ಜನವರಿ ೩೧, ೨೦೧೯


ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

31 ಜನವರಿ 2019

ಗುರುವಾರ/ಬಿಳಿ/ಸಂತಜಾನ್ ಬಾಸ್ಕೊ ಯಾ.(ಸ್ಮರಣೆ)
1ನೇ  ವಾಚನ  -  ಹಿಬ್ರಿ  1೦:  19-25
ಕೀರ್ತನೆ  -  24:  1-2,  3-4,  5-6.
ಶುಭಸಂದೇಶ  -  ಮಾರ್ಕ  4:  21-25


ವಾಚನಗಳು
ಮೊದಲನೇ  ವಾಚನ

ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ
ಹಿಬ್ರಿ  1೦:  19-25

19ಹೀಗಿರುವಲ್ಲಿ, ಪ್ರಿಯ ಸಹೋದರರೇ, ಯೇಸುಸ್ವಾಮಿ ತಮ್ಮ ದೇಹವೆಂಬ ತೆರೆಯ ಮೂಲಕ ನಮಗೆ ಹೊಸದಾದ ಸಜ್ಜೀವ ಮಾರ್ಗವನ್ನು ತೆರೆದಿಟ್ಟಿದ್ದಾರೆ. 20ಅದರ ಮೂಲಕ ಗರ್ಭಗುಡಿಯನ್ನು ಧೈರ್ಯದಿಂದ ಪ್ರವೇಶಿಸುವ ಹಕ್ಕು ಅವರ ರಕ್ತಧಾರೆಯಿಂದಲೇ ನಮಗೆ ದೊರೆತಿದೆ. 21ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠ ಯಾಜಕ ನಮಗಿದ್ದಾರೆ. 22ಆದಕಾರಣ, ನಾವು ಕೆಟ್ಟ ಮನಸ್ಸಾಕ್ಷಿಯನ್ನು ತೊರೆದ ಹೃದಯದಿಂದಲೂ ಪುಣ್ಯಜಲದಿಂದ ತೊಳೆದ ದೇಹದಿಂದಲೂ ಕೂಡಿದವರಾಗಿ ಶುದ್ಧ ಅಂತರಂಗದಿಂದಲೂ ಪೂರ್ಣವಿಶ್ವಾಸದಿಂದಲೂ ದೇವರ ಬಳಿಗೆ ಸಾಗೋಣ. 23ಕೊಟ್ಟ ಮಾತನ್ನು ದೇವರು ಮೀರುವುದಿಲ್ಲ. ಆದ್ದರಿಂದ ನಾವು ನಿವೇದಿಸುವ ನಂಬಿಕೆ ನಿರೀಕ್ಷೆಯಲ್ಲಿ ಚಂಚಲರಾಗದೆ ಸದೃಢರಾಗಿರೋಣ. 24ಪರಸ್ಪರ ಹಿತಚಿಂತಕರಾಗಿರೋಣ; ಪ್ರೀತಿಸಬೇಕು, ಒಳಿತನ್ನು ಮಾಡಬೇಕು ಎಂದು ಒಬ್ಬರನ್ನೊಬ್ಬರು ಹುರಿದುಂಬಿಸೋಣ. 25ಸಭೆ ಸೇರುವ ರೂಢಿಯನ್ನು ಕೆಲವರು ಕೈಬಿಟ್ಟಿದ್ದಾರೆ. ನಾವು ಹಾಗೆ ಮಾಡದಿರೋಣ. ನಿಮಗೆ ತಿಳಿದಿರುವಂತೆ ಪ್ರಭು ಪ್ರತ್ಯಕ್ಷರಾಗುವ ದಿನವು ಸವಿೂಪಿಸುತ್ತಿರುವುದರಿಂದ ಮತ್ತಷ್ಟು ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸೋಣ.



ಕೀರ್ತನೆ 
        
ಶ್ಲೋಕ: ಇಂಥವರೆ ದೇವರ ದರ್ಶನಾಭ್ಯರ್ಥಿಗಳು
ಕೀರ್ತನೆ - 24:  1-2,  3-4,  5-6.

1 : ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ
     ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ //

2 : ಕಡಲನು ತಳಪಾಯವನಾಗಿಸಿದವನು ಆತನೆ
     ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ //

3 : ಪ್ರಭುವಿನ ಶಿಖರವನು ಏರಬಲ್ಲವನಾರು? / 
     ಆ ನಿವಾಸದಲಿ ನಿಲ್ಲಲು ಯೋಗ್ಯನಾರು? //

4 : ಅಂಥವನಿರಬೇಕು ಶುದ್ಧ ಹಸ್ತನು, ಸುಮನಸ್ಕನು
     ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು //

5 : ಲಭಿಸುವುದಾತನಿಗೆ ಶುಭ ಪ್ರಭುವಿನಿಂದ
     ನೀತಿಯ ಸತ್ಫಲ ರಕ್ಷಕ ದೇವನಿಂದ //

6 : ಇಂಥವರೆ ದೇವರ ದರ್ಶನಾಭ್ಯರ್ಥಿಗಳು
     ಇಂಥವರೆ ಯಕೋಬ ದೇವನ ಭಕ್ತಾದಿಗಳು //



ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ  4:  21-25

21ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, ಯಾರಾದರೂ ಉರಿಯುವ ದೀಪವನ್ನು ತಂದು ಬಟ್ಟಲ ಒಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ನಿಶ್ಚಯವಾಗಿಯೂ ಇಲ್ಲ. ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 22ಬೆಳಕಿಗೆ ಬಾರದ ಮುಚ್ಚು ಮರೆಯಿಲ್ಲ, ರಟ್ಟಾಗದ ಗುಟ್ಟಿಲ್ಲ. 23ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ. 24ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು; ಇನ್ನೂ ಅಧಿಕವಾಗಿ ಕೊಡುವರು. 25ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಎಂದರು.

ಚಿಂತನೆ
ಕ್ರಿಸ್ತನ ಶಿಷ್ಯರಾಗಲು ಸ್ಪೂರ್ತಿ

ದೀಪ ಹೇಗೆ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುತ್ತದೆಯೋ ಹಾಗೆಯೇ ದೇವರ ವಾಕ್ಯವನ್ನು ವಿಶ್ವಾಸಿಸುವ ಪ್ರತಿಯೊಬ್ಬನೂ ಪಾಪವೆಂಬ ಕತ್ತಲನ್ನು ತ್ಯಜಿಸಿ ದೇವರ ರಾಜ್ಯದ ಬೆಳಕನ್ನು ಹೊಂದುವನು. ದೀಪವು ಬೆಳಕು ನೀಡುವಂತೆ ಕ್ರೈಸ್ತರ ಜೀವನ ಇತರರಿಗೆ ಮಾರ್ಗದರ್ಶನ ಮತ್ತು ಕ್ರಿಸ್ತನ ಶಿಷ್ಯರಾಗಲು ಸ್ಪೂರ್ತಿಯನ್ನೂ ನೀಡಬೇಕಿದೆ. ಕ್ರಿಸ್ತನ ಹಿಂಬಾಲಕರಾಗಿ ನಾವಾಡುವ ಮಾತು, ಕೈಗೊಳ್ಳುವ ಪ್ರತಿಯೊಂದು ಕೆಲಸವು ಕ್ರಿಸ್ತನಿಗೆ ಸಾಕ್ಷಿಯಾಗಿರಬೇಕು. ಹಾಗೂ ದೇವರು ಉಚಿತವಾಗಿ ನೀಡಿದ ವರ, ಪ್ರತಿಭೆಗಳನ್ನು ನಮ್ಮಲ್ಲೇ ಹುದುಗಿಸಿಕೊಳ್ಳದೆ ಪರರಲ್ಲಿ ಹಂಚಿಕೊಳ್ಳುತ್ತಾ ದೇವರ ಸಾಮ್ರಾಜ್ಯದ ವಿಸ್ತರಣೆಗೆ ಶ್ರಮಿಸಲು ಕ್ರಿಸ್ತಯೇಸುವು ನಮಗೆ ಕರೆ ನೀಡುತ್ತಿದ್ದಾರೆ.

ಇಂದಿನ ಸಂತರು

ಸ೦ತ ಜಾನ್ ಬಾಸ್ಕೊ, ಯಾಜಕ (1815 -1888)
ಇವರನ್ನು ಗಿಯೊವಾನ್ನಿ ಮೆಲ್ಕಾಯರ್‌ ಬಾಸ್ಕೊ ಮತ್ತು ಡೋನ್‌ ಬಾಸ್ಕೊ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. 1815ರ ಆಗಸ್ಟ್‌ ೧೬ರಂದು ಇವರು ಇಟಲಿಯ ಬೆಕ್ಕಿ ಎಂಬಲ್ಲಿ ಜನನ ತಾಳುತ್ತಾರೆ. ಎರಡು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಳ್ಳುವ ಇವರ ಮತ್ತು ಇವರಿಬ್ಬರ ಸಹೋದರರ ಪಾಲನೆ ಪೋಷಣೆಯ ಹೊಣೆಯು ಏಕಾಂಗಿ ತಾಯಿ 'ಮಾರ್ಗರಿತಾ ಒಕಿಯಾನ' ಮೇಲೆ ಬೀಳುತ್ತದೆ. ಕಡು ಬಡತನದಲ್ಲಿಯೂ ಇತರರಿಗೆ ಸಹಾಯ ಮಾಡುವಲ್ಲಿ ಮಾರ್ಗರಿತಾ ಹಿಂದೆ ಬೀಳುತ್ತಿರಲಿಲ್ಲ. 

ಜಾನ್‌ಬಾಸ್ಕೊ ಬಾಲ್ಯದಿ೦ದಲೇ ಪ್ರಭು ಯೇಸುವಿನ ಹಾಗೂ ಮೇರಿಮಾತೆಯ ಪ್ರೇರಣೆಯಲ್ಲಿ ಬೆಳೆಯುತ್ತಾರೆ. ಸಣ್ಣ ಪ್ರಾಯದಲ್ಲೇ ಧರ್ಮನಿಷ್ಠೆಯನ್ನು ಬೆಳೆಸಿಕೊಂಡ ಇವರು ತನ್ನ ತಾಯಿಗೆ ಸಹಾಯಕರಾಗಿ ಕುರಿಸಾಕಣೆಗೆ ತಮ್ಮ ಕೈಯನ್ನೂ ಜೋಡಿಸುತ್ತಿದ್ದರು.  ಜಾನ್ ಬಾಸ್ಕೊ ಯಾವಾಗಲೂ ಯುವ ಪೀಳಿಗೆಯ ಪೋಷಣೆ ಹಾಗೂ ಆರೈಕೆಯ ಕನಸ್ಸು ಕಾಣುತ್ತಾ ಅವರನ್ನು ಸನ್ಮಾರ್ಗದಲ್ಲಿ ಬಾಳಲು ವಿಶೇಷ ತರಬೇತಿಯನ್ನು ನೀಡಲು ಬಯಸುತ್ತಿದ್ದರು. ದೇವರ ಪ್ರೀತಿ, ಕರುಣೆ ಹಾಗೂ ದೀನತೆಯಲ್ಲಿ ಯುವಜನರನ್ನು ಪ್ರೋತ್ಸಾಹಿಸಲು ಕ೦ಡ ಅವರ ಕನಸು ನನಸಾಗಿದ್ದು, ಅವರ ಯಾಜಕ ದೀಕ್ಷೆಯ ಬಳಿಕವೇ. ಯುವ ಪೀಳಿಗೆಯ ಸೇವೆಯನ್ನು ಟೂರಿನ್‌ನಲ್ಲಿ ಪ್ರಾರ೦ಭಿಸಿದ ಜಾನ್, ಯುವ ಜನರ ಆಸೆ ಆಕಾ೦ಕ್ಷೆ, ಆಟ-ನಾಟಕ, ಸ೦ಗೀತ, ಕತೆ, ಕವಿತೆ, ಪ್ರವಾಸ-ಮನೋರ೦ಜನೆಗಳ ಮೂಲಕ ಅವರನ್ನು ದೇವರ ಪ್ರೀತಿಯೆಡೆಗೆ ಸೆಳೆಯುತ್ತಿದ್ದರು. ಅದರ೦ತೆ ಯುವ ಜನರಿಗೆ ಸಾ೦ಧರ್ಭಿಕವಾಗಿ ಧರ್ಮೋಪದೇಶ, ಜಪಸರ, ಪ್ರಾರ್ಥನೆ, ದೈನ೦ದಿನದ ಶುಭಸ೦ದೇಶದ ಪದಗಳನ್ನು ತಪ್ಪದೆ ಮನವರಿಕೆ ಮಾಡಿಕೊಡುತ್ತಿದ್ದರು.

ಜಾನ್‌ರವರ ಈ ಸೇವೆಯ ಅನುಭವ ಪಡೆಯುತ್ತಿದ್ದ ಯುವ ಜನರು ದಿನದಿ೦ದ ದಿನಕ್ಕೆ ಹೆಚ್ಚಾಗುತ್ತಿದ್ದ೦ತೆ ಹಲವಾರು ಅಡ್ಡಿ ಆತ೦ಕಗಳು ಎದುರಾಗತೊಡಗಿದವು. ಅವರಿಗೆ ತಂಗಲು ವಾಸಸ್ಥಾನ ಮತ್ತುಊಟ-ಉಪಚಾರದ ಕೊರತೆ ಕಾಡತೊಡಗಿತು. 1845ರಲ್ಲಿ ಸುಮಾರು 800 ಯುವಜನರನ್ನು ಸಲಹುವ ದೊಡ್ಡ ಕಾರ್ಯವೇ ಅವರ ಮೇಲಿತ್ತು. ಕಾಲಕ್ರಮೇಣ ಹಲವರು ಇವರ ನೆರವಿಗೆ ಬರುತ್ತಾರೆ. ಅವರ ಸಹಾಯ ಹಸ್ತದಿಂದ ಒ೦ದು ಹಿರಿಯ ಶಾಲೆಯ ಸ್ಥಾಪನೆಗೆ ಇವರು ಮುಂದಾಗುತ್ತಾರೆ, ಸೆಲೆಷಿಯನ್ ಸ೦ಸ್ಥೆಯೆನ್ನುವ ಇದನ್ನು ಟೂರಿನ್‌ನಲ್ಲಿ ಸ್ಥಾಪಿಸಿ ಇದರ ಸಮಸ್ತ ಕಾರ್ಯಗಳನ್ನೂ “ಸಹಾಯಮಾತೆ” ಹಾಗೂ ಸ೦ತ ಫ್ರಾನ್ಸಿಸ್ ದೆ ಸೇಲಸ್‌ರವರ ಮೇಲೆ ಭರವಸೆ ಇರಿಸಿ ಅವರ ಹೊಣೆಗಾರಿಕೆಗೆ ಬಿಟ್ಟು ಇವರು ತಮ್ಮ ಸೇವಾಕಾರ್ಯದಲ್ಲಿ  ಮು೦ದುವರಿಯುತ್ತಾರೆ. ಯುವಜನರಿಗೆ ತ೦ಗಲು ತ೦ಗುದಾಣ, ವಸತಿ ಕೇಂದ್ರಗಳನ್ನು ತೆರೆಯುತ್ತಾರೆ, ಮಕ್ಕಳಿಗೆ ಓದು-ಬರಹ, ಧರ್ಮ, ಸಣ್ಣ-ಪುಟ್ಟ ವ್ಯಾಪಾರಗಳ ಬಗ್ಗೆಯೂ ತರಬೇತಿ, ತಯಾರಿ ಮಾಡುವುದರ ಮೂಲಕ ಒ೦ದು ಶಿಕ್ಷಣದ ನವೀನ ಶೈಲಿಯ ಯೋಜನೆಯನ್ನು ಹಾಕುವುದರ ಮೂಲಕ ಹೊಸ ರೂಪ ನೀಡುತ್ತಾರೆ. ಮಕ್ಕಳ ಎಲ್ಲಾ ಆಸೆ-ಅಭಿಲಾಷೆಗಳನ್ನು ಅರ್ಥೈಸಿಕೊ೦ಡು, ಅವರ ಹೃದಯವನ್ನು ಕ೦ಡು ಹಿಡಿಯುವ ಶಕ್ತಿ ಹೊಂದಿದ್ದ ಜಾನ್‌ ಬಾಸ್ಕೊರವರು ಪಾಪ ವಿಜ್ಞಾಪನೆ, ದೈನ೦ದಿನ ದಿವ್ಯ ಬಲಿಪೂಜೆ ಇತ್ಯಾದಿಗಳಿಂದೊಡಗೂಡಿದ ಮಕ್ಕಳ ಸರ್ವತೋಮಖ ಅಭಿವೃದ್ಧಿಯ ಕಡೆ ಯೋಜನೆಗಳನ್ನು ಹಾಕುತ್ತಾರೆ. ಎಲ್ಲಾ ಯುವ ಜನರು ಜಾನ್‌ರವರನ್ನು ಒಬ್ಬ ತ೦ದೆ-ಸ೦ತ- ಪವಿತ್ರ ಮನುಷ್ಯನೆ೦ದು ಪ್ರೀತಿಸುತ್ತಿದ್ದರು. ಕೊನೆಯದಾಗಿ, ಬಾಲಾಪರಾಧಿಗಳ ಸೇವೆ, ಕಾರಾಗೃಹದ ಭೇಟಿಯ ಮುಖಾ೦ತರ ಅವರ ಮನಃಪರಿವರ್ತನೆ, ಅವರ ಕಲ್ಯಾಣ, ಜೀವನೋದ್ಧಾರ ಎ೦ದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಹೆಣ್ಣು ಮಕ್ಕಳ ಆರೈಕೆಗಾಗಿ, ಸ೦ತ ಮೇರಿ ಮಜಲ್ಲೊರ ಸಹಕಾರದಿ೦ದ 1872ರಲ್ಲಿ ‘ಕ್ರೈಸ್ತ ಸಹಾಯಮಾತೆ ಪುತ್ರಿಯರು’ ಎ೦ಬ ಸಭೆಯನ್ನು ಇವರು ಸ್ಥಾಪಿಸುತ್ತಾರೆ.

ಹೀಗೆ ಯುವ ಜನಾಂಗಕ್ಕಾಗಿಯೂ ಮಕ್ಕಳಿಗಾಗಿಯೂ ನಿರಂತರ ದುಡಿದು ಹಣ್ಣಾದ ಇವರು ಜನವರಿ 31, 1888ರಲ್ಲಿ ನಿಧನರಾಗುತ್ತಾರೆ. ಏಪ್ರಿಲ್ 1, 1934ರಲ್ಲಿ 11 ನೇ ಭಕ್ತಿನಾಥರು ಇವರನ್ನು ಸ೦ತ ಪಟ್ಟಕ್ಕೇರಿಸುತ್ತಾರೆ. ಇವರು ಶಿಶಿಕ್ಷುಗಳ, ಪ್ರಕಾಶಕರ ಮತ್ತು ಸಂಪಾದಕರ, ಶಾಲಾಮಕ್ಕಳ ಹಾಗೂ ಜಾದೂಗಾರರ ಪಾಲಕ ಪೋಷಕರು. ಜನವರಿ ೩೧ರಂದು ಇವರ ಹಬ್ಬವನ್ನು ಆಚರಿಸಲಾಗುತ್ತದೆ.

ಚಿತ್ರ: ಗೂಗಲ್ಕೃಪೆ
© 'ದನಿ' ಮಾಧ್ಯಮ ಮನೆ


ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ





No comments:

Post a Comment