ಫೆಬ್ರವರಿ ೨೧, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

21 ಫೆಬ್ರವರಿ 2೦19


ಗುರುವಾರ / ಹಸಿರು / ಸಾಧಾರಣ ಕಾಲದ ಆರನೇ ವಾರ 
1ನೇ ವಾಚನ - ಆದಿ: 9: 1-13 
ಕೀರ್ತನೆ - 102: 15-17, 18-20, 28, 21-22 
ಶುಭಸಂದೇಶ - ಮಾರ್ಕ8: 27-33 
ಐಚ್ಛಿಕ ಸ್ಮರಣೆ - ಸಂತ ಪೀಟರ್ ಡೇಮಿಯನ್ (ಧರ್ಮಾ ಮತ್ತು ಧ.ಪಂ) 

ವಾಚನಗಳು
ಮೊದಲನೇ  ವಾಚನ


ಆದಿಕಾಂಡದಿಂದ ವಾಚನ
ಆದಿಕಾಂಡ 9:1-13
1ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಹೀಗೆಂದರು - “ನೀವು ಅಭಿವೃದ್ಧಿಯಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ; ಭೂಲೋಕದಲ್ಲೆಲ್ಲ ಹರಡಿಕೊಳ್ಳಿ. 2ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳೂ ಆಕಾಶದ ಎಲ್ಲ ಪಕ್ಷಿಗಳೂ ನೆಲದಮೇಲೆ ಹರಿದಾಡುವ ಎಲ್ಲ ಕ್ರಿಮಿಕೀಟಗಳೂ ಸಮುದ್ರದ ಎಲ್ಲ ವಿೂನುಗಳೂ ನಿಮಗೆ ಹೆದರಿ ಬೆದರುವುವು. ಅವುಗಳನ್ನೆಲ್ಲ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. 3ಭೂಮಿಯ ಮೇಲೆ ಪೈರುಪಚ್ಚೆಯನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. 4ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತಸಮೇತ ತಿನ್ನಬಾರದು. 5ನಿಮ್ಮ ರಕ್ತಸುರಿಸಿ ಪ್ರಾಣತೆಗೆಯುವವರೆಗೆ ಮುಯ್ಯಿ ತೀರಿಸುವೆನು - ಮೃಗವಾಗಿದ್ದರೆ ಅದಕ್ಕೂ, ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿ ತೀರಿಸುವೆನು. 6“ನಿರ್ಮಿಸಿಹರು ದೇವರು ತಮ್ಮ ಸ್ವರೂಪದಲ್ಲಿ ನರನನ್ನು ಎಂತಲೆ ನರನನ್ನು ಕೊಲ್ಲುವವನು ನರನಿಂದಲೇ ಹತನಾಗುವನು. 7ನೀವು ಹೆಚ್ಚಿ ಅಭಿವೃದ್ಧಿಯಾಗಿರಿ, ನಿಮ್ಮ ಸಂಖ್ಯೆ ಬೆಳೆಯಲಿ ಭೂಮಿಯಲ್ಲಿ.” 8ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇಂತೆಂದು ಹೇಳಿದರು: 9“ಕೇಳಿ, ನಾನು ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ 1೦ನಿಮ್ಮ ಕೂಡ ನಾವೆಯಿಂದ ಹೊರಟು ಬಂದ ಪ್ರಾಣಿ-ಪಕ್ಷಿ-ಮೃಗಾದಿ ಸಕಲ ಭೂಜಂತುಗಳನ್ನೂ ಕುರಿತು ಒಂದು ಸ್ಥಿರ ಪ್ರತಿಜ್ಞೆಯನ್ನು ಮಾಡುತ್ತೇನೆ. 11ಆ ಪ್ರತಿಜ್ಞೆ ಏನೆಂದರೆ - "ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಳಯದಿಂದ ನಾಶಮಾಡುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವುದೇ ಇಲ್ಲ.”

12ದೇವರು ಮತ್ತೆ ಹೇಳಿದ್ದೇನೆಂದರೆ - “ನಾನು ನಿಮ್ಮನ್ನೂ ನಿಮ್ಮ ಸಂಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಿಗೆ ಮಾಡುವ ಈ ಪ್ರತಿಜ್ಞೆಗೆ 13ಮೇಘಗಳಲ್ಲಿ ನಾನಿಟ್ಟಿರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಕುರುಹು



ಕೀರ್ತನೆ 

ಕೀರ್ತನೆ - 102: 15-17, 18-20, 28, 21-22 
ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು

ಏಕೆನೆ ಪುನರುದ್ಧರಿಸುವನು ಸಿಯೋನನು
ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು
ತಿರಸ್ಕರಿಸನಾತ ನಿರ್ಗತಿಕರ ಮೊರೆಯನು 
ನೆರವೇರಿಸದೆ ಬಿಡನು ಅವರ ಕೋರಿಕೆಯನು 

ಮುಂದಣ ಸಂತತಿಗಿದು ಶಾಸನವಾಗಿರಲಿ
ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ
ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ
ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ 

ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು
ಜನಾಂಗಗಳೂ ರಾಜ್ಯಗಳೂ ಕೂಡಿರಲು 
ಹೊಗಳಲಾಗುವುದು ಪ್ರಭುವಿನ ನಾಮ ಸಿಯೋನಿನಲಿ 
ಆತನ ಗುಣಗಾನವಿರುವುದು ಆ ಜೆರುಸಲೇಮಿನಲಿ


ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ8: 27-33
27ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಪಕ್ಕದಲ್ಲಿರುವ ಹಳ್ಳಿಗಳಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ, ಜನರು ನನ್ನನ್ನು ಯಾರೆಂದು ಹೇಳುತ್ತಾರೆ? ಎಂದು ಶಿಷ್ಯರನ್ನು ಕೇಳಿದರು. 28ಅದಕ್ಕೆ ಶಿಷ್ಯರು, ಕೆಲವರು ತಮ್ಮನ್ನು 'ಸ್ನಾನಿಕ ಯೊವಾನ್ನ' ಎನ್ನುತ್ತಾರೆ. ಇನ್ನು ಕೆಲವರು 'ಎಲೀಯನು,' ಮತ್ತೆ ಕೆಲವರು ಪ್ರವಾದಿಗಳಲ್ಲಿ ತಾವೂ ಒಬ್ಬರು ಎನ್ನುತ್ತಾರೆ, ಎಂದರು. 29ಆಗ ಯೇಸು, ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, ಅಭಿಷಿಕ್ತರಾದ ಲೋಕೋದ್ಧಾರಕ ತಾವೇ ಎಂದು ಉತ್ತರವಿತ್ತನು. 30ಆಗ ಯೇಸು, ಈ ವಿಷಯವನ್ನು ಯಾರಿಗೂ ತಿಳಿಸಬೇಡಿ, ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು. 31ಈ ಘಟನೆಯ ಬಳಿಕ ಯೇಸುಸ್ವಾಮಿ, ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಪ್ರಧಾನ ಯಾಜಕರಿಂದಲೂ ಧರ್ಮಶಾಸ್ತ್ರಿ ಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು; ಆದರೆ ಮೂರನೇ ದಿನ ಪುನರುತ್ಥಾನ ಹೊಂದುವನು, ಎಂದು ತಮ್ಮ ಶಿಷ್ಯರಿಗೆ ಮುಚ್ಚು ಮರೆಯಿಲ್ಲದೆ ಬೋಧಿಸಲಾರಂಭಿಸಿದರು. 32ಇದನ್ನು ಕೇಳಲಾಗದೇ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು, ತಾವು ಹೀಗೆಲ್ಲಾ ಹೇಳಬಾರದು, ಎಂದು ಪ್ರತಿಭಟಿಸಿದನು. 33ಆಗ ಯೇಸು ಹಿಂದಕ್ಕೆ ತಿರುಗಿ, ತಮ್ಮ ಶಿಷ್ಯರನ್ನು ನೋಡಿ, ಪೇತ್ರನನ್ನು ಗದರಿಸುತ್ತಾ, ಸೈತಾನನೇ, ತೊಲಗು ಇಲ್ಲಿಂದ; ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ, ಎಂದರು.

ಚಿಂತನೆ
ಕ್ರಿಸ್ತ ಯಾತನೆ ಮತ್ತು ಮರಣದ ಮುನ್ಸೂಚನೆ
ಫಿಲಿಪ್ಪಿನ ಸೆಜೆರೇಯ ಪ್ರಾಂತ್ಯವು ಗಲಿಲೇಯದಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ. ಈ ಪಟ್ಟಣವನ್ನು ಮೊದಲು ಪಾನಿಯಸ್ ಎಂದು ಕರೆಯಲಾಗುತ್ತಿತ್ತು. ಈ ಪಟ್ಟಣದಲ್ಲಿ `ಪಾನ್' ಗುಡಿಯನ್ನು ನಿರ್ಮಿಸಲಾಗಿತ್ತು. ಫಿಲಿಪ್ಪನು ಸಾಮಂತ ರಾಜನಾಗಿದ್ದಾಗ, ಪಾಳು ಬೀಳುತ್ತಿದ್ದ ಈ ನಗರವನ್ನು ದುರಸ್ತಿಪಡಿಸಿ ರೋಮನ್ ಚಕ್ರವರ್ತಿಯ ಸೆಜರಿಯನ ಸವಿನೆನಪಿಗೆ `ಸೆಜರೇಯ' ಎಂದು ಹೆಸರಿಡುತ್ತಾನೆ. ಸೀಜರ್ಗೆ ಕೃತಜ್ಞತೆ ತೋರಿಸುವ ಸಲುವಾಗಿ ಸುಂದರ ದೇವಾಲಯವನ್ನು ಕಟ್ಟಿಸುತ್ತಾನೆ. ಹಾಗಾಗಿ ಅದು ಅನ್ಯ ದೇವರನ್ನು ಪೂಜಿಸುತ್ತಿದ್ದ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಇಂದಿನ ಶುಭಸಂದೇಶವನ್ನು ಅರ್ಥಮಾಡಿಕೊಳ್ಳಬೇಕಿದೆ. ಮೊದಲ ಬಾರಿಗೆ ಕ್ರಿಸ್ತ ಇಂದಿನ ಶುಭಸಂದೇಶದಲ್ಲಿ ತಮ್ಮ ಯಾತನೆ ಮತ್ತು ಮರಣವನ್ನು ಮುಂತಿಳಿಸುತ್ತಾರೆ. ಅನ್ಯ ದೇವರನ್ನು ಆರಾಧಿಸುತ್ತಿದ್ದ ಫಿಲಿಪ್ಪನ ಸೆಜೆರೇಯದಲ್ಲಿ ``ಅಭಿಷಿಕ್ತರಾದ ಲೋಕೋದ್ಧಾರಕ ತಾವೇ'' ಎಂದು ಪ್ರಕಟಿಸುತ್ತಾರೆ.


ಇಂದಿನ ಸಂತರು

ಸಂತ ಪೀಟರ್ ಡೇಮಿಯನ್ (1007-1072)

ಇಟಲಿಯ ರವೆನ್ನ ಎಂಬ ಊರಿನಲ್ಲಿ ಜನಿಸಿದ ಇವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಅನಾಥರಾದರು. ತಮ್ಮ ಸಹೋದರರಿಂದಲೇ ಕಷ್ಟ ಅವಮಾನಗಳನ್ನು ಅನುಭವಿಸಿದರೂ ಯಾಜಕರಾಗಿದ್ದ ತಮ್ಮ ಅಣ್ಣ ಡೇಮಿಯನ್ ಆಧ್ಯಾತ್ಮಿಕವಾಗಿಯೂ ಶೈಕ್ಷಣಿಕವಾಗಿಯೂ ಇವರಿಗೆ ನೆರವಾದರು. ತದನಂತರ ಬೆನೆಡಿಕ್ಟೈನ್ ಆಶ್ರಮದಲ್ಲಿ ಸನ್ಯಾಸಿಯಾಗಿ ಕಠಿಣ ತಪಶ್ಚರ್ಯೆಯಲ್ಲಿ ತೊಡಗಿದರು. ತಮ್ಮ ಮಾತು ಹಾಗೂ ಬರವಣಿಗೆಯ ಮೂಲಕ ಧರ್ಮಸಭೆಗೆ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಉಪವಾಸ ಮತ್ತು ಪ್ರಾರ್ಥನೆಯ ಶಕ್ತಿಯ ಬಲದಿಂದ ತಮ್ಮ ಅನುದಿನದ ಬದುಕಿನ ಪ್ರಲೋಭನೆಗಳನ್ನು ಗೆದ್ದು ದೇವರಿಗೆ ಮೆಚ್ಚುಗೆಯಾದ ರೀತಿಯಲ್ಲಿ ಬಾಳಿದ ಈ ಮಹಾನ್ ಸಂತರು ’ಕ್ರಿಸ್ತಪ್ರೇಮ’ವನ್ನೇ ತಮ್ಮ ಬದುಕಿನ ಆದರ್ಶವಾಗಿರಿಸಿಕೊಂಡವರು. ದೀನತೆ, ಸರಳತೆ ಹಾಗೂ ಹೃದಯವಂತಿಕೆಯನ್ನು ಮೈಗೂಡಿಸಿಕೊಂಡು ದೇವರ ಅಪರಿಮಿತ ಪ್ರೀತಿಯನ್ನು ಬೋಧಿಸುವುದರ ಮೂಲಕ ಜನರು ಆ ಪ್ರೀತಿಗೆ ಸ್ಪಂದಿಸಲು ನೆರವಾದರು. ಕಷ್ಟಗಳ ಸುರಿಮಳೆಯಲ್ಲಿ ನೆನೆದು ತೊಪ್ಪೆಯಾದರೂ ಸಹ ಅದೆಲ್ಲದರಲ್ಲಿಯೂ ದೇವರಿಗೆ ಕೃತಜ್ಞತೆ ಸಲ್ಲಿಸುತ್ತ, ಸಮಾಜದಲ್ಲಿನ ನಿಕೃಷ್ಟರ ಸೇವೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಈ ಶ್ರೇಷ್ಠ ಸಂತರ ಆದರ್ಶ ನಮ್ಮೆಲ್ಲರಿಗೂ ಆದರ್ಶವಾಗಿದೆ.
ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment