಳನ್ನೂ ಅವನೇ ಪ್ರೇರೇಪಿಸಿರುತ್ತಾನೆ. ಆದಿಯಲ್ಲಿ ಸೈತಾನನು ಹವ್ವಳ ಮೂಲಕ ಇಡೀ ಮಾನವಕುಲವನ್ನೇ ಪಾಪದಲ್ಲಿ ಹೇಗೆ ಮುಳುಗಿಸಿದನೋ ಇಲ್ಲಿಯೂ ಅವನು ಅದೇ ಪ್ರಯತ್ನವನ್ನು ಮಾಡುತ್ತಿದ್ದಾನೆ! ಯೋಬನ ಹೆಂಡತಿಯನ್ನು ಗಾಳವಾಗಿ ಇಟ್ಟುಕೊಂಡು ಯೋಬನ ಆತ್ಮವನ್ನು ಗೆಲ್ಲುವುದೇ ಸೈತಾನನ ಅಂತಿಮ ಉಮೇದಾಗಿತ್ತು ಆದ್ಧರಿಂದಲೇ, ಅವನು, ಯೋಬನ ಸಮಸ್ತವನ್ನು ನಾಶಪಡಿಸಿದರೂ ಅವನ ಹೆಂಡತಿಯನ್ನು ಮಾತ್ರ ಉಳಿಸಿಕೊಂಡಿದ್ದನು! ಆದರೆ, ಇಲ್ಲಿ, ಯೋಬನ ಭಕ್ತಿ ಆಳವಾಗಿದ್ದ ಕಾರಣ, ಅವನು ಆದಾಮನಂತೆ ಸೈತಾನನಿಗೆ ವಶವಾಗಲಿಲ್ಲ! 

ಈ ಹಂತದಲ್ಲಿ ನಮಗೆ ಸಂತ ಪೇತ್ರನ ಮಾತುಗಳು ನೆನಪಿಗೆ ಬರುತ್ತವೆ. ”ಒಳ್ಳೆಯವರಿಗೇ ಕಷ್ಟಗಳು ಏಕೆ ಬರುತ್ತವೆ? ಪಾಪಿಗಳು ಸುಖವಾಗಿಯೇ ಇರುತ್ತಾರಲ್ಲಾ!” ಈ ತರಹದ ಪ್ರಶ್ನೆಗಳಿಗೆ ಉತ್ತರವಾಗಿ, ಆತನು ತೀವ್ರ ಕಷ್ಟಗಳಿಗೆ ಒಳಗಾಗಿದ್ದ ಭಕ್ತರಿಗೆ ಹೀಗೆ ಹೇಳುತ್ತಾನೆ- “ನಾವು ಪರಿಶೋಧನೆಗಾಗಿ ಪುಟಕ್ಕೆ ಹಾಕಿಸಿಕೊಂಡವರು. ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾನೆ. ಕ್ರಮೇಣ, ನೀವು, ಚಿನ್ನದಂತೆ ಪರಿಶುದ್ಧರಾಗಿ ದಿವ್ಯಪ್ರಕಾಶದಿಂದ ಹೊಳೆಯುವಿರಿ” ಇದು, ಯೋಬನ ಪರಿಸ್ಥಿತಿಯನ್ನೇ ಹೋಲುತ್ತದೆ. 

ದೇವರ ದಯೆ! ಯೋಬನ ಆಳವಾದ ಭಕ್ತಿ, ನಂಬಿಕೆಗಳು ಅವನ ಕೈಬಿಡಲಿಲ್ಲ. ಇವನ ನಡೆನುಡಿಗಳನ್ನು ಕಂಡು, ದೇವರಿಗೆ ಸಂತೃಪ್ತಿಯಾಗಿ ಅವನ ಎಲ್ಲಾ ಸೌಭಾಗ್ಯಗಳನ್ನೂ ಮರಳಿಸಿದನು. ಮಕ್ಕಳೆಲ್ಲರೂ ಬದುಕಿದರು. ಅವನ ಆಸ್ತಿಪಾಸ್ತಿಗಳು ಮೊದಲಿಗಿಂತ ಎರಡುಪಟ್ಟು ಹೆಚ್ಚಿದವು. ಆಶ್ಚರ್ಯವೆಂದರೆ, ಗ್ರಂಥದ ಕೊನೆಯಲ್ಲಿ, ಯೋಬನ ಅತ್ಯಂತ ಸುಂದರ ಹೆಣ್ಣುಮಕ್ಕಳ ಹೆಸರುಗಳನ್ನು ಕೊಟ್ಟಿದ್ದರೂ ಅವನ ಹೆಂಡತಿ ಮಾತ್ರ ಅನಾಮಿಕಳಾಗಿಯೇ ಉಳಿಯುತ್ತಾಳೆ!

No comments:

Post a Comment