ಜನವರಿ ೨೪, ೨೦೧೯


ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

 24 ಜನವರಿ 2೦19


ಗುರುವಾರ/ಬಿಳಿ/ಸಂತ ಫ್ರಾನ್ಸಿಸ್ ದಿ ಸೇಲ್ಸ್ ಧರ್ಮಾ ಮತ್ತು ಧ.ಪಂ (ಸ್ಮರಣೆ)
1ನೇ  ವಾಚನ  -  ಹಿಬ್ರಿ  7:  25-8:  6
ಕೀರ್ತನೆ  -  4೦:  6-1೦.16
ಶುಭಸಂದೇಶ  -  ಮಾರ್ಕ  3:7-12



ವಾಚನಗಳು
ಮೊದಲನೇ  ವಾಚನ

ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ

7:25ಆದಕಾರಣ, ತಮ್ಮ ಮುಖಾಂತರ ದೇವರನ್ನು ಅರಸುವವರನ್ನು ಯೇಸು ಸಂಪೂರ್ಣವಾಗಿ ಉದ್ಧಾರಮಾಡಬಲ್ಲರು. ಅಂಥವರ ಪರವಾಗಿ ವಿಜ್ಞಾಪಿಸಲೆಂದೇ ಯೇಸು ಸದಾ ಬದುಕಿರುವರು.

26ನಮಗೆ ಬೇಕಾಗಿದ್ದ ಪ್ರಧಾನ ಯಾಜಕರು ಯೇಸುವೇ. ಇವರು ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರು, ಗಗನಮಂಡಲಗಳಿಗಿಂತಲೂ ಉನ್ನತದಲ್ಲಿರುವವರು. 27ಇವರು ಮಿಕ್ಕ ಪ್ರಧಾನ ಯಾಜಕರಂತೆ ಮೊದಲು ಸ್ವಂತ ಪಾಪಗಳಿಗಾಗಿಯೂ ಅನಂತರ ಜನರ ಪಾಪಗಳಿಗಾಗಿಯೂ ದಿನಂಪ್ರತಿ ಪರಿಹಾರಬಲಿಯನ್ನು ಒಪ್ಪಿಸಬೇಕಾಗಿಲ್ಲ. ಏಕೆಂದರೆ, ಜನರ ಪಾಪಪರಿಹಾರಕ್ಕಾಗಿ ಒಮ್ಮೆಗೇ ಶಾಶ್ವತವಾಗಿ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಂಡರು. 28ಧರ್ಮಶಾಸ್ತ್ರ ನೇಮಿಸುವ ಪ್ರಧಾನ ಯಾಜಕರು ಕುಂದು ಕೊರತೆಯುಳ್ಳ ಮಾನವರು. ಆದರೆ, ಧರ್ಮಶಾಸ್ತ್ರದ ತರುವಾಯ ಬಂದ ಹಾಗೂ ಶಪಥದಿಂದ ಕೂಡಿದ ದೈವವಾಕ್ಯವು ಸದಾ ಸರ್ವಸಂಪೂರ್ಣರಾದ ಪುತ್ರನನ್ನೇ ಪ್ರಧಾನ ಯಾಜಕರನ್ನಾಗಿ ನೇಮಿಸುತ್ತದೆ. 8:1ಈಗ ಹೇಳುತ್ತಿರುವುದರ ಮುಖ್ಯಾಂಶ ಏನೆಂದರೆ: ಸ್ವರ್ಗದಲ್ಲಿ ಮಹೋನ್ನತ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿರುವಂಥ ಪ್ರಧಾನ ಯಾಜಕ ನಮಗಿದ್ದಾರೆ. 2ಅಲ್ಲಿ, ಆ ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ದೇವರಿಂದಲೇ ನಿರ್ಮಿತವಾದ ನಿಜವಾದ ಗರ್ಭಗುಡಿಯಲ್ಲಿ, ಅವರು ಯಾಜಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

3ಪ್ರತಿಯೊಬ್ಬ ಪ್ರಧಾನಯಾಜಕನು ಕಾಣಿಕೆಗಳನ್ನೂ ಬಲಿಗಳನ್ನೂ ಅರ್ಪಿಸುವುದಕ್ಕಾಗಿಯೇ ನೇಮಕಗೊಂಡಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ನಮ್ಮ ಈ ಪ್ರಧಾನಯಾಜಕರಿಗೂ ಏನಾದರೂ ಇರಲೇಬೇಕು. 4ಇವರು ಧರೆಯಲ್ಲೇ ಇದ್ದಿದ್ದರೆ ಯಾಜಕರಾಗಿರುತ್ತಿರಲಿಲ್ಲ. ಏಕೆಂದರೆ ಧರ್ಮಶಾಸ್ತ್ರ ವಿಧಿಸುವ ಕಾಣಿಕೆಗಳನ್ನು ಸಮರ್ಪಿಸುವುದಕ್ಕೆ ಬೇರೆ ಯಾಜಕರು ಇದ್ದಾರೆ. 5ಸ್ವರ್ಗೀಯ ಗರ್ಭಗುಡಿಯ ಚಿಹ್ನೆ ಹಾಗೂ ಛಾಯೆಯಾಗಿರುವ ಆಲಯಗಳಲ್ಲಿ ಇಲ್ಲಿಯ ಯಾಜಕರು ಉಪಾಸನೆ ಮಾಡುತ್ತಾರೆ. ಮೋಶೆ ಗರ್ಭಗುಡಿಯನ್ನು ನಿರ್ಮಿಸಲು ಆರಂಭಿಸಿದಾಗ, ದೇವರು ಆತನಿಗೆ, ಬೆಟ್ಟದ ಮೇಲೆ ನಾನು ತೋರಿಸಿದ ನಕ್ಷೆಯ ಪ್ರಕಾರವೇ ನೀನು ಎಲ್ಲವನ್ನೂ ನಿರ್ಮಿಸಬೇಕು, ಎಂದು ಆಜ್ಞೆಯನ್ನಿತ್ತರು. 6ಯೇಸು, ಆ ಯಾಜಕರ ಸೇವೆಗಿಂತಲೂ ಶ್ರೇಷ್ಠವಾದ ಯಾಜಕಸೇವೆಯನ್ನು ಕೈಗೊಂಡಿದ್ದಾರೆ. ಯೇಸುವನ್ನು ಮಧ್ಯಸ್ಥರನ್ನಾಗಿ ಪಡೆದಿರುವ ಒಡಂಬಡಿಕೆಯು ಅಷ್ಟೇ ಶ್ರೇಷ್ಠವಾದುದು. ಏಕೆಂದರೆ ಅದು, ಹಿಂದಿನ ವಾಗ್ದಾನಗಳಿಗಿಂತಲೂ ಉತ್ತಮವಾದ ವಾಗ್ದಾನಗಳನ್ನು ಆಧರಿಸಿದೆ.



ಕೀರ್ತನೆ 
        


ಶ್ಲೋಕ: ಪ್ರಭೂ, ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ

7 :   ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ | 
       ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? ||

8 :   ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ | 
       ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ”||

9 :   ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ |
       ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ ||

10 : ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು | 
       ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು | 
       ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು ||

17 : ಬಡವನು, ದುರ್ಬಲನು ಆದೆನಗೆ ಪ್ರಭೂ, ನೀ ಹಿತಚಿಂತಕನು |
       ತಡಮಾಡಬೇಡ ದೇವಾ, ನೀನೆನಗುದ್ಧಾರಕನು, ಸಹಾಯಕನು ||




ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ

7ಯೇಸುಸ್ವಾಮಿ ತಮ್ಮ ಶಿಷ್ಯರ ಜೊತೆಯಲ್ಲಿ ಗಲಿಲೇಯ ಸರೋವರದ ತೀರಕ್ಕೆ ಹೊರಟು ಹೋದರು. ಸಾವಿರಾರು ಜನರು ಅವರನ್ನು ಹಿಂಬಾಲಿಸಿದರು. 8ಈ ಜನರು ಯೇಸು ಮಾಡುತ್ತಿದ್ದ ಮಹತ್ಕಾರ್ಯಗಳ ಸಮಾಚಾರವನ್ನು ಕೇಳಿ, ಗಲಿಲೇಯ ಪ್ರಾಂತ್ಯದಿಂದ, ಜುದೇಯ ಪ್ರಾಂತ್ಯದಿಂದ, ಜೆರುಸಲೇಮ್ ನಗರದಿಂದ, ಇದುಮೇಯ ಪ್ರಾಂತ್ಯದಿಂದ, ಜೋರ್ಡನ್ ನದಿಯ ಪೂರ್ವ ಪ್ರದೇಶ ಹಾಗೂ ಟೈರ್-ಸಿದೋನ್ ಪಟ್ಟಣಗಳ ಸುತ್ತಮುತ್ತಲಿಂದ ಬಂದಿದ್ದರು. 9ಜನಸಂದಣಿ ಅಧಿಕವಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು, ತಮಗೆ ಒಂದು ದೋಣಿಯನ್ನು ಸಿದ್ಧವಾಗಿಡಲು ಶಿಷ್ಯರಿಗೆ ಹೇಳಿದರು. 10ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಅವರನ್ನು ಮುಟ್ಟಬೇಕೆಂದು ಮುನ್ನುಗ್ಗಿ ಮೇಲೆ ಮೇಲೆ ಬೀಳುತ್ತಿದ್ದರು. 11ದೆವ್ವಗಳು ಸಹ ಅವರನ್ನು ಕಂಡಾಗಲೆಲ್ಲಾ ಅವರ ಪಾದಕ್ಕೆರಗಿ, ನೀವು ದೇವರ ಪುತ್ರ, ಎಂದು ಕಿರುಚುತ್ತಿದ್ದವು. 12ಆದರೆ ಯೇಸು, ತಾವು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡುತ್ತಿದ್ದರು. 



ಚಿಂತನೆ

ಸಂತ ಫ್ರಾನ್ಸಿಸ್ ದೆ ಸೇಲ್ಸ್


ಫ್ರಾನ್ಸಿಸ್ ದೆ ಸೇಲ್ಸ್ ಹುಟ್ಟಿದ್ದು 1567ರಲ್ಲಿ, ಫ್ರಾನ್ಸ್ ದೇಶದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ಇವರು ಧರ್ಮಗುರುವಾಗಬೇಕೆಂದು ಬಯಸಿದ್ದರು. ತಮ್ಮ ಬಯಕೆಯಂತೆ 1593ರಲ್ಲಿ ಗುರುದೀಕ್ಷೆಯನ್ನು ಸ್ವೀಕರಿಸುತ್ತಾರೆ. ತದನಂತರ ಜಿನೀವಾದ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಇವರ ನಯ, ವಿನಯ, ಪ್ರೀತಿ. ಕರುಣೆ ಜನರನ್ನು ಆಕರ್ಷಿಸಿತ್ತದೆ. ಧರ್ಮಸಭೆಯಿಂದ ಹೊರನಡೆದ ಸಾವಿರಾರು ಜನರನ್ನು ಕ್ಯಾಲ್ವಿನಿಸ್ಟ್ ನಿಂದ ಮತ್ತೆ ಮರಳಿ ಕಥೋಲಿಕ ಧರ್ಮಸಭೆಗೆ ಕರೆತರುತ್ತಾರೆ. ಇವರು ತಮ್ಮ ಕೈ ಬರಹಗಳ ಮೂಲಕ ಜನರೊಂದಿಗೆ ತಮ್ಮ ಸಂಪರ್ಕ ವೃದ್ಧಿಸುತ್ತಾರೆ.

ಅವರ ಪ್ರಮುಖ ಗ್ರಂಥಗಳು: Introduction to Devout Life’, Treatise on the love of God  ಮತ್ತು Spiritual Conferences. ನಿರಂತರ ಧರ್ಮಸಭೆಯ ಏಳಿಗೆಗೆ ದುಡಿದ ಕ್ರಿಸ್ತನ ಸೇವಕ 1622 ಡಿಸೆಂಬರ್ 28ರಂದು ಮೃತರಾಗುತ್ತಾರೆ. 1665 ಏಪ್ರ್ರಿಲ್ 9ರಂದು ಇವರು ಸಂತರ ಪದವಿಗೆ ಏರುತ್ತಾರೆ.


ಚಿತ್ರ: ಗೂಗಲ್ಕೃಪೆ
© 'ದನಿ' ಮಾಧ್ಯಮ ಮನೆ


ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment