ಜನವರಿ ೨೫, ೨೦೧೯


ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

25 ಜನವರಿ 2019

ಶುಕ್ರವಾರ/ಬಿಳಿ/ಪ್ರೇಷಿತ ಸಂತ ಪೌಲರ ಮನಪರಿವರ್ತನೆಯ ಹಬ್ಬ
1ನೇ  ವಾಚನ  -  ಪ್ರೇ.ಕಾ  22:  3-16
ಅಥವಾ  ಪ್ರೇ.ಕಾ  9:  1-22
ಕೀರ್ತನೆ  -  117:  1-2
ಶುಭಸಂದೇಶ  -  ಮಾರ್ಕ  16:  15-18

ವಾಚನಗಳು
ಮೊದಲನೇ  ವಾಚನ

ಪ್ರೇಷಿತರ ಕಾರ್ಯಕಲಾಪಗಳು ಗ್ರಂಥದಿಂದ ವಾಚನ

3“ನಾನೊಬ್ಬ ಯೆಹೂದ್ಯನು, ಸಿಲಿಸಿಯದ ತಾರ್ಸ ಎಂಬಲ್ಲಿ ಹುಟ್ಟಿದವನು. ಆದರೆ, ಇದೇ ಜೆರುಸಲೇಮಿನಲ್ಲಿ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಲಿತವನು. ಇಲ್ಲಿ ಇಂದು ನೆರೆದಿರುವ ನೀವೆಲ್ಲರೂ ದೈವಾಭಿಮಾನಿಗಳಾಗಿರುವಂತೆಯೇ ನಾನು ದೈವಾಭಿಮಾನಿಯಾಗಿದ್ದೆ. 4ಕ್ರಿಸ್ತಮಾರ್ಗವನ್ನು ಅನುಸರಿಸುವವರನ್ನು, ಸ್ತ್ರೀ ಪುರುಷರೆನ್ನದೆ ಬಂಧಿಸಿ, ಅವರನ್ನು ಸೆರೆಮನೆಗೆ ತಳ್ಳಿದೆ. ಅವರನ್ನು ಮರಣ ಪರಿಯಂತರ ಪೀಡಿಸಿ ಹಿಂಸಿಸಿದೆ. 5ಇದಕ್ಕೆ ಪ್ರಧಾನ ಯಾಜಕರು ಮತ್ತು ಪ್ರಮುಖರ ಇಡೀ ಸಭೆಯೇ ಸಾಕ್ಷಿ. ನಾನು ಅವರಿಂದಲೇ ದಮಸ್ಕಸಿನಲ್ಲಿರುವ ಯೆಹೂದ್ಯ ಬಾಂಧವರಿಗೆ ಪತ್ರಗಳನ್ನು ಪಡೆದು, ಆ ಪಟ್ಟಣಕ್ಕೆ ಹೊರಟೆ. ಅಲ್ಲಿಂದ ಕ್ರೈಸ್ತರನ್ನು ಬಂಧಿಸಿ, ಜೆರುಸಲೇಮಿಗೆ ತಂದು ಶಿಕ್ಷಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು. 


6“ಹೀಗೆ ಪ್ರಯಾಣ ಮಾಡುತ್ತಾ ದಮಸ್ಕಸನ್ನು ಸವಿೂಪಿಸಿದೆ. ಆಗ ಸುಮಾರು ನಡು ಮಧ್ಯಾಹ್ನ. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕೊಂದು ನನ್ನ ಸುತ್ತಲೂ ಮಿಂಚಿತು. 7ನಾನು ನೆಲಕ್ಕುರುಳಿದೆ. ಆಗ ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?’ ಎಂಬ ವಾಣಿ ಕೇಳಿಸಿತು. 8ನಾನು ‘ಪ್ರಭೂ, ನೀವಾರು?’ ಎಂದು ಕೇಳಿದೆ. ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದರು ಅವರು. 9ನನ್ನೊಡನೆ ಇದ್ದವರಿಗೆ ಬೆಳಕೇನೋ ಕಾಣಿಸಿತು, ಆದರೆ ನನ್ನೊಡನೆ ಮಾತಾಡುತ್ತಿದ್ದ ವಾಣಿ ಅವರಿಗೆ ಕೇಳಿಸಲಿಲ್ಲ. 10‘ನಾನೇನು ಮಾಡಬೇಕು ಪ್ರಭೂ?’ ಎಂದು ಕೇಳಿದೆ. ಅದಕ್ಕೆ ಪ್ರಭು, ‘ಏಳು, ದಮಸ್ಕಸಿಗೆ ಹೋಗು, ನೀನು ಏನು ಮಾಡಬೇಕೆಂದು ನಿಶ್ಚಯಿಸಲಾಗಿದೆಯೋ ಅದೆಲ್ಲವನ್ನೂ ನಿನಗೆ ತಿಳಿಸಲಾಗುವುದು,’ ಎಂದು ಹೇಳಿದರು. 11ಬೆಳಕಿನ ಪ್ರಕಾಶದ ನಿಮಿತ್ತ ನಾನು ದೃಷ್ಟಿಹೀನನಾದೆ. ಜೊತೆಯಲ್ಲಿದ್ದವರು ನನ್ನನ್ನು ದಮಸ್ಕಸಿಗೆ ಕೈ ಹಿಡಿದು ನಡೆಸಿಕೊಂಡು ಹೋದರು.

12“ದಮಸ್ಕಸಿನಲ್ಲಿ ಅನನೀಯ ಎಂಬ ಒಬ್ಬ ವ್ಯಕ್ತಿ ಇದ್ದನು. ಅವನು ಧರ್ಮಶಾಸ್ತ್ರಕ್ಕೆ ಪ್ರಾಮಾಣಿಕನಾಗಿ ಬಾಳಿದವನು. ಆ ಊರಿನ ಸಮಸ್ತ ಯೆಹೂದ್ಯರಿಂದ ಸನ್ಮಾನಿತನು. 13ಅವನು ಬಂದು ನನ್ನ ಬಳಿ ನಿಂತು, ‘ಸಹೋದರ ಸೌಲನೇ, ದೃಷ್ಟಿಯನ್ನು ಪಡೆ,’ ಎಂದನು. ಆ ಕ್ಷಣವೇ ನಾನು ದೃಷ್ಟಿಪಡೆದು ಅವನನ್ನು ನೋಡಿದೆ. 14ಆಗ ಅವನು, ‘ನಮ್ಮ ಪೂರ್ವಜರ ದೇವರು ತಮ್ಮ ಚಿತ್ತವನ್ನು ನೀನು ಅರಿಯಬೇಕೆಂದು, ತಮ್ಮ ಸತ್ಯ ಸ್ವರೂಪಿಯನ್ನು ನೀನು ನೋಡಬೇಕೆಂದು, ತಮ್ಮ ಕಂಠಸ್ವರವನ್ನು ನೀನು ಕೇಳಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ. 15ನೀನು ಕಂಡು ಕೇಳಿದ ವಿಷಯಗಳಿಗೆ ನೀನೇ ಎಲ್ಲ ಜನರಿಗೆ ಅವರ ಪರವಾಗಿ ಸಾಕ್ಷಿಯಾಗಬೇಕು. 16ಇನ್ನು ತಡಮಾಡುವುದೇಕೆ? ಏಳು, ಅವರ ನಾಮವನ್ನು ಜಪಿಸಿ, ದೀಕ್ಷಾಸ್ನಾನವನ್ನು ಪಡೆದು ನಿನ್ನ ಪಾಪಗಳನ್ನು ತೊಳೆದುಕೊ,’ ಎಂದನು.



ಕೀರ್ತನೆ 
        
ಶ್ಲೋಕ: ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ


1: ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ /
    ಆತನನು ಹೊಗಳಿ ಹಾಡಿ ಸರ್ವಜನಾಂಗಗಳೇ //  

2: ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ /
    ಆತನ ಸತ್ಯಪರತೆ ಇರುವುದು ಅನಂತ ಕಾಲ /
    ಪ್ರಭುವಿನ ಪ್ರೀತಿ ಶಾಶ್ವತ//




ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

15ಬಳಿಕ ಅವರಿಗೆ, 'ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. 16ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು. ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು. 17ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು; 18ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣಹೊಂದುವರು, ಎಂದರು. 



ಚಿಂತನೆ
ಪ್ರೇಷಿತ ಸಂತ ಪೌಲನ ಮನಪರಿವರ್ತನೆ

ಕ್ರೈಸ್ತ ಧರ್ಮ ಕಂಡ ಅತ್ಯಂತ ಶ್ರೇಷ್ಠ ಧರ್ಮಪ್ರಚಾರಕ, ಧಾರ್ಮಿಕ ಮೇಧಾವಿ ಎಂದರೆ ಅದು ಸಂತ ಪೌಲ. ಪೌಲ ತನ್ನ ಮನಪರಿವರ್ತನೆಯ ಮೊದಲು ಕ್ರೈಸ್ತರನ್ನು ಹಿಂಸಿಸುತ್ತಿದ್ದ (ಪ್ರೇಷಿತರ ಕಾರ್ಯ ಕಲಾಪ 7:6೦). ಕ್ರೈಸ್ತರನ್ನು ಹಿಂಸಿಸಲು ಆತ ಡಮಸ್ಕಸಿಗೆ ಹೋಗುವ ಹಾದಿಯಲ್ಲಿ ಪುನರುತ್ಥಾನರಾದ ಕ್ರಿಸ್ತನ ಅನುಭವ ದರ್ಶನದಿಂದ ಸಂಪೂರ್ಣ ಹೊಸ ಮನುಷ್ಯನಾಗುತ್ತಾನೆ.

ಪೌಲನ ಮತ್ತೊಂದು ಹೆಸರು ಸೌಲ. ಪೌಲ ಎರಡು ಪೌರತ್ವ ಹೊಂದಿದ್ದ: ಯೆಹೂದ್ಯ ಪೌರತ್ವ ಮತ್ತು ರೋಮಿನ ಪೌರತ್ವ; ಹಾಗಾಗಿ ಅವನಿಗೆ ಎರಡು ಹೆಸರಿತ್ತು. ಸೌಲ ಎಂಬುದು ಆತನ ಯೆಹೂದಿ ಹೆಸರಾದರೆ ಪೌಲ ರೋಮಿನ ಹೆಸರಾಗಿತ್ತು. ಡಮಸ್ಕಸ್ಸಿನ ದಾರಿಯಲ್ಲಿ ಪೌಲನಿಗಾದ ಅನುಭವ ಇಂದು ನಮಗೂ ಆಗಬೇಕು. ಕ್ರೈಸ್ತರನ್ನು ಹಿಂಸಿಸುತ್ತಿದ್ದ ಪೌಲ ಪರಿವರ್ತನೆಯ ನಂತರ ಕ್ರಿಸ್ತನಿಗೆ ಸಾಕ್ಷಿಯಾಗಿ ಜೀವಿಸಿ, ರಕ್ತ ಸಾಕ್ಷಿಯಾಗುತ್ತಾನೆ.


ಇಂದಿನ ಸಂತರು
ಪ್ರೇಷಿತ ಸಂತ ಪೌಲ


ಶ್ರೀಗ್ರಂಥ ಬೈಬಲ್‌ನ ಹೊಸಒಡಂಬಡಿಕೆಯಲ್ಲಿ, ಆದಿ ಕ್ರೈಸ್ತರನ್ನು ಕಡುವೈರಿಗಳೆಂದು ದ್ವೇಷಿಸುತ್ತಾ ಅವರನ್ನು ಹಿಂಸಿಸುತ್ತಿದ್ದ ಪೌಲರು ಮನಪರಿವರ್ತನೆಗೊಂಡು ಪ್ರಭು ಯೇಸುಕ್ರಿಸ್ತರ ಅನಯಾಯಿಯಾಗುವ ಪ್ರಸಂಗ ಕ್ರೈಸ್ತ ಧರ್ಮದ ಇತಿಹಾಸದಲ್ಲಿನ ಒಂದು ಮಹತ್ವದ ಹೆಜ್ಜೆಗುರುತಾಗಿದೆ. ಈ ಪವಾಡ ಘಟನೆ ಕ್ರಿಸ್ತಶಕ 33 ರಿಂದ 36 ಸುಮಾರಿನಲ್ಲಿ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಈ ಘಟನೆಯನ್ನು ಸ್ಮರಿಸುವ ಸಲುವಾಗಿ ಕಥೋಲಿಕ ಧರ್ಮಸಭೆ, ಆಂಗ್ಲಿಕನ್ ಮತ್ತು ಲೂಥರನ್ ಧರ್ಮಸಭೆಗಳು ಜನವರಿ 25ರಂದು ಹಬ್ಬವನ್ನು ಆಚರಿಸುವ ಪರಿಪಾಠ ರೂಢಿಸಿಕೊಂಡಿವೆ. 

ಪ್ರೇಷಿತ ಸಂತ ಪೌಲರು ಯೆಹೂದಿಗಳ ಬೆಂಜಾಮಿನ್ ಕುಲಕ್ಕೆ ಸೇರಿದ ಫರಿಸೇಯ. ಅವರ ಮೂಲ ನೆಲೆ ಗಲಿಲಿಯಾ. ಅವರ ತಂದೆಯಾಯಿಗಳು ಟರ್ಕಿಯ ತಾರ್ಸದಲ್ಲಿ ನೆಲೆಸಿದ್ದರು. ಯೆಹೂದಿ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಅವರ ತಂದೆ ತಾಯಿ, ಸುನ್ನತಿಯ ಸಂದರ್ಭದಲ್ಲಿ ಅವರಿಗೆ ಯೆಹೂದಿ ಅರಸನಾದ 'ಸೌಲ'ನ ಹೆಸರನ್ನೇ ಇವರಿಗೂ ಇಟ್ಟರು. ಮುಂದೆ ರೋಮನ್ ಸಾಮ್ರಾಜ್ಯದ ಪ್ರಜೆಯಾದಾಗ. ಅಂದಿನ ಸಂಪ್ರದಾಯದಂತೆ ರೋಮನ್ ಹೆಸರಾದ ಪೌಲಸ್ ಎಂತಲೂ ಅವರನ್ನು ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತಿದ್ದರೂ ಬೈಬಲ್‌ನ ಪ್ರಕಾರ 'ಸೌಲ'ನ ಹೆಸರು ಮೊದಲ ಬಾರಿ 'ಪೌಲ್‌' ಎಂದು ಕರೆಯಲ್ಪಟ್ಟದ್ದು 'ಸೈಪ್ರಸ್‌' ದ್ವೀಪದಲ್ಲಿ. ಇದಕ್ಕೆ ಮೊದಲು ಯೇಸುಕ್ರಿಸ್ತರ ವಾಣಿ ಪೌಲನನ್ನು ಕರೆಯುವುದು ಸೌಲನೆಂದೇ. ಯೇಸುವಿನ ಆಜ್ಞೆಯ ಮೇರೆಗೆ ಸೌಲನ ಬಳಿಗೆ ತೆರಳುವ ಅನನೀಯನು ಸಹ, 'ಸೌಲ'('ಸಹೋದರ ಸೌಲ...)ನೆಂದೇ ಉಚ್ಚರಿಸುತ್ತಾನೆ. ಸೌಲನ ಹೆಸರು ಪೌಲನೆಂದಾಗುವುದು ಸೈಪ್ರಸ್‌ ದ್ವೀಪದ ಪಾಪೋಸ್‌ ಎಂಬಲ್ಲಿ; ಬಾರ್‌ಯೇಸು ಎಂಬ ಮಂತ್ರವಾದಿಯನ್ನು ಎದುರುಗೊಂಡಾಗ ಎಂಬುದು ಬೈಬಲ್‌ ಗ್ರಂಥದಿಂದ ತಿಳಿದು ಬರುತ್ತದೆ.

ಅವರ ಮನೆ ಮಾತು ಅರಮೈಕ್ ಬಾಷೆ. ಜೊತೆಗೆ ಗ್ರೀಕ್ ಭಾಷೆಯಲ್ಲೂ ಪೌಲರು ಪ್ರೌಢಿಮೆಯನ್ನು ಗಳಿಸಿದ್ದರು. ಬಾಲ್ಯದಲ್ಲೇ ಅವರನ್ನು ಜೆರುಸಲೇಮಿಗೆ ಕಳುಹಿಸಿ ಹಿಬ್ರೂ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗಿತ್ತು. ಪ್ರಭು ಯೇಸುಸ್ವಾಮಿಯ ಶಿಲುಬೆ ಮರಣದವರೆಗೆ, ಅವರ ಹಸರು ಸಂತ ಪೌಲರಿಗೆ ಗೊತ್ತೇ ಇರಲಿಲ್ಲ. ಪ್ರಭು ಯೇಸುಸ್ವಾಮಿಯ ಅನುಯಾಯಿಯಾಗುವ ಮೊದಲು ಪೌಲರು, ಯೆಹೂದಿಗಳ ಪ್ರಧಾನ ಯಾಜಕರ ಪ್ರಭಾವಕ್ಕೊಳಗಾಗಿ ಕ್ರೈಸ್ತರ ಕಡು ವಿರೋಧಿಯಾಗುತ್ತಾರೆ. ಪ್ರಧಾನ ಯಾಜಕರ ಅಪ್ಪಣೆಯ ಮೇರೆಗೆ ಪ್ರಭು ಯೇಸುಕ್ರಿಸ್ತರ ಅನುಯಾಯಿಗಳನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಜೆರುಸಲೇಮಿಗೆ ಕರೆದೊಯ್ಯಲು ಡಮಾಸ್ಕಸ್‌ಗೆ ಹೊರಡುತ್ತಾರೆ. ಸಾಧ್ಯವಾದರೆ ಅವರನ್ನು ವಿಚಾರಣೆಗೊಳಪಡಿಸಿ ಮರಣದಂಡನೆ ವಿಧಿಸುವುದೂ ಆತನ ಉದ್ದೇಶವಾಗಿರುತ್ತದೆ. ಅವನು ಪಟ್ಟಣವನ್ನು ಸಮೀಪಿಸುತ್ತಿದ್ದಂತೆ, ಇದ್ದಕಿದ್ದ ಹಾಗೆ ಆಕಾಶದಿಂದ ಪ್ರಖರ ಬೆಳಕೊಂದು ಮಿಂಚಿ ಅವನ ಸುತ್ತಲೂ ಆವರಿಸುತ್ತದೆ. ಅವನು ನೆಲಕ್ಕುರುಳುತ್ತಾನೆ. ಆಗ, “ಸೌಲನೇ ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ” ಎಂಬ ವಾಣಿ ಅವನಿಗೆ ಕೇಳಿಸುತ್ತದೆ. ಆ ವಾಣಿಯನ್ನು ಕೇಳಿದ ಅವನು, “ಪ್ರಭೂ ನೀವಾರು?” ಎನ್ನುತ್ತಾನೆ.  ಆ ವಾಣಿಯು “ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು, ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆಂದು ಅಲ್ಲಿ ನಿನಗೆ ತಿಳಿಸಲಾಗುವುದು” ಎಂದು ಹೇಳುತ್ತದೆ. ಅವನೊಂದಿಗೆ ಪ್ರಯಾಣ ಮಾಡುತ್ತಿದ್ದವರಿಗೂ ಆ ವಾಣಿ ಕೇಳಿಸಿತಾದರೂ, ಯಾರೂ ಕಾಣಿಸಿರಲಿಲ್ಲ. ಅವನು ಎದ್ದು ನಿಂತು ಕಣ್ಣು ತೆರೆದು ನೋಡಿದರೆ ಅವನಿಗೆ ಏನೂ ಕಾಣಿಸುವುದಿಲ್ಲ. ಅವನೊಂದಿಗಿದ್ದ ಇತರರು ಅವನ ಕೈ ಹಿಡಿದು ದಮಸ್ಕಸ್‌ಗೆ ಕರೆದುಕೊಂಡು ಹೋಗುತ್ತಾರೆ. 

ಮೂರು ದಿನಗಳ ಕಾಲ ಅವನ ಕಣ್ಣುಗಳು ದೃಷ್ಟಿಯನ್ನು ಕಳೆದುಕೊಳ್ಳುತ್ತವೆ. ಅವನು ಅನ್ನ ನೀರು ಬಿಡುತ್ತಾನೆ. ದಮಸ್ಕಸ್‌ನಲ್ಲಿದ್ದ ಅನನೀಯ ಎಂಬುವವನಿಗೆ ದರ್ಶನಕೊಡುವ ಯೇಸುಕ್ರಿಸ್ತರು ಅವನಿಗೆ, 'ನೇರಬೀದಿ ಎಂಬ ಹಾದಿಗೆ ಹೋಗಿ, ಯೂದನ ಮನೆಯಲ್ಲಿರುವ ತಾರ್ಸದ ಸೌಲನ ಮೇಲೆ ಕೈ ಇರಿಸಿ ಅವನಿಗೆ ದೃಷ್ಟಿ ಬರುವಂತೆ ಮಾಡು' ಎಂದು ತಿಳಿಸುತ್ತಾರೆ. ಕ್ರೈಸ್ತರ ಮೇಲಿನ ಸೌಲನ ದುಂಡಾವರ್ತನೆಯ ಬಗ್ಗೆ ಕೇಳಿ ತಿಳಿದಿದ್ದ ಅನನೀಯನು ಮೊದಲು ಅಧೀರನಾದರೂ, ಪ್ರಭು ಯೇಸುಕ್ರಿಸ್ತರ ಆಣತಿಯಂತೆ ನಡೆದುಕೊಳ್ಳುತ್ತಾನೆ. ಸೌಲನಿದ್ದ ಮನೆಯನ್ನು ತಲುಪಿ, ಅವನ ಮೇಲೆ ಕೈ ಇರಿಸಿ, “ಸಹೋದರ ಸೌಲನೇ, ನೀನಿಲ್ಲಿಗೆ ಬರುವಾಗ ದಾರಿಯಲ್ಲಿ ನಿನಗೆ ದರ್ಶನಕೊಟ್ಟ ಯೇಸುಸ್ವಾಮಿ, ನೀನು ಮರಳಿ ದೃಷ್ಟಿಯನ್ನು ಪಡೆಯುವುದಕ್ಕಾಗಿಯೂ ಮತ್ತು ಪವಿತ್ರಾತ್ಮಭರಿತನಾಗುವುದಕ್ಕಾಗಿಯು ನನ್ನನ್ನು ಕಳುಹಿಸಿದ್ದಾರೆ” ಎನ್ನಲು ಸೌಲನಿಗೆ ಕಳೆದುಹೋಗಿದ್ದ ಕಣ್ಣಿನ ದೃಷ್ಟಿ ಮತ್ತೆ ದೊರಕುತ್ತದೆ. ಅವನೆದ್ದು ದೀಕ್ಷಾಸ್ನಾನ ಪಡೆಯುತ್ತಾನೆ. 

ಊಟ ಮಾಡಿದ ನಂತರ ಅವನ ಮೈಯಲ್ಲಿ ಮೊದಲಿನಂತೆ ಶಕ್ತಿಸಂಚಯವಾಗುತ್ತದೆ. ಕೆಲವು ದಿನ ದಮಸ್ಕಸ್‌ನಲ್ಲೇ ಉಳಿಯುವ ಸೌಲನು, ಅದುವರೆಗೂ ಕ್ರೈಸ್ತರನ್ನು ಬಲಿ ಹಾಕುತ್ತಿದ್ದವನು, ಯೆಹೂದ್ಯರ ಪ್ರಾರ್ಥನಾ ಮಂದಿರಗಳಿಗೆ ತೆರಳಿ, ‘ಯೇಸುವೇ ದೇವರ ಪುತ್ರ’ ಎಂದು ಸಾರಲಾರಂಭಿಸುತ್ತಾನೆ. ದೇವರು ತಮ್ಮ ಯೋಜನೆಯ ಜಾರಿಗೆ ಕಡುವೈರಿಯನ್ನೇ ಬಳಸಿಕೊಳ್ಳಬಲ್ಲರು. ಕ್ರೈಸ್ತರನ್ನು ಹುಡುಕಿ ಹುಡುಕಿ ಪತ್ತೆ ಹಚ್ಚಿ ಹಿಂಸಿಸುತ್ತಾ, ಅವರನ್ನು ಕೊಲ್ಲುವ ಕಾಯಕದಲ್ಲಿ ತೊಡಗಿದ್ದ ಸೌಲ ಕ್ರೈಸ್ತ ಧರ್ಮದ ಕಟ್ಟಾ ಬೆಂಬಲಿಗನಾಗುವ, ಧರ್ಮ ಪ್ರಚಾರಕನಾಗುವ ಈ ಚಮತ್ಕಾರಿಕ ಘಟನೆಯನ್ನು ದೈವ ಕರುಣೆ ಎಂದು ಬಣ್ಣಿಸಲಾಗುತ್ತದೆ


ಚಿತ್ರ: ಗೂಗಲ್ಕೃಪೆ
© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment