ನಾವು ಈಗ ಕೈಗೊಳ್ಳುತ್ತಿರುವ ಪ್ರಯಾಣ ಆಧ್ಯಾತ್ಮಿಕ ಪ್ರಯಾಣ. ಜಗತ್ತನ್ನು ಸಮಷ್ಟಿಯಾಗಿ ಗ್ರಹಿಸಲು ಕ್ರಿಸ್ತನ ದೃಷ್ಟಿಕೋನ, ಮಾಪನ ಮತ್ತು ಮನೋಭಾವವನ್ನು ಕಲಿಸಿಕೊಡುವ ಪ್ರಯಾಣವಿದು. ಈ ಪ್ರಯಾಣದ ಕೇಂದ್ರಬಿಂದು ಕ್ರಿಸ್ತ. ಅದರಲ್ಲೂ ಕ್ರಿಸ್ತ ಅನುಭವಿಸಿದ ಯಾತನೆ ಮತ್ತು ಶಿಲುಬೆ ಮರಣವೇ ಈ ಪ್ರಯಾಣದ ಹೆಜ್ಜೆಗಳಲ್ಲಿ ಧ್ಯಾನಿಸುವ ಕಥಾವಸ್ತು. ಸತ್ಯದ ರೂಪಕವೇ ಆಗಿದ್ದ ಕ್ರಿಸ್ತನನ್ನು ಸಾವು ಕೂಡ ಸೋಲಿಸಲಾಗದೆ, ಕ್ರಿಸ್ತನಲ್ಲಿ ಸತ್ಯವು ಅಸತ್ಯವನ್ನು ಗೆದ್ದು ಸಂಭ್ರಮಿಸುವ ಚಲನಚಿತ್ರವಿದು. ಈ ಪ್ರಯಾಣದ ಕೇಂದ್ರಬಿಂದು ಕ್ರಿಸ್ತನಾದರೂ, ಕ್ರಿಸ್ತನ ಸುತ್ತ ಕಟ್ಟಿಕೊಳ್ಳುವ ಅನೇಕ ಪಾತ್ರಗಳಿವೆ. ಇವೆಲ್ಲವೂ ಕ್ರಿಸ್ತನ ನಿಲುವುಗಳನ್ನು ಬೆಂಬಲಿಸುವ ಅಥವಾ ನಿರಾಕರಿಸುವ ಪಾತ್ರಗಳೇ. ಆದರೆ ಈ ಎಲ್ಲಾ ಪಾತ್ರಗಳೂ ಕ್ರಿಸ್ತನ ನಿಲುವುಗಳನ್ನು, ದೃಷ್ಟಿಕೋನವನ್ನು ಸ್ಪಷ್ಟ ಪಡಿಸುವ ಸ್ಫಟಿಕಗಳೇ.
ಕಿಸ್ತನನ್ನು ದಿಟ್ಟಿಸುತ್ತಾ ಬೇರೆ ಪಾತ್ರಗಳನ್ನು ಸಹ ಗಮನಿಸೋಣ. ಆ ಪಾತ್ರಗಳು ಸಹ ನಮ್ಮ ಒಳ್ಳೆತನ ಅಥವಾ ಕೆಟ್ಟತನಗಳನ್ನು ಬಿಂಬಿಸಬಹುದು; ಅಧಿಕಾರದ ಆಸೆಗೆ ಸತ್ಯವನ್ನು ಕೊಲೆ ಮಾಡಿದ ಪಿಲಾತನಿರಬಹುದು, ಅವಮಾನದ ಸಂಕೇತವಾಗಿದ್ದ ಶಿಲುಬೆಯೇ ಇರಬಹುದು, ಮಗನ ಯಾತನೆಯನ್ನು ಕಂಡು ಮಮ್ಮಲ ಮರುಗುವ ಪೂಜ್ಯ ತಾಯಿರಬಹುದು, ಸೈನಿಕರಿಗೆ ಹೆದರಿ ಕ್ರಿಸ್ತನಿಗೆ ಸಹಾಯ ಮಾಡಿದ ಸಿರೇನ್ಯದ ಸಿಮೋನನಿರಬಹುದು, ಸೈನಿಕರ ಕ್ರೂರತನಕ್ಕೆ ಹೆದರದೆ, ಗಾಯಗೊಂಡಿದ್ದ ಕ್ರಿಸ್ತನ ಮುಖವನ್ನು ಒರೆಸುವ ವೆರೋನಿಕಳೇ ಇರಬಹುದು, ಕ್ರಿಸ್ತನಿಗಾದ ಅನ್ಯಾಯವನ್ನು ಕಂಡು ಅಳುವ ಜೆರುಸಲೇಮಿನ ತಾಯಂದಿರಬಹುದು. ಕೊನೆಗೆ ಕ್ರಿಸ್ತನ ಕೊಲೆಸಂಚಿನ ರೂವಾರಿ ಕೈಪಾಸ್, ಅನ್ನಾಸ್ ಮತ್ತು ಫರಿಸಾಯರೇ ಇರಬಹುದು, ಇವರೆಲ್ಲರೂ ನಮ್ಮನ್ನು ಪ್ರತಿಬಿಂಬಿಸುವ ಪಾತ್ರಧಾರಿಗಳೇ.
ಇನ್ನು ಕ್ರಿಸ್ತನ ಯಾತನೆಯ ಪ್ರಯಾಣದಲ್ಲಿ ಕಟ್ಟಿಕೊಳ್ಳುವ ಘಟನೆಗಳು ಸಹ ನಮ್ಮ ಬದುಕುಗಳಲ್ಲಿ ಘಟಿಸುವ ಘಟನೆಗಳೇ. ಅಪಮಾನ, ಶಿಕ್ಷೆ, ಅನ್ಯಾಯ, ಬೀಳುವಿಕೆ, ವಿವಸ್ತ್ರಗೊಳಿಸುವುದು, ಜಡಿಯುವುದು, ಸಾವು, ತಾಯಿಯ ಕಂಬನಿ, ಸಮಾಧಿ, ಚುಚ್ಚುಮಾತುಗಳು, ಅಂತಃಕರಣ ಹೀಗೆ ಎಲ್ಲವೂ ನಮ್ಮ ಬದುಕ ಭಾಗವೇ.
ಹೌದು, ಈ ಎಲ್ಲಾ ಪಾತ್ರಗಳು, ಘಟನೆಗಳು ತೋರುವ ಲೋಕವಿವರಣೆಯನ್ನು ಆಲಿಸೋಣ; ಕಿವಿಯಿಂದ ಮಾತ್ರವಲ್ಲ ಹೃದಯದಿಂದಲ್ಲೂ ಸಹ. ಕೊನೆಗೆ ಈ ಪ್ರಯಾಣವು ನಮ್ಮ ಅರಿವನ್ನು ಜಾಗೃತಗೊಳಿಸಿ ಕ್ರಿಸ್ತನು ಗ್ರಹಿಸಿದ ರೀತಿಯಲ್ಲಿ ಲೋಕವನ್ನು, ನಮ್ಮ ಬದುಕನ್ನು ಗ್ರಹಿಸಲು ಅನುವು ಮಾಡಿ ಕೊಡಲೆಂದು ಪ್ರಾರ್ಥಿಸೋಣ. ಆಮೆನ್
No comments:
Post a Comment