ಫೆಬ್ರವರಿ ೧೪, ೨೦೧೯

ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.

14 ಫೆಬ್ರವರಿ 2೦19

ಗುರುವಾರ / ಬಿಳಿ / ಸಂತ ಸಿರಿಲ್ ಮತ್ತು ಮೆತೋಡಿಯಸ್ (ಧರ್ಮಾ) (ಸ್ಮರಣೆ) 
1ನೇ ವಾಚನ - ಆದಿ 2: 18-25 
ಕೀರ್ತನೆ - 128: 1, 2-3, 4-5 
ಶುಭಸಂದೇಶ - ಮಾರ್ಕ 7: 24-30 

ವಾಚನಗಳು

ಮೊದಲನೇ  ವಾಚನ

ಆದಿಕಾಂಡದಿಂದ ವಾಚನ
ಆದಿ 2: 18-25
18ಅನಂತರ ದೇವರಾದ ಸರ್ವೇಶ್ವರ, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ, ಅವನಿಗೆ ಸರಿಬೀಳುವ ಸಹಕಾರಿಯನ್ನು ಸೃಷ್ಟಿ ಮಾಡುವೆನು,” ಎಂದರು. 19ಎಲ್ಲ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿದ ಅವರು, ಮನುಷ್ಯನು ಇವುಗಳಿಗೆ ಏನೇನು ಹೆಸರಿಡುವನೋ ನೋಡೋಣವೆಂದು ಅವನ ಬಳಿಗೆ ಅವುಗಳನ್ನು ಬರಮಾಡಿದರು. ಆ ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳಿಗೆ ಹೆಸರು ಆಯಿತು. 20ಹೀಗೆ ಮನುಷ್ಯನು ಎಲ್ಲ ಸಾಕು ಪ್ರಾಣಿಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡು ಮೃಗಗಳಿಗೂ ಹೆಸರಿಟ್ಟನು; ಆದರೆ ಅವನಿಗೆ ಸರಿಬೀಳುವ ಜೊತೆಗಾತಿ ಅವುಗಳಲ್ಲಿ ಕಾಣಿಸಲಿಲ್ಲ. 21ಹೀಗಿರುವಲ್ಲಿ ದೇವರಾದ ಸರ್ವೇಶ್ವರ ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿದರು. ಅವನು ನಿದ್ರಿಸುತ್ತಿರುವಾಗ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು.
22ಆ ಎಲುಬನ್ನು ಮಹಿಳೆಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಬರಮಾಡಿದರು. 23ಅವನು ಆಕೆಯನ್ನು ನೋಡಿ ಹೀಗೆಂದನು: ಸರಿ, ನನಗೀಗ ಇವಳು ನನ್ನೆಲುಬಿನ ಎಲುಬು, ನನ್ನೊಡಲಿನ ಒಡಲು ನರನಿಂದ ಉತ್ಪತ್ತಿಯಾದಿವಳನ್ನು ನಾರಿಯೆಂದೇ ಕರೆವರು. 24ಈ ಕಾರಣ, ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಒಡಲಾಗಿ ಬಾಳುವರು. 25ಆ ಸ್ತ್ರೀಪುರುಷರಿಬ್ಬರೂ ಬೆತ್ತಲೆ ಆಗಿದ್ದರೂ ನಾಚಿಕೊಳ್ಳಲಿಲ್ಲ.


ಕೀರ್ತನೆ 

ಕೀರ್ತನೆ 128: 1-2, 3, 4-5
ಹೊಂದುವನು ಆಶೀರ್ವಾದವನು ಪ್ರಭುವಿನಲಿ ಭಯಭಕ್ತಿಯುಳ್ಳವನು

ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು
ಧನ್ಯನು, ಆತನ ಮಾರ್ಗಗಳಲೇ ನಡೆಯುವವನು
ನಿನ್ನ ಕೈಕೆಸರಾದರೆ ಬಾಯಿ ಮೊಸರಾಗುವುದು
ಧನ್ಯನಾಗುವೆ ನೀನು; ನಿನಗೆ ಶುಭವಾಗುವುದು.

ಇರುವಳು ನಿನ್ನ ಪತ್ನಿ ಮನೆಯಲ್ಲಿ
ಫಲಭರಿತ ದ್ರಾಕ್ಷಾಲತೆಯಂತೆ
ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ
ಓಲಿವ್ ಸಸಿಗಳಂತೆ.

ಹೊಂದುವನು ಅಂತಹ ಆಶೀರ್ವಾದವನು
ಪ್ರಭುವಿನಲಿ ಭಯಭಕ್ತಿಯುಳ್ಳವನು

ಸಿಯೋನಿನಲ್ಲಿರುವ ಪ್ರಭು ನಿನ್ನನು ಆಶೀರ್ವದಿಸಲಿ 
ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಜೀವಮಾನದಲಿ.

ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 7: 24-3೦
24ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪಟ್ಟಣಗಳ ಸಮೀಪವಿದ್ದ ಪ್ರದೇಶಕ್ಕೆ ಹೋಗಿ ಒಂದು ಮನೆಯಲ್ಲಿ ಇಳಿದುಕೊಂಡರು. ತಾವು ಜನರ ಕಣ್ಣಿಗೆ ಬೀಳಬಾರದೆಂಬುದು ಅವರ ಇಚ್ಛೆಯಾಗಿದ್ದರೂ ಅದು ಸಾಧ್ಯವಾಗಲಿಲ್ಲ. 25ಹೊರನಾಡಾದ ಸಿರಿಯ ದೇಶದ ಫೆನಿಷ್ಯ ಪ್ರಾಂತ್ಯಕ್ಕೆ ಸೇರಿದ ಗ್ರೀಕ್ ಮಹಿಳೆ ಒಬ್ಬಳು ಅವರ ವಿಷಯವನ್ನು ಕೇಳಿ, ಒಡನೆ ಅಲ್ಲಿಗೆ ಬಂದು ಅವರ ಪಾದಕ್ಕೆರಗಿದಳು. 26ಆಕೆಯ ಚಿಕ್ಕಮಗಳಿಗೆ ದೆವ್ವ ಹಿಡಿದಿತ್ತು. ತನ್ನ ಮಗಳಿಂದ ಪಿಶಾಚಿಯನ್ನು ಹೊರಗಟ್ಟಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು. 27ಆದರೆ ಯೇಸು ಆಕೆಗೆ, "ಮೊದಲು ಮಕ್ಕಳು ತಿಂದು ತೃಪ್ತಿಪಡೆಯಲಿ, ಮಕ್ಕಳ ಆಹಾರವನ್ನು ನಾಯಿಗಳಿಗೆ ಎಸೆಯುವುದು ಸರಿಯಲ್ಲ", ಎಂದರು. 28ಅದಕ್ಕೆ ಆಕೆ, "ಅದು ನಿಜ ಸ್ವಾಮಿ; ಆದರೂ ಮಕ್ಕಳು ತಿಂದುಬಿಟ್ಟ ಚೂರುಪಾರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನುತ್ತವಲ್ಲವೆ?" ಎಂದಳು. 29ಆಕೆಯ ಮಾತುಗಳನ್ನು ಕೇಳಿ ಯೇಸು, "ಚೆನ್ನಾಗಿ ಹೇಳಿದೆ, ನಿಶ್ಚಿಂತೆಯಿಂದ ಮನೆಗೆ ಹಿಂದಿರುಗು. ದೆವ್ವ ನಿನ್ನ ಮಗಳನ್ನು ಬಿಟ್ಟುತೊಲಗಿದೆ", ಎಂದರು. 3೦ಆಕೆ ಮನೆಗೆ ಹೋದಾಗ, ಮಗಳು ಹಾಸಿಗೆಯ ಮೇಲೆ ಸುಖವಾಗಿ ಮಲಗಿರುವುದನ್ನು ಕಂಡಳು. ದೆವ್ವ ಅವಳನ್ನು ಬಿಟ್ಟು ಹೋಗಿತ್ತು. 

ಚಿಂತನೆ

ತಪ್ಪುಗ್ರಹಿಕೆ
ಟೈರ್ ಮತ್ತು ಸಿದೋನ್ ಪಟ್ಟಣಗಳು ಯೆಹೂದ್ಯ ಪ್ರದೇಶಗಳಾಗಿರಲಿಲ್ಲ. ಹಾಗಾಗಿ ಅಲ್ಲಿ ಅನ್ಯ ಧರ್ಮದ ಜನರು ವಾಸಿಸುತ್ತಿದ್ದರು. ಫೆನಿಷ್ಯದ ಮಹಿಳೆ ಯೇಸುವಿನ ಆಗಮನ ತಿಳಿದೊಡನೆ ಅಲ್ಲಿ ಬಂದು ಯೇಸುವಿನ ಪಾದಕ್ಕೆರಗಿ ತನ್ನ ಮಗಳಿಂದ ದೆವ್ವ ಹೊರಗಟ್ಟಲು ಬೇಡಿದಳು. ಈ ಮಹಿಳೆ ಯೇಸುವಿನ ಅದ್ಬುತ ಶಕ್ತಿ ತಿಳಿದು ಬಂದಿರಬೇಕು. ಯೇಸು ಆಕೆಯ ವಿಶ್ವಾಸ ಪರೀಕ್ಷಿಸುವ ಸಲುವಾಗಿ ಆಕೆಯೊಂದಿಗೆ ಕಠೋರವಾಗಿ ಮಾತನಾಡುತ್ತಾರೆ. ಆಕೆಯ ವಿಶ್ವಾಸದ ಆಳವನ್ನು ಅರಿತು ಆಕೆಯ ಮಗಳನ್ನು ಗುಣಪಡಿಸುತ್ತಾರೆ. ಯೆಹೂದ್ಯರಲ್ಲಿ ಒಂದು ತಪ್ಪುಗ್ರಹಿಕೆ ಇತ್ತು. ತಾವು ಮಾತ್ರ ದೇವರ ಮಕ್ಕಳು ಹಾಗೂ ಸ್ವರ್ಗ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೆಂದು; ಯೇಸುಸ್ವಾಮಿ ಈ ಅದ್ಬುತದ ಮೂಲಕ ಎಲ್ಲರೂ ದೇವರ ಮಕ್ಕಳು ಹಾಗೂ ಸ್ವರ್ಗ ಸಾಮ್ರಾಜ್ಯ ಯೆಹೂದ್ಯರ ವೈಯಕ್ತಿಕ ಆಸ್ತಿಯಲ್ಲ ಎಂಬುದನ್ನು ಪ್ರಕಟಿಸುತ್ತಾರೆ.


ಇಂದಿನ ಸಂತರು

ಸಂತರಾದ ಸಿರಿಲ್ ಹಾಗೂ ಮೆತೊಡಿಯುಸ್ (ಕ್ರಿಸ್ತಶಕ 815-885)
ಇವರಿಬ್ಬರೂ ಒಡ ಹುಟ್ಟಿದ ಸಹೋದರರು ಹಾಗೂ ಬೈಝಂಟೈನ್ ಪಂಥದ ಕ್ರೈಸ್ತ ದೈವಶಾಸ್ತ್ರಜ್ಞರಾಗಿದ್ದರು. ಮೂಲತಃ ಧರ್ಮಪ್ರಚಾರಕರಾಗಿದ್ದ ಇವರು ಲ್ಯಾಟಿನ್ ಭಾಷೆಯನ್ನು ಬಿಟ್ಟು ಸ್ಥಳೀಯ ಭಾಷೆಯಲ್ಲಿ ಪೂಜಾ ವಿಧಿಗಳನ್ನು ಪ್ರಾರಂಭಿಸಿದರು. ಸ್ಲಾವ್ ಭಾಷೆಯನ್ನು ಕಲಿತು ಪರಿಣಿತಿ ಪಡೆದು ಬೈಬಲ್ ಶ್ರೀಗ್ರಂಥವನ್ನು ಆ ಭಾಷೆಗೆ ಭಾಷಾಂತರಿಸಿ ಸುವಾರ್ತೆಯನ್ನು ಸಾರಿದರು. ಆದುದರಿಂದಲೇ ಇವರನ್ನು ಸ್ಲಾವ್ ನ ಪ್ರೇಷಿತರು ಎಂದು ಕರೆಯಲಾಗುತ್ತದೆ. ಸ್ಥಳೀಯ ಭಾಷೆಗಳನ್ನು ಪೂಜಾರಾಧನಾ ವಿಧಿಗಳಲ್ಲಿ ಬಳಸಿ ಪರಿಣಾಮಕಾರಿಯಾಗಿ ಧರ್ಮಪ್ರಚಾರ ಮಾಡಬಹುದೆಂಬ ಆಲೋಚನೆಯನ್ನು ಧರ್ಮಸಭೆಗೆ ನೀಡಿದ ಶ್ರೇಷ್ಠ ಸಂತರು ಇವರು. ಇವರ ಆಳವಾದ ದೈವಜ್ಞಾನ ಹಾಗೂ ದೈವಭಕ್ತಿಯ ಮೂಲಕ ಹಲವರನ್ನು ಕ್ರಿಸ್ತರೆಡೆಗೆ ಸೆಳೆದ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಕ್ರಿಸ್ತೀಯ ಮೌಲ್ಯಗಳಿಗೆ ಬದ್ಧರಾಗಿ, ತಮಗೆ ಧರ್ಮಸಭೆ ವಹಿಸಿದ ಜವಬ್ದಾರಿಗಳನ್ನು ನಿಷ್ಟೆಯಿಂದ ನಿರ್ವಹಿಸಿ, ಕ್ರಿಸ್ತರ ಅನುಪಮ ಪ್ರೀತಿಯನ್ನು ಎಲ್ಲೆಡೆ ಹಂಚುತ್ತ, ಜನರ ದೈವವಾಕ್ಯದ ಹಸಿವನ್ನು ನೀಗಿಸುತ್ತಾ, ಪ್ರಾರ್ಥನೆ, ಬಲಿಪೂಜೆ ಹಾಗೂ ದಿವ್ಯ ಸಂಸ್ಕಾರಗಳ ಮೂಲಕ ಹಲವರ ಹೊಸ ಬದುಕಿಗೆ ಕಾರಣಕರ್ತರಾದ ಈ ಸಂತರ ಆದರ್ಶವನ್ನು ಅನುಸರಿಸೋಣ.

ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment